ಬೆಳಿಗ್ಗೆ ಎದ್ದ ಲೌಹಿತ್ಯ ಒಮ್ಮೆಗೆ ಕಣ್ಬುಟ್ಟು ಚಂಗನೆ ಎದ್ದು ಕುಳಿತ. ಕಂಗಳು ಎರಡೂ ಕೆಂಪಗೆ ಕೆಂಡದಂತೆ ಆಗಿದ್ದವು. ಭಯ, ಅಭದ್ರತೆ ಕಾಡಲಾರಂಭಿಸಿತು. ಮೈ ಎಲ್ಲಾ ಬೆವರು ಬಂದು ಕೆಲವೇ ನಿಮಿಷಗಳಲ್ಲಿ ಧರಿಸಿದ್ದ ಅಂಗಿ ತೊಯ್ದು ತೊಪ್ಪೆಯಾಯಿತು. ಮೈ ಎಲ್ಲಾ ನಡುಗಲಾರಂಭಿಸಿತು. ಅದೆಲ್ಲವೂ LSD-(lysergic acid diethylamide)ದೇಹದೊಳಗೆ ಸೇರಿ ತೋರುತ್ತಿದ್ದ ಮಹಿಮೆ ಆಗಿತ್ತು.

ಮೇಜಿನ ಮೇಲಿದ್ದ ಬ್ಲಾಟರ್ ಪೇಪರ್ ಕಡೆಗೆ ಕಣ್ಣು ಹಾಯಿಸಿದ. ಎರಡು ಚೌಕಾಕಾರದ ಬ್ಲಾಟರ್ ಪೇಪರ್ ಹರಿದು ಇಲ್ಲವಾಗಿಸಿದ್ದರಿಂದ ತಿಳಿಯಿತು ಅವನಿಗೆ ತಾನು ನಿನ್ನೆ ಎರಡು ಡೋಸ್ ಅಂದರೆ ಎರಡು ಹಿಟ್ ತೆಗೆದುಕೊಂಡಿದ್ದೇನೆ ಎಂದು. ಎಲ್ಲವೂ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಪ್ರತಿಯೊಂದೂ ಗೋಜಲು ಗೋಜಲಾಗಿತ್ತು. ಅದೇ ಅಸ್ಪಷ್ಟ ದೃಷ್ಟಿಯಲ್ಲಿ ಬಚ್ಚಲು ಮನೆಗೆ ಮೆಲ್ಲಗೆ ಹೆಜ್ಜೆಯನ್ನಿಡುತ್ತಾ ತಲುಪಿ ಮುಖ ತೊಳೆಯುವಾಗ ಅವನದೇ ಮುಖ ರಾಕ್ಷಸನಂತೆ ಕಂಡಿತು. ತಲೆಯ ಮೇಲೆ ಕೋಡು ಎರಡು ಬಂದಿತ್ತು.
ಬಾಯಿಯ ಹೊರಗೆ ಎರಡು ಚೂಪಾದ ಕೋರೆ ಹಲ್ಲುಗಳು ಬಂದಿದ್ದವು. ತಲೆ ಅಲುಗಾಡಿಸಿಕೊಂಡು ಕಣ್ಣುಗಳಿಗೆ ನೀರೆರೆಚಿ ಉಜ್ಜಿಕೊಳ್ಳುತ್ತಾ ಪುನಃ ಕನ್ನಡಿ ನೋಡುವಾಗ ಅವನದೇ ಸಹಜ ಮುಖ ಕಂಡಿತ್ತು. ಏಕೋ ತೀರಾ ಭೀತನಾಗಿ ಅಸ್ಥಿರವಾಗಿ ಓಡಿ ಹೋಗಿ ಕುಳಿತು ಬಿಟ್ಟ. ಮುಖ ಏಕೋ ತೀರಾ ವಿಕಾರವಾಗಿಬಿಟ್ಟಿದೆ ಅನ್ನಿಸಿತು…

‘ಏನ್ ಚಿಂತೆ ಮಾಡ್ತಿದ್ದೀಯಾ? ನನ್ನ ಮದುವೆ ಆಗಿ ಬಿಡು. ತಗೋ ತಾಳಿ ಕಟ್ಟು’ ಎಂದು ಅರಶಿನದ ದಾರ ತೋರಿಸುತ್ತಾ ಕೈ ಮುಂದೆ ಚಾಚಿದಳು.
ಇವನು ಕೊಡು ಎಂದು ಕೈ ಚಾಚುವಾಗ, ಹಿಂತೆಗೆದು ಕೊಂಡು ವ್ಯಂಗ್ಯವಾಗಿ ನಕ್ಕಳು.
ನಂತರ ಮೌನಕ್ಕೆ ಜಾರಿ ಮುಖ ಸಿಂಡರಿಸಿಕೊಂಡು,
‘ಸರಿಯಾದ ದುಡಿಮೆ ಇಲ್ಲ ನೆಟ್ಟಗೆ. ಏನೋ ದೊಡ್ಡ ಪತ್ರಕರ್ತನ ಹಾಗೆ ವ್ಯವಸ್ಥೆನ ಬದಲಾಯಿಸ್ತೀನಿ ಅಂತ ಹೋದ್ಯಲ್ಲ, ಭ್ರಷ್ಟರ ಬಂಡವಾಳವನ್ನೆಲ್ಲಾ ಬಯಲು ಮಾಡಿದ್ಯಲ್ಲಾ? ಈಗ ನೀನೂ ಕೂಡ ಕಳ್ಳನೇ ಜನರ ದೃಷ್ಟಿಯಲ್ಲಿ ಬ್ಲಾಕ್ ಮೇಲರ್’ ಎಂದು ವ್ಯಂಗ್ಯವಾಗಿ ನುಡಿಯುತ್ತಾ ಮಾರ್ಮಿಕ ನಗೆ ಬೀರಿದಳು.

ಲೌಹಿತ್ಯ ಆಕ್ರೋಶ ಬರಿತನಾಗಿ ಅವಳ ಕತ್ತು ಹಿಸುಕಲೆಂದು ಹಲ್ಲು ಮಸೆಯುತ್ತಾ, ಹತ್ತಿರವಾಗುತ್ತಿದ್ದಂತೆ ಅವಳು ಮಾಯವಾದಳು. ಅವಳು ಮಾಯಾವಿ. ಎಲ್.ಎಸ್.ಡಿಯದ್ದೇ ಇದೆಲ್ಲಾ ಚಮಕ್ ಎಂಬುದು ಅವನಿಗೆ ತಿಳಿದು ಕೂಡ ಎಲ್.ಎಸ್.ಡಿ ಚಟದ ನಿಯಂತ್ರಣವಿಲ್ಲದೆ ವಿಪರೀತವಾಗುತ್ತಿತ್ತು. ಅವನಿಗೂ ಅದು ಗೊತ್ತಿಲ್ಲದ ವಿಷ್ಯವಾಗಿರಲಿಲ್ಲ! ತಲೆ ನೋವು ಸಿಡಿದು ಹೋಗುವಂತಿತ್ತು. ತಲೆಯ ಮೇಲೆ ಯಾರೋ ಕುಳಿತಿದ್ದಾರೆ ಎಂಬಷ್ಟು ಭಾರವಾಗುತ್ತಿದ್ದ ಭ್ರಮೆ. ತಲೆಯಲ್ಲಿ ನಿರಂತರ ವಿಚಿತ್ರ ವಿಕಾರ ಆಲೋಚನೆಗಳ ಆಗರವೇ ಸಮರೋಪಾದಿಯಲ್ಲಿ ಬರುತ್ತಲೇ ಇತ್ತು. ಮ್ಲಾನನಾದ ಲೌಹಿತ್ಯ ಇದನ್ನು ಬಿಟ್ಟು ಸಜ್ಜನನಾಗಬೇಕು ಎಂದು ಅಂದುಕೊಳ್ಳುತ್ತಿರುವಾಗಲೇ ಈಗಷ್ಟೆ ವ್ಯಂಗ್ಯವಾಡಿ, ಗಹಗಹಿಸಿ ನಕ್ಕ ಅದೇ ಹುಡುಗಿ ಆಗಾಗ್ಗೆ ಎದುರಿನಲ್ಲಿ ಪ್ರತ್ಯಕ್ಷವಾಗುತ್ತಿದ್ದಂತೆ ಮತ್ತೆ…

‘ ಅಯ್ಯೋ… ನೋಡೋ ನಿನ್ ತಮ್ಮ ಇದ್ದಾನಲ್ಲ ಲೋಹಿತ್ ಅವನನ್ನು ನೋಡಿ ಕಲಿಯೋ… ಪಿಯುಸಿ ಫೇಲ್ ಆದ್ರೂ ಕೂಲಿ-ನಾಲಿ ಮಾಡಿ ಈಗ ಕಂಟ್ರಾಕ್ಟರ್ ಮಟ್ಟಕ್ಕೆ ಬೆಳೆದಿದ್ದಾನೆ. ಹಣ ಅವನ ಕೈಯಲ್ಲಿ ಲಕ್ಷಗಟ್ಟಲೆ ಓಡಾಡ್ತಿದೆ. ಮನೆ ಕಟ್ಟುತ್ತಿದ್ದಾನೆ. ಹೊಸ ಕಾರ್ ತೆಗೆದುಕೊಂಡಿದ್ದಾರೆ. ಶ್ರೀಮಂತ ಮನೆತನದ ಒಬ್ಬಳೇ ಹೆಣ್ಣು ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ನಿನ್ ಹತ್ರ ಏನಿದೆಯೋ ಘಳಘಂಟೆ… ಅಮ್ಮನ ಜೊತೆ ಅವರ ವೃದ್ಧಾಪ್ಯ ವೇತದಲ್ಲಿ ಹೊಟ್ಟೆ ತುಂಬಿಸಿಕೊಂಡು, ತಮ್ಮನ ಹಣದಲ್ಲಿ ಈ ಚಟಗಳನ್ನೆಲ್ಲಾ ಅಂಟಿಸಿಕೊಂಡಿದ್ದೀಯ. ಕಟ್ಟಿಕೊಂಡ ಹೆಂಡತಿ ಬಡ ಕುಟುಂಬದವಳು. ನಿನ್ ಕುಡಿತದ ಚಟದಿಂದ ರೋಸಿ, ನಿನ್ನ ಅವತಾರ ನೋಡಲಾಗದೆ ಹೋಗಿ ತವರು ಮನೆ ಸೇರಿದ್ದಾಳೆ. ಡಿವೋಸ್ ೯ ಸಿಗೋದಂತೂ ಪಕ್ಕ ಬಿಡು. ಎಲ್.ಎಲ್.ಬಿ ಕಾನೂನು ಪದವಿಯಲ್ಲೂ ಪೇಪರ್ ಗಳನ್ನು ಬಾಕಿ ಉಳಿಸಿಕೊಂಡು ಕೆಲಸ-ಕಾರ್ಯನೂ ಇಲ್ಲದೆ ಖಾಲಿ ಕೂತಿದ್ದೀಯ. ಬಂಡ ಬಾಳು ಹೀಗೆ ಇರೋದು’ ಎಂದಳು.ಆಗ ತೆಳ್ಳಗೆ ಕುಹಕ ನಗೆ ಅವಳ ಮೊಗದಲ್ಲಿತ್ತು.

ಪತ್ರಿಕೋದ್ಯಮ ಪದವಿ ಮುಗಿಸಿ, ಕಾನೂನು ಪದವಿ ಪಡೆಯಲು ವಿಫಲವಾದರೂ, ಸ್ಥಳೀಯ ವಾಹಿನಿಯಲ್ಲಿ ತನಿಖಾ ವರದಿಗಾರನಾಗಿ ಮಾಡಿದ ಸ್ಟಿಂಗ್ ಆಪರೇಷನ್ ಗಳು ರೋಚಕವಾಗಿದ್ದವು. ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಲೌಹಿತ್ಯನನ್ನು ವ್ಯೂಹದ ಬಲೆ ಹೆಣೆದು, ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಹೊರಿಸಿ ನಕಲಿ ವಿಡಿಯೋ, ಆಡಿಯೋ ಮಾಡಿಸಿ, ಹರಿಬಿಡಲಾಯಿತು.

ಅದರಲ್ಲಿ ಭ್ರಷ್ಟ ಅಧಿಕಾರಿಗಳು, ಜನ ನಾಯಕರು, ಪತ್ರಕರ್ತರೂ ಸೇರಿ ಚಿತಾವಣೆ ಮಾಡಿ ವ್ಯೂಹ ಹೆಣೆದು ಅಪಪ್ರಚಾರ ಮಾಡಲಾಯಿತು. ಗಾಳಿ ಸುದ್ದಿ ಹರಡಿ ಲೌಹಿತ್ಯನಿಗೆ ಇದ್ದ ಚರಿಷ್ಮಾ ತೀರಾ ಹೋಗಿ ಬಿಟ್ಟಿತು. ಜನರೂ ಅದನ್ನು ನಂಬಿದರು. ಕೆಲವೇ ದಿನಗಳಲ್ಲಿ ಭ್ರಷ್ಟ ವ್ಯವಸ್ಥೆಯಲ್ಲಿ ಲೌಹಿತ್ಯ ಕೂಡ ಒಬ್ಬನೆಂದು ಜನ ಯಾವ ಮುಲಾಜು ಇಲ್ಲದೆ ಒಪ್ಪಿಕೊಂಡು ಬಿಟ್ಟಿದ್ದರು.

ಜೇಬಿನಲ್ಲಿ ಇಟ್ಟಿದ್ದ ರೇಜ಼ರ್ ತೆರೆದು ಅವಳನ್ನು ಘಾಸಿ ಗೊಳಿಸಲು ಮುಂದೆ ಹೆಜ್ಜೆ ಇಡುತ್ತಿದ್ದಂತೆ ಮರೆಯಾದಳು…

ಮನೆಯಿಂದ ಹೊರ ಬಿದ್ದು, ಸುತ್ತಲೂ ನೋಡಿದ. ಎಲ್ಲವೂ ಮಂಕು ಮಂಕಾಗಿ ಕಾಣುತ್ತಿತ್ತು. ತನ್ನ ಸೆಕೆಂಡ್ಆ ಹ್ಯಾಂಡ್ ಆರ್. ಎಕ್ಸ್ ಯಮಹಾ ಬೈಕನ್ನೇರಿ ರಣ ರಭಸದಲ್ಲಿ ಕಾಣುತ್ತಿದ್ದ ಅರೆಬರೆ ದೃಷ್ಟಿಯಲ್ಲೇ ಗಾಳಿಯನ್ನು ಸೀಳಿಕೊಂಡು ಸಾಗಿದ. ಅವನು ಹೋದ ಪರಿಗೆ ಯಮನೇ ಅಚ್ಚರಿ ಪಟ್ಟಿರಲಿಕ್ಕೆ ಸಾಕು…ಹಾಗಿತ್ತು ಅವನ ಯಮ ವೇಗ

ತಮ್ಮನ ಕಾರ್ ನಿಂತಲ್ಲಿ ಕಟ್ಟಿಸುತ್ತಿದ್ದ ಬಹು ಮಹಡಿ ಅಪಾಟ್೯ಮೆಂಟ್ ಮುಂದೆ ನೋಡುತ್ತಿದ್ದ. ಅಲಿಗೆ ಬಂದು ನಿಂತ ತಮ್ಮ ಲೋಹಿತ್ ಮೆಲು ದನಿಯಲ್ಲಿ…
‘ಏನಣ್ಣ ತುಂಬಾ ದಿನ ಆದ ಮೇಲೆ ಬಂದಿದ್ದೀಯಾ?’

'ಏನಿಲ್ಲ ಕಣೋ ಮನೆಲಿ ಬೋರ್ ಆಗ್ತಿತ್ತು. ಕೆಲಸ ನೋಡಿ ನಿನ್ನ ಮಾತಾಡ್ಸಿ ಹೋಗೋಣ ಅಂತ ಬಂದೆ ಅಷ್ಟೆ' ಎಂದ ದುರ್ಬಲವಾಗಿ

ತಮ್ಮನಿಗೇಕೋ ಬೇಸರವಾಗಿ ಅಣ್ಣನ ಕೈ ಹಿಡಿದು ತೊಗೋ ಎಂದು ಜೇಬಿನಿಂದ ಎರಡು 2,000 ದೊಡ್ಡ ನೋಟುಗಳನ್ನು ತುರುಕಿದ. ಬೇಡ ಎಂದರೂ ಕೇಳಲಿಲ್ಲ.

ಅದನ್ನು ಪಸ್೯ ಒಳಗೆ ತುರುಕಿಕೊಂಡು ಬೈಕನ್ನೇರಿದ. ಬಾರಿಗೆ ಹೋದವನೆ ಒಂದು ಫುಲ್ ಬಾಟಲ್ ವಿಸ್ಕಿ ಕುಡಿದ. ಖಾಲಿ ಬಾಟಲಿಯನ್ನೇ ದಿಟ್ಟಿಸುತ್ತಿದ್ದ.

ಮತ್ತೆ ಆ ಕಲ್ಪನಾ ಕನ್ಯೆ ಎದುರಾದಳು.
‘ನೋಡು ಅವನು ನಿನಗೆ ಚಿಲ್ರೆ ಕಾಸು ಕೊಟ್ಟು ಅವಮಾನಿಸಿಬಿಟ್ಟ. ನೀನೆ ಎತ್ತಿ ಆಡಿಸಿದ್ದ ಮಗು ಅವನು ಈಗ ಅವನೇ ನಿನಗೆ ಹಣ ಸಂಪಾದಿಸಿದ್ದನ್ನು ನೀಡ್ತಿದ್ದಾನೆ. ಅವನ ಹಣದಲ್ಲಿ ನಿನ್ ಚಟ ತೀರಿಸ್ಕೋತೀಯಲ್ಲಾ. ಮರಿಯಾದೆ ಇಲ್ವಾ… ಸತ್ತೋಗು ನಿನ್ನಂಥವರು ಬದುಕೋದೆ ವೇಸ್ಟ್’ ಎಂದು ಚಪ್ಪಲಿಯಲ್ಲಿ ಹೊಡೆದಂತೆ ತೀಕ್ಷ್ಣವಾಗಿ ನುಡಿದಳು.

ರೊಚ್ಚಿಗೆದ್ದು ಲೌಹಿತ್ಯ ಕುಡಿದಿದ್ದ ವಿಸ್ಕಿಯ ಬಾಟಲಿಯನ್ನು ಫಳ್ ಎಂದು ಬೆಂಚಿಗೆ ಬಡಿದು ಕೈಯಲ್ಲಿನ ನರವನ್ನು ಅದರಿಂದ ಕತ್ತರಿಸಿಕೊಂಡ. ಬಾರಿನ ರೆಡಾಕ್ಸೈಡ್ ನೆಲದಲ್ಲಿ ರಕ್ತ ಹನಿ ಹನಿಯಾಗಿ ಚೆಲ್ಲಿ ಕಡು ಕೆಂಪು ಬಣ್ಣಕ್ಕೆ ತಿರುಗಿತು. ನೋವಿಗೆ ಪ್ರಜ್ಞೆ ತಪ್ಪಿ ಹೋಗಿ ಕುಸಿದು ಬಿದ್ದ.

ಕಣ್ಣು ಬಿಟ್ಟಾಗ, ಆಸ್ಪತ್ರೆಯ ಬೆಡ್ ನಲ್ಲಿದ್ದ. ಎದುರಿಗೆ ನಿಂತಿದ್ದ. ಅಮ್ಮ ಸೀರೆಯ ಸೆರಗಿನಲ್ಲಿ ಕಣ್ಣು ವರೆಸಿಕೊಳ್ಳುತ್ತಿದ್ದಳು. ತಮ್ಮ ಲೋಹಿತ್ ಸಿಡುಕು ಮೂತಿಯಲ್ಲಿ ಲೌಹಿತ್ಯನನ್ನೇ ಗುರಾಯಿಸುತ್ತಿದ್ದ…

‘ಯಾಕಣ್ಣ ಹೀಗೆ ಆಗೋದ್ರಿ? ಎಷ್ಟು ದೊಡ್ಡ ಹೆಸರಿತ್ತು…ಎಲ್ಲ ಹಾಳು ಮಾಡ್ಕೊಂಡ್ರಲ್ಲಾ?’

ಲೌಹಿತ್ಯ ನಿರುತ್ತರನಾಗಿ ಸುಮ್ಮನೆ ಬೆಪ್ಪನಂತೆ ಗೋಡೆಗೊರಗಿ ಕುಳಿತಿದ್ದ!