ಎಂ.ಕೆ ಇಂದಿರಾ ಅವರು ಬರೆದಿರುವ ಸಾಹಿತ್ಯ ಅಕಾಡಮಿ ಪುರಸ್ಕೃತ ಕೃತಿ ಫಣಿಯಮ್ಮ ಕುರಿತು ಡಯಾನಾ ಆ್ಯಂಟೋನಿ ಅವರಿಂದ ಅಭಿಪ್ರಾಯ
ಕೇವಲ ೨ ನಿಮಿಷದ ಓದು…
ಎಂ.ಕೆ.ಇಂದಿರಾ ಅವರ ಫಣಿಯಮ್ಮ ಒಂದು ಮನಮುಟ್ಟುವ ಕಾದಂಬರಿ. ಲೇಖಕರ ಅಜ್ಜನವರ ತಂಗಿ ಈ ಫಣಿಯಮ್ಮ- ಕಥಾನಾಯಕಿ. ಲೇಖಕಿಯೇ ಹೇಳುವ ಹಾಗೆ ಇದು ಸಂಪೂರ್ಣ ಕಪೋಲಕಲ್ಪಿತವಲ್ಲ ಹಾಗಂತ ಶೇಕಡ 100 ನಡೆದದ್ದೂ ಅಲ್ಲ. ರಸೋತ್ಪತ್ತಿಗೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಳ್ಳುವಷ್ಟು ಸ್ವಾತಂತ್ರ್ಯ ಇದೆಯಷ್ಟೆ.
ಕಾದಂಬರಿ :ಫಣಿಯಮ್ಮ
ಬರೆದವರು: ಎಂ.ಕೆ ಇಂದಿರಾ
ಪ್ರಕಾಶಕರು: ಇಂದಿರಾ ಪ್ರಕಾಶನ
ಪ್ರಕಟಗೊಂಡ ವರ್ಷ: 1989
ಬೆಲೆ: 100 ರೂಪಾಯಿ
9 ನೇ ವರ್ಷಕ್ಕೆ ಮದುವೆಯಾಗಿ ಮೈನೆರೆಯುವ ಮುನ್ನವೇ 10 ನೇ ವರ್ಷಕ್ಕೆ ವಿಧವೆಯಾಗುವ ಫಣಿಯಮ್ಮ ಬದುಕಿದ್ದು ಬರೋಬ್ಬರಿ 112 ವರ್ಷ. ಕಷ್ಟ ಸಹಿಷ್ಣು. ಕೇವಲ ವಿಧವೆಯಾದರೇನೆ ಒಂದು ಬಗೆಯ ಕಷ್ಟ ಇನ್ನು ಈಕೆ ಮಡಿ ಬೇರೆ ಆಗುತ್ತಾಳೆ. ಜೀವನವನ್ನು ಕಣ್ತೆರೆದು ನಿಬ್ಬೆರಿಗಿನಿಂದ ನೋಡುವ ವಯಸ್ಸಿಗೆ ವೈರಾಗ್ಯ ಬೆನ್ನುಬೀಳುತ್ತದೆ ಫಣಿಯಮ್ಮನಿಗೆ. ಜೀವನ ಇರುವುದೇ ಹೀಗೆ ಎಂದು ಸ್ವೀಕರಿಸಿ ಬದುಕಿದ ಕಾಯಕ ಯೋಗಿ. ತನ್ನ ಒಂದು ಶತಮಾನದ ಜೀವಿತಾವಧಿಯಲ್ಲಿ, ಕೂಡು ಕುಟುಂಬ ಒಡೆದು ಹೋಗಿದ್ದು, ಸಾಮಾಜಿಕವಾಗಿ ಆದ ಹಲವಾರು ಬದಲಾವಣೆಗಳು ಎಲ್ಲವನ್ನೂ ಕಂಡಳು ಫಣಿಯಮ್ಮ.
ಈ ಕೃತಿ ಓದುವಾಗ ಅದೆಷ್ಟು ಮನಸ್ಸಿಗೆ ಹತ್ತಿರವಾಗುತ್ತಾ ಹೋಗುತ್ತದೆಯೆಂದರೆ ನಮ್ಮ ಮುಂದೆಯೇ ಇದ್ದ ಪುಟ್ಟ ಹುಡುಗಿ ಪಟ್ಟಪಾಡು, ಕೊನೆಗೆ ನಮ್ಮ ಮನೆಯದೇ ಒಂದು ಅಜ್ಜಿಯ ಕಥೆಯಾಗಿ ಫಣಿಯಮ್ಮ ಮನದಲ್ಲಿ ನಿಲ್ಲುತ್ತಾಳೆ.
ಜೀವನದುದ್ದಕ್ಕೂ ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾಗುವ ಆಕೆಯ ದಿನಚರಿ, ರಾತ್ರಿ 12 ಅಥವಾ 1 ಗಂಟೆಗೋ ಮುಗಿಯುವ ಕೆಲಸ. ಬಾಣಂತನ – ಯಾರಾದರು ಒಬ್ಬರು ಬಂದು ಕರೆದುಕೊಂಡು ಹೋಗುವರು, ಹಬ್ಬಕ್ಕೆ ತಯಾರಿ, ವರ್ಷಕ್ಕಾಗುವಷ್ಟು ಹಪ್ಪಳ, ಶಾವಿಗೆ, ಸಂಡಿಗೆ, ಉಪ್ಪಿನಕಾಯಿ ಹೀಗೆ ಗಾಣದ ತರಹ ಕೆಲಸ. ನಿದ್ರೆ ಒತ್ತರಿಸಿಕೊಂಡು ಬರುವವರೆಗೂ ರಾತ್ರಿ ಧ್ಯಾನ. ಇಷ್ಟಾಗಿ ಮೊದಮೊದಲು ಒಪ್ಪತ್ತು ಊಟ ಮಾಡುತ್ತಿದ್ದ ಫಣಿಯಮ್ಮ ಅವರ 50ನೇ ಅಥವಾ 60ನೇ ವರ್ಷದ ಆಸುಪಾಸಿನಲ್ಲಿ ಆ ಒಂದು ಹೊತ್ತು ಊಟವನ್ನು ಸಹ ನಿಲ್ಲಿಸಿಬಿಡುತ್ತಾರೆ. ಮಧ್ಯಾಹ್ನ ಎರಡು ಬಾಳೆಹಣ್ಣು, ಒಂದು ಲೋಟ ಮಜ್ಜಿಗೆ ಅಷ್ಟೇ ಮುಗಿಯಿತು. ರುಚಿರುಚಿಯಾಗಿ ಎಲ್ಲರಿಗೂ ಅಡುಗೆ ಮಾಡುವ ಫಣಿಯಮ್ಮನ ಊಟ ಇಷ್ಟೇ. ನಿಜ ಕರ್ಮಯೋಗಿನಿಯಂತೆ ಬದುಕಿದ್ದು ಫಣಿಯಮ್ಮ.
ಫಣಿಯಮ್ಮನನ್ನು ಅವರ ಮನೆಗೆ ಕರೆದೊಯ್ಯಲು ಎಲ್ಲರು ನಾ ಮುಂದು ತಾ ಮುಂದು ಎಂದು ಬರುವವರೇ. ಏಕೆಂದರೆ ಯಾವ ಖರ್ಚೂ ಇಲ್ಲ. ಎರಡು ಬಾಳೆಹಣ್ಣು, ಒಂದು ಲೋಟ ಮಜ್ಜಿಗೆ, ಎರಡು ಮೂರು ವರ್ಷಗಳಿಗೊಮ್ಮೆ ಎರಡು ಬಿಳಿ ಸೀರೆ. ನಿರುಪದ್ರವಿ ಅಜ್ಜಿ, ತಾನಾಯ್ತು ತನ್ನ ಕೆಲಸವಾಯ್ತು. ಎಂದೂ ಕೂಡ ಒಂದು ನಿಮಿಷ ಸುಮ್ಮನೆ ಕೂತವರೇ ಅಲ್ಲ ಫಣಿಯಮ್ಮ. ಸುಸ್ತು, ಜ್ವರ ಎಂದು ಒಂದು ದಿನವೂ ಮಲಗಿದವರಲ್ಲ.
ಕೆಲವು ವಿಷಯಗಳ ಕುರಿತು ಬಹು ಮಾರ್ಮಿಕವಾಗಿ ಮಾತನಾಡುತ್ತಾಳೆ ಫಣಿಯಮ್ಮ. ಗಂಡಸರಿಗಾದರೆ ವಿದುರನಾಗಿ ಎರಡನೇ ಮದುವೆ ಸಾಧ್ಯವಿದೆ ಆದರೆ ಹೆಣ್ಣಿಗೆ ಮಡಿಯಾದರೆ ಮಾತ್ರ ಮರ್ಯಾದೆ ಸಕೇಶಿಯಾದರೆ ಹೀನವಾಗಿ ನಡೆಸಿಕೊಳ್ಳುವ ಕಾಲ. ಮಡಿಯಾಗಿ ತಿಂಗಳಿಗೊಮ್ಮೆಯಾದರೂ ಹಜಾಮನಿಂದ ತಲೆಕೂದಲು ಕತ್ತರಿಸುವುದಕ್ಕಾದರೂ ಮುಟ್ಟಿಸಿಕೊಳ್ಳಬೇಕಾದ ಮಡಿ ಹೆಂಗಸು ಶ್ರೇಷ್ಠ; ಆದರೆ ಸಕೇಶಿಯಲ್ಲ, ಇದ್ಯಾವ ನ್ಯಾಯ ಎನ್ನುತ್ತಾಳೆ ಫಣಿಯಮ್ಮ. ಆಗಿನ ಕಾಲಮಾನದಲ್ಲಿ ಈ ತರಹದ ವಿಚಾರಧಾರೆ ಅದು ಅನಕ್ಷರಸ್ಥೆ ಎಂದು ಬಗೆಯುವ ಒಬ್ಬ ಹೆಣ್ಣುಮಗಳಲ್ಲಿ, ಸಮಾಜದ ವ್ಯವಹಾರದಲ್ಲಿ ತೊಡಗದ ಒಬ್ಬ ಮಹಿಳೆಯಲ್ಲಿ ಸ್ಫುರಿಸಿದ ಈ ವಿಚಾರವೇ ಕ್ರಾಂತಿಕಾರಕ. ಸ್ವ ವೈದ್ಯಕೀಯವನ್ನು ತಿಳಿದ ಫಣಿಯಮ್ಮ ಉಮ್ಮತ್ತಳದ ಕಾಯಿಯನ್ನು ತಲೆಗೆ ಸವರಿಕೊಂಡು ಶಾಶ್ವತವಾಗಿ ಹಜಾಮನಿಂದ ಮುಕ್ತಿ ಪಡೆಯುತ್ತಾಳೆ.
ಈ ತರಹ ಒಬ್ಬ ಯೋಗಿನಿಯ ಹಾಗೆ, ಪರರ ಕೆಲಸವನ್ನು ಮಾಡಿ ತೀರಿಸುವುದೇ ನನ್ನ ಈ ಜನ್ಮಕ್ಕೆ ಒದಗಿಬಂದದ್ದು ಎಂಬ ಅತ್ಯಂತ ಕಠಿಣ ನಿರ್ಲಿಪ್ತತೆಯಿಂದ ಬದುಕುವುದು ಸಾಧ್ಯವಾ ಎಂದು ಆಶ್ಚರ್ಯವಾಗುತ್ತದೆ. ತನ್ನ ಕೆಲವು ರಹಸ್ಯಗಳನ್ನು ತುಂಬ ನಂಬುಗೆಯ ಲೇಖಕಿಯ ತಾಯಿ ಬನಶಂಕರಿಯವರ ಹತ್ತಿರ ತೀರ ಮನಸ್ಸಿಗೆ ನೋವಾದಾಗ ಹಂಚಿಕೊಂಡ ಕೆಲವು ಮಾತ್ರ ತಿಳಿದವು. ಇನ್ನು ಯಾವುದನ್ನು ಹಂಚಿಕೊಳ್ಳದೇ ಆ ಮಹಾತಾಯಿ ಹೊಟ್ಟೆಯಲ್ಲಿಟ್ಟುಕೊಂಡೇ ಉಳಿದ ವಿಷಯಗಳೆಷ್ಟೋ….!
ಕಾದಂಬರಿ ಅತ್ಯಂತ ಇಷ್ಟವಾಯಿತು. ಫಣಿಯಮ್ಮ ಸಿನಿಮಾ ಕೂಡ ನೋಡಿದೆ. ಆದರೆ, ಕಾದಂಬರಿಯಷ್ಟು ನನ್ನ ಮನಸ್ಸಿಗೆ ನಾಟಲಿಲ್ಲ. ಕಾದಂಬರಿ ತುಂಬಾ ಪ್ರಭಾವ ಬೀರಿತು.
ಒಮ್ಮೆ ನೀವು ಕೂಡ ಓದಿ……