ಅವನು ಪ್ರಾಮಾಣಿಕವಾಗಿ ಪ್ರೀತಿ ಮಾಡಿದ್ದ. ಪ್ರೀತಿಯಲ್ಲಿ ಮಮತೆ, ವಾತ್ಸಲ್ಯ, ಗೆಳೆತನ, ಕಾಳಜಿ, ಕಾಮ ಎಲ್ಲವೂ ಇತ್ತು. ಅವಳು ಕೋಮಲವಲ್ಲಿ ಹೆಸರು ದ್ವೀಪ. ಉತ್ತಮ್ ಜಗತ್ತಿನಲ್ಲಿಯೇ ಯಾರನ್ನೂ ಹಚ್ಚಿಕೊಳ್ಳದಷ್ಟು ಅವಳನ್ನು ಹಚ್ಚಿಕೊಂಡಿದ್ದ. ಆ ಪ್ರೀತಿಯಲ್ಲಿ ವಾಂಛೆ ಇತ್ತಾದರೂ ವಂಚನೆ ಇರಲಿಲ್ಲ. ಆಕೆ ಬೇರೆಯವರ ಮಾತುಗಳನ್ನು ಹೆಚ್ಚಾಗಿ ಕೇಳಿ ತಲೆಗೆ ಹಾಕಿಕೊಳ್ಳುತ್ತಿದ್ದಳು ಅದಕ್ಕೇ ಪ್ರೇಮಿಗಳ ನಡುವೆ ಆಗಿಂದಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ಗೆಳತಿ ಸುಮತಿ ಹೇಳಿದನ್ನೂ ಕುರಿತು ಯೋಚಿಸುತ್ತಿದ್ದಳು.

ಅವಳ ಜೊತೆ ಇರ್ತಿದ್ದೆ ಆಮೇಲೆ ಗೊತ್ತಾಯ್ತು ನೀವ್ ಪ್ರೀತಿ ಮಾಡ್ತಿರೋ ವಿಷಯ. ನನಗೆ ಸಿಗದ ನೀನು ಅವಳಿಗೂ ಸಿಗಬಾರ್ದು’ ಎಂದು ವಿಕಾರವಾಗಿ ನಕ್ಕಳು.

‘ಛೀ ನಿನಗೆ ಒಳ್ಳೆಯದಾಗಲ್ಲ. ನಮ್ಮ ಪವಿತ್ರ ಪ್ರೀತಿಗೆ ಹುಳಿ ಹಿಂಡಿದ ನೀನು ಏನ್ ಸಾಧಿಸಿದೆ?’ ಎಂದು ಆತಂಕದಿ ಕೇಳಿದ.

‘ ಗೊತ್ತಿಲ್ಲ’ ಎನ್ನುತ್ತಾ ಅವನನ್ನೇ ತಿನ್ನುವ ಹಾಗೆ ಕೆಕ್ಕರಿಸಿದಳು.

ಅವಳೊಂದಿಗೆ ಮಾತು ನಿರರ್ಥಕವೆನಿಸಿ, ಅಲ್ಲಿಂದ ನಿರ್ಗಮಿಸಿದ.


ಬ್ರೇಕ್ ಅಪ್ ಆದ ಮೇಲೆ ಮದುವೆ ಬಗ್ಗೆ ಯೋಚನೆಯನ್ನೂ ಮಾಡಲಿಲ್ಲ. ಹೀಗೇ ದಿನಗಳು ಉರುಳಿದವು.

ಅದಾಗಿ ಎರಡು ವರ್ಷದ ನಂತರ

ಪದವಿ ಶಿಕ್ಷಣವನ್ನು ಆಂಗ್ಲ ಭಾಷಾ ಸಾಹಿತ್ಯ ವಿಷಯದಲ್ಲಿ ಮಾಡಿ, ಕಮ್ಯುನಿಕೇಟಿವ್ ಇಂಗ್ಲೀಷ್ ಡಿಪ್ಲೊಮಾ ಮಾಡಿದ್ದ ಅವನಿಗೆ ಆಂಗ್ಲ ಭಾಷೆಯ ಹಿಡಿತ ಸಾಕಷ್ಟಿತ್ತು. ಜೊತೆಗೆ ಜ್ಞಾನವೂ…

ಟೂರಿಸ್ಟ್ ಗೈಡ್ ಆಗಿದ್ದುಕೊಂಡು ತನ್ನ ಭಾಷಾ ಪರಿಣಿತಿಯಿಂದ ಪ್ರವಾಸಿಗರಿಗೆ ತಾಣಗಳ ಮಾಹಿತಿಯನ್ನು ಭರಪೂರವಾಗಿ ಕೊಡುತ್ತಿದ್ದ. ಅವರು ಎಷ್ಟು ಹಣ ಎಂದು ಕೊನೆಗೆ ಕೇಳುವಾಗ, ವಿನಯವಂತಿಕೆಯಿಂದ ‘ಎಷ್ಟಾದರೂ ಕೊಡಿ ನಿಮ್ಮಿಷ್ಟ’ಎಂದು ಬಿಡುತ್ತಿದ್ದ. ವಿದೇಶಿಗರಿಗೆ ಗೈಡ್ ಮಾಡುತ್ತಿದ್ದರಿಂದ ಅವರು ಹೆಚ್ಚೇ ಹಣ ಕೊಟ್ಟು ಹೋಗುತ್ತಿದ್ದರು. ಅದನ್ನೆಲ್ಲಾ ಮನೆ ಖರ್ಚು ನಿಭಾಯಿಸಲು ಮತ್ತು ಅದರಿಂದ ಅಪ್ಪ ಮಾಡಿ ಹೋಗಿದ್ದ ಸಾಲವನ್ನೆಲ್ಲಾ ತೀರಿಸಿ ಮುಗಿಸುವುದಕ್ಕೆ ಸಾಕಾಗುತ್ತಿತ್ತು. ಅಮ್ಮ ದಿನಕ್ಕೆ 200-300 ಬೀಡಿಗಳನ್ನು ಕಟ್ಟುತ್ತಿದ್ದಳು.

ತಂದೆ ಮಾಡಿದ ಸಾಲ ತೀರಿಸಲು ಅಮ್ಮನೂ ಹಣ ಕೊಡುತ್ತಿದ್ದಳು. ಅದನ್ನು ಅವನು ಬೀಡಿ ಕಟ್ಟಿದ್ದರಿಂದ ಸಿಕ್ಕ ಹಣ ಅಂದುಕೊಳ್ಳುತ್ತಿದ್ದ. ಅಮ್ಮ ಎಂದೂ ಹಣ ಬೇಕು ಎಂದು ಒಂದೂ ದಿನ ಕೇಳಿರಲೇ ಇಲ್ಲ. ಅವಳ ಬಳಿ ದುಡ್ಡಿರುತ್ತಿತ್ತು. ಪ್ರತಿ ದಿನ ಮಧ್ಯಾಹ್ನ ಹೋಟೆಲಿನಲ್ಲಿ ಊಟ ಮಾಡುತ್ತಿದ್ದವನು ಅಂದೇಕೋ ಮನೆಗೆ ಹೋಗೋಣ ಅಂದುಕೊಂಡು ಮನೆಯ ಕಡೆ ಹೆಜ್ಜೆ ಹಾಕಿದ. ಅವನಿಗೆ ಬೆಚ್ಚಿಬೀಳುವಂತಹ ದೃಶ್ಯ ಕಾದಿತ್ತು. ಊರಿನ ನಿವಾಸಿಯೇ ಆಗಿದ್ದ ದಿಗಂತ್ ಮನೆ ಒಳಗಿನಿಂದ ಪ್ಯಾಟ್ ಜಿಪ್ ಹಾಕಿಕೊಂಡು ಬರುತ್ತಿದ್ದ. ಅವನು ಕಾಲೇಜಿನಲ್ಲಿದ್ದಾಗ ಸಹಪಾಠಿಯಾಗಿದ್ದವನು. ಆದರೆ ಆಪ್ತತೆಯೇನೂ ಇರಲಿಲ್ಲ. ಅವನ ಬಗ್ಗೆ ಚೆನ್ನಾಗಿಯೇ ಗೊತ್ತಿತ್ತು. ಅವನೊಬ್ಬ ಅಪ್ಪಟ ವಿಟ ಎಂಬುದು ದಿಟ ಇತ್ತು. ಏಕೆಂದರೆ ಅವನು ಕಾಲೇಜಿನಲ್ಲಿ ಇದ್ದಾಗಲೇ ತೋಟದ ಕೆಲಸಕ್ಕೆ ಹೋಗಿ ಸಿಕ್ಕ ಹಣದಲ್ಲಿ ವೇಶ್ಯೆಯರ ಸಹವಾಸಕ್ಕೆಂದೆ ತಿಂಗಳಿಗೊಮ್ಮೆಯಾದರೂ ಬೆಂಗಳೂರಿಗೆ ಹೋಗಿ ಬರುತ್ತಿದ್ದುದನ್ನು ಸಹಪಾಠಿಯಾಗಿದ್ದರಿಂದ ಚೂರೂ ಲಜ್ಜೆ ಇರದೆ ಅವನೇ ಹೇಳಿಕೊಂಡಿದ್ದ. ಕಾಲೇಜು ದಿನಗಳ ನಂತರ ಅವನೊಂದಿಗೆ ಸಂಪರ್ಕವಿಲ್ಲದಿದ್ದ ಉತ್ತಮ್ ಆ ದಿನಗಳ ನಂತರ ಈಗಲೇ ಅವನನ್ನೂ ನೋಡಿದ್ದು…!

ಸ್ತಂಭೀಭೂತನಾಗಿ ಧಂಗು ಬಡಿದವನಂತೆ ನಿಂತ. ಮನೆ ಬಾಗಿಲ ಹೊಸ್ತಿಲಲ್ಲಿ ನಿಂತ ಅಮ್ಮ ಸೀರೆಯ ಸೆರಗು ಸರಿ ಮಾಡಿಕೊಳ್ಳುತ್ತಿದ್ದಳು. ಮನೆಗೆ ಹೋಗೋಕೆ ಮನಸ್ಸಾಗದೆ ಅಂದು ಊಟವೇ ಮಾಡದೆ ಹಿಂತಿರುಗಿ ಮನೆಯ ಬಳಿ ಇದ್ದ ಬೋಳು ಬೆಟ್ಟವೇರಿ ಬಂಡೆಯೊಂದರ ಮೇಲೆ ಉಪವಾಸ ಕುಳಿತ.

ಅಂದಿನಿಂದ ಅಮ್ಮನ ಬಳಿ ಮಾತು‌ ಆಡದೆ ಇರಲು ನಿರ್ಧರಿಸಿ ಬಿಟ್ಟ. ಒಂದು ವರ್ಷಗಳ ಕಾಲ ಮನೆಯಲ್ಲಿ ಮೌನವೇ ಮರೆಯಿತು. ಅಮ್ಮ ಅದೊಂದು ದಿನ ಒಬ್ಬಳೇ ಇದ್ದಾಗ, ನೇಣು ಹಾಕಿಕೊಂಡು ಉಸಿರನ್ನು ಶಾಶ್ವತವಾಗಿ ನಿಲ್ಲಿಸಿಕೊಂಡಿದ್ದಳು.
ಅಮ್ಮನ ಆತ್ಮಹತ್ಯೆಯಿಂದ ತೀವ್ರ ಆತಂಕಕ್ಕೆ ಒಳಗಾದ. ಉತ್ತಮ್ ತಾಯಿಯ ಅಚಾನಕ್ ಇಹಲೋಕ ನಿರ್ಗಮನದಿಂದ ದಿಕ್ಕು ತೋಚದಂತಾಗಿದ್ದ ಅವನಿಗೆ ಸತ್ತ ತಾಯಿಯ ನಡತೆಯ ಬಗ್ಗೆ ಊರಲ್ಲಿ ಗುಮಾನಿಗಳು ಜೋರಿತ್ತು ಎಂಬುದು ಗೊತ್ತಾಗುತ್ತಿತ್ತು. ಜನರ ಬಾಯಿ ಮುಚ್ಚಿಸುವುದು ಅವನಿಗೆ ಸಾಧ್ಯವಿರಲಿಲ್ಲ. ಅಂತೆಯೇ ಅದನ್ನು ಕವಿಯಾರೆ ಕೇಳುವುದೂ ಅಸಹನೀಯವಾಗಿತ್ತು. ಮತ್ತು ಅದಕ್ಕೆ ಉತ್ತರ, ಸಮರ್ಥನೆ ಕೊಡೋದು ಮೂರ್ಕತನವೆನಿಸಿತು. ಊರು ಬಿಡೋ ನಿರ್ಧಾರ ಮಾಡಿದವನಿಗೆ ಒಂದೇ ಸಲಕ್ಕೆ ಅನಿಸಿದ್ದು, ಮುಂಬೈ ಮಹಾ ನಗರಿಗೆ ಹೋಗಿ ಬಿಡೋಣ ಎಂದು. ಯಾಕೆ ಹಾಗೆ ಅನ್ನಿಸಿತೋ ಅವನಿಗೂ ಗೊತ್ತಿರಲಿಲ್ಲ‌. ಗೊತ್ತು ಗುರಿ ಇಲ್ಲದೆ ಸದಾ ಗಿಜಿಗುಡುವ ಮಹಾ ನಗರಿ ಸೇರಿದವನಿಗೆ ‘ಏನು ಮಾಡಬೇಕು? ಯಾವ ಕೆಲಸಕ್ಕೆ ಸೇರಬೇಕು?’ ತಿಳಿದಿರಲಿಲ್ಲ.

ರೈಲನ್ನೇರಿ ಮಹಾ ನಗರಿಗೆ ಹೋದವನೇ ಮುಂಬಯಿಯಲ್ಲಿ ‘ಶೆಟ್ಟಿ ಆ್ಯಂಡ್ ಬ್ರದಸ್೯’ ಹೆಸರಿನ ಒಂದು ದೊಡ್ಡ ಹೊಟೆಲ್ ಒಳಹೊಕ್ಕು ಕ್ಯಾಷಿಯರ್ ಬಳಿ ಕೇಳಿದ. ‘I am from Karnataka, Mangalore. Can I get any jobes here’ ಎಂದು ಕೇಳಿದ. ಅವನ ಮುಖವನ್ನೇ ನೋಡುತ್ತಾ,
‘ನಿಮಗೆ ಕನ್ನಡ ಬರುತ್ತದಾ?’ ಎಂದು ಕೇಳಿದ.
‘ಹ ಹೌದು ನಾನು ಕನ್ನಡದವನೇ. ಯಾವ್ದಾದ್ರು ಕೆಲಸ ಖಾಲಿ ಇದೆಯಾ ಅಣ್ಣ?’ ಎಂದು ಕೇಳಿದ.
ಮಾಲಿಕ ‘ನಮ್ಮೂರಿನವನು’ ಎಂದು ಅಭಿಮಾನದಿಂದ ಸಪ್ಲಯರ್ ಕೆಲಸ ಕೊಟ್ಟ. ಕೆಲಸ ಒಗ್ಗಿ ಅದರಲ್ಲೊಂದು ಹಿಡಿತ ಸಾಧಿಸಿದ. ಜೊತೆಗೆ ಕೆಲಸ ಮಾಡಿಕೊಂಡಿದ್ದ ನಿತೀಶ್ ಮಂಗಳೂರಿನವನೇ ಆದ್ದರಿಂದ ಆಪ್ತನಾದ. ಹೊಟೇಲಿನ ಸ್ಟೋರ್ ರೂಂ ಅಲ್ಲಿ ಮುದುರಿಕೊಂಡು ಇರುಳಿನಲ್ಲಿ ಮಲಗಿದ್ದವನಿಗೆ ಬಂದು ತನ್ನ ವಿಲಾಸಿ ಬಾಡಿಗೆ ಮನೆಯಲ್ಲಿ ಇರಲು ಹೇಳಿದ ನಿತೀಶ್. ಹೊಸ ಮನೆಗೆ ಕಾಲಿಟ್ಟ ಮೇಲೆ ಉತ್ತಮ್ ನಿಗೆ ನಿತೀಶ್ ವಿಲಾಸಿ ಜೀವನ ನೋಡಿ ಅಚ್ಚರಿಯಾಗುತ್ತಿತ್ತು. ದಿನಕ್ಕೊಂದು ಹೊಸ ದಿರಿಸು. ಕೈ, ಬೆರಳು, ಕುತ್ತಿಗೆಗೆ ಚಿನ್ನದ ಆಭರಣ, ಬಹುತೇಕ ಐಶಾರಾಮಿ ಹೋಟೆಲ್ ಅಲ್ಲೇ ಊಟ. ಹವಾ ನಿಯಂತ್ರಿತ ಬೆಡ್ ರೂಂನಲ್ಲಿ ನಿದ್ರೆ ಮತ್ತು ತಿಂಗಳಿಗೆ ಐದು ದಿನ ರಜೆಯಲ್ಲಿ ರೂಂನಲ್ಲಿ ಇರದೆ ಎಲ್ಲಿಗೋ ಹೋಗಿ ಬಿಡುತ್ತಿದ್ದ ನಿತೀಶ್.

ಅದೊಂದು ದಿನ ಧೈರ್ಯ ಮಾಡಿ ಕೇಳಿಯೇ ಬಿಡೋಣ ಅಂದುಕೊಂಡು ಉತ್ತಮ್

‘ನಿನಗೆ ಹೇಗೆ ಇಷ್ಟು ದುಡ್ಡು ಸಂಪಾದನೆ ಆಗೋದು?’

ನಿತೀಶ್ ಮುಗುಳ್ನಗುತ್ತಾ,

‘ಸುಮ್ನೆ ಅದ್ನ ಹೇಳಿ ನಿನ್ ತಲೆ ಕೆಡ್ಸೋದ್ ಬೇಡ. ಬಿಟ್ಟಾಕು ಆ ವಿಷ್ಯ’ ಎಂದ.

‘ಇಲ್ಲ ನನಗೂ ಹೇಳು. ನಾನು ಹಣ ಮಾಡ್ಬೇಕು. ಹಣ ಇದ್ರೆನೇ ಈ ಜನ ಬೆಲೆ ಕೊಡೋದು. ಮರ್ಯಾದಿ ಸಿಗೋದು.’ ಎಂದ.

‘ನೋಡು ಉತ್ತಮ್ ನಿನಗೂ ಆ ದಾರಿ ತೋರಿಸಿ ಕೊಡ್ತೀನಿ. ಆದರೆ ಅದಕ್ಕಾಗಿ ನಿನ್ನ ಮಾನ ಅಡ ಇಡಬೇಕು. ಆಗ ಹಣ ಬರುತ್ತೆ. ಹಣ ಇದ್ರೆ ಮರ್ಯಾದೆ ಅದಾಗೆ ಸಿಗುತ್ತೆ. ಅಷ್ಟೆ simple’.ಎಂದ

‘ಅಂದ್ರೇನು ಸರಿಯಾಗಿ ಹೇಳು’ ಎಂದ ಉತ್ತಮ್

‘ಈ ಮುಂಬೈಯಲ್ಲಿ ಇಲ್ಲದ ವಿಷಯನೇ ಇಲ್ಲ. ಅದ್ರಲ್ಲಿ ಇದೂ ಒಂದು. ಇದು ಕಾಯಕ ಯೋಗಿಗಳ ನಗರ. ಸದಾ ಇಲ್ಲಿ ಎಲ್ಲರಿಗೂ ಕೆಲಸದ್ದೇ ಚಿಂತೆ. ಅದರಲ್ಲೂ ಶ್ರೀಮಂತರಿಗೆ ಸಮಯ ದಿನಕ್ಕೆ 24 ಗಂಟೆಗಳು ಸಾಲೋದಿಲ್ಲ. ಹಾಗಿರುವಾಗ ಅವರ ಹೆಂಡತಿಯರು ಹೌಸ್ ವೈಫ್ ಗಳಾಗಿದ್ದರೆ, ಅವರ ಕಷ್ಟ ಸುಖಗಳ ಬಗ್ಗೆ ಕೇಳೋರೇ ಗತಿ ಇರಲ್ಲ. ಅಂತವರು ಕೆಲವರ ಕಷ್ಟ ಸುಖಕ್ಕಾಗಿ ನೀನು ಶ್ರಮಿಸಿದರೆ, ನಿನಗೆ ಕೈ ತುಂಬಾ ಕಾಂಚಾಣ’ ಎಂದು ನಕ್ಕ.

ಒಂದು ಇಡೀ ರಾತ್ರಿ ಇದ್ದರೆ 12,000-15,000 ಗಳಿಸ್ಬೋದು’ ಎಂದ.

ಕೇಳುತ್ತಿದ್ದ ಉತ್ತಮ್ ನ ಕಿವಿ ನೆಟ್ಟಗಾದವು. ಹಣದ ಅನಿವಾರ್ಯತೆ ಇತ್ತು. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಿ, shortcutನಲ್ಲಿ ಗಮ್ಯ ತಲುಪು ಅದಮ್ಯ ಛಲಕ್ಕೆ ಇದು ಸೂಕ್ತ ರಹದಾರಿ ಅನ್ನಿಸಿತು. ಆದರೂ ಅವನಿಗೆ ಒಂದು ಕ್ಷಣ ಅಸಹ್ಯವೆನಿಸಿತು. ಯಾವ ಅನೈತಿಕ ಸಂಬಂಧದ ವಿಚಾರಕ್ಕೆ ಅಮ್ಮನೊಂದಿಗೆ ಮಾತು ಬಿಟ್ಟು, ಅವಳ ಆತ್ಮಹತ್ಯೆಗೂ ಅದು ಕಾರಣವಾಯಿತೋ…ಅದೇ ದಾರಿಗೆ ನಾನು ಇಳಿಯೋದಾ? ಎಂಬ ಜಿಜ್ಞಾಸೆ ಕಾಡಿತು.

ಆದರೆ ಗ್ರಾಮದಲ್ಲಿ ಜನ ಅವನನ್ನು ನಡೆಸಿಕೊಂಡ ಪರಿ, ಅಮ್ಮನ ನಡತೆ ಬಗ್ಗೆ ಹೀನಾತಿ ಹೀನವಾಗಿ ಜನ ಮಾತನಾಡಿದ್ದು, ಹೆಚ್ಚೇನು ಮೇಲ್ವರ್ಗವಲ್ಲದಿದ್ದರೂ, ಅದಕ್ಕೆ ಸೇರಿದ ಜನರಿಂದ ಜಾತಿ ನಿಂದನೆಯನ್ನು ಪರೋಕ್ಷವಾಗಿ ಅನುಭವಿಸಿದ್ದೆಲ್ಲಾ ನೆನಪಾಯಿತು. ಜೂಜು ಮೋಜು ಎಂದು ತಂದೆ ಮಾಡಿದ ಸಾಲ ತೀರಿಸಲು ಉತ್ತಮ್ ಹೆಣಗಾಡಿ ಹೊಡೆಸಿಕೊಂಡ ಏಟು, ಕೇಳಿಸಿಕೊಂಡ ಬೈಗುಳಗಳು ತಪ್ಪದೆ ನೆನಪಾದವು. ತಟ್ಟನೆ ಮನಸ್ಸಿನ ಗೊಂದಲಗಳನ್ನೆಲ್ಲಾ ಬದಿಗಿರಿಸಿ,

‘ ನನಗೂ ಆ ತರಹದ ಕೆಲಸ ಕೊಡಿಸೋ…’ ಎಂದು ಮನವಿಯಿಟ್ಟ ಉತ್ತಮ್

‘ಸರಿ ನಿನ್ನ Weekly off ಯಾವಾಗ…?’

‘ನಾಳೆ ಯಾಕೆ?’

‘ಸರಿ ಹಾಗಾದ್ರೆ ನಾಳೆ ನಿನ್ನ ಕಳಿಸ್ತೀನಿ. ಒಂದು ಹೊಸ Client ಇದ್ದಾರೆ. ನೀನವರ ಮನೆಗೆ ಹೋಗಬೇಕು. ಅವರು ಮಾತ್ರ ಇರೋದಂತೆ ಮನೆಯಲ್ಲಿ.’ ಎಂದ ಏನೋ ದೊಡ್ಡ ಘನಂದಾರಿ ಕೆಲಸದಂತೆ.

ಮರು ದಿನ ಕೆಂಪನೆಯ ಟಿ ಶಟ್೯, ಕಡು ಕಪ್ಪು ಜೀನ್ಸ್ ಧರಿಸಿಕೊಂಡು ಸ್ಮಾಟ್೯ ಆಗಿ ಹೊರಟು ಅಣಿಯಾಗಿ ನಿತೀಶ್ ಮನೆ ಮುಂದೆ ನಿಲ್ಲಲು ಹೇಳಿದ್ದರಿಂದ ನಿಂತ. ನಿಂತವನೇ ಯೋಚಿಸಿದ.

‘ಬದುಕಿನಲ್ಲಿ ತನು-ಮನ-ಧನವನ್ನೆಲ್ಲಾ ಹಂಚಿಕೊಳ್ಳೋದು ಅವಳೊಬ್ಬಳ ಜೊತೆಗೆ ಮಾತ್ರ ಅಂದುಕೊಂಡಿದ್ದೆ. ಅವಳೇ ನಾ ಪ್ರೀತಿಸಿದ ಹುಡುಗಿ ದ್ವೀಪ. ಕೊನೆಗೆ ಅವಳ ಹೆಸರಿಂತೆ ನನ್ನ ಪಾಡಾಯಿತು. ನಡು ನೀರಿನಲ್ಲಿ ಬಿಟ್ಟು ಹೋದಳು. ಅಲ್ಲಿಂದೀಚೆಗೆ ಮದುವೆಯೇ ಆಗಬಾರದು ಸನ್ಯಾಸಿಯಂತೆ ಇರಬೇಕು ಅಂದುಕೊಂಡೆ. ಈಗ ಚರ್ಮ ಸುಖದ ಹೀನ ದಂಧೆಗೆ ಇಳಿಯಲು ಸಿದ್ಧನಾಗಿದ್ದೇನೆ. ಇದು ಒಂದು ಜೀವನವೇ…?!’ ಎಂದುಕೊಳ್ಳುತ್ತಲೇ ಕಾರು ಅವನು ಕಳುಹಿಸಿದ್ದ ಜಿಪಿಎಸ್ ಅನುಸರಿಸಿಕೊಂಡು ಬಂದು ಎದುರಿಗೆ ನಿಂತಿತ್ತು. ಡ್ರೈವರ್ ಕೇಳಿದ ಹಿಂದಿಯಲ್ಲಿ
‘ಕ್ಯಾ ಆಪ್ ಕಾ ನಾಮ್ ಉತ್ತಮ್ ಹೇ’

‘ಹಾ ಮೇ ಹಿ ಹುಂ’ ಎಂದು ಕಾರಿನ ಡೋರ್ ತೆರೆದು ಅಳುಕಿನಲ್ಲೇ ಕುಳಿತ.

ಚಾಲಕ ಕನ್ನಡಿಯಲ್ಲೇ ವಾರೆಗಣ್ಣಿನಲ್ಲಿ ನೋಡುತ್ತಾ ವ್ಯಂಗ್ಯ ನಗುವನ್ನು ತಡೆದುಕೊಳ್ಳುತ್ತಿದ್ದ. ಅದೊಂದು ಬಿಳಿಯ ಭವ್ಯ ಬಂಗಲೆಯ ಮುಂದೆ ನಿಂತಿತು ಕಾರ್.

ಮನೆ ಒಳಹೊಕ್ಕು ನಿತೀಶ್ ನೀಡಿದ್ದ ನಂಬರ್ ಗೆ ಕರೆ ಮಾಡಿದ,
‘ಆಜಾವೋ ಊಪರ್ ಲೆಫ್ಟ್ ಸೈಡ್ ಮೆ ದಿಕ್ನೇ ವಾಲಿ ಕಮ್ರೇ ಮೆ’ ಎಂಬ ಮಾದಕ ಧ್ವನಿ ಕೇಳಿಸಿತು.

ಖಾಲಿ ತಲೆಯಲ್ಲಿ ಮೆಟ್ಟಿಲು ಹತ್ತಿ ಬಾಗಿಲು ತೆರೆದರೆ, ಅಪ್ಸರೆ ಒಬ್ಬಳು ಕೆಂಪು ಬಣ್ಣದ ಹೊದಿಕೆಯನ್ನು ತನ್ನ ನಗ್ನ ದೇಹಕ್ಕೆ ಮುಚ್ಚಿಕೊಂಡು ಹಿಡಿದು ಗೋಡೆಯತ್ತ ಮುಖ ಮಾಡಿ ನಾಚುತ್ತಾ ವಯ್ಯಾರದಲ್ಲಿ ನಿಂತಿದ್ದಳು.

ಉತ್ತಮ್ ಬಾಗಿಲನ್ನು ಮೆಲ್ಲಗೆ ತಟ್ಟಿ ತಡವರಿಸುತ್ತಾ…
‘ಮೇಡಂ’ ಎಂದ.

ತಿರುಗಿದವಳನ್ನು ಕಂಡು ಒಂದು ಕ್ಷಣ ಅವನಿಗೆ ಜೀವವೇ ಹೋದಂತಾಗಿತ್ತು. ಏಕೆಂದರೆ…ಎದುರಿಗಿದ್ದವಳು.
‘ದ್ವೀಪ’

‘ನೀನಾ…’ ಎಂದ.

ಅವಳು ಮ್ಲಾನವಾಗಿ ಕುಸಿದು ಕುಳಿತು ಕಂಬನಿ ಹರಿಸುತ್ತಾ ನುಡಿದಳು.

‘ನಿನ್ನ ನಾನು ಬಿಟ್ಟು ಹೋದರೂ, ಚೆನ್ನಾಗಿರು ಅಂತ ಪ್ರತಿ ದಿನ ದೇವರ ಹತ್ರ ಬೇಡಿಕೊಂಡೆ. ನೀನು ಬದಲಾಗಿ ಒಳ್ಳೆಯವನಾಗಿರ್ತೀಯ ಅಂದುಕೊಂಡೆ. ಆದ್ರೆ ಯಾವುದೂ ನಿಜವಾಗ್ಲಿಲ್ಲ. ಈಗ ನನ್ನೆದುರು ಒಬ್ಬ Call Boy ಆಗಿ ನಿಂತಿದ್ದೀಯ. ನನ್ ಜೀವ್ನನೂ ಹಾಳಾಗೋಯ್ತು. ಆಗರ್ಭ ಶ್ರೀಮಂತನನ್ನು ಮದುವೆಯಾದೆ. ನನ್ನ ಗಂಡನಿಗೆ ನಾನು ಆಸಕ್ತಿಯ ಮನುಷ್ಯಳೇ ಆಗಲಿಲ್ಲ. ಏಕೆಂದರೆ ಅವನಿಗೆ ನಾನು ಕೇವಲ ತಿಜೋರಿ. ಜೀವವಿರುವ ಮನುಷ್ಯಳಲ್ಲ. ಅಪ್ಪ ಸಾಯುವ ಮುನ್ನ ಅವರ ಎಲ್ಲಾ ಆಸ್ತಿಯನ್ನು ಅವನಿಗೆ ಬರೆದುಕೊಟ್ಟರು. ಆಸ್ತಿ ಅಂತಸ್ತು ಹೆಚ್ಚಾಗಿ ಅದರ ಹುಚ್ಚು ಹಿಡಿಸಿಕೊಂಡ. ನಾನು ಅವನಿಗೆ ಸಂಪೂರ್ಣ ಬೇಡವಾದೆ ಅದಕ್ಕೆ ಈ ನಿರ್ಧಾರ ಮಾಡಿದೆ. ನೋಡಿದ್ರೆ ನೀನು ಬಂದೆ.’ ಎನ್ನುತ್ತಾ ಸ್ವಲ್ಪ ಹೊತ್ತು ಆಕ್ರಂದಿಸಿದಳು. ನಗರದಿಂದಾಚೆಗೆ ಇದ್ದ ಆ ಬಂಗಲೆಯ ಆಸುಪಾಸಿನವರೆಗೂ ಅವಳ ಅಳುವಿನ ಚೀರಾಟ ಹರಡಿಕೊಂಡಿತು.

ಅದಕ್ಕೆ ಅವನಿಗೆ ಏನನ್ನಬೇಕು ತಿಳಿಯಲಿಲ್ಲ!
ಮೌನವಾಗಿ ಯೋಚಿಸಿ…

‘ನಾನು ಕಟ್ಟವನು’.
ಇಷ್ಟೇ ಹೇಳಿ ಮರಳಿದ. ಗೆಳೆಯನ ಕೋಣೆಗೆ ಬಂದು ಮಲಗಿಕೊಂಡ. ಸಂಜೆ ಕೆಲಸ ಮುಗಿಸಿ ಬಂದ ನಿತೀಶ್ ಬಂದು ಬಾಗಿಲು ತಟ್ಟಿದ. ಪ್ರತಿಕ್ರಿಯೆ ಬರದಿದ್ದಾಗ ಬಾಗಿಲು ತರೆಯಲು ಯತ್ನಿಸಿದ. ತೆರೆದುಕೊಂಡಿತು.
ಹೋಗಿ ಅವನ ಹೆಸರು ಕೂಗುತ್ತಾ ಬೆಡ್ ರೂಂ ಪ್ರವೇಶಿಸಿದವನಿಗೆ ಕಂಡಿದ್ದು,

ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದ ಉತ್ತಮ್ ಶವ…!