Broken Family, ಹೆತ್ತವರ ಪ್ರೀತಿಯಿಂದ ಸಂಪೂರ್ಣ ವಂಚಿತಳಾದ ಅವಳ ಬಾಲ್ಯಕ್ಕೆ ಕರಾಳತೆಯು ಆವರಿಸಿತ್ತು. ದೊಡ್ಡ ರಾಜ ಮನೆತನದ ಸೊಸೆಯಾದರೂ ಒಂಟಿತನದ ಸೋಗು ಅವಳ ಪಾಲಿಗೆ ಅನವರತ ಬಿಡದೆ ಕಾಡಿದ್ದು ಮಾತ್ರ ದುಸ್ಥರ. ಅವಳನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ಕೊರಗಿನಲ್ಲಿ ಲೋಕದಲ್ಲಿನ ಅದೆಷ್ಟೋ ಒಬ್ಬಂಟಿ ಹೃದಯಗಳಿಗೆ ಸ್ಪಂದಿಸಿದ ಪರಿ ಮಾತ್ರ ‘ಹೀಗೂ ಉಂಟೆ’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ. ಅವಳು ಬೇರಾರೂ ಅಲ್ಲ ಅಮೇರಿಕನ್ನರಿಂದ ‘Impossible Beauty‘ ಎಂಬ ಹೆಗ್ಗಳಿಕೆಯ ಪಟ್ಟ ಅಪರೂಪದ ಚೆಲುವೆ ಡಯಾನಾ ಅವಳ ಕುರಿತಾಗಿ ಅಕ್ಷರ ಮಾಂತ್ರಿಕರಾದ ರವಿಬೆಳಗೆರೆ ಅವರು ಚಿಕ್ಕದಾಗಿ ಹಾಗು ಚೊಕ್ಕದಾಗಿ ಬರೆದ ‘ಡಯಾನಾ‘ ಪುಸ್ತಕ ಪ್ರಧಾನ ಸಂಪಾದಕರಾದ ರಜತ್ ರಾಜ್ ಅವರಿಂದ ಒಂದಿಷ್ಟು ವಿಮರ್ಶೆ…
ತಪ್ಪದೇ ಓದಿ ಕೇವಲ ಒಂದು ನಿಮಿಷದಲ್ಲಿ
ಪುಸ್ತಕ– ಡಯಾನಾ
ಲೇಖಕರು– ರವಿ ಬೆಳಗೆರೆ
ಪ್ರಕಾಶಕರು–ಭಾವನಾ ಪ್ರಕಾಶನ
ಬೆಲೆ: 100 ರೂಪಾಯಿ
ಪುಸ್ತಕದಲ್ಲಿ ಏನಿದೆ:
ವಿಂಡ್ಸರ್ ಎಂಬ ಇಂಗ್ಲೆಂಡಿನ ರಾಜಮನೆತನದ ಮುಕುಟದಲ್ಲಿ ಹೊಳೆಯುವಂತಹ ವಜ್ರದಂತೆ ಬೆಡಗಿ ರಾಜಕುಮಾರಿ ಡಯಾನಾ ಜೀವನದಲ್ಲಿ ಪಟ್ಟ ಯಾತನೆ ನಿಬ್ಬೆರಗಾಗಿಸುವಂತದ್ದು. ತಾನೂ ಬಾಳಿನಲ್ಲಿ ಬಹಳ ನೊಂದವಳಾಗಿಯೂ ನೊಂದವರ, ಬಡವರ, ಸಾವಿನ ಅಂಚಿನಲ್ಲಿ ನಿಂತು ಮೃತ್ಯುವಿನ ಬಾಗಿಲು ತಟ್ಟುತ್ತಿದ್ದವರ ಬಾಳಲ್ಲೂ ಬೆಳಕಾಗಲು ಹೊರಟ ಡಯಾನಾಳದ್ದು ತೀರಾ ವಿರಳ ಸರಳ ಸುಂದರ ಸೌಂದರ್ಯ.
‘Out of the Box’ ಆಲೋಚಿಸಿ ತನ್ನ ಮಿತಿಗಳನ್ನೆಲ್ಲಾ ಮೀರಿ ಜನಾನುರಾಗಿಯಾಗಿ ಜೀವಿಸಿದ್ದು ಅವಳ ಹೆಮ್ಮೆಯ ಗರಿಮೆಯೇ. ಎಲ್ಲಾ ನಿಯಂತ್ರಣಗಳಿಂದ ಮುಕ್ತವಾಗಿ ತನ್ನಿಚ್ಛೆಯ ಬದುಕು ಬದುಕಿದ್ದು ಒಂದು ಸಾಹಸವೇ ಸರಿ. ಕೊನೆಗೆ ರಾಜಮಾತೆಯ ದರ್ಪ-ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದು ಮೈ ಚಳಿ ಬಿಟ್ಟು ಅನೇಕ ಯುವಕರೊಂದಿಗೆ Affairಗಳನ್ನು ಇಟ್ಟುಕೊಂಡು ರಾಜಮನೆತನಕ್ಕೆ ತೀವ್ರ ಮುಜುಗರ, ಇರಿಸು-ಮುರಿಸು ಉಂಟು ಮಾಡಿ, ಡಯಾನಾ ನುಂಗಲಾಗದ ಬಿಸಿ ತುಪ್ಪಂತೆ ಆದಳು.
ಒಡೆದ ಕುಟುಂಬದಲ್ಲಿ ಬಾಲ್ಯ, ತಂದೆ ತಾಯಿಯ ಒಲವಿರದ ಒಬ್ಬಂಟಿತನ, ದಾಂಪತ್ಯ ವೈಫಲ್ಯ, ಬ್ಯುಲಿವಿಯಾ ಎಂಬ ತಿನ್ನುಬಾಕ ಖಾಯಿಲೆ, ಹಲವು ಅನೈತಿಕ ಸಂಬಂಧಗಳು ಎಂಬುದೆಲ್ಲವೂ ಸೇರಿ ಕೊನೆಗೆ ಹೇಗೆ ಅವಳ ಬದುಕು ದುರಂತ ಅಂತ್ಯ ಕಂಡಿತು ಎಂಬುದನ್ನು ಈ ಪುಸ್ತಕ ಚಿತ್ರಿಸುತ್ತದೆ.
ಪುಸ್ತಕದ ಹಿನ್ನುಡಿಯಲ್ಲೇ ಹೇಳಿರುವಂತೆ ಒಂದು ಸಿಟ್ಟಿಂಗ್ ನಲ್ಲಿ ಓದಿ ಮುಗಿಸಬಹುದಾದ ರಾಣಿ ಡಯಾನಾಳ ಜೀವನ ಮಾತ್ರ ತೀರಾ ವಿಚಿತ್ರ ಅನ್ನಿಸುತ್ತದೆ. ಬರಹದ ಶೈಲಿ ರವಿಬೆಳಗೆರೆ ಅವರ ಇತರೆ ಪುಸ್ತಕಗಳಂತೆಯೇ ಓದಿಸಿಕೊಂಡು ಹೋಗುತ್ತದೆ. ನೀವೂ ಸಾಧ್ಯವಾದರೆ ಗಹನವಾಗಿ ಈ ಪುಸ್ತಕ ಓದಿ ಮುಗಿಸಿ, ಆಗ ಡಯಾನ ಬಿಡದೇ ಕಾಡಿದರೂ ಕಾಡಿಯಾಳು…!