ನಾಲ್ಕು ನಿಮಿಷದ ಓದು…
ಓಂಶ್ರೀ ಬರೆದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕೃತಿ 'ಪುಟಾಣಿ ರೈಲು' ಕುರಿತು ರಂಜಿತ್ ಕವಲಪಾರ ಬರೆದ ವಿಶೇಷ ಲೇಖನ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಈ ಬಾರಿ ಶ್ರೀಮತಿ ಕೂಡಕಂಡಿ ಓಂಶ್ರೀ ದಯಾನಂದ ಅವರ ಪಾಲಾಗಿದೆ. ಮಕ್ಕಳ ಸಾಹಿತ್ಯ ವಿಭಾಗದ ಪುಸ್ತಕಕ್ಕೆ ಈ ಬಾರಿ ಬಹುಮಾನ ಘೋಷಣೆಯಾಗಿರುವುದು ವಿಶೇಷ.

ಬಹುಮಾನ ಗಿಟ್ಟಿಸಿಕೊಂಡಿರುವ ‘ಪುಣಾಣಿ ರೈಲು’ ಕೃತಿಯನ್ನು ಓದುತ್ತಾ ಹೋದಂತೆ ನಾನು ನನ್ನ ಬಾಲ್ಯ ಕಾಲಕ್ಕೆ ತೆರೆದುಕೊಳ್ಳುತ್ತಾ ಹೋದೆ. ಮಕ್ಕಳ ಕಥೆಗಳನ್ನು ಓದಲು ಎಷ್ಟು ಚಂದವೋ ಅದನ್ನು ರಚಿಸಲು ಅಷ್ಟೇ ಕಷ್ಟ ಎಂದು ತೀವ್ರವಾಗಿ ನಂಬುವವನು ನಾನು.
ಮಕ್ಕಳ ಮಾನಸಿಕತೆಯನ್ನು ಅರ್ಥ ಮಾಡಿಕೊಂಡು, ಅವರಿಗಿಷ್ಟವಾದ ಹಾಗೆ ಬರೆಯುವುದು ಹಾಗೂ ನಡೆದುಕೊಳ್ಳುವುದು ಅಪರೂಪದ ಕಲೆ. ಅದನ್ನು ನಮ್ಮದಾಗಿಸಿಕೊಳ್ಳಲು ಅಪಾರ ತಾಳ್ಮೆ ಹಾಗೂ ವಿಶೇಷ ಆಸಕ್ತಿ ಬೇಕಾಗುತ್ತದೆ. ಈ ಅಂಶದಲ್ಲಿ ಕೃತಿಯನ್ನು ನೋಡಿದರೆ ಲೇಖಕಿಯ ‘ಪುಟಾಣಿ ರೈಲು’ ಕೃತಿ ಗೆದ್ದಿದೆ.
ಮನುಷ್ಯ ಸಂಬಂಧಗಳ ಕುರಿತು ತೀವ್ರ ಕುತೂಹಲಿಯಾಗಿರುವ ನನಗೆ ಮಕ್ಕಳ ಕುತೂಹಲ, ಅವರ ಬೆರಗು, ಆಸಕ್ತಿ, ಆಯ್ಕೆಗಳು ಸದಾ ಅಚ್ಚರಿ ಮೂಡಿಸುತ್ತದೆ.
ಈ ಕೃತಿ ಓದಿ, ಇಲ್ಲಿ ಬರೆಯಲು ನನ್ನನ್ನು ಪ್ರೇರೇಪಿಸಿದ್ದೂ ಇದೇ ಅಂಶಗಳು.
ಓಂಶ್ರೀ ಅವರ ಪುಣಾಣಿ ರೈಲು ಯಾವ ಕೇಂದ್ರದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿತು ಎಂದು ನಿಖರವಾಗಿ ಹೇಳುವುದು ಕಷ್ಟವಾಗುತ್ತದೆ.
ಒಟ್ಟು ಮೊತ್ತ ಸಂಕಲನವನ್ನು ಅವಲೋಕಿಸುವುದಾದರೆ ಅದರ ಆಳಕ್ಕೆ ನಾವು ಇಳಿಯಬೇಕಾಗುತ್ತದೆ. ಇಲ್ಲಿ ವಿಮರ್ಶಾತ್ಮಕವಾಗಿ ಮಕ್ಕಳ ಕೃತಿಯೊಂದನ್ನು ನಾನು ನೋಡುವುದಕ್ಕಿಂತಲೂ ಈ ಕೃತಿ ರಚಿಸಲ್ಪಟ್ಟಿರುವುದು ಮಕ್ಕಳ ಓದಿಗಾಗಿ ಎನ್ನುವ ವಿಚಾರವನ್ನು ಮನದಲ್ಲಿಟ್ಟುಕೊಂಡು ಅಭಿಪ್ರಾಯ ಹೇಳುವುದು ಹೆಚ್ಚು ಸೂಕ್ತ. ಮಕ್ಕಳ ಸಾಹಿತ್ಯವನ್ನು ಮಕ್ಕಳು ಓದುವುದು ಒಂದು ಕ್ರಮವಾದರೆ ಅವರ ಪೋಷಕರು ಓದಿ ಮಕ್ಕಳಿಗೆ ಹೇಳುವುದು ಇನ್ನೊಂದು ಕ್ರಮ. ಓಂಶ್ರೀ ಅವರು ಸರಳವಾಗಿ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಈ ಕೃತಿಯನ್ನು ಬರೆದಿದ್ದಾರೆ ಅನ್ನುವುದರಲ್ಲಿ ಈ ಕೃತಿ ಭಾಗಶಃ ಗೆದ್ದಿದೆ. ಹಾಗಾಗಿ ಈ ಕೃತಿಯನ್ನು ಮಕ್ಕಳೂ ಓದಬಹುದು, ಪೋಷಕರು ಮಕ್ಕಳಿಗೆ ಓದಿ ಸುಲಭವಾಗಿ ಹೇಳಬಹುದು.

ಮಕ್ಕಳಿಗಾಗಿ ಬರೆಯುವಾಗ ಅವರ ಆಲೋಚನಾ ಮಟ್ಟಕ್ಕೆ ಹೋಗಿ ಅವರ ಲೋಕವನ್ನು ಸೃಷ್ಟಿಸುವ ಸವಾಲನ್ನು ಅವರು ಇಲ್ಲಿ ಚೆನ್ನಾಗಿ ನಿಭಾಯಿಸಿದ್ದಾರೆ. ಲೇಖಕಿ ಎಂ.ಎಸ್ಸಿ(ಗಣಿತ ಶಾಸ್ತ್ರ) ಮತ್ತು ಬಿ.ಇಡಿ ಪದವೀಧರೆ.
ಕನ್ನಡದಲ್ಲಿ ಮಕ್ಕಳ ಕಥೆಗಳನ್ನು ಬರೆದಿರುವ ಇವರು ಇತ್ತೀಚೆಗೆ ದೊಡ್ಡವರ ಕಥೆಗಳನ್ನೂ ರಚಿಸುತ್ತಿದ್ದಾರೆ, ಜೊತೆಗೆ ತಮ್ಮ ಯೂ ಟ್ಯೂಬ್ ಚಾನಲ್ ಮೂಲಕ ಮಕ್ಕಳಿಗೆ ಕಥೆ ಹೇಳುವುದನ್ನೂ ಮಕ್ಕಳ ಪದ್ಯಗಳನ್ನು ರಚಿಸಿ ಹಾಡುವುದನ್ನೂ ಮಾಡುತ್ತಿರುತ್ತಾರೆ. ಶಿಕ್ಷಕಿಯಾಗಿ ಕೆಲವು ವರ್ಷಗಳ ಕಾಲ ಮಕ್ಕಳೊಂದಿಗೆ ಒಡನಾಡಿರುವ ಅನುಭವ ಇಲ್ಲಿ ಅವರ ಪ್ರತಿ ಕಥೆಗಳಲ್ಲೂ ಪ್ರತಿಫಲಿಸಿದೆ.
ಭಾರತ ಸರ್ಕಾರದ ಮಾಜಿ ಮಾನವ ಸಂಪನ್ಮೂಲ ಸಚಿವೆ ಶ್ರೀಮತಿ ಸ್ಮೃತಿ ಇರಾನಿಯವರಿಂದ ಅತ್ಯುತ್ತಮ ಶಿಕ್ಷಕಿ ಎಂಬ ಪ್ರಶಂಸನೆಗೆ ಇವರು ಪಾತ್ರರಾಗಿದ್ದರು ಎಂಬುದು ಗಮರ್ನಾಹ.
ಲೇಖಕಿ ತಮ್ಮ ಬಾಲ್ಯಕಾಲದಲ್ಲಿ ಓದಿಕೊಂಡಿರುವ ಮಕ್ಕಳ ಸಾಹಿತ್ಯದ ಗಂಧ ಈ ಕೃತಿಯುದ್ದಕ್ಕೂ ಓದುಗರ ಅನುಭವಕ್ಕೆ ಬರುತ್ತದೆ.
ಈ ಕೃತಿ ಒಟ್ಟು ಮೂವತ್ತು ಸಣ್ಣಕಥೆಗಳನ್ನು ಒಳಗೊಂಡಿದ್ದು. ಮುನ್ನುಡಿಯಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಜಿ.ರಾಜೇಂದ್ರ ಅವರು ಬರೆದಿರುವಂತೆ ಕೆಲವು ಕಥೆಗಳಲ್ಲಿ ಪಂಚತಂತ್ರ ಕಥೆಗಳ ಛಾಯೆ ಇದೆ.
ಪ್ರತಿ ಕಥೆಗಳಲ್ಲೂ ಮಕ್ಕಳಿಗೆ ನೀತಿಪಾಠ ಹೇಳುವ ಪ್ರಯತ್ನವಾಗಿದೆ. ಪ್ರಸಿದ್ಧ ಮಕ್ಕಳ ಕಥೆಗಳಾದ ‘ಮೊಸಳೆ-ಮಂಗನ ಹೃದಯ’ ‘ಚಾಣಾಕ್ಷ ಕಾಗೆ ದಾಹತೀರಿಸಿಕೊಳ್ಳುವ ಕಥೆ ಹಾಗೂ ಮುಂಗುಸಿ ಮಗುವಿನ ಕಥೆಗಳ ಪ್ರಭಾವ ನನಗೆ ಒಂದೆರಡು ಕಥೆಗಳಲ್ಲಿ ಕಾಣಲು ಸಿಕ್ಕಿವೆ.
ಮಕ್ಕಳ ಕಥೆಗಳ ಚಂದವೇ ಅದರ ಕಾಲ್ಪನಿಕ ರೂಪಕಗಳು. ಇಲ್ಲಿ ಮರ, ನದಿ, ಹಕ್ಕಿ, ಕೋಳಿ, ಗಿಳಿ, ಪ್ರಕೃತಿಗೆ ಮಾತು ಬರುತ್ತದೆ. ಈ ಕಥೆಗಳಲ್ಲಿ ಮಕ್ಕಳನ್ನು ಪ್ರಕೃತಿಯೆಡೆಗೆ ಬೆರೆಸುವ ಪ್ರಯತ್ನವಿದೆ. ಜೊತೆಗೆ ಮಕ್ಕಳ ಮಾನಸಿಕ ಅಭಿರುಚಿಯನ್ನು ಪೋಷಕರ ಗಮನಕ್ಕೆ ತರುವ ಕೆಲಸವೂ ಅಲ್ಲಲ್ಲಿ ಆಗಿದೆ ಹಾಗಾಗಿ ಪೋಷಕರೂ ಈ ಕಥೆಗಳನ್ನು ಓದಿಕೊಳ್ಳುವುದು ಉತ್ತಮ.
‘ಏಡಿ ಕಂದಯ್ಯ’ ‘ಬಂಗಾರದ ಕಾಗೆ’ ‘ಹೀರೋ ಪೆನ್ನು’ ಹೀಗೆ ಕೆಲವು ಕಥೆಗಳ ಶೀರ್ಷಿಕೆಗಳು ಆಕರ್ಷಕವಾಗಿದೆ. ಇಂತಹ ಶೀರ್ಷಿಕೆಗಳು ಓದುಗರನ್ನು ಅದರಲ್ಲೂ ಪುಟಾಣಿ ಓದುಗರನ್ನು ಸೆಳೆಯುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ.
ಲೇಖಕಿ ಸ್ವತಃ ಇಬ್ಬರು ಮಕ್ಕಳ ತಾಯಿಯೂ ಆಗಿರುವುದರಿಂದ ಕಥೆಯಲ್ಲಿ ಮಕ್ಕಳೆಡೆಗಿನ ಕಾಳಜಿ, ತಾಯ್ತನ ಹೆಚ್ಚು ಜಾಗೃತವಾಗಿದೆ.
ಆಧುನಿಕ ಜಗತ್ತಿನ ಒತ್ತಡಗಳು ಹಾಗೂ ಪೋಷಕರ ಬಿಡುವಿಲ್ಲದ ದಿನಚರಿ ಮಕ್ಕಳ ಮಾನಸಿಕತೆಯ ಮೇಲೆ ಉಂಟು ಮಾಡಬಹುದಾದ ಆಘಾತಗಳನ್ನು ಲೇಖಕಿ ಕೆಲವು ಕಥೆಗಳಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಇಲ್ಲಿನ ಎಲ್ಲಾ ಕಥೆಗಳಿಗೂ ಹಿರಿಯ ಚಿತ್ರಕಲಾವಿದ ಬಿ.ಆರ್ ಸತೀಶ್ ಅವರ ಚಿತ್ರಕಲೆ ವಿಶೇಷ ಚೈತನ್ಯ ತುಂಬಿದೆ. ಅವುಗಳೇ ಸಾಕಷ್ಟು ಕಥೆಗಳ ಅಂದ ಹೆಚ್ಚಿಸಿವೆ.
ಕಥೆಯಲ್ಲಿ ಹೇಳಬೇಕಾದ್ದನ್ನು ಎಲ್ಲೂ ತಡವರಿಸದೆ ಹೇಳಿರುವುದು ಕಥೆಗಾರ್ತಿಯ ಕಥಾ ಕೌಶಲ್ಯವನ್ನು ಎತ್ತಿ ಹಿಡಿದಿದೆ. ಒಂದೆರಡು ಕಥೆಗಳನ್ನು ಕಟ್ಟುವಾಗ ಕೊಂಚ ತಡವರಿಸಿದಂತೆ ಅನಿಸಿದರೂ, ಅದರ ಪ್ರಭಾವ ಕೃತಿಯ ಅಂದಗೆಡಿಸುವಷ್ಟಿಲ್ಲ!
ಈ ಕಥೆಗಳಲ್ಲಿ ಅಜ್ಜಿ, ರಾಜಕುಮಾರಿ, ರಾಜಕುಮಾರ, ಕೋಳಿ, ಕಾಗೆ ಸೇರಿದಂತೆ ಮಕ್ಕಳಿಗೆ ಇಷ್ಟವಾಗುವ ಪ್ರತ್ಯೇಕ ಲೋಕವೇ ಸೃಷ್ಟಿಸಲ್ಪಟ್ಟಿದೆ.
ಈ ಬಹುಮಾನ ಗಮನೀಯವಾಗ ವಿರಳವಾಗುತ್ತಿರುವ ಮಕ್ಕಳ ಸಾಹಿತ್ಯ ರಚನೆಯ ಕಲೆಗೆ ಪ್ರೋತ್ಸಾಹ ನೀಡಿದಂತೆಯೂ ಆಗಿದ್ದು, ಪ್ರಬಲ ಪೈಪೋಟಿ ಇರುವ ಗೌರಮ್ಮ ದತ್ತಿನಿಧಿ ಬಹುಮಾನದ ಆಯ್ಕೆಗಾರರು ಮಕ್ಕಳ ಸಾಹಿತ್ಯದ ಪ್ರಕಾರದ ಕೃತಿಯನ್ನು ಈ ಬಾರಿ ಆಯ್ಕೆ ಮಾಡಿರುವುದು ಅಭಿನಂದನಾರ್ಹ.
ಸಾಹಿತ್ಯದ ಇಂತಹ ಪ್ರಯೋಗಗಳಿಗೆ ಬರಹಗಾರರು ಧೈರ್ಯವಾಗಿ ಹೆಜ್ಜೆ ಇಡುವಲ್ಲಿ ಇಂತಹ ಆಯ್ಕೆಗಳು ಬಹುಮುಖ್ಯ ಪಾತ್ರವಹಿಸುತ್ತದೆ. ಮುಖ್ಯವಾಗಿ ಇಲ್ಲಿ ಮಕ್ಕಳ ಸಾಹಿತ್ಯ ಪ್ರಕಾರ ಈ ಪ್ರಶಸ್ತಿಯ ಮೂಲಕ ಗೆದ್ದಿದೆ.
ರಂಜಿತ್ ಕವಲಪಾರ
