ನಾನೊಂದು ದೃಶ್ಯ ನೋಡಿದ್ದೆ!
ಪುಟ್ಟ ಮಗುವನ್ನು ತಾಯಿಯೊಬ್ಬಳು ಯಾರದೋ ಚಾಡಿ ಮಾತು ಕೇಳಿ ಮನಬಂದಂತೆ ಥಳಿಸುತ್ತಿದ್ದಾಳೆ.ಆ ಮಗು ಅಳುತ್ತಲೇ ಅಮ್ಮನನ್ನು ಮತ್ತಷ್ಟು ಬಿಗಿಯಾಗಿ ಹಿಡಿದಪ್ಪಿ
ಕಣ್ಣೀರು ಸುರಿಸುತ್ತಾ ಆರ್ತವಾಗಿ
ತಲೆ ಮೇಲೆತ್ತಿ ಅಮ್ಮನ ಮುಖವನ್ನೇ ನೋಡುತ್ತಿದೆ.
ಮೈಮೇಲೆಲ್ಲ ಬಾಸುಂಡೆ.
ಮುಖವೆಲ್ಲ ಧೂಳು ತುಂಬಿ ಮಾಸಲಾಗಿದೆ.ತಪ್ಪಿಸಿಕೊಂಡು ದೂರವಾದರೂ ಓಡಬೇಡವೆ ಅದು ! ಉಹ್ಞು …ಮತ್ತಷ್ಟು ಬಿಗಿದಪ್ಪಿ ಮತ್ತೆ ಎಷ್ಟು ಹೊತ್ತಿಗೆ ಅಮ್ಮನ ನಗುಮುಖವನ್ನು ನೋಡುವೆನೋ ಎಂಬ ಕಾತರದೃಷ್ಟಿ ಚೆಲ್ಲಿದೆ.ಇನ್ನೂ ಬಿಕ್ಕುನಿಂತಿಲ್ಲ.ಅಷ್ಟರಲ್ಲಿ,
ಕೋಲು ಮುರಿಯಿತು.ಅದನ್ನೇ‌
ನೆಪಮಾಡಿ ದರದರನೆ ಒಳಗೊಯ್ದು ಆ ಮಗುವನ್ನು ಅಪ್ಪಿ ಮುದ್ದಾಡುತ್ತಾ ತನ್ನ ಹಾಳಾದ ಸಿಟ್ಟನ್ನು ಶಪಿಸಿ ಕೊಳ್ಳುತ್ತಾಳೆ ಹೆತ್ತಮ್ಮ,ತನ್ನ ಕೆನ್ನೆ ಕೆನ್ನೆ ಬಡಿದುಕೊಂಡು ತನ್ನ ಪಾಪಕೃತ್ಯಕ್ಕೆ ಮರುಗುತ್ತಾಳೆ.ಆ ನೋವಿನಲ್ಲೂ ಮಗು
ಅಮ್ಮನನ್ನುದೂಷಿಸುವುದಿಲ್ಲ.
ಬದಲಿಗೆ ಮತ್ತಷ್ಟು
ಆಲಂಗಿಸುತ್ತಾ ನೋವು ಶಮನ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.ಅಮ್ಮನ ಕಡೆಗೆ ಅದೇ ಯಾಚನಾ ದೃಷ್ಟಿ,ಅದೇ ವಾತ್ಸಲ್ಯಭರಿತ ನೋಟ ಜೊತೆಗೆ ಬಟ್ಟಲುಗಣ್ಣಿನಲ್ಲಿ ಅಮ್ಮನ ದು:ಖಕ್ಕೆ ನಾನು ಕಾರಣನಾದೆನಲ್ಲ ಎಂಬ ಸಂತಾಪ ! ಮಗುವಿಗೆ ತನ್ನ ನೋವನ್ನು ಮರೆಸಬಲ್ಲ ಅಮ್ಮನ ನೋವಿನ ಪ್ರತಿಫಲನ ಪರಸ್ಪರ ಅದ್ಭುತ ಭಾವತಂತುವನ್ನು ಬೆಸೆಯುವ ಕ್ರಿಯೆ ಒಂದು ದೈವಿಕ‌ ಅನುಭೂತಿ.ಸಾಮಾನ್ಯವಾಗಿ ಗೊತ್ತಿಲ್ಲದೆಯೇ ತಾನು ಮಾಡಿದ ಕೆಲಸ, ಅದು ಅಮ್ಮನ ದೃಷ್ಟಿಯಲ್ಲಿ ತಪ್ಪಾಗುವುದು ಹೇಗೆ ?’ಎಂಬ ಗೊಂದಲದಲ್ಲಿ ಮಗು ಒಂದೋ ನಿದ್ದೆ ಹೋಗುತ್ತದೆ .ಇಲ್ಲವಾದರೆ ಅಮ್ಮನೊಡನೆ ಏನೂ ನಡೆದೇ ಇಲ್ಲವೆಂಬಂತೆ ವರ್ತಿಸತೊಡಗುತ್ತದೆ.ಎಂತಹ ದಿವ್ಯಾನುಬಂಧ ಈ ತಾಯಿ ಮಕ್ಕಳದು.ಅದಕ್ಕಾಗೇ ರಾಧೇಯನಾಗಲಿ ಯಶೋದಾನಂದನನಾಗಲಿ ಹೆತ್ತವರಲ್ಲದ ತಾಯಂದಿರಲ್ಲೂ ಅದೆಂತಹ ಮಧುರ ಪ್ರೇಮವನ್ನುಹೊಂದಿದ್ದರು.
ಆದರೆ ಬೆಳೆಯುತ್ತಾ ಹೋದಂತೆ ಪರಿಸರದ ಅವಲೋಕನ ಸಾಮರ್ಥ್ಯ ಮಗುವನ್ನು ಇಂತಹ ಪ್ರಶ್ನಾತೀತ ಬಾಂಧವ್ಯದಿಂದ ಹೊರತಾಗಿಸುತ್ತ ಹೋಗುತ್ತಿದೆಯಲ್ಲ.ನಡುವೆ ಪ್ರವೇಶಿಸುವ ಬಂಧುಗಳಾಗಲಿ,ಗೆಳೆಯರಾಗಲಿ,ಸಾಮಾಜಿಕವಾಗಿ ಮಗುವಿನ ವ್ಯಕ್ತಿತ್ವದ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿ ಪ್ರಭಾವ ಬೀರತೊಡಗಿದಾಗ,
ಇನ್ನೂ ತನ್ನ ಚಟುವಟಿಕೆಯ ಸ್ವರೂಪವನ್ನು ನಿಯಂತ್ರಿಸಿಕೊಳ್ಳದ, ಕಂಡುಕೊಳ್ಳಲಾರದ ಸ್ಥಿತಿಯಲ್ಲಿರುವ ವಯೋಮಾನದ ಮಗುವಿಗೆ
ಸದಾ ತನ್ನೊಡನಾಡಿಗಳ ಆಲಂಬನ ಹೆಚ್ಚಿದಷ್ಟೂ ತರ್ಕದ ತಕ್ಕಡಿಗೆ ಘಟನೆಗಳನ್ನು ಹಾಕಿ ತೂಗುವ ಮನೋಭಾವ ಸೃಷ್ಟಿಯಾಗುತ್ತದೆ.ನಿಧಾನವಾಗಿ
ಮುಗ್ಧತೆಯ ಪೊರೆ ಕಳಚಿ ಪ್ರಬುದ್ಧತೆಯ ಸೋಗಿನಲ್ಲಿ ತನ್ನತನವನ್ನು ರೂಪಿಸಿಕೊಳ್ಳುತ್ತಾ ಸಾಗುವಾಗ
ಹಸುಳೆತನದ ತೃಪ್ತಿಗೆ ಎರವಾಗುತ್ತಾ ಹೋಗುತ್ತದೆ ಅದರ ಬದುಕು.ಇದು ನನ್ನ ರೂಢಿಗತ ಅಭಿಪ್ರಾಯವಾ
ದರೂ ಶಿಕ್ಷಕಿಯಾಗಿ ಕಂಡ ಪ್ರತ್ಯಕ್ಷ ಸಂಗತಿಗಳೂ ಹೌದು.ಈಗಂತೂ
ಹಸ್ತದಲ್ಲಿ ರಾರಾಜಿಸುವ ಚರವಾಣಿಯ ಆಕರ್ಷಣೆ ಹಾಗೂ ಅಗತ್ಯತೆಗಳ ನಡುವೆ
ನಲುಗುತ್ತಿರುವ ಸ್ನಿಗ್ಧ ಮನೋಭಾವದ ಪತನವೂ ಹೌದು! ಅಂದು ‘ಅಮ್ಮನಿಗಿಂತ ಆಪ್ತ ಬಂಧುವಿಲ್ಲ ಹೊಡೆದರೂ ಮುದ್ದಿಸುತ್ತಾಳೆ’ ಎಂಬ ಅಸೀಮ ನಂಬಿಕೆ ಮಗುವಿಗೆ! ಎಷ್ಟೊಂದು ಆಪ್ಯಾಯಮಾನ ಭಾವ ! ಶಿಕ್ಷೆ ಕೂಡ ಪ್ರೀತಿಯ ಮತ್ತೊಂದು ರೀತಿಯಂತೆ. ಶಿಕ್ಷಿಸಿದರೂ‌ ನಂತರ ಸಾಂತ್ವನಕ್ಕಾಗಿ ತಾನು ಅತ್ತು ಮಗುವನ್ನು ಮತ್ತಷ್ಟು ರಮಿಸುವ ಸಂದರ್ಭಗಳು ಬಹಳ ಮಧುರ ಬಾಲ್ಯದಲ್ಲಿ.

ಸ್ವಭಾವತ: ಬಾಲ್ಯದಲ್ಲಿ ಬಹಳ ತುಂಟಿಯೂ ಕುತೂಹಲಿಯೂ ಆಗಿದ್ದ ನಾನು ಅಪ್ಪ ಅಮ್ಮನ ಮೊದಲನೆ ಕಂದ.
ಒಂದೂವರೆ ವರುಷ ಕಳೆಯುವಷ್ಟರಲ್ಲಿ ಮತ್ತೊಂದು ಹೆಣ್ಣುಮಗುವಾದ ನಂತರ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ‌ ಅಪ್ಪನಿಗೆ ಬಹಳ ನಿರಾಸೆಯಾದದ್ದಂತೂ ನಿಜ.ಅಮ್ಮನ ಬೆಚ್ಚನೆ ಮಡಿಲಿನ ಸಂಪರ್ಕ ತಪ್ಪಿದ್ದರಿಂದಲೋ ಏನೊ ನಾನು ಅಪ್ಪನ ಒಡನಾಟದಲ್ಲಿ ಬೆಳೆಯತೊಡಗಿದೆ.ಮಲೆನಾಡಿನ ಕುಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದ ಅಪ್ಪ‌ ತಮ್ಮ ಕರ್ತವ್ಯದಲ್ಲಿ ಬಹಳ ಶಿಸ್ತಿನ ಮನುಷ್ಯ ! ಅಮ್ಮನೋ ಹಸುಮಗುವಿನಂತಹ ಸಾಧು!
ತಮ್ಮ ಸ್ವಪ್ರಯತ್ನದಿಂದಲೇ ಮುಂದೆ ಬಂದು ತಮ್ಮ ಉದ್ಯೋಗ ಕಂಡುಕೊಂಡ ಅಪ್ಪ ಮಕ್ಕಳ ವಿಷಯದಲ್ಲಂತೂ ಬಹಳ ಮಹತ್ವಾಕಾಂಕ್ಷಿ. ನನ್ನನ್ನಂತೂ ಅವರ ಉತ್ತರಾಧಿಕಾರಿಯಂತೆ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆ.ಸೂರ್ಲೆಬ್ಬಿಯ ಆ ಮಳೆಕಾಡಿನೊಳಗೆ ಅಪ್ಪ ಅಮ್ಮ ನಾನು ನನ್ನ ತಂಗಿ ಬಿಟ್ಟರೆ
ನಮ್ಮ ರಕ್ತಸಂಬಂಧಿಗಳೆಲ್ಲ ದ.ಕ.ಜಿಲ್ಲೆಯ ಸುಳ್ಯ ಹಾಗೂ ಸಮೀಪದ ಊರುಗಳಲ್ಲಿ ನೆಲೆಸಿದ್ದರು.ಹಾಗಾಗಿ ನನಗೆ ಅಮ್ಮನ ಮಡಿಲು ತಪ್ಪಿದ
ಮೇಲೆ ನೇರವಾಗಿ ಅಪ್ಪನ ಮಡಿಲ ಆಸರೆ.
ದೈಹಿಕವಾಗಿ ಅಷ್ಟೇನೂ ಸಬಲಳಾಗಿರದ ನನಗೆ ಆ ಕಾಡೂರಿನ ನಡುವಿನ ಶೀತ ವಾತಾವರಣದಿಂದಾಗಿ ಆರೋಗ್ಯದಲ್ಲಿ ತುಂಬಾ ವ್ಯತ್ಯಾಸವಾಗುತ್ತಂತೆ.ಅಪ್ಪನ ಬೂಟಿನ ಸಪ್ಪಳ ಕೇಳಿದೊಡನೆ‌ ಅವರ ಬರುವಿಕೆಯ ಸೂಚನೆ ಸಿಕ್ಕಿ ಬಿಡುತ್ತಿತ್ತು.ಪಕ್ಕನೆ ನಮ್ಮ ಮನೆ ಮಾಲಿಕರಾಗಿದ್ದ ಗೌಡಂಡ ತಾಯಿ ಧಾವಿಸಿ ಬಂದು ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಅವರ ಮನೆಯೊಳಗೆ ಹೋಗಿ ಆಟವಾಡಿಸುತ್ತ ಇರಿಸಿಕೊಳ್ಳುತ್ತಿದ್ದರಂತೆ.ಅಪ್ಪನ ಬಾಯಾರಿಕೆ, ಆಯಾಸ ಪರಿಹಾರವಾದ ಮೇಲೆ ಅವರ ಮನಸ್ಸಿನ ಸಮಾಧಾನ ಸ್ಥಿತಿ ನೋಡಿಕೊಂಡು ಮತ್ತೆ ತಂದು ಬಿಡುತ್ತಿದ್ದರಂತೆ. ನನ್ನ ಅಳು, ಕಿರಿ ಕಿರಿ ಸಹಿಸಲು ಅಪ್ಪನಿಗೆ ಆಗುತ್ತಿರಲಿಲ್ಲವಂತೆ. ನಾವು ಸೋಮವಾರಪೇಟೆಯಲ್ಲಿ ನೆಲೆಸಿರುವಾಗ ಆ ತಾಯಿ ಬಂದ ಸಂದರ್ಭದಲ್ಲಿ ಇಂತಹ ಕತೆಗಳನ್ನುಹೇಳುತ್ತಿದ್ದರು.’ಇಕ್ಕಲೂ ಮೇಷ್ಟ್ರು ಅನ್ನನೇ ಪೊಯ್ವ ಮಕ್ಕಕ್’? ಎಂಬುದು ಅವರ ಕಳಕಳಿಯ ಪ್ರಶ್ನೆಯಾಗಿತ್ತು.

‘ಯಮನಿಗೂ ನನ್ನ ಹತ್ತಿರ ಬರಲು ಅನುಮತಿ ಬೇಕು’
ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಿದ್ದ ಅಪ್ಪನ ಚಟುವಟಿಕೆ ಪಾದರಸದಂತಿತ್ತು.
ಒಂದು ದಿನವೂ ಅವರು ಅನಾರೋಗ್ಯದ ಕಾರಣ ಹೇಳಿ ವಿರಮಿಸಿದ ನೆನಪು ನಮಗಿರಲಿಲ್ಲ.ನಡೆಯೂ ದಿಟ್ಟ ಧೀರ ನೇರ ಗಂಭೀರ !

ಅಪ್ಪನ ವಿಶ್ವಾಸಕ್ಕೆ ವ್ಯತಿರಿಕ್ತವಾಗಿ ತಾನು ಗಂಟಲು ಅರ್ಬುದಕ್ಕೆ ತುತ್ತಾದಾಗ ನಮಗೆ ಸಹಾಯ ಮಾಡುವ ಬಂಧುಗಳು ಯಾರೂ ಹತ್ತಿರವಿರಲಿಲ್ಲ. ಅಪ್ಪನಿಗೆ ಇಂತಹುದೊಂದು ಕಾಯಿಲೆ ಬಂದಿದೆ ಎಂಬುದನ್ನು
ನೀಡುವುದಕ್ಕೂ ಅವರು ತಮ್ಮಂದಿರು ಸಿದ್ಧರಿರಲಿಲ್ಲ. ಮಕ್ಕಳು ನಾವು ನಾಲ್ವರಿಗೂ ಪಬ್ಲಿಕ್ ಪರೀಕ್ಷೆಗೆ ಹಾಜರಾಗಬೇಕಾದ ಅನಿವಾರ್ಯತೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲು ಶಿಕ್ಷಕ ವೃತ್ತಿ ಕೈಗೊಂಡಾಗ ನಾನು ಅಪ್ಪನಿಂದ ದೂರ ಉಳಿಯಬೇಕಾಯಿತು.ಹತ್ತನೆ ತರಗತಿ ಪಾಸಾಗಿದ್ದ ತಮ್ಮನೊಡನೆ ಕೆಲಸಕ್ಕೆ ಹಾಜರಾಗಲು ಹೋಗಿದ್ದೇ ಒಂದು ಸಾಹಸ.ಪ್ರೊಬೆಷನರಿ ಅವಧಿಯನ್ನು ಅಲ್ಲಿ‌ ಕಳೆದದ್ದು ಮತ್ತೊಂದು ಮಹತ್ವದ ಸತ್ವಪರೀಕ್ಷೆ !ಅಪ್ಪನನ್ನು ನೋಡಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದ ನನ್ನ ಚಿಕ್ಕಮ್ಮ ಒಮ್ಮೆ ತಮಾಷೆಯಾಗಿ ಹೇಳಿದರು,’ಅಂದು ಹೆಣ್ಣೆಂಬ ಕಾರಣದಿಂದ ಬಾಳೆಗುಂಡಿಗೆ ಬಿಸಾಡಿ ಬರುತ್ತಿದ್ದರು ಭಾವ!ಈಗ ಆ ಹೆಣ್ಣು ಮಗಳೇ ಅವರ
ಇಂತಹ ಕಷ್ಟಕ್ಕೆ ಒದಗುವಂತಾಯಿತಲ್ಲ ,ಗಂಡು ಮಕ್ಕಳೇ ಆಗಿದ್ದರೂ ಇಷ್ಟೊಂದು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರೆ’?ಎಂದು.ಮೂಗಿನ ತುದಿಯಲ್ಲಿ ಕೋಪವಿರುತ್ತಿದ್ದ ಅಪ್ಪನಿಗೆ ಅಳು ಗದ್ದಲಗಳನ್ನು ಸಹಿಸಲಾಗುತ್ತಿರಲಿಲ್ಲ.ಶಾಲೆಯಿಂದ ಮರಳಿದಾಗ ಮನೆಯ ಪ್ರಶಾಂತತೆಯನ್ನು ಕದಡುತ್ತಿದ್ದ ನನ್ನ ಅಳು ಕಂಡಾಗ ಒಮ್ಮೆ ಸಿಟ್ಟಿನಿಂದ ಎತ್ತಿಕೊಂಡು ಹೋಗಿ
ಎದುರು ಬಾಳೆಗಿಡದಡಿಯಲ್ಲಿ ಕೂರಿಸಿ ಬಂದಿದ್ದರಂತೆ.ಅದನ್ನು ನೋಡಿದ, ‘ತಾಯಿ’ ನಂತರದ ದಿನಗಳಲ್ಲಿ ಆ ವೇಳೆಗೆ ಅವರ ಮನೆಯಲ್ಲೇ ಇರಿಸಿಕೊಳ್ಳುತ್ತಿದ್ದರಂತೆ ಅಪ್ಪ ಕೇಳುವವರೆಗೂ!

ಹಾಗೆಂದ ಮಾತ್ರಕ್ಕೆ ಅದು ಪ್ರೀತಿಯ ಲೋಪ ಎಂದು ನನಗೀಗಲೂ ಅನಿಸುತ್ತಿಲ್ಲ.
ಒಂದು ಸುಂದರ ಶಿಲ್ಪ ರಚನೆಗೆ ತೊಡಗುವ ಶಿಲ್ಪಿಯ ಧ್ಯಾನ ಪೂರ್ಣ ಕನಸು
ಎಂದುಕೊಳ್ಳುತ್ತೇನೆ.ಏಕೆಂದರೆ ‘ನನ್ನ ಹೆತ್ತವರು’ ಎಂದು ಅಭಿಮಾನದಿಂದ ಹೇಳಿಕೊಳ್ಳುವುದಕ್ಕೆ ಕಾರಣವಾದ ಸ್ವಾಭಿಮಾನಿಗಳು ಅವರು.ಇತರರ ದು:ಖಕ್ಕೆ ತಟ್ಟನೆ ಮಿಡಿಯುವ ಅವರು ತಮ್ಮ ಮಕ್ಕಳಿಗಿಂತಲೂ ತಮ್ಮಶಿಷ್ಯರ ಭವಿಷ್ಯ ರೂಪಿಸುವುದಕ್ಕಾಗಿ ಸ್ವಲ್ಪವೂ ಪ್ರತಿಫಲಾಪೇಕ್ಷೆಯಿ
ಲ್ಲದೆ ಶ್ರಮಿಸುತ್ತಿದ್ದರು.ಈಗಲೂ ಅವರು ವೃತ್ತಿಯನ್ನು ನಿರ್ವಹಿಸಿದ ಸ್ಥಳಗಳಲ್ಲಿರುವ ಶಿಷ್ಯರು ಬಹು ಉನ್ನತ ಪದವಿಗೇರಿ ನಿವೃತ್ತರಾಗಿದ್ದಾರೆ.
ಈಗಲೂ ನನ್ನ ತಂದೆಯವರು ಅವರ ದೃಷ್ಟಿಯಲ್ಲಿ ಅಂದಿದ್ದ ಸ್ಥಾನದಲ್ಲೇ ಸ್ಮರಿಸಲ್ಪಡುವುದಕ್ಕಿಂತ ಮಿಗಿಲಾದ ಹೆಮ್ಮೆ ಬೇರೇನಿದೆ?
ತಾನೇ ಬೆಳಗಿಸಿಕೊಂಡ ವ್ಯಕ್ತಿತ್ವದ ಪ್ರಭೆಯಲ್ಲಿ ಇತರರಿಗೂ ಬೆಳಕಾಗಿ ಧನ್ಯತೆಯನ್ನು ಪಡೆದ ಚೇತನ ನನ್ನ ಅಪ್ಪ.

ಒಮ್ಮೆ ಹೀಗಾಯ್ತು.ನಾನು ಆಗ ನಾಲ್ಕನೇ ತರಗತಿಯಲ್ಲಿದ್ದೆ.ಕೆಮ್ಮುವಾಗ ಕಫದಲ್ಲಿ ಸ್ವಲ್ಪ ರಕ್ತ ಬಂದದ್ದನ್ನು ಕಂಡು ನಮ್ಮ ಶಾಲೆಯಲ್ಲೇ ಗುರುಗಳಾಗಿದ್ದ ಅವರಿಗೆ ಯಾರೋ ವಿದ್ಯಾರ್ಥಿ‌ ಹೋಗಿ ಸುದ್ದಿ ತಲುಪಿಸಿದ.ತಕ್ಷಣವೇ ಧಾವಿಸಿ ಬಂದವರ ಮುಖದಲ್ಲಿನ ಕಾತರ ಕಂಡಾಗ, ‘ಅಯ್ಯೋ! ಈ ವಿಚಾರವನ್ನು ಅಪ್ಪನಿಗೇಕೆ ಹೇಳಿದರೋ ಎನಿಸಿ ಬಿಟ್ಟಿತ್ತು.ಎಷ್ಟೊಂದು ಪ್ರಶ್ನೆಗಳು,ಪ್ರೀತಿಯ ಕಾಳಜಿ,
ಚಿಂತಾಕ್ರಾಂತವಾಗಿದ್ದ ಮುಖ,ವೈದ್ಯರನ್ನು ಭೇಟಿಯಾಗುವವರೆಗೂ ಅವರು ಚಡಪಡಿಸುತ್ತಿದ್ದ ರೀತಿ ಅಬ್ಬಾ! ಆ ಸಿಟ್ಟಿನ ವ್ಯಕ್ತಿತ್ವವೆಲ್ಲಿ ಅಡಗಿಬಿಟ್ಟಿತೋ ಎಂಬ ದಿಗ್ಭ್ರಮೆ ನನಗೆ.’ಇಂತಹ ವಾತ್ಸಲ್ಯವನ್ನು ಅನುಭವಿಸುವುದಾದರೆ ನನಗೆ ಮತ್ತೆ ಮತ್ತೆ ಇಂತಹ ತೊಡಕುಗಳು ಬರುತ್ತಿರಲಿ’ ಎಂದು ಆಶಿಸುವಷ್ಟು.

ಶ್ರೀಮತಿ ಶಿವದೇವಿ ಅವನೀಶಚಂದ್ರ