ಕರಿಮೆಣಸು ಕುಯ್ಯಲೆಂದು ತಮಿಳುನಾಡಿನಿಂದ ಜಿಲ್ಲೆಗೆ ಬಂದಿದ್ದ ಕಾರ್ಮಿಕ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಂಟಿಕೊಪ್ಪ ಸಮೀಪದ ಮತ್ತಿಕಾಡಿನ ತೋಟವೊಂದರಲ್ಲಿ
ಮೂಲತಃ ತಮಿಳುನಾಡು ತಿರುನೆಲ್ವಿ ಜಿಲ್ಲೆಯ ಗುಣಶೇಖರ್ ಎಂಬುವವರ ಪುತ್ರಿ ಶಾಲಿನಿ (21) ಎಂಬಾಕೆಯನ್ನು ಸಂಜೀವ್ ಎಂಬಾತನೊಂದಿಗೆ ಎರಡು ವರ್ಷಗಳ ಹಿಂದೆ ಮದುವೆ ಮಾಡಿಕೊಂಡು ಎರಡು ತಿಂಗಳ ಹಿಂದೆ ಈ ದಂಪತಿ ಕರಿಮೆಣಸು ಕುಯ್ಯುವ ಕೆಲಸಕ್ಕೆಂದು ಮತ್ತಿಕಾಡುವಿನ ಚೌಡಿಕಾಡು (ಗೋವಿಂದಪ್ಪ) ತೋಟದಲ್ಲಿ ಬಂದು ಲೈನ್ ಮನೆಯಲ್ಲಿ ನೆಲೆಸಿದ್ದರು.

ತಾ.4 ರಂದು ತಮಿಳುನಾಡಿನಲ್ಲಿದ್ದ ತನ್ನ ಮಾವನಿಗೆ ಕರೆ ಮಾಡಿರುವ ಸಂಜೀವ್, ಸೋಮವಾರ ಬೆಳಗ್ಗೆಯಿಂದ ಶಾಲಿನಿ ಕಾಣೆಯಾಗಿದ್ದಾಳೆ ಎಂದು ವಿಷಯ ತಿಳಿಸಿದ್ದನಲ್ಲದೆ ಸುಂಟಿಕೊಪ್ಪ ಪೊಲೀಸ್ ಠಾಣೆಗೂ ಪುಕಾರು ನೀಡಿದ್ದ.

ವಿಷಯವರಿತು ತಮಿಳುನಾಡಿನಿಂದ ಬಂದ ಶಾಲಿನಿಯ ತಂದೆ ಗುಣಶೇಖರ್ ಅವರು ಮಗಳು ಕಾಣೆಯಾಗಿರುವ ವಿಚಾರದಲ್ಲಿ ಅಳಿಯನ ಮೇಲೆ ಸಂಶಯ ವ್ಯಕ್ತಪಡಿಸಿ ತಾ. 6 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶೋಧಕಾರ್ಯ ಕೈಗೊಂಡಾಗ ಪಕ್ಕದ ದೇವಿ ತೋಟದ ಮರದಲ್ಲಿ ಶಾಲಿನಿಯ ಮೃತದೇಹ ವೇಲ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹವು ಕೊಳೆತು ವಿಕಾರವಾಗಿದ್ದು ತಾ. 2 ರಂದು ರಾತ್ರಿ ಶಾಲಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಐ. ಪಿ. ಸಿ. ಸೆಕ್ಷನ್ 174ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸುಂಟಿಕೊಪ್ಪ ಪೊಲೀಸರು ಮರಣೊತ್ತರ ಪರೀಕ್ಷೆಗೊಳಪಡಿಸಿ ಶಾಲಿನಿಯ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.