ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಇತ್ತೀಚೆಗೆ, “ಅಂಬೇಡ್ಕರ್ ಅವರ ಹೆಸರನ್ನು ಆಗಾಗ್ಗೆ ಹೇಳುವುದು ಒಂದು ಫ್ಯಾಷನ್ ಆಗಿ ಹೋಗಿದೆ. ಇದರ ಬದಲು ಅವರು ದೇವರ ಹೆಸರನ್ನು ಸ್ಮರಣೆ ಮಾಡಿದ್ದರೆ, ಏಳು ಜನ್ಮಕ್ಕೂ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು. ಅವರ ಹೆಸರನ್ನು ಪದೇ ಪದೇ ಹೇಳುವುದು ನಮಗೆ ಆನಂದದ ವಿಚಾರವೇ ಆದರೆ ಅವರನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿತು ಎಂದು ಹೇಳ ಇಚ್ಛಿಸುತ್ತೇನೆ.

ಜವಹರ್ ಲಾಲ್ ನೆಹೆರು ನೇತೃತ್ವದ ಸರ್ಕಾರದೊಂದಿಗೆ ಬಿ.ಆರ್ ಅಂಬೇಡ್ಕರ್ ಅವರು ಭಿನ್ನಾಭಿಪ್ರಾಯದ ಹಿನ್ನಲೆ ಮೊದಲ ಸಚಿವ ಸಂಪುಟಕ್ಕೆ ರಾಜಿನಾಮೆ ನೀಡಲಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಸರಕಾರ ನಿರ್ಲಕ್ಷಿಸಿತು ಎಂದು ಬೇಸರಗೊಂಡರು. ಸರ್ಕಾರದ ನೀತಿ ವಿಧಾನ ಮತ್ತು 370ನೇ ವಿಧೇಯಕ ಕುರಿತು ಅದರ ನಿಲುವಿನ ಕುರಿತು ಅತೃಪ್ತಿ ಹೊಂದಿದ್ದರು. ಅವರಿಗೆ ಈ ಎಲ್ಲವನ್ನು ಮಾಡುವ ಬಗ್ಗೆ ಭರವಸೆ ನೀಡಲಾಗಿತ್ತು. ಆಡಳಿತಕ್ಕೆ ಬಂದ ನಂತರ ಅವೆಲ್ಲಾ ಹುಸಿ ಆಯಿತು. ಹಾಗಾಗಿ ಅಂಬೇಡ್ಕರ್ ಅವರು ರಾಜಿನಾಮೆ ನೀಡಿದ್ದರು.” ಎಂಬ ಹೇಳಿಕೆಯನ್ನು ಭಾಷಣದ ವೇಳೆ ಹೇಳಿದ್ದರು.

ಕೆಲ ದಿನಗಳ ಹಿಂದೆ ಈ ಬಗ್ಗೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್ ಗೃಹ ಸಚಿವರನ್ನು ಖಂಡಿಸಿತ್ತು. ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕೂಡ ಒತ್ತಾಯಿಸಿದ್ದಾರೆ.

ಇದರ ಬೆನ್ನಲ್ಲೇ ಅಮಿತ್ ಶಾ ಅವರು ಪತ್ರಿಕಾ ಗೋಷ್ಠಿ ನಡೆಸಿ,’ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಮೇಲೆ ಗೌರವ ಇಲ್ಲ. ಕಾಂಗ್ರೆಸ್ ಸಂವಿಧಾನ ವಿರೋಧಿಯಾಗಿದೆ. ನಾವು ಅಂಬೇಡ್ಕರ್ ಅವರನ್ನು ಅಪಮಾನಿಸುವ ಕೆಲಸ ಎಂದಿಗೂ ಮಾಡುವುದಿಲ್ಲ. ಜೀವನ ಪರ್ಯಂತ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಸಿಗದಂತೆ ತಡೆದಿತ್ತು. ನನ್ನ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಿ, ತಿರುಚಿದ್ದಾರೆ. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ನಾನು ಎಂದಿಗೂ ಅಂಬೇಡ್ಕರ್ ಅವರ ವಿರುದ್ಧ ಮಾತನಾಡಲಾರೆ” ಎಂದು ವಿರೋಧ ಪಕ್ಷವನ್ನು ಟೀಕಿಸುವ ಜೊತೆಗೆ ಸ್ಪಷ್ಟನೆಯನ್ನು ಕೊಟ್ಟಿದ್ದರು.

ನಿಜಕ್ಕೂ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಸತ್ಯಾಂಶ ಎಲ್ಲಾ ನಾಟಕಗಳನ್ನು ಬೆತ್ತಲಾಗಿಸುತ್ತದೆ. ಕಾಂಗ್ರೆಸ್ ಇಂದು ಮಾತೆತ್ತಿದರೆ ಈಗ, ಸಂವಿಧಾನ, ಡಾ.ಬಿ.ಆರ್ ಅಂಬೇಡ್ಕರ್ ಎಂದು ಭಜನೆ ಮಾಡುತ್ತಿದೆ. ಅಸಲಿಗೆ ಕಾಂಗ್ರೆಸ್ ಅಷ್ಟು ಗೌರವವನ್ನು ಇತಿಹಾಸದಲ್ಲಿ ಕೊಟ್ಟಿದೆಯೇ ಎಂದು ಕೂಲಂಕುಶವಾಗಿ ಅಧ್ಯಯನ ಮಾಡುವುದಾದರೆ ಒಬ್ಬ ಪ್ರಜ್ಞಾವಂತ ಪ್ರಜೆಯ ಜ್ಞಾನಕ್ಕೆ ಅವಶ್ಯಕ ಅಂಶ!

ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಹಲವಷ್ಟು ಸವಾಲು ಹಾಗು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಕಾಂಗ್ರೆಸ್ ಹಾಗು ಪ್ರಧಾನಿಯಾಗಿದ್ದ ಜವಹರ್ ಲಾಲ್ ನೆಹೆರು ಅವರ ತೀವ್ರ ನಿರ್ಲಕ್ಷ್ಯಕ್ಕೆ ಪದೇ ಪದೇ ಒಳಗಾಗಬೇಕಾಗಿ ಬಂತು ಅವರಿಗೆ…!

°ಕ್ಯಾಬಿನೆಟ್ಟಿಗೆ ಗುಡ್ ಬಾಯ್!

1951ರಲ್ಲಿ ಭಾರತದ ಮೊದಲ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಬಾಬಾ ಸಾಹೇಬರು ರಾಜಿನಾಮೆ ನೀಡಿದರು. ಪರಿಶಿಷ್ಠ ಜಾತಿ ಹಾಗು ಪರಿಶಿಷ್ಠ ವರ್ಗದ ಜನರಿಗೆ ಕಲ್ಯಾಣಕ್ಕಾಗಿ ಸರಕಾರ ದುಡಿಯುತ್ತಿಲ್ಲ ಎಂದು ಅತೃಪ್ತಿಯಿಂದ ಹೊರ ನಡೆದಿದ್ದರು. ಆದರೆ ಈ ಬಗ್ಗೆ ಪ್ರಧಾನಿ ನೆಹರು ‘ಅವರ ರಾಜಿನಾಮೆ ನಮ್ಮ ಮಂತ್ರಿ ಮಂಡಲಕ್ಕೆ ಯಾವುದೇ ನಷ್ಟವನ್ನು ಉಂಟು ಮಾಡುವುದಿಲ್ಲ’ ಎಂಬ ಅಭಿಮತ ನೀಡಿದ್ದರು.

°ಚುನಾವಣೆಯಲ್ಲಿ ಸೋಲು!

1952 ಹಾಗು 1954ರ ಚುನಾವಣೆಗಳಲ್ಲಿ ಡಾ.ಅಂಬೇಡ್ಕರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಂದ ಸೋಲನ್ನು ಅನುಭವಿಸಬೇಕಾಯಿತು. 1952ರಲ್ಲಿ ನಾರಾಯಣ್ ಸಡೋಬ ಕಜ್ರೋಲ್ಕರ್ ಹಾಗು 1954ರಲ್ಲಿ ಬೈ ಎಲೆಕ್ಷನ್ ಅಲ್ಲಿ ಬಾವ್ರಾವ್ ಬೋರ್ಕರ್ ಎಂಬ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಕಾಂಗ್ರೆಸ್ ಚಿಹ್ನೆಯ ಅಡಿಯಲ್ಲಿ ನೆಹೆರು ಅವರ ಅಣತಿಯಂತೆ ಚುನಾವಣೆಯಲ್ಲಿ ಬಾಬಾ ಸಾಹೇಬರನ್ನು ಪಣ ತೊಟ್ಟು ಸೋಲಿಸಿದರು.

°ಭಾರತ ರತ್ನ ನೀಡದ ಕಾಂಗ್ರೆಸ್!

ಮಾಜಿ ಪ್ರಧಾನಿ ಜವಹರ್ ಲಾಲ್ ನೆಹೆರು ಅವರಿಗೆ 1955ರಲ್ಲಿ  ಹಾಗು ಇಂದಿರಾ ಗಾಂಧಿ ಅವರಿಗರ ಭಾರತ ರತ್ನವನ್ನು 1977ರಲ್ಲಿ ಘೋಷಿಸಿದ ಕಾಂಗ್ರೆಸ್ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡುವ ಚಿಂತನೆಯನ್ನು ಕೂಡ ಮಾಡಲಿಲ್ಲ.

°ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿತು ತುರ್ತು ಪರಿಸ್ಥಿತಿ!

ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುವ ರೀತಿ ಜೂನ್, 25 1975ರಿಂದ ಮಾಚ್೯, 21 1977ರವರೆಗೆ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಮಸಿ ಬಳಿಯುವಂತಹ ಕೆಲಸ ಮಾಡಿದ್ದರು. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯನ್ನು ಉಂಟು ಮಾಡಿದ್ದರು.

ಅಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳು ಹತವಾಗಿದ್ದವು. ಮಾದ್ಯಮದ ಸ್ವಾತಂತ್ರ್ಯಕ್ಕೆ ತೀವ್ರ ಕತ್ತರಿ ಹಾಕಲಾಗುತ್ತಿತ್ತು. ರಾಜಕೀಯ ವಿರೋಧಿ ನಾಯಕರು, ಸಾಮಾಜಿಕ ಕಾರ್ಯಕರ್ತರು, ಚಿಂತಕರನ್ನು ಸೆರೆಮನೆಯಲ್ಲಿ ಬಂಧಿಸಿಡಲಾಗಿತ್ತು. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಮನ್ನಣೆಯೇ ಇಲ್ಲದಾಗಿತ್ತು. ಅದೆಷ್ಟೋ ಅಮಾಯಕ ಬಡ ಜನರನ್ನು ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರ ನಿರ್ದೇಶನದಂತೆ ಬಲವಂತವಾಗಿ ಕರೆದೊಯ್ದು ಜನನ ನಿಯಂತ್ರಣ ಚಿಕಿತ್ಸೆ ಅಕ್ರಮವಾಗಿ ಮಾಡಿಸಲಾಗಿತ್ತು.

°ಸ್ಮಾರಕ ಬೇಡವೆಂದ ಪ್ರಧಾನಿ ನೆಹೆರು!

ಡಾ.ಅಂಬೇಡ್ಕರ್ ಅವರು 6 ಡಿಸೆಂಬರ್ 1956ರಂದು ಕೊನೆ ಉಸಿರೆಳೆದ ನಂತರದ ದಿನಗಳಲ್ಲಿ ಅವರ ಸ್ಮಾರಕವನ್ನು ಕೇಂದ್ರ ಸರಕಾರ ನಿರ್ಮಿಸಬೇಕು ಎಂಬ ಬೇಡಿಕೆ ಜನರದ್ದಾಗಿತ್ತು. ಆದರೆ ಪ್ರಧಾನಿ ನೆಹೆರು ಅವರ ಸರಕಾರ ಈ ಬಗ್ಗೆ ಜಾಣ ಕಿವುಡುತನದ ಧೋರಣೆ ಅನುಸರಿಸಿತ್ತು. ಜವಹರ್ ಲಾಲ್ ನೆಹೆರು ಅವರು ‘ಸ್ಮಾರಕಗಳು ಸರಕಾರ ನಿರ್ಮಿಸುವುದು ಸರಿಯಲ್ಲ. ಅದು ಖಾಸಗಿ ಹಣದಲ್ಲಿ ನಿರ್ಮಿಸಬೇಕು ಎಂದು ಹೇಳಿದ್ದರು. ಈ ಬಗ್ಗೆ ನೆಹೆರು ಅವರು 18, ಜೂನ್ 1959ರಂದು ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.


Advertisement

ಸ್ಮಾರಕ ಖಾಸಗಿ ಹಣದಲ್ಲಿ ನಿರ್ಮಿಸಬೇಕು ಎಂಬ ನೆಹೆರು ಅವರ ಚಿಂತನೆ ಅವರ ಹಾಗು ಅವರ ಕುಟುಂಬ ಸದಸ್ಯರ ವಿಚಾರದಲ್ಲಿ ಪಾಲಿಸಲ್ಲಿಲ್ಲ.‌
ಕಾಂಗ್ರಸ್ ಅವರ ನಾಯಕರು ಅನುನೀಗಿದ ನಂತರ ಅವರ ಸ್ಮಾರಕಗಳನ್ನು ಸರಕಾರದ ಹಣ ಸುರಿದು ಮಾಡಿಸಿತು.


Advertisement

ನೆಹೆರು ಸ್ಮಾರಕವನ್ನು  55 Acres, ಇಂದಿರಾ ಗಾಂಧಿ ಅವರ ಸ್ಮಾರಕವನ್ನು  45 Acres ಹಾಗು  ರಾಜೀವ್ ಗಾಂಧಿ ಅವರ ಸ್ಮಾರಕವನ್ನು 15 Acres ವಿಸ್ತೀರ್ಣದಲ್ಲಿ ಕಂಗೊಳಿಸುವಂತೆ ನಿರ್ಮಿಸಿತು.
ಅವುಗಳ ಒಟ್ಟು ಮೌಲ್ಯ ಇಂದಿಗೆ ಲೆಕ್ಕ ಹಾಕಿದರೆ  115 ಎಕರೆ ಜಾಗಕ್ಕೆ 60,094 ಕೋಟಿ ಎಂದು ಅಂದಾಜಿಸಲಾಗುತ್ತಿದೆ.

ಬಾಬಾ ಸಾಹೇಬರ ಸ್ಮಾರಕ ನಿರ್ಮಿಸಲು ಮುಂದಾದ ಅಟಲ್ ಜೀ:

1991ರಲ್ಲಿ ಬಾಬಾ ಸಾಹೇಬರ ಜನ್ಮ ಶತಮಾನೋತ್ಸವದ ಸಂದರ್ಭ ಅಂಬೇಡ್ಕರ್ ವಾದಿಗಳು ಸ್ಮಾರಕ ನಿರ್ಮಿಸಲು ಅವರದೇ ಮನೆಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಒಂದು ದಶಕದ ಬಳಿಕ 2003ರಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ (NDA) ಸರಕಾರವು ಸ್ಮಾರಕ ನಿರ್ಮಾಣದ ಅವರ ಮನೆ ಇದ್ದ ಜಾಗವನ್ನು ಖರೀದಿಸಿತು.

ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಬಾಬಾ ಸಾಹೇಬರ ಮನೆ ಇದ್ದ ಜಾಗದಲ್ಲಿ ಪರಿ ನಿರ್ಮಾಣ ಸ್ಥಳದ ಅಡಿಪಾಯ ಹಾಕಿದ್ದರು. ಅಲ್ಲೇ ಸ್ಮಾರಕ ಹಾಗು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಯೋಜಿಸಿದರು.

2004ರ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ವಾಜಪೇಯಿ ಅವರ ಈ ಯೋಜನೆ ಸ್ಥಗಿತಗೊಂಡಿತ್ತು. ಎನ್.ಡಿ.ಎ ಸರಕಾರವು 100 ಕೋಟಿ ರೂಪಾಯಿಗಳನ್ನು ಈ ಉದ್ದೇಶಕ್ಕಾಗಿ ಸ್ಥಾಪಿಸಿತ್ತು. ಇದನ್ನು ನಂತರ ಹೊಸ ಕಾಂಗ್ರೆಸ್ ಸರಕಾರವು ಇತರೆ ಯೋಜನೆಗಳಿಗೆ ಬಳಸಿತ್ತು. ಅರ್ಧದಷ್ಟು ಪೂರ್ಣವಾಗಿದ್ದ ಸ್ಮಾರಕ ನಿರ್ವಹಣೆಯನ್ನು ಡಾ. ಅಂಬೇಡ್ಕರ್ ಪ್ರತಿಷ್ಠಾನದಿಂದ ಮಾಡಲಾಗುತ್ತಿತ್ತು.

2007ರಲ್ಲಿ ಅಂಬೇಡ್ಕರ್ ವಾದಿಗಳು ಈ ಸ್ಥಳದ ಉತ್ತಮ ನಿರ್ವಹಣೆಗೆ ಒತ್ತಾಯಿಸಿ, ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಿದರೂ ಕೂಡ ಕಾಂಗ್ರೆಸ್ ಮನ್ ಮೋಹನ್ ಸಿಂಗ್ ಸರಕಾರ ಬಾಬಾಸಾಹೇಬರ ಮನೆಗೆ ಒಂದಿಷ್ಟು ಸುಣ್ಣ ಬಣ್ಣ ಬಳಿದು, ಅದರ ಗ್ಯಾಲರಿ ಸ್ವಚ್ಛಗೊಳಿಸುವ ಕಣ್ಣೊರೆಸುವ ತಂತ್ರ ಮಾಡಿತು ವಿನಹ ಸ್ಮಾರಕದ ಅಭಿವೃದ್ಧಿಗೆ ಯಾವುದೇ ಹಿತಾಸಕ್ತಿ ತೋರಲಿಲ್ಲ!

2011ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಹೊಸ ಸ್ಮಾರಕಕ್ಕೆ ಕೆಲಸ ಮಾಡಲು ಉನ್ನತ ಮಟ್ಟದ ಸಮಿತಿ ಒಂದನ್ನು ರಚಿಸಿ ನಿರ್ದೇಶನ ನೀಡಿದರು. ಸಮಿತಿಯು 2012ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಆದರೂ ಸ್ಮಾರಕದ ಕೆಲಸ ಆರಂಭವಾಗುವ ಯಾವುದೇ ಲಕ್ಷಣಗಳ ಕಾಣಲಿಲ್ಲ.

2014ರಲ್ಲಿ ಪ್ರಧಾನಿಯಾದ ಮಾನ್ಯ ನರೇಂದ್ರ ಮೋದಿ ಅವರ ಬಿಜೆಪಿ ಸರಕಾರ ಜುಲೈ 2015ರಲ್ಲಿ 99.64 ಕೋಟಿ ರೂಪಾಯಿಗಳನ್ನು ಹೊಸ ಸ್ಮಾರಕ ನಿರ್ಮಾಣಕ್ಕೆ ಬಿಡುಗಡೆ ಮಾಡಿತು. 21ಮಾಚ್೯, 2016ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನದಲ್ಲಿ ಯೋಜನೆಗೆ ಅಡಿಪಾಯದ ಕಲ್ಲುಗಳನ್ನು ಇರಿಸಿದರು. ಯೋಜನೆ ನಂತರವಷ್ಟೇ ಕ್ಷರ ವೇಗ ಪಡೆದುಕೊಂಡು ಏಪ್ರಿಲ್ 13, 2018ರಂದು ಪೂರ್ಣಗೊಳಿಸಿತು. ನರೇಂದ್ರ ಮೋದಿ ಅವರ ಸರಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಕೈಗೆತ್ತಿಕೊಂಡ ಯೋಜನೆಯನ್ನು ಅಂತೂ ಇಂತೂ ಶ್ರಮ ಹಾಗು ಕಾಳಜಿ ವಹಿಸಿ ಪೂರ್ಣಗೊಳಿಸಿತು.

ಹೀಗೆ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಸಮ್ಮಾನ, ಗೌರವ ನೀಡದ ಕಾಂಗ್ರೆಸ್ ಈಗ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರ ಪೊಟೋ ಹಿಡಿದು ಸಂಸತ್ತಿನ ಎದುರು ಪ್ರತಿಭಟಿಸಿತು. ಸಂವಿಧಾನಕ್ಕೆ ಬೆಲೆಕೊಡದೆ ದೇಶವನ್ನು ತುರ್ತು ಪರಿಸ್ಥಿತಿಗೆ ದೂಡಿದ ಕಾಂಗ್ರೆಸ್ ಈ ಸಂವಿಧಾನದ ರಕ್ಷಣೆಗೆಂದೇ ಹುಟ್ಟಿರುವ ಪಕ್ಷದಂತೆ ವರ್ತಿಸುತ್ತಿದೆ.

ಏನೇ ಇರಲಿ, ಜನರು ಈ ಡಿಜಿಟಲ್ ಮಾಹಿತಿ ಯುಗದಲ್ಲಿ ದಡ್ಡರೇನಲ್ಲ. ಡಿಜಿಟಲ್ ಶಿಕ್ಷಣ ಇರುವುದರಿಂದ ಪ್ರತಿ ಪ್ರಜೆಗೂ ಇತಿಹಾಸದ ಬಗ್ಗೆ ಸರಯಾದ ಮಾಹಿತಿ ಇದ್ದೇ ಇದೆ. ಈ ದೇಶದ ಮತದಾರನನ್ನು ಸುಳ್ಳು ಹೇಳಿ ನಾಟಕವಾಡಿ ದಾರಿ ತಪ್ಪಿಸುವುದು ಒಂದು ವಿಫಲ ಯತ್ನವಾಗುತ್ತದೆ. ಆದ್ದರಿಂದ ವಿರೋಧ ಪಕ್ಷವಾದ ಕಾಂಗ್ರೆಸ್ ಇನ್ನಾದರೂ ಸೂಕ್ತ ವಿಚಾರಗಳನ್ನು ಕೈಗೆತ್ತಿಕೊಂಡು ರಚನಾತ್ಮಕ ಹಾಗು ಜವಾಬ್ದಾರಿಯುತವಾಗಿ ಆಡಳಿತಾರೂಢ ಪಕ್ಷವನ್ನು ಟೀಕಿಸಬೇಕು. ಪ್ರೌಢತೆಯನ್ನು ತನ್ನ ನಡೆಗಳಲ್ಲಿ ತೋರಬೇಕಿದೆ.