ಪ್ರಸ್ತುತ ದೇಶಾದ್ಯಂತ ಈಗ ಸುಪ್ರಿಂ ಕೋರ್ಟಿನಲ್ಲಿ ಸುಬ್ರಮಣಿಯನ್ ಸ್ವಾಮಿ, ವಿಷ್ಣು ಶಂಕರ್ ಜೈನ್ ಹಾಗು ಅಶ್ವಿನಿ ಉಪಾಧ್ಯಾಯ ಅವರುಗಳು ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕುತೂಹಲವನ್ನು ಕೆರಳಿಸಿದೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ಇರುವ ‘ಸೋಷಿಯಲಿಸ್ಟ್’ ಹಾಗು ‘ಸೆಕ್ಯುಲರ್’ ಎಂಬ ಎರಡು ಪದಗಳನ್ನು ತೆಗೆದು ಹಾಕಬೇಕೆಂಬುದು ಈ ಅರ್ಜಿದಾರರ ವಾದ. ಇದು ನಿಜಕ್ಕೂ ತರವೇ-ತಪ್ಪೇ ಎಂಬ ವಿಚಾರ ಜನಸಾಮಾನ್ಯರಲ್ಲಿ ಕಾಡುತ್ತಿದೆ.

ಅರ್ಜಿದಾರರ ಕೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದ ಪೀಠ, ಅರ್ಜಿ ಕುರಿತ ಆದೇಶವನ್ನು ನವೆಂಬರ್ ಮಾಸದ ದ್ವಿತೀಯಾರ್ಧದಲ್ಲಿ ನೀಡುವುದಾಗಿ ಹೇಳಿದೆ. ಇದೇ ನ.10 ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ನಿವೃತ್ತಿಯಾಗಲಿದ್ದು, ನ.11 ರಂದು ನ್ಯಾ. ಸಂಜೀವ್ ಖನ್ನಾ ಅವರೇ ಮುಖ್ಯ ನ್ಯಾಯ ಮೂರ್ತಿಗಳಾಗಲಿದ್ದಾರೆ. ಆ ಬಳಿಕ ಈಗಿನ ಅರ್ಜಿ ಕುರಿತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಸಂವಿಧಾನದ ಆ ಎರಡು ಪದ ಕುರಿತು ಅರ್ಜಿದಾರರ ವಾದವೇನು?

ಅರ್ಜಿದಾರರ ವಾದದ ಪ್ರಕಾರ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ, ವಿರೋಧ ಪಕ್ಷದ ನಾಯಕರುಗಳನ್ನು ಜೈಲಿಗೆ ಅಟ್ಟಲಾಗಿತ್ತು. ಅವರ ಧ್ವನಿಗಳನ್ನು ಬಲವಂತವಾಗಿ ಧಮನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ 1976ರಲ್ಲಿ 42ನೇ ತಿದ್ದುಪಡಿಯನ್ನು ಆಗಿನ ದೇಶದ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ಅವರು ಮಾಡಲು ಹೊರಟರು. ಸಂಸತ್ತಿನಲ್ಲಿ ಸರಿಯಾದ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಸಂವಿಧಾನದ ಪೀಠಿಕೆಗೆ ‘ಜಾತ್ಯಾತೀತ’ ಹಾಗು ‘ಸಮಾಜವಾದ’ ಎಂಬ ಪದಗಳನ್ನು ಸೇರಿಸಲಾಯಿತು. ಫಕ್ರುದ್ದೀನ್ ಅಲಿ ಅಹಮ್ಮದ್ ಅವರು ಆಗಿನ ರಾಷ್ಟ್ರಪತಿ ಆಗಿದ್ದರು. ಈ ನಿರ್ಣಯ ಅನಾವಶ್ಯಕ ಹಾಗು ಸರ್ವಾಧಿಕಾರಿ ಧೋರಣೆಯಿಂದ ಕೂಡಿತ್ತು. ಪ್ರಜಾಸತ್ತಾತ್ಮಕ ದೇಶದಲ್ಲಿ ಇದನ್ನು ತಮಗಿಷ್ಟ ಬಂದಂತೆ ಕಾಂಗ್ರೆಸ್ ಜಾರಿಗೆ ತಂದಿತು ಎಂಬುದು ಬಲವಾದ ವಾದವಾಗಿದೆ. ಇದನ್ನಲ್ಲಾ ಸೂಕ್ಷ್ಮವಾಗಿಯೇ ಆಲಿಸುತ್ತಿರುವ ಸುಪ್ರಿಂ ಈ ವಾದವನ್ನು ಕೂಡ ಅಲ್ಲಗೆಳೆದಿಲ್ಲ.

ಅರ್ಜಿದಾರರ ಸ್ಪಷ್ಟನೆ ಏನು?

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಕೂಡ ದೇಶದಲ್ಲಿ ಜಾತ್ಯಾತೀತತೆ ಹಾಗು ಸಮಾಜವಾದ ಎರಡೂ ಗುಣಗಳು ಅಡವಾಗಿರುವುದನ್ನು ಒಪ್ಪುತ್ತಿದ್ದಾರೆ. ಅದು ದೇಶದ ತತ್ವ ಸಿದ್ಧಾಂತದಲ್ಲಿ ಒಂದು ಎಂಬುದನ್ನು ಅವರು ಇಲ್ಲ ಎನ್ನುತ್ತಿಲ್ಲ. ಅವರು ವಿರೋಧಿಸುತ್ತಿರುವುದು ಕೇವಲ 42ನೇ ತಿದ್ದುಪಡಿಯನ್ನು ಜಾರಿಗೆ ತಂದ ಬಗೆಯ ಬಗ್ಗೆ. ಈ ತಿದ್ದುಪಡಿಯನ್ನು ಕುರಿತಾಗಿ ಸಂಸತ್ತಿನಲ್ಲಿ ಸರಿಯಾದ ಚರ್ಚೆ ನಡೆಸದೆ, ನಿರಂಕುಶ ಪ್ರಭುತ್ವದ ರೀತಿಯಲ್ಲಿ ಜಾರಿಗೆ ತರಲಾಗಿದೆ ಎಂಬುದು ಅರ್ಜಿದಾರರ ಬಲವಾದ ವಾದ.

ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಪ್ರಕಾರ…

ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾದ ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ‘ಜಾತ್ಯಾತೀತ’ ಹಾಗು ‘ಸಮಾಜವಾದ’ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ಕೈಬಿಡಲು ಸೂಕ್ತ ಕಾರಣಗಳನ್ನು ಅರಿತಿದ್ದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್

ಇಡಿಯ ಸಂವಿಧಾನದಲ್ಲಿ ಜಾತ್ಯಾತೀತತೆಯ ಅಂಶಗಳನ್ನು ತುಂಬಲಾಗಿದೆ. ಜಾತಿ, ಧರ್ಮದ ಬೇಧವಾಗದಂತೆ ಎಲ್ಲರೂ ಸಮಾನವೆಂಬಂತೆ ಕಾಣುವ ಮತ್ತು ತಾರತಮ್ಯ ರಹಿತವಾಗಿ ಎಲ್ಲರನ್ನು ಸಮಾನವಾಗಿ ನೋಡುವ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿತ್ತು. ಕಾಯ್ದೆಗಳಲ್ಲಿ ಎಲ್ಲರನ್ನೂ ಸರಿ ಸಮಾನ ಸ್ಥಾನ ಮಾನ ಸಿಗುವಂತಹ ವಿಚಾರಗಳನ್ನೇ ಸೇರಿಸಲಾಗಿತ್ತು. ಹಾಗಾಗಿ ಅವರಿಗೆ ಮತ್ತೆ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯಾತೀತ’ ಎಂಬ ಪದವನ್ನು ಸೇರಿಸುವುದರಲ್ಲಿ ಪ್ರಾಮುಖ್ಯತೆ ಕಂಡು ಬಂದಿರಲಿಲ್ಲ.

‘ಸಮಾಜವಾದಿ’ ಎಂಬ ಪದವನ್ನು ಪೀಠಿಕೆಯಲ್ಲಿ ಸೇರಿಸಿದರೆ, ಅದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರು ಇಂತಹ ಸಮಾಜದಲ್ಲೇ ಬದುಕಬೇಕು ಎಂದು ಪೂರ್ವ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ ಎಂಬ ಅಂಶವನ್ನು ಹೇಳಿದ್ದರು.

ಇಂದಿರಾಗಾಂಧಿ ಅವರು ಈ ತಿದ್ದುಪಡಿಗೆ ಆಸಕ್ತಿ ವಹಿಸಿದ್ದೇಕೆ…?!

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರಿಗೆ ಸಂವಿಧಾನದಲ್ಲಿ ಎರಡು ಪದಗಳನ್ನು ಸೇರಿಸಬೇಕು ಎಂಬ ಜರೂರತ್ ಇಲ್ಲ ಎಂದೆನಿಸಿತ್ತು. ಆದರೂ, ಜಿದ್ದಿಗೆ ಬಿದ್ದಂತೆ ಪ್ರಧಾನಿ ಇಂದಿರಾ ಗಾಂಧಿ ಅವರು 42 ನೇ ತಿದ್ದುಪಡಿಯನ್ನು ತಂದು ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯಾತೀತ’ ಹಾಗು ‘ಸಮಾಜವಾದ’ ಎಂಬ ಪದಗಳನ್ನು ಸೇರಿಸಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ

‘ಜಾತ್ಯಾತೀತ’ ಎಂಬ ಪದವನ್ನು ಪೀಠಿಕೆಯಲ್ಲಿ ಸೇರಿಸಿ, ತಾನು ಸದಾ ಅಲ್ಪ ಸಂಖ್ಯಾತರ ಪರವಾಗಿಯೇ ಇದ್ದೇನೆ. ಮಗ ಸಂಜಯ್ ಗಾಂಧಿ ದೆಹೆಲಿಯ ಆಗ್ರಾದಲ್ಲಿ ಆಗಲೇ ಮುಸ್ಲಿಮರಿಗೆ ಜನಸಂಖ್ಯಾ ನಿಯಂತ್ರಣ ಕ್ರಮ ಎಂದು 30,000 ಜನರಿಗೆ ಬಲವಂತವಾಗಿ ಮಾಡಿಸಿದ್ದ ಆಪರೇಷನ್ ಅವಾಂತರವನ್ನು ಜನರ ಮನಸ್ಸಿನಿಂದ ಮಾಸುವಂತೆ ಮಾಡಲು ಒದ್ದಾಡುತ್ತಿದ್ದ ಇಂದಿರಾ ಅವರು, ಅಲ್ಪ ಸಂಖ್ಯಾತರನ್ನು ಸಂತುಷ್ಟಗೊಳಿಸುವ ಭರದಲ್ಲಿ ಸಂಸತ್ತಿನಲ್ಲಿ ಸರಿಯಾದ ಸಮಂಜಸ ಚರ್ಚೆಯೂ ನಡೆಸದೆ ಸಂವಿಧಾನದ ಪೀಠಿಕೆಗೆ ‘ಜಾತ್ಯಾತೀತ’ ಎಂಬ ಪದವನ್ನು ಆತುರಾತುರವಾಗಿ ಸೇರಿಸಿ ಬಿಟ್ಟಿದ್ದರು. ಆ ಮೂಲಕ ಅಲ್ಪ ಸಂಖ್ಯಾತ ಮುಸ್ಲಿಮರ ದೃಷ್ಟಿಯಲ್ಲಿ ಹಾಳಾಗಿದ್ದ ಅವರ ವರ್ಚಸ್ಸನ್ನು ಸರಿ ಮಾಡಿಕೊಳ್ಳುವ ಯತ್ನವನ್ನು ಮಾಡಿದ್ದರು.

ಭ್ರಷ್ಟಾಚಾರದ ಆರೋಪದಿಂದ ಹಾಳಾಗಿದ್ದ ಹೆಸರಿನಿಂದ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿತ್ತು. ಬಡವರನ್ನು ಓಲೈಸಿದರೆ ಸ್ವಲ್ಪ ಮಟ್ಟಿನ ವೋಟುಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರವಿತ್ತು. ‘ಸಮಾಜವಾದಿ’ ಎಂಬ ಪದವನ್ನು ಕೂಡ ಸೇರಿಸಿ, ತಾನು ಬಡವರ ಪರವಾದ ಕಾಳಜಿಯುಳ್ಳ ಪ್ರಧಾನಿ ಎಂಬ ತೋರಿಕೆ ಮಾಡಲಾಗಿತ್ತು. ತನ್ನ ರಾಜಕೀಯ ಚರಿಷ್ಮಾವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಈ ತಂತ್ರವನ್ನು ಜಾರಿಗೆ ತಂದಿದ್ದರು.

ಕಾನೂನಿನ ಪ್ರಕಾರ…

*ಸಂವಿಧಾನದಲ್ಲಿ ಯಾವುದೇ ಬದಲಾವಣೆ ತರಬೇಕಿದ್ದರೆ, ಅದನ್ನು ಸವೋಚ್ಛ ನ್ಯಾಯಾಲಯವು ನೇರವಾಗಿ ಕೇಂದ್ರ ಸರಕಾರಕ್ಕೆ ಸೂಚಿಸಲು ಸಾಧ್ಯವಿರುವುದಿಲ್ಲ.

°ನ್ಯಾಯಾಂಗಕ್ಕೆ ವಿಶ್ಲೇಷಣೆಯ ಅಧಿಕಾರವಿದೆ:

ಸಂವಿಧಾನದಲ್ಲಿ ಸಂಸತ್ ಯಾವುದಾದರೂ ಬದಲಾವಣೆ ತರಬೇಕೆಂದರೆ ಅದನ್ನು ಸುಪ್ರಿಂ ಕೋಟ್೯ ಸುದೀರ್ಘವಾಗಿ ವಿಶ್ಲೇಷಣೆ ಮತ್ತು ವಿಮರ್ಶೆ ಮಾಡಿ, ಒಂದು ನಿರ್ಧಾರನ್ನು ತೆಗೆದುಕೊಂಡು ಅದನ್ನು ಕೇಂದ್ರ ಸರಕಾರಕ್ಕೆ ಮಾರ್ಗದರ್ಶನದ ರೀತಿಯಲ್ಲಿ ನೀಡಬಹುದು.

ಕೇಂದ್ರ ಸರಕಾರ ಸ್ವಯಂ ಪ್ರೇರಿತವಾಗಿ ಸಂಸತ್ತಿನಲ್ಲಿ ಒಮ್ಮತಕ್ಕೆ ಬಂದು ತರಲು ಹೊರಟ ಸಾಂವಿಧಾನಿಕ ಬದಲಾವಣೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದನಿಸಿದರೆ ಅದನ್ನು ಸುಪ್ರಿಂ ಕೋಟ್೯ ತಡೆಯುವ ಅಧಿಕಾರವಿರುತ್ತದೆ.

°ವ್ಯಾಖ್ಯಾನಿಸುತ್ತದೆ…

ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ಮೂಲ ತತ್ವ ಸಿದ್ಧಾಂತಗಳನ್ನು ಅರಿಯಲು ಸಂವಿಧಾನದ ಪೀಠಿಕೆಯನ್ನು ವ್ಯಾಖ್ಯಾನಿಸುತ್ತದೆ. ಈ  ವ್ಯಾಖ್ಯಾನವನ್ನು ಸರಕಾರ ಯಾವುದೇ ಸಾಂವಿಧಾನಿಕ ಬದಲಾವಣೆ ತರುವ ಮೊದಲಿಗೆ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

°ಸಾರ್ವಜನಿಕ ಪ್ರಭಾವ:

ಸವೋಚ್ಛ ನ್ಯಾಯಾಲಯವು ಜನರ ಬೇರೆ ಬೇರೆ ಪ್ರಕರಣಗಳ ವಿಚಾರಣೆ ನಡೆಸಿ, ನಂತರ ಆ ಕುರಿತು ತೀರ್ಪು ಅಥವಾ ಅಭಿಪ್ರಾಯ ನೀಡಿತ್ತದೆ. ಆ ತೀರ್ಪು ಅಥವಾ ಅಭಿಪ್ರಾಯ ಕೂಡ ಕೇಂದ್ರ ಸರಕಾರ ಹಲವಷ್ಟು ಕ್ರಮಗಳನ್ನು ಕೈಗೊಳ್ಳಲು ಕೆಲವೊಮ್ಮೆ ಪ್ರಭಾವಿಸುತ್ತದೆ.

ಈ ವಿಚಾರಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳು:

*ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಪ್ರಕರಣ, 1973:

ಈ ಪ್ರಕರಣದಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ 13 ನ್ಯಾಯಮೂರ್ತಿಗಳಿದ್ದ ಪೀಠ ರಿಟ್ ಪಿಟಿಷನ್ ಕೇಸ್ ಆಲಿಸಿತ್ತು. ನಂತರ ಈ ಪ್ರಕರಣದಲ್ಲಿ…
°ಸಂವಿಧಾನದ ಪೀಠಿಕೆಯೂ ಕೂಡ ಸಂವಿಧಾನದ ಅಂತರಿಕ ಭಾಗವೇ ಆಗಿದೆ.
°ಶಾಸಕಾಂಗವು ಸಂವಿಧಾನದಲ್ಲಿ 368ನೇ ಕಾಯ್ದೆ ಅನ್ವಯ ಸಂಸತ್ತಿನಲ್ಲಿ ಒಮ್ಮತದ ನಿರ್ಧಾರದೊಂದಿಗೆ ತಿದ್ದುಪಡಿಗಳನ್ನು ಮಾಡಬಹುದು ಆದರೆ ಸಂವಿಧಾನದ ಮೂಲ ಉದ್ದೇಶಗಳಿಗೆ ಮಾತ್ರವೇ ಧಕ್ಕೆ ಆಗಬಾರದು.
ಎಂಬ ಅಂಶಗಳನ್ನು ಸ್ಪಷ್ಟಪಡಿಸಿತ್ತು.

°ಎಸ್.ಆರ್ ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣ, 1994:

ಈ ಪ್ರಕರಣದಲ್ಲಿ ಪುನಃ ಉಚ್ಛ ನ್ಯಾಯಾಲಯವು ಸಂವಿಧಾನದ ಪೀಠಿಕೆಯು ಅದರ ಆಂತರಿಕ ಭಾಗವೇ ಆಗಿದೆ ಎಂದು ಸ್ಪಷ್ಟಪಡಿಸಿತ್ತು.

ಕೇಂದ್ರ ಸರಕಾರ ಸಂವಿಧಾನದ ಪೀಠಿಕೆಯನ್ನು ಬದಲಿಸಬಹುದು:

*ಕೇಂದ್ರ ಸರಕಾರ ಸಂವಿಧಾನದ ಪೀಠಿಕೆಯಲ್ಲಾಗಲಿ ಅಥವಾ ಯಾವುದೇ ಕಾಯ್ದೆಯಲ್ಲಾಗಲಿ ತಿದ್ದುಪಡಿ ತರಬೇಕಾದರೆ:

°ಯಾರಾದರೂ ಒಬ್ಬ ಲೋಕಸಭಾ ಅಥವಾ ರಾಜ್ಯಸಭಾ ಸದಸ್ಯ ತಿದ್ದುಪಡಿ ಆಗಬೇಕಿರುವ ಬಿಲ್ ಅನ್ನು ಮೊದಲಿಗೆ ಮಂಡಿಸಬೇಕು.
°ಸಂವಿಧಾನದ ತಿದ್ದುಪಡಿ ಬಿಲ್ ಅನ್ನು 368ನೇ ಕಾಯ್ದೆಯ ಅನ್ವಯ ತರಬಹುದು.

*ಸಂಸತ್ತಿನ ಎರಡೂ ಮನೆಗಳಲ್ಲಿ ಒಂದು ಬಿಲ್ ಪಾಸ್ ಆಗಬೇಕೆಂದರೆ:

°ಒಂದು ತಿದ್ದುಪಡಿ ಆಗಲು ಅದರ ಕುರಿತು ಎರಡೂ ಸಂಸತ್ತಿನ ಮನೆಗಳಾದ ಲೋಕ ಸಭಾ ಹಾಗು ರಾಜ್ಯ ಸಭಾದಲ್ಲಿ ವಿಸ್ತೃತ ಪರ-ವಿರೋಧದ ಚರ್ಚೆ ಆಗಬೇಕು.
°ಸಂಸತ್ತಿನ ಎರಡೂ ಮನೆಗಳಲ್ಲಿ ಮೂರನೇ ಎರಡು ಭಾಗದಷ್ಟು ಸದಸ್ಯರು ಸಮ್ಮತಿಸಿದರೆ ಮಾತ್ರವೇ ತಿದ್ದುಪಡಿಗೆ ಸಮ್ಮತಿ ಸಿಕ್ಕುತ್ತದೆ.

ರಾಷ್ಟ್ರಪತಿಗಳ ಅನುಮೋದನೆ ಅಂತಿಮ:

ರಾಷ್ಟ್ರಪತಿ ದ್ರೌಪದಿ ಮುರ್ಮು

°ಒಮ್ಮೆ ತಿದ್ದುಪಡಿ ಆಗುವ ಬಿಲ್ ಎರಡೂ ಸಂಸತ್ತಿನ ಮನೆಯಲ್ಲಿ ಮಂಡಿಸಿ ಆಗಿ, ರಾಷ್ಟ್ರಪತಿಗಳ ಅನುಮೋದನೆಗಾಗಿ ಇಡಬೇಕಾಗುತ್ತದೆ.
°ರಾಷ್ಟ್ರಪತಿಗಳ ಅಂಕಿತವೇ ಅಂತಿಮವಾಗಿರುತ್ತದೆ. ಅವರ ಅನುಮೋದನೆಯ ನಂತರ ತಿದ್ದುಪಡಿ ಜಾರಿ ಆಗುತ್ತದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ.11ರಂದು ಮತ್ತೆ ಸುಪ್ರಿಂ ಕೋಟ್೯ ಕೈಗೆತ್ತಿಕೊಳ್ಳಲಿದೆ‌. ಉಚ್ಛ ನ್ಯಾಯಾಲಯದ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಗಣನೀಯ ಬದಲಾವಣೆಗಳನ್ನು ತಂದ ನಿದರ್ಶನಗಳು ನಮಗೆ ಸಿಗುತ್ತದೆ. ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬದಲಾವಣೆ ತರುವ ಶಕ್ತಿಯನ್ನು ಹೊಂದಿದೆ. ಈ ಅರ್ಜಿಯ ತೀರ್ಪು ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ