ಭಾರತದ ಭೂಗತದ ಲೋಕದ ಮಟ್ಟಿಗೆ ವರದರಾಜನ್ ಮುದಲಿಯಾರ್, ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಛೋಟಾ ಶಕೀಲ್, ಹಾಜಿ ಮಸ್ತಾನ್, ಖರೀಂ ಲಾಲಾ, ಅರುಣ್ ಗೌಳಿ, ರವಿ ಪೂಜಾರಿ, ಅಮರ್ ನಾಯಕ್, ಅಶ್ವಿನ್ ನಾಯಕ್, ಬನ್ನಂಜೆ ರಾಜಾ ಅವರ ಹೆಸರುಗಳು ದೊಡ್ಡ ಕುಖ್ಯಾತಿ ಪಡೆದಿದ್ದುದು ನಮಗೆ ತಿಳಿದೇ ಇದೆ. ಆದರೆ ಇವರೆಲ್ಲಾ 80’s ಮತ್ತು 90’s ದಶಕದ ಅಪರಾಧ ಜಗತ್ತಿನ ಪಾತಕಿಗಳಾಗಿದ್ದರು. 2000 ಇಸವಿ ನಂತರದ ಬೆಳವಣಿಗೆಗಳಲ್ಲಿ ಅಂತಹ ಹೇಳಿಕೊಳ್ಳುವ ಡಾನ್ ಗಳು ಫೀಲ್ಡಿನಲ್ಲಿ ಇರಲಿಲ್ಲ. ಹೀಗಿರುವಾಗ  ತೀರಾ ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಎಂಬ ಹೆಸರು ದೊಡ್ಡ ಸುದ್ದಿಯಲ್ಲಿದೆ.‌

ಯಾರಿದು ಲಾರೆನ್ಸ್‌ ಬಿಷ್ಣೋಯ್‌?


ಮೊದ ಮೊದಲು ಹರಿಯಾಣ, ಪಂಜಾಬ್‌ಗೆ ಸೀಮಿತವಾಗಿದ್ದ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಹೆಸರು, ಪಂಜಾಬ್‌ನ ಗಾಯಕ ಹಾಗೂ ಕಾಂಗ್ರೆಸ್‌ ನಾಯಕ ಸಿಧು ಮೂಸೆವಾಲ ಹತ್ಯೆಯ ಮೂಲಕ ಇಡೀ ದೇಶಾದ್ಯಂತ ಪರಿಚಿತವಾಯಿತು. 2010ರಿಂದ ಭೂಗತ ಚಟುವಟಿಕೆಗಳಲ್ಲಿ ತೊಡಗಿರುವ ಲಾರೆನ್ಸ್‌ ಬಿಷ್ಣೋಯ್‌ ಮೂಲ ಹೆಸರು ಸತ್ವಿಂದೇರ್‌ ಸಿಂಗ್‌. ಈತನಿಗೆ ಈಗ ಕೇವಲ 31 ವರ್ಷವಷ್ಟೇ. ಆದರೆ, ಆಗಲೇ ಆತನ ವಿರುದ್ಧ 24ಕ್ಕೂ ಹೆಚ್ಚಾಗಿ ಪ್ರಕರಣಗಳಿವೆ. ಸದ್ಯ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ತನ್ನ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾನೆ.

ಸಂಗ್ರಹಿತ ಲೇಖನ

ವಿದ್ಯಾರ್ಥಿ ದೆಸೆಯಿಂದಲೇ ಭೂಗತ ಲೋಕದ ನಂಟು ಬೆಳೆಸಿಕೊಂಡ ಪಾತಕಿ
1993 ಫೆಬ್ರವರಿ 12ರಂದು ಪಂಜಾಬ್‌ನ ಫಿರೋಜ್‌ಪುರ್‌ ಜಿಲ್ಲೆಯ ದತ್ತರನ್‌ವಾಲಿ ಹಳ್ಳಿಯ ಬಿಷ್ಣೋಯ್‌ ಸಮುದಾಯದ ಕೃಷಿ ಕುಟುಂಬದಲ್ಲಿ ಜನನ. ಪಂಜಾಬ್‌, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಬಿಷ್ಣೋಯಿ ಸಮುದಾಯ ಹರಡಿಕೊಂಡಿದೆ.

ತಂದೆ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದರು, ಬಳಿಕ ಕೆಲಸ ತೊರೆದು ಕೃಷಿಯಲ್ಲಿ ತೊಡಗಿ ಸಿಕೊಂಡಿದ್ದಾರೆ. (ದಾವೂದ್‌ ಇಬ್ರಾಹಿಂ ತಂದೆ ಕೂಡ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದರು). 12ನೇ ತರಗತಿ ಮುಗಿದ ಬಳಿಕ ಬಿಷ್ಣೋಯ್‌ 2010ರಲ್ಲಿ ಚಂಡಿಗಢಕ್ಕೆ ಬಂದು, ಪಂಜಾಬ್‌ ವಿವಿಯ ಡಿಎವಿ ಕಾಲೇಜ್‌ನಲ್ಲಿ ಪ್ರವೇಶ ಪಡೆಯುತ್ತಾನೆ. ವಿದ್ಯಾರ್ಥಿ ಸಂಘಟನೆಗಳ ರಾಜಕೀಯಲ್ಲಿ ಪಾಲ್ಗೊಂಡು, 2011-2012ರವರೆಗೆ ಪಂಜಾಬ್‌ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗುತ್ತಾನೆ. ಆದರೆ, ಈ ಅವಧಿಯಲ್ಲಿ ಆತ ಭೂಗತ ಚಟುವಟಿಕೆಗಳತ್ತ ವಾಲುತ್ತಾನೆ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಮೊದಲ ಕ್ರಿಮಿನಲ್‌ ಕೇಸ್‌ ದಾಖಲಾಗುತ್ತದೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ರೌಡಿ ಗೋಲ್ಡಿ ಬ್ರಾರ್‌ ಜತೆಗೆ ಸಂಪರ್ಕ ಬೆಳೆಯುತ್ತದೆ. ಜತೆಗೆ, ಕಾನೂನು ಪದವಿ ಎಲ್‌ಎಲ್‌ಬಿಯನ್ನೂ ಪಡೆಯುತ್ತಾನೆ. ಈಗ ಅದೇ ಲಾಯರ್‌ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದಾನೆ!

ಬಿಷ್ಣೋಯ್‌ ಗ್ಯಾಂಗ‌ಲ್ಲಿ 700 ಶೂಟರ್ಸ್‌!


ವಿಶೇಷ ಎಂದರೆ, ಬಿಷ್ಣೋಯ್‌ ಇದುವರೆಗೆ ನೇರವಾಗಿ ಯಾವುದೇ ಕೊಲೆಯಲ್ಲೂ ಭಾಗಿಯಾಗಿಲ್ಲ! ಎಲ್ಲವನ್ನೂ ಆತ ತನ್ನ ಸಹಚರರಿಂದಲೇ ನಡೆಸುತ್ತಾನೆ. ಈ ಕಾರ್ಯಾಚರಣೆಯು ದಾವೂದ್‌ ಇಬ್ರಾಹಿಂ ನಡೆಸುತ್ತಿದ್ದ ಭೂಗತ ಚಟುವಟಿಕೆ ರೀತಿಯಲ್ಲೇ ಇದೆ ಎನ್ನುತ್ತಾರೆ ದಿಲ್ಲಿ ಪೊಲೀಸರು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪ್ರಕಾರ, ಶಾರ್ಪ್‌ ಶೂಟರ್ಸ್‌ ಸೇರಿದಂತೆ ದೇಶಾದ್ಯಂತ ಸುಮಾರು 700 ಶೂಟರ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಲ್ಲಿದ್ದಾರೆ. ಈ ಪೈಕಿ 300 ಶೂಟರ್ಸ್‌ ಪಂಜಾಬ್‌ನವರಿದ್ದಾರೆ. ಈತನಿಗೆ ಕುಖ್ಯಾತ ಪಾತಕಿಗಳಾದ ಗೋಲ್ಡಿ ಬ್ರಾರ್‌, ಸಚಿನ್‌ ಥಾಪಾ, ಅನ್ಮೋಲ್‌ ಬಿಷ್ಣೋಯ್‌(ಲಾರೆನ್ಸ್‌ ಸಹೋದರ), ವಿಕ್ರಮ್‌ಜಿತ್‌ ಸಿಂಗ್‌, ಕಾಲಾ ಜಥೇರಿ, ಕಾಲಾ ರಾಣಾ ಸೇರಿ ಮತ್ತಿತರು ಸಾಥ್‌ ನೀಡುತ್ತಾರೆ. ಪಂಜಾಬ್‌, ಹರಿಯಾಣ, ರಾಜಸ್ಥಾನ, ದಿಲ್ಲಿ, ಹಿಮಾಚಲ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಗ್ಯಾಂಗ್‌ ಹರಡಿದೆ. ವಿದೇಶದಲ್ಲೂ, ಅಂದರೆ ಕೆನಡಾದಲ್ಲಿ ಜಾಲ ವಿಸ್ತರಿಸಿದೆ.

ಜೈಲಿಂದಲೇ ಭೂಗತ ಕಾರ್ಯಾಚರಣೆ!
ದಿಲ್ಲಿಯ ತಿಹಾರ್‌ ಇರಲಿ ಇಲ್ಲವೇ ಗುಜರಾತ್‌ನ ಸಬರಮತಿ ಜೈಲೇ ಇರಲಿ. ಬಿಷ್ಣೋಯ್‌ ಭೂಗತ ಚಟುವಟಿಕೆಗೆ ಯಾವುದೇ ಅಡ್ಡಿಯಾಗಿಲ್ಲ. ಮೊಬೈಲ್‌ ಫೋನ್‌ ಮೂಲಕವೇ ಇಡೀ ಗ್ಯಾಂಗ್‌ ನಿಯಂತ್ರಿಸುತ್ತಾನೆ ಮತ್ತು ಸುಲಿಗೆ, ಹತ್ಯೆಗೆ ಸ್ಕೆಚ್‌ ಹಾಕುತ್ತಾನೆ ಬಿಷ್ಣೋಯ್‌.

ಈ ಕಾರಣಕ್ಕೆ ಆತನನ್ನು ಜೈಲಿನಿಂದ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಈತನಿಗೆ ಪಾಕಿಸ್ಥಾನ ಗ್ಯಾಂಗ್‌ಸ್ಟರ್‌ಗಳ ಸಂಪರ್ಕವೂ ಇದೆ. ತನ್ನ ಕಾರ್ಯಾಚರಣೆಗೆ ಮೊಬೈಲ್‌ ಮಾತ್ರವಲ್ಲದೆ, ಟೆಲಿಗ್ರಾಂ ಮತ್ತು ಸಿಗ್ನಲ್‌ ಆಯಪ್‌ಗ ಳನ್ನು ಗ್ಯಾಂಗ್‌ ಸದಸ್ಯರ ಜತೆಗಿನ ಸಂವಹನಕ್ಕೆ ಬಳಸುತ್ತಾನೆ. ಬಡ ತರುಣರನ್ನೇ ಗ್ಯಾಂಗ್‌ಗೆ ಸೇರಿಸಿಕೊಳ್ಳಲಾಗುತ್ತದೆ. ವಿಶೇಷ ಎಂದರೆ ಇವರಿಗೆ ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ! ಟಾರ್ಗೆಟ್‌ ನೀಡಿ, ಅವರಿಂದ ಹತ್ಯೆ ಮಾಡಿಸಲಾಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ದಾವೂದ್‌ ರೀತಿಯಲ್ಲಿ ಬಿಷ್ಣೋಯ್‌ ಕೂಡ ಕಾರ್ಪೊರೇಟ್‌ ಶೈಲಿಯಲ್ಲಿ ಭೂಗತ ಚಟುವಟಿಕೆ ನಡೆಸುತ್ತಾನೆ.

ಸಲ್ಮಾನ್‌ ಖಾನ್‌ ಬೆಂಬಿಡದೆ ಕಾಡುತ್ತಿರುವ “ಬಿಷ್ಣೋಯ್‌’’


ಕೃಷ್ಣ ಮೃಗ ಮತ್ತು ಬಿಷ್ಣೋಯ್‌ ಸಮುದಾಯಕ್ಕೆ ಅವಿನಾಭಾವ ಸಂಬಂಧವಿದೆ, ಆಧ್ಯಾತ್ಮಿಕ ಹಿನ್ನೆಲೆಯಿದೆ. ಇಂಥ ಕೃಷ್ಣ ಮೃಗವನ್ನು ಕೊಂದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಸಲ್ಮಾನ್‌ ಖಾನ್‌ಗೆ 2018 ರಲ್ಲಿ ರಾಜಸ್ಥಾನದ ಸ್ಥಳೀಯ ಕೋರ್ಟ್‌ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಲ್ಮಾನ್‌ ಸದ್ಯ ಜಾಮೀನು ಮೇಲೆ ಹೊರಗಿದ್ದಾರೆ. ಕೃಷ್ಣ ಮೃಗ ಕೊಂದ ಕಾರಣಕ್ಕೆ ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ವಿರುದ್ಧ ಹಗೆ ಸಾಧಿಸುತ್ತಿದೆ. ಕೊಂದೇ ಹಾಕುವ ಬೆದರಿಕೆ ಹಾಕಿದೆ. ಅಲ್ಲದೇ, ಸಲ್ಮಾನ್‌ ಜತೆಗಿದ್ದವರಿಗೆ ಬಾಬಾ ಸಿದ್ದಿಕಿಗಾದ ಗತಿ ಕಾಣಿಸುವುದಾಗಿಯೂ ಎಚ್ಚರಿಸಿತ್ತು. ಈಗ ಬಾಬಾ ಸಿದ್ದಿಕಿಯ ಕೊಲೆ ಆಗಿ ಹೋಗಿದೆ.

ಕೆಲ ವರ್ಷಗಳ ಹಿಂದಿನಿಂದಲೂ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ, ಜೈಲಿನ ಒಳಗಿನಿಂದಲೇ ವಿಡಿಯೋ ಕಾಲ್ ಮೂಲಕ ಎಬಿಪಿ ಚಾನೆಲ್​ಗೆ ಸಂದರ್ಶನ ನೀಡಿದ್ದ. ಆ ಸಮಯದಲ್ಲಿ ‘ಸಲ್ಮಾನ್ ಖಾನ್ ಅನ್ನು ಕೊಲ್ಲುವುದೇ ನನ್ನ ಜೀವನದ ಗುರಿ’ ಎಂದಿದ್ದ. ಅದೇ ಸಂದರ್ಶನದಲ್ಲಿ, ಸಂದರ್ಶಕ, ‘ಈ ರಕ್ತಪಾತ ಆಗದೆ ಇರಬೇಕೆಂದರೆ ಸಲ್ಮಾನ್ ಖಾನ್ ಏನು ಮಾಡಬೇಕು? ಹೇಗೆ ಸಲ್ಮಾನ್ ಖಾನ್ ಕ್ಷಮೆ ಕೇಳಬಹುದು?’ ಎಂದು ಪ್ರಶ್ನೆ ಮಾಡಿದ್ದರು.

ಅದಕ್ಕೆ ಉತ್ತರಿಸಿದ್ದ ಲಾರೆನ್ಸ್ ಬಿಷ್ಣೋಯಿ, ‘ನಮ್ಮ ಬಿಷ್ಣೋಯಿಗಳ ದೇವಾಲಯ ಮುಕ್ತಿಧಾಮ ಮುಕಾಮ್ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ನೋಕಾ ತೆಹಶಿಲ್​ನಲ್ಲಿದೆ, ಅಲ್ಲಿಗೆ ಹೋಗಿ ಕ್ಷಮೆ ಕೇಳಿ ಬಿಡಲಿ ಸಾಕು. ನನ್ನಿಂದ ತಪ್ಪಾಗಿದೆ,  ಆರೋಪ ಬಂದಿದೆ. ನನ್ನಿಂದ ಈ ಸಮುದಾಯದ ಮನೋಭಾವನೆಗೆ ಧಕ್ಕೆ ಬಂದಿದೆ ಹಾಗಾಗಿ ಕ್ಷಮೆ ಕೇಳುತ್ತೇನೆ ಎಂದು ಆ ದೇವಸ್ಥಾನದಲ್ಲಿ ನಿಂತು ಹೇಳಲಿ ಸಾಕು, ನಾನು ಆತನನ್ನು ಬಿಟ್ಟುಬಿಡುತ್ತೇನೆ. ಆತನನ್ನು ಕೊಲ್ಲುವ ಪ್ರಯತ್ನ ಮಾಡುವುದಿಲ್ಲ’ ಎಂದಿದ್ದ ಲಾರೆನ್ಸ್ ಬಿಷ್ಣೋಯಿ…!

ಸಲ್ಮಾನ್ ಖಾನ್ ಭದ್ರತೆಗೆ ಕೋಟಿ ಕೋಟಿ ಖರ್ಚು:
‘ಎಬಿಪಿ ಲೈವ್’ ವರದಿ ಪ್ರಕಾರ ಸಲ್ಮಾನ್ ಖಾನ್ ಭದ್ರತೆಯ ವೆಚ್ಚ ಕೋಟಿಗಟ್ಟಲೆ ಇದೆ. ವೈ ಪ್ಲಸ್ ಭದ್ರತೆಗೆ ವರ್ಷಕ್ಕೆ ಸುಮಾರು 3 ಕೋಟಿ ರೂಪಾಯಿ ಖರ್ಚಾಗುತ್ತದೆ ಎನ್ನಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಮನೆಯ ಹೊರಗೆ ಶೂಟಿಂಗ್ ನಡೆದಿತ್ತು. ಅಂದಿನಿಂದ, ಅದರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೀಗ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಭದ್ರತೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

ಬಿಷ್ಣೋಯ್‌ ಗ್ಯಾಂಗ್‌ ಬಳಕೆ: ಕೆನಡಾ ಆರೋಪ
ಕೆನಡಾದಲ್ಲಿ ಸಂಘಟಿತ ಅಪರಾಧ ನಡೆಸುವುದಕ್ಕಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಬಿಷ್ಣೋಯ್‌ ಗ್ಯಾಂಗ್‌ ಬಳಸಿಕೊಳ್ಳುತ್ತಿದ್ದಾರೆಂದು ಕೆನಡಾ ಒಟ್ಟಾವೋ ಪೊಲೀಸ್‌ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಕೆನಡಾದಲ್ಲಿರುವ ಖಲಿಸ್ಥಾನಿ ನಾಯಕರನ್ನು ಹತ್ಯೆಗೆ ಈ ಗ್ಯಾಂಗ್‌ ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್‌ ಸಂಸದ ಸಾಕೇತ್‌ ಗೋಖಲೆ ಕೂಡ ಇದೇ ಆರೋಪವನ್ನು ಮಾಡಿದ್ದಾರೆ. ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಪ್ರಕಟವಾದ ವರದಿಯಲ್ಲೂ ಈ ಮಾಹಿತಿ ಆರೋಪವಿದೆ.

ಪ್ರಮುಖ ಪಾತಕ ಕೃತ್ಯಗಳು


2013ರಿಂದಲೇ ಬಿಷ್ಣೋಯ್‌ ಗ್ಯಾಂಗ್‌ ಪಂಜಾಬ್‌, ಹರಿಯಾಣದಲ್ಲಿ ಕೊಲೆ ಯತ್ನ, ಸುಲಿಗೆ, ಮಾದಕ ದ್ರವ್ಯ ಕಳ್ಳ ಸಾಗಣೆ ಇತ್ಯಾದಿ ಅಪರಾಧದಲ್ಲಿ ತೊಡಗಿಸಿಕೊಂಡಿದೆ.
2018ರಲ್ಲಿ ಬಿಷ್ಣೋಯ್‌ ಸಾಥಿ ಸಂಪತ್‌ ನೆಹ್ರಾ ಮುಂಬಯಿಯ ಸಲ್ಮಾನ್‌ ಖಾನ್‌ ಮುಂದೆ ದಾಳಿ ನಡೆಸಿದ. ಜತೆಗೆ, ಸಲ್ಮಾನ್‌ ಖಾನ್‌ ನನ್ನು ಜೋಧಪುರದಲ್ಲಿ ಕೊಲ್ಲುವೆ ಎಂದು ಸ್ವತಃ ಲಾರೆನ್ಸ್‌ ಬಿಷ್ಣೋಯ್‌ ಧಮ್ಕಿ ಹಾಕಿದ್ದ.
2022 ಮೇ 29. ಪಂಜಾಬ್‌ ಗಾಯಕ ಸಿಧು ಮೂಸೆ ವಾಲ ಹತ್ಯೆಯನ್ನು ಗೋಲ್ಡಿ ಬ್ರಾರ್‌ ಗ್ಯಾಂಗ್‌ ಬಿಷ್ಣೋಯಿ ಗ್ಯಾಂಗ್‌ ಜತೆ ಸೇರಿ ನಡೆಸಿತು.
2023ರಲ್ಲಿ ಕೆನಡಾದಲ್ಲಿರುವ ಸಲ್ಮಾನ್‌ ಸಂಗಡಿಗ ಜಿಪ್ಪಿ ಗ್ರೇವಾಲ್‌ ಮನೆ ಹೊರೆಗೆ ಗುಂಡಿನ ದಾಳಿ.
2023 ಸೆಪ್ಟೆಂಬರ್‌ 21. ಖಲಿಸ್ಥಾನಿ ಪ್ರತ್ಯೇಕತಾ ವಾದಿ ಸುಖೂಲ್‌ ಸಿಂಗ್‌ ಗಿಲ್‌ ಅಲಿಯಾಸ್‌ ಸುಖಾ ಡಂಕಿ ಹತ್ಯೆ.
2023 ಡಿಸೆಂಬರ್‌ 5. ರಾಜಸ್ಥಾನದ ಕರಣಿ ಸೇನಾ ಮುಖ್ಯಸ್ಥ ಸುಖದೇವ್‌ ಸಿಂಗ್‌ ಗೋಗ್‌ಮೇಡಿ ಗುಂಡಿಟ್ಟು ಹತ್ಯೆ.
2024 ಸೆಪ್ಟಂಬರ್‌ 1.
ಹಣ ನೀಡಲು ಒಪ್ಪದ ಆಫ್ಘನ್‌ ಮೂಲದ ಜಿಮ್‌ ಓನರ್‌, ದಿಲ್ಲಿಯ ನಾದಿಶ್‌ ಶಾನನ್ನು ಗಂಡಿಟ್ಟು ಕೊಂದ ಬಿಷ್ಣೋಯ್‌ ಗ್ಯಾಂಗ್‌.
2024 ಅಕ್ಟೋಬರ್‌ 12. ಸಲ್ಮಾನ್‌ ಜತೆ ಸಖ್ಯ ಹೊಂದಿದ್ದಾರೆಂಬ ಕಾರಣಕ್ಕೆ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ.