ಅಲ್ಲಿನ ಸಮಶೀತೋಷ್ಣ ಹವಾಮಾನ, ಯತೇಚ್ಛವಾಗಿ ಬೆಳೆಯುವ ಸೊಂಪಾದ ಹುಲ್ಲುಗಾವಲು ಹಾಗು ಸಾಕಷ್ಟು ಬಳಕೆಗೆ ಬೇಕಿರುವಷ್ಟು ಪರಿಶುದ್ಧ ಜೀವ ಜಲದ ಲಭ್ಯತೆಯು ಪಶುಪಾಲನೆಗೆ ಬಹಳಷ್ಟು ಸಹಕಾರಿಯಾಗಿದೆ.
ಆ ದೇಶದಲ್ಲಿ ಇರುವುದು 57 ಲಕ್ಷದಷ್ಟು ಮನುಷ್ಯರ ಜನಸಂಖ್ಯೆಯಾದರೆ, ದನಗಳ ಸಂಖ್ಯೆ 10 ಕೋಟಿ, ಕುರಿಗಳ ಸಂಖ್ಯೆ 26 ಕೋಟಿ ಹಾಗು 88,428 ಮೇಕೆಗಳನ್ನು ಹೊಂದಿದೆ. ಏಕೆಂದರೆ ಪಶುಪಾಲನೆ ಹಾಗು ಹೈನುಗಾರಿಕೆಯನ್ನು ಬಹುವಾಗಿ ಹಚ್ಚಿಕೊಂಡಿದೆ ಆ ದೇಶ. ಅದೇ ನ್ಯೂಜಿ಼ಲ್ಯಾಂಡ್!
ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಾ ಕೃಷಿ, ಪಶುಪಾಲನೆ, ಮೀನುಗಾರಿಕೆ, ಅರಣ್ಯಕೃಷಿ, ಪ್ರವಾಸೋದ್ಯಮದಲ್ಲಿ ದೊಡ್ಡದಾಗಿ ಬೆಳೆದಿದೆ. ಅದನ್ನು ಹೊರತು ಪಡಿಸಿದರೆ, ಉತ್ಪಾದನೆ, ಹಣಕಾಸು ಸೇವೆ, ಸಿನಿಮಾ ಮತ್ತು ಮಾದ್ಯಮ ಕ್ಷೇತ್ರದಲ್ಲಿ ಆದಾಯದ ಮೂಲವನ್ನು ಕಂಡುಕೊಂಡಿದೆ.
ಕ್ಷೀರೋದ್ಯಮ ಉತ್ತುಂಗದಲ್ಲಿ…
ವಾರ್ಷಿಕ ಆದಾಯ ಕ್ಷೀರ ಉದ್ಯಮದಿಂದ ನ್ಯೂಜಿ಼ಲ್ಯಾಂಡ್ ಗೆ 25.7 ಬಿಲಿಯನ್ ಡಾಲರ್ ನಷ್ಟು ಬರುತ್ತಿದೆ. ಇದು ನ್ಯೂಜಿಲ್ಯಾಂಡಿನ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಹಾಲಿನ ಉಪ ಉತ್ಪನ್ನಗಳ ರಫ಼ಿನಿಂದ ಬರೊಬ್ಬರಿ ಆದಾಯ ಹುಟ್ಟುತ್ತಿದ್ದು, ಪ್ರತಿ ವರ್ಷವೂ 1,87,72,000 ಟನ್ ನಷ್ಟು ಹಾಲಿನ ಉಪ ಉತ್ಪನ್ನಗಳನ್ನು ರಫ್ತು ಮಾಡಿದೆ. ವಾರ್ಷಿಕ 21 ಬಿಲಿಯನ್ ಲೀಟರ್ ನಷ್ಟು ಹಾಲಿನ ಉತ್ಪಾದನೆ ಮಾಡುವಲ್ಲಿ ನ್ಯೂಜ಼ಿಲ್ಯಾಂಡ್ ಯಶಸ್ವಿ ಆಗುತ್ತಿದೆ.
ಇದಕ್ಕೆ ಮುಖ್ಯ ಕಾರಣಗಳು ಬಹಳಷ್ಟು ಇವೆ:
*ರೈತರ ಮಾಲಿಕತ್ವದ ಸಹಕಾರಿ ಸಂಘ ‘ಫ಼ೋಂಟೆರ್ರಾ’:
ನ್ಯೂಜಿಲ್ಯಾಂಡ್ ಬಹು ದೊಡ್ಡ ಕಂಪೆನಿ ಫ಼ೊಂಟೆರ್ರಾ ಆಗಿದ್ದು, ರೈತರಿಂದಲೇ ಸ್ಥಾಪನೆ ಆಗಿದೆ. ಈ ಕಂಪೆನಿ ಎಷ್ಟು ದೊಡ್ಡದೆಂದರೆ, ಇದು ಪ್ರಪಂಚದ 30% ಡೈರಿ ರಫ಼ು ಮಾಡುತ್ತಿದೆ. ಇದರ ಉತ್ಪನ್ನಗಳು 140 ದೇಶಗಳಿಗೆ ಮಾರಾಟವಾಗುತ್ತಿವೆ. ಸುಮಾರು 10,000 ಜನಕ್ಕೆ ಇದು ಉದ್ಯೋಗ ನೀಡಿ, ಜೀವನೋಪಾಯದ ಹಾದಿ ಮಾಡಿಕೊಟ್ಟಿದೆ.
*ಸಮಶೀತೋಷ್ಣ ಹವಾಮಾನ: ದೇಶದ ವಾತಾವರಣವು ಸೌಮ್ಯವಾದ ಗುಣ ಹೊಂದಿದ್ದು, ಸಮಶೀತೋಷ್ಣ ಗುಣವನ್ನು ಹೊಂದಿದೆ. ವರ್ಷದ ಎಲ್ಲಾ ದಿನಗಳಲ್ಲೂ ಪ್ರಾಣಿಗಳು ಅಂದರೆ ಮುಖ್ಯವಾಗಿ ದನಗಳು, ಕುರಿಗಳು ಹಾಗು ಮೇಕೆಗಳಿಗೆ ಸೊಂಪಾದ ಹಸಿರು ಮೇವು ಪರಿಸರದಲ್ಲಿ ಅಭ್ಯವಿರುತ್ತದೆ.
*ಕಡಿಮೆ ಖರ್ಚು: ಹಸು, ಕುರಿ, ಮೇಕೆಗಳಿಗೆ ಪೋಷಣೆಗೆ ಬೇಕಾದಷ್ಟು ಮಳೆಯು ಸಮರ್ಪಕವಾಗಿ ಬರುತ್ತದೆ. ಪಶುಪಾಲನೆಗೆ ಆಹಾರಕ್ಕೆಂದು ದವಸ ಧಾನ್ಯವನ್ನು ಖರೀದಿಸುವ ಖರ್ಚನ್ನು ಇಲ್ಲವಾಗಿಸಿ, ಖರ್ಚನ್ನು ಕಡಿಮೆ ಮಾಡುತ್ತದೆ.
*ನಿಖರತೆಯ ಕೃಷಿ: ಜಿ.ಪಿ.ಎಸ್, ದ್ರೋಣ್ ಹಾಗು ಸೆನ್ಸಾರ್ ಗಳನ್ನು ಕೃಷಿ ಭೂಮಿಯ ನಿಗಾ ಇಡಲು ಹಾಗು ಅಲ್ಲಿನ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಲು ಬಳಸಲಾಗುತ್ತದೆ.
*ಹುಲ್ಲುಗಾವಲಿನ ನಿರ್ವಹಣೆ: ಹುಲ್ಲುಗಾವಲಿನ ಸಮರ್ಥ ನಿರ್ವಹಣೆಯು ಹಲವಾರು ತಂತ್ರಗಾರಿಕೆಯನ್ನು ಒಳಗೊಂಡಿದ್ದು, ಇದು ವರ್ಷದ ಎಲ್ಲಾ ದಿನ ಗುಣಮಟ್ಟದ ಮೇವು ಲಭ್ಯವಿರುವಂತೆ ಎಚ್ಚರ ವಹಿಸಲು ನೆರವು ನೀಡುತ್ತದೆ. ಪುನರ್ ಮೇಯಿಸುವಿಕೆಯನ್ನು ತಡೆಯುತ್ತದೆ, ಮಣ್ಣಿನ ಆರೋಗ್ಯ ಪರೀಕ್ಷೆ ಹಾಗು ಮೇವು ಬೆಳೆಗಳ ಬಳಕೆ, ಹುಲ್ಲುಗಾವಲಿನ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
*ಮಾಹಿತಿ ಆಧಾರಿತ ನಿರ್ಧಾರಗಳು: ಪಶುಗಳ ವಂಶಾಭಿವೃದ್ಧಿ, ಮೇವಿನ ಪೂರೈಕೆ ಮತ್ತು ಪಶುಗಳ ಆರೋಗ್ಯ ನಿರ್ವಹಣೆಯನ್ನು ಅಂಕಿ ಅಂಶಗಳ ಆಧಾರದ ಮೇಲೆ ಮಾಡುವುದು. ಜೊತೆಗೆ ಪ್ರಾಣಿಗಳ ಚಟುವಟಿಕೆ ಮೇಲೆ ನಿಗಾ ವಹಿಸುವ ಮತ್ತು ಆರೋಗ್ಯದ ಬಗ್ಗೆ ಗಮನವಿಡಲು ವಿವಿಧ ತಂತ್ರಾಂಶದ ಆಧಾರಿತ ಉಪಕರಣಗಳನ್ನು ಬಳಸುತ್ತಾರೆ.
ಕೃತಕ ಗರ್ಭಧಾರಣೆ: ಅನುವಂಶಿಕ ವೈವಿಧ್ಯತೆ ಮತ್ತು ಜಾನುವಾರುಗಳ ಅಪೇಕ್ಷಣೀಯ ಗುಣಲಕ್ಷಣಗಳನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಯ ತಂತ್ರ ಬಳಸಲಾಗುತ್ತದೆ.
ಡಿ.ಎನ್.ಎ ವಿಶ್ಲೇಷಣೆ: ಈ ಅತ್ಯಾಧುನಿಕ ತಂತ್ರವು ಪ್ರಾಣಿಗಳ ಅನುವಂಶಿಕ ಸಾಮರ್ಥ್ಯವನ್ನು ಊಹಿಸಲು ಡಿ.ಎನ.ಎ ವಿಶ್ಲೇಷಣೆಯನ್ನು ಬಳಸಲಾಗುತ್ತದೆ. ಇದು ಸಂತಾನೋತ್ಪತ್ತಿಯಲ್ಲಿ ಪ್ರಾಣಿಗಳ ತಳಿಯ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
ಕ್ರಾಸ್ ಬ್ರೀಡಿಂಗ್: ಉತ್ತಮ ಗುಣಲಕ್ಷಣಗಳೊಂದಿಗೆ ಸಂತತಿಯನ್ನು ವೃದ್ಧಗೊಳಿಸಲು ಈ ತಂತ್ರ ನೆರವಾಗುತ್ತದೆ. ಇದು ವೇಗವಾಗಿ ಅನುವಂಶಿಕ ಸುಧಾರಣೆಗೆ ಕಾರಣವಾಗುತ್ತದೆ. ಹಾಲಿನ ಇಳುವರಿ ಮತ್ತು ಉತ್ಕೃಷ್ಟತೆಯನ್ನು ಹೆಚ್ಚಿಸಲು ಉಪಯೋಗವಾಗುತ್ತದೆ.
ಪ್ರಾಣಿಗಳ ಯೋಗಕ್ಷೇಮಕ್ಕೆ ಮನ್ನಣೆ: ಪಶುಗಳಿಗಾಗಿ ಹೊಸ ಸಂತಾನೋತ್ಪತ್ತಿಯ ತಂತ್ರ ಪ್ರಾಣಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ.
ಜನ ಮನ ದನ ಧನ ಜಯ ಹೇ:
ಹೈನುಗಾರಿಕೆ ಹಾಗು ಪಶುಪಾಲನೆ ಜನರಿಗೆ ಕೇವಲ ಮನಶಾಂತಿ ಮಾತ್ರವಲ್ಲ, ಬದಲಿಗೆ ಒಳ್ಳೆಯ ಆದಾಯವನ್ನು ನೀಡಿ ಐಶಾರಾಮದ ಬದುಕನ್ನು ಸಾಗಿಸಲು ಸಾಧ್ಯವಾಗಿಸುತ್ತಿದೆ. ದನಗಳಿಂದ ಧನ ಪ್ರಾಪ್ತಿಯನ್ನು ಕೂಡ ಧಾರಾಳವಾಗಿ ಸಂಪಾದಿಸುವ ಭಾಗ್ಯ ನ್ಯೂಜಿ಼ಲ್ಯಾಂಡಿನ ಜನರದ್ದಾಗಿದೆ.
ಸರಕಾರದ ಸಹಕಾರ: ಹೈನುಗಾರಿಕೆ ಹಾಗು ಪಶುಪಾಲನೆ ಮಾಡ ಬಯಸುವ ರೈತರಿಗೆ ಅಲ್ಲಿನ ಸರಕಾರ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತದೆ. ಸಬ್ಸಿಡಿಗಳನ್ನು ಸಮರ್ಪಕವಾಗಿ ನೀಡುತ್ತದೆ.
ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ರೈತರನ್ನು ಉತ್ತೇಜಿಸಲು ನ್ಯೂಜಿಲೆಂಡ್ ಕೃಷಿ ಮಟ್ಟದ ಹೊರಸೂಸುವಿಕೆಯ ಬೆಲೆ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ. ಈ ವ್ಯವಸ್ಥೆಯು ನ್ಯೂಜಿಲೆಂಡ್ ರೈತರನ್ನು ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ನಾಯಕರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ, ಜಾಗತಿಕ ಮಾರುಕಟ್ಟೆಯಲ್ಲಿ ಅವರ ಸ್ಪರ್ಧಾತ್ಮಕ ಪ್ರಯೋಜನವನ್ನು ಹೆಚ್ಚಿಸುತ್ತದೆ.
ಸುಸ್ಥರವಾದ ಫುಡ್ ಅಂಡ್ ಫೈಬರ್ ಫ್ಯೂಚರ್ಸ್ (SFF ಫ್ಯೂಚರ್ಸ್) ನಂತಹ ಕಾರ್ಯಕ್ರಮಗಳು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸಹ-ಹೂಡಿಕೆಯನ್ನು ಒದಗಿಸುತ್ತವೆ. ಇದು ಸಂಪೂರ್ಣ ಆರ್ಥಿಕ ಹೊರೆಯನ್ನು ಹೊರದೆ ರೈತರು ಹೊಸ ತಂತ್ರಜ್ಞಾನಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ವೇನುವಾ ಹೌಮಾನು ಪ್ರೋಗ್ರಾಂ ಮತ್ತು AgriZeroNZನಂತಹ ಉಪಕ್ರಮಗಳು ಪುನರುತ್ಪಾದಕ ಕೃಷಿ ಪದ್ಧತಿಗಳನ್ನು ಅನ್ವೇಷಿಸಲು ಮತ್ತು ಹಸಿರು ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆಯಲ್ಲಿ ಹೂಡಿಕೆ ಮಾಡುತ್ತವೆ. ಈ ಸಂಶೋಧನೆಯು ರೈತರಿಗೆ ಅವರ ಅಭ್ಯಾಸಗಳನ್ನು ಸುಧಾರಿಸಲು ಅಗತ್ಯವಾದ ಜ್ಞಾನ ಮತ್ತು ಸಾಧನಗಳನ್ನು ಒದಗಿಸುತ್ತದೆ.
ಸುಸ್ಥಿರ ಅಭ್ಯಾಸಗಳು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಹೇಗೆ ಕಾರ್ಯಗತಗೊಳಿಸುವುದು ಎಂಬುದರ ಕುರಿತು ರೈತರಿಗೆ ಸಹಾಯ ಮಾಡಲು ಸರ್ಕಾರವು ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಬೆಂಬಲಿಸುತ್ತದೆ. ಇದು ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಒಳಗೊಂಡಿದೆ.
ಸಮರ್ಥನೀಯತೆಗೆ ನ್ಯೂಜಿಲೆಂಡ್‌ನ ಬದ್ಧತೆಯನ್ನು ಉತ್ತೇಜಿಸುವ ಮೂಲಕ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಗೌರವಿಸುವ ಪ್ರೀಮಿಯಂ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯಲು ಸರ್ಕಾರವು ರೈತರಿಗೆ ಸಹಾಯ ಮಾಡುತ್ತದೆ. ಇದು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆಗಳು ಮತ್ತು ಹೆಚ್ಚು ಸ್ಥಿರವಾದ ಮಾರುಕಟ್ಟೆಗಳಿಗೆ ಕಾರಣವಾಗಬಹುದು.
ಹೈನುಗಾರಿಕೆ ಮತ್ತು ಪಶುಪಾಲನೆಯಲ್ಲಿ ನೂಜ಼ಿಲ್ಯಾಂಡ್ ದೇಶವು ಮುಂಚೂಣಿಯಲ್ಲಿ ಈಗಾಗಲೇ ಇದ್ದು, ಭವಿಷ್ಯ ಕೂಡ ಬಹಳ ಭರವಸೆದಾಯಕವಾಗಿ ಕಾಣುತ್ತಿದೆ. ಸುಸ್ಥಿರ ಅಭಿವೃದ್ಧಿ, ಸುಧಾರಿತ ತಂತ್ರಜ್ಞಾನದ ಅಳವಡಿಕೆ, ಸ್ಮಾಟ್೯ ಫಾರ್ಮಿಂಗ್ ತಂತ್ರಗಳನ್ನು ನ್ಯೂಜಿ಼ಲ್ಯಾಂಡ್ ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದು, ಬರುವ ವರ್ಷಗಳಲ್ಲಿ ಜಾಗತಿಕವಾಗಿ ಕೃಷಿ ಕ್ಷೇತ್ರದಲ್ಲಿ ಈ ದೇಶ ನಾಯಕನಾಗಿ ಅಗ್ರ ಗಣ್ಯವಾಗುವುದರಲ್ಲಿ ಅನುಮಾನವಿಲ್ಲ…!