ಮಿಡಲ್ ಈಸ್ಟ್ ಈಗ ನಿಗಿ ನಿಗಿ ಕೆಂಡದಂತೆ ಆಗಿ ಹೋಗಿದೆ. ಎಲ್ಲಿ, ಯಾವಾಗ, ಏನಾಗುತ್ತದೋ ಎಂಬುದು ಊಹಿಸಲಾಗದಷ್ಟೆ ಅಪಾಯಕಾರಿ ಆಗಿದೆ. ಹಿಜ್ಬುಲ್ಲಾ-ಹಮಾಸ್- ಪಿ.ಎಲ್.ಒ-ಹೌತಿ ಉಗ್ರ ಸಂಘಟನೆಗಳು ಇಸ್ರೇಲಿನ ಮೇಲೆ ಬೆಂಕಿಯಾಗಿದ್ದಾವೆ. ಮೂರನೇ ಮಹಾಯುದ್ಧ ನಡೆಯುವ ಎಲ್ಲಾ ಲಕ್ಷಣಗಳೂ ಕೂಡ ದಟ್ಟವಾಗಿ ಗೋಚರಿಸುತ್ತಿದೆ. ಈಗಾಗಲೇ ಇಸ್ರೇಲ್ ಹಿಜ್ಬುಲ್ಲಾ ಹಾಗು ಹಮಾಸ್ ಉಗ್ರ ಸಂಘಟನೆಯ ಪ್ರಮುಖ ನಾಯಕರುಗಳನ್ನು ಗುರಿಯಾಗಿಸಿ, ಹೊಡೆದು ಹಾಕಿದೆ.
ಇರಾನ್ ನಿಂದ 400 ಕ್ಷಿಪಣಿಗಳ ದಾಳಿ:
ಸದ್ಯಕ್ಕೀಗ ಬಿಸಿ ಬಿಸಿ ಸುದ್ದಿಯೆಂದರೆ ಉಗ್ರಗಾಮಿ ಸಂಘಟನೆಯ ಕಮಾಂಡರ್ ಹಸನ್ ನಸ್ರಲ್ಲಾ ಮತ್ತು ಇರಾನ್ ನ ಇಸ್ಲಾಮಿಕ್ ರಿವಾಲ್ಯೂಷನರಿ ಗಾಡ್೯ ಕಾಪ್ಸ್೯ನ ಉನ್ನತ ಅಧಿಕಾರಿ ದಾಳಿಯಲ್ಲಿ ಇಸ್ರೇಲ್ ಫಿನಿಷ್ ಮಾಡಿದ್ದೇ ಈ ದಾಳಿಗೆ ಕಾರಣ ಎನ್ನಲಾಗಿದೆ. ಬರೊಬ್ಬರಿ 400 ಕ್ಷಿಪಣಿಗಳಿಂದ ಇರಾನ್ ಇಸ್ರೇಲಿನತ್ತ ದಾಳಿ ಮಾಡಿದೆ. ಇಸ್ರೇಲಿನ ಪ್ರಮುಖ ಕರಾವಳಿ ನಗರಗಳ ಕಡೆಗೆ ಗುರಿಯಾಗಿಸಿ, ಈ ದಾಳಿಯ ಯತ್ನ ನಡೆದಿದೆ. ಆದರೆ ಇಸ್ರೇಲ್ ಏರ್ ಡಿಫೆನ್ಸ್ ವ್ಯವಸ್ಥೆಯು ಈ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಯಾವುದೇ ಸಾವು ನೋವು ಹಾನಿ ನಡೆಯದಂತೆ ತಡೆದಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಸಹ ಇರಾನ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದೃಢಪಡಿಸಿದೆ. ಇಸ್ರೇಲ್ ಅಧ್ಯಕ್ಷರಾದ ನೆತುನ್ಯಾಹು ಅವರು ಇರಾನ್ ಕುರಿತು “ದೊಡ್ಡ ತಪ್ಪು” ಮಾಡಿದ್ದೀರಿ. “ತಕ್ಕ ಬೆಲೆ” ತೆರಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಉಗ್ರ ಸಂಘಟನೆಗಳು ಇಸ್ರೇಲ್ ವಿರುದ್ಧ ತಿರುಗಿ ಬಿದ್ದಿವೆ:
*ಹಮಾಸ್ ಉಗ್ರ ಸಂಘಟನೆ:
ಈ ಸಂಘಟನೆಯು ಗಾಜ಼ಾದ ಮೂಲವನ್ನು ಹೊಂದಿದ್ದು, ಇಸ್ರೇಲ್ ವಿರುದ್ಧ ರಾಕೆಟ್ ದಾಳಿಗಳು, ಆತ್ಮಾಹುತಿ ಬಾಂಬಿಂಗ್ ಗಳನ್ನು ಮಾಡುತ್ತಲೇ ಬರುತ್ತಿದೆ. ಹಮಾಸ್ ಉಗ್ರ ಸಂಘಟನೆಯನ್ನು 1950 ದಶಕದಲ್ಲಿ ಇಸ್ಲಾಂ ಸಹೋದರತ್ವದ ಹೆಸರಿನಲ್ಲಿ ಪ್ಯಾಲೆಸ್ಟೀನ್ ಬೆಂಬಲದೊಂದಿಗೆ ಗಾಜ಼ಾ ಪ್ರಾಂತ್ಯದಲ್ಲಿ ಆರಂಭಗೊಂಡಿತು.
ಡಿಸೆಂಬರ್ 1987ರಲ್ಲಿ ಶೇಖ್ ಆಹಮ್ಮದ್ ಯಾಸಿನ್ ನಾಯಕತ್ವದಲ್ಲಿ ಈ ಉಗ್ರ ಸಂಘಟನೆಯಂತಹ ವಿವಿಧ ವಿದ್ವಂಸಕ ಕೃತ್ಯಗಳನ್ನು ಎಸಗತೊಡಗಿತ್ತು. 2006 ಪ್ಯಾಲೆಸ್ಟೀನ್ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗೊಳಿಸಿ,ಫೀತಾ ಪಕ್ಷದ ವಿರುದ್ಧ ಅಧಿಕಾರಕ್ಕಾಗಿ ಸೆಣೆಸಿತು. 2012 ಹಾಗು 2014ರಲ್ಲಿ ಗಾಜ಼ಾ ಪಟ್ಟಿಯಲ್ಲಿ ನಿರಂತರ ಹೊಡೆದಾಡಿ, ಅಶಾಂತಿ ಹೆಚ್ಚಿತು.
*ಹಿಜ್ಬುಲ್ಲಾ ಉಗ್ರ ಸಂಘಟನೆ:
ಈ ಉಗ್ರಸಂಘಟನೆ ಲೆಬೆನಾನ್ ದೇಶದ ಶಿಯಾ ಪಂಗಡದ್ದಾಗಿದ್ದು, 1982ರಲ್ಲಿ ಒಂದು ಇಸ್ಲಾಮಿಕ್ ಮೂಲಭೂತವಾದಿ ಉಗ್ರ ಸಂಘಟನೆ ಹಾಗು ರಾಜಕೀಯ ಪಕ್ಷವಾಗಿ ಹುಟ್ಟಿಕೊಂಡಿತು. ಇದನ್ನು ಆಯತೊಲ್ಲಾ ರೊಹೊಲ್ಲಾ ಕೊಮೈನಿ ಎಂಬಾತನು ತತ್ವ ಸಿದ್ಧಾಂತಗಳನ್ನು ರೂಪಿಸಿ ರಚಿಸಿದನು.ಈ ಉಗ್ರ ಸಂಘಟನೆ ತನ್ನ ಶತ್ರು ರಾಷ್ಟ್ರಗಳಾದ ಇಸ್ರೇಲ್ ಅಮೇರಿಕಾ ಹಾಗು ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಸಮರ ಸಾರಲೆಂದೇ ಸದಾ ಸಿದ್ಧವಿರುತ್ತದೆ. ಇಸ್ಲಾಂ ದೇಶಗಳಾದ ಸಿರಿಯಾ, ಇರಾಕ್ ಹಾಗು ಯಮನ್ ನಲ್ಲಿ ಹಿಜ್ಬುಲ್ಲಾ ತನ್ನ ಉಗ್ರವಾದದ ಕರಾಳ ಕಬಂದವನ್ನು ಚಾಚಿಕೊಂಡಿದೆ. ಇಸ್ರೇಲ್ ಮೇಲಿನ ದಾಳಿಗಳ ಹಿಂದೆ ಹಾಗು ಸಿರಿಯಾದಲ್ಲಿ ನಡೆಯುತ್ತಿರುವ ಆಂತರಿಕ ಕಲಹದಲ್ಲಿ ಹಿಜ್ಬುಲ್ಲಾದ ಕೈವಾಡವಿದೆ. ಪ್ರಸ್ತುತ ಇಸ್ರೇಲ್ ಹಿಜ್ಬುಲ್ಲಾ ಸಂಘಟನೆ ಮೇಲೆ ನೇರ ಯುದ್ಧ ಸಾರಿದ್ದು, ಇಸ್ರೇಲ್ ಈಗ ಅದನ್ನು ಸಮರ್ಥವಾಗಿ ಎದುರಿಸಿ, ಪ್ರಮುಖ ಹಿಜ್ಬುಲ್ಲಾ ಉಗ್ರ ನಾಯಕರನ್ನು ಹೊಡೆದು ಹಾಕಿದೆ. ಇದರ ಒಂದು ಭಾಗ ಪ್ಯಾಲೆಸ್ಟೀನ್ ಇಸ್ಲಾಮಿಕ್ ಜಿಹಾದಿಗಾಗಿ ಇಸ್ರೇಲಿಗೆ ನಿರಂತರ ಉಪಟಳ ನೀಡುತ್ತಿದ್ದರೆ, ಮತ್ತೊಂದು ಭಾಗ ಗಾಜ಼ಾದಲ್ಲಿ ಭಯೋತ್ಪಾದನೆ ಮಾಡುತ್ತಿದೆ.
*ಪ್ಯಾಲೆಸ್ಟೀನ್ ಲಿಬರೇಷನ್ ಆರ್ಗನೈಜೇಷನ್:
1964ರಲ್ಲಿ ಇಸ್ರೇಲಿನ ನಾಶ ಮಾಡಲೆಂದೇ ಮತ್ತು ಪ್ಯಾಲೆಸ್ಟೀನ್ ಅನ್ನು ಸಂಪೂರ್ಣ ವಶ ಪಡಿಸಿಕೊಂಡು ಸ್ವಾತಂತ್ರ್ಯ ಮಾಡಲೆಂದೇ ಈ ಸಂಘಟನೆ ಹುಟ್ಟಿಕೊಂಡಿತು. ಸ್ವಾತಂತ್ರ್ಯ ಮತ್ತು ಕ್ರಾಂತಿಯ ಹೆಸರಿನಲ್ಲಿ ಅಮಾಯಕ ಜನರ ರಕ್ತ ಹರಿಸುವ ಕ್ರೌರ್ಯವನ್ನು ಮೆರೆಯುತ್ತಾ ಬಂದಿದೆ.
*ಹೌತೀಸ್ ಉಗ್ರ ಸಂಘಟನೆ:
1990ರ ದಶಕದಲ್ಲಿ ಈ ಉಗ್ರ ಸಂಘಟನೆ ಶುರುವಾಗಿತ್ತಾದರೂ, ಮುಖ್ಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು, ಯೆಮನ್ ದೇಶದ ರಾಜಧಾನಿಯಾದ ಸನಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ನಂತರವೇ…
ಈ ಉಗ್ರ ಸಂಘಟನೆಯು ಜೈದಿ ಶಿಯಾ ಪಂಗಡದ ಮುಸ್ಲಿಮರದ್ದಾಗಿದ್ದು, ಯೆಮನ್ ಅಲ್ಲಿ ಆಂತರಿಕ ಯುದ್ಧ ಈಗ ನಡೆಯುತ್ತಿರಲು ನೇರ ಹೊಣೆಯಾಗಿದೆ. ಇರಾನ್ ಬೆಂಬಲದೊಂದಿಗೆ ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಹಾಗು ಸೌದಿ ಅರೆಬಿಯಾದ ವಿರುದ್ಧ ಸದಾ ಸೆಣೆಸಲು ಹಪಹಪಿಸುತ್ತಿರುತ್ತದೆ. ಹಮಾಸ್ ಉಗ್ರರಿಗೆ ಇದು ಬೆಂಬಲ ನೀಡುತ್ತಾ ಭಯ ಉತ್ಫಾದನೆಯ ಕುಕೃತ್ಯದಲ್ಲಿ ನಿರತವಾಗಿರುತ್ತದೆ.
ಇಸ್ರೇಲ್ ಎಂದರೆ “ಬೆಂಕಿಯಲ್ಲಿ ಅರಳಿದ ಹೂ”!
ಯಹೂದಿಗಳು ಪ್ರಪಂಚದಲ್ಲೇ ಸರಿಯಾದ ನೆಲೆ ಇಲ್ಲದೆ ನಿರ್ಗತಿಕರಾಗಿ ಸಂಕಷ್ಟದಲ್ಲೇ ತಮ್ಮ ಜನಾಂಗವನ್ನು ಉಳಿಸಿಕೊಂಡವರು.
19ನೇ ಶತಮಾನದ ಕೊನೆ ಹಾಗು 20ನೇ ಶತಮಾನದ ಪೂರ್ವ ಭಾಗದಲ್ಲಿ ಜ಼ಿಯೋನಿಷ್ಟ್ ಚಳುವಳಿಯು ತೀವ್ರಗೊಂಡಿತು. ನಿರ್ಗತಿಕ ಯಹೂದಿಗಳಿಗೆ ಸ್ವಂತದ್ದೊಂದು ತಾಯ್ನಾಡು ಪ್ಯಾಲೆಸ್ಟೀನ್ ಭಾಗದಲ್ಲಿ ರಚಿಸುವುದೇ ಇದರ ಮುಖ್ಯ ಗುರಿಯಾಗಿತ್ತು. ಯುರೋಪಿನಲ್ಲಿ ಅಷ್ಟೊತ್ತಿಗಾಗಲೇ ಯಹೂದಿಗಳ ನಿರ್ದಯವಾದ ನರಮೇಧ ನಡೆದಿದ್ದರಿಂದ ಈ ಚಳುವಳಿ ತೀವ್ರ ಗತಿಯನ್ನು ಪಡೆಯಿತು. 1917ರಲ್ಲಿ ಬ್ರಿಟೀಷ್ ಸರಕಾರವು ಬಾಲ್ಫೋರ್ ಘೋಷಣೆ ಮಾಡಿ, ಯಹೂದಿಗಳ ಸ್ವತಂತ್ರ್ಯ ರಾಷ್ಟ್ರದ ಸ್ಥಾಪನೆಯ ವಿಚಾರಕ್ಕೆ ಬೆಂಬಲ ನೀಡಿತು. ಪ್ಯಾಲೆಸ್ಟೀನ್ ಅನ್ನು ವಿಭಜಿಸುವ ವಿಚಾರ ಮುನ್ನಲೆಗೆ ಬಂದಿತು. ಮೇ 14,1948ರಲ್ಲಿ ಡೇವಿಡ್ ಬೆನ್ ಗುರಿಯನ್ ಅವರು ಇಸ್ರೇಲ್ ಎಂಬ ಹೊಸ ರಾಷ್ಟ್ರದ ಉದಯವಾದ ಘೋಷಣೆಯನ್ನು ಮಾಡಿದರು. ಅರಬ್ ರಾಷ್ಟ್ರಗಳ ಮೂಲಭೂತವಾದಿ ಮನಸ್ಥಿತಿ ಹಾಗು ಅಸಹಿಷ್ಣತೆ ಎಷ್ಟಿತ್ತೆಂದರೆ ಅದೇ ವರ್ಷ ಇಸ್ರೇಲ್ ವಿರುದ್ಧ ಯುದ್ಧಕ್ಕೆ ಇಳಿದವು.
ಇಸ್ರೇಲ್ ಸ್ವತಂತ್ರ ದೇಶವಾದ ನಂತರ 1967ರಲ್ಲಿ ‘ಸಿಕ್ಸ್ ಡೇ ವಾರ್’ ಹಾಗು 1973ರಲ್ಲಿ ‘ಯೋಮ್ ಕಿಪ್ಪೂರ್ ಯುದ್ಧ’ ಸಂಭವಿಸಿದವು. 2014ರಲ್ಲಿ ನರರೂಪಿ ರಾಕ್ಷಸರು ಐ.ಎಸ್.ಐ.ಎಸ್ ಉಗ್ರರು ಯಹೂದಿಗಳ ಮಾರಣ ಹೋಮವನ್ನೇ ನಡೆಸಿತ್ತು.
ಇಸ್ರೇಲ್ ಕಂಡರೆ ನೆರೆ ರಾಷ್ಟ್ರಗಳಿಗೆ ಉರಿಯೋದು ಯಾಕೆ?!
ಇರಾನ್: 1979ರ ಈಚೆಗೆ ಇರಾನ್ ದೇಶದಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್- ಇಸ್ರೇಲ್ ನಡುವಣ ಬಿಗುವಿನ ವಾತಾವರಣ ಸೃಷ್ಟಿಯಾಗುತ್ತಾ ವಿಷಮವಾಗುತ್ತಾ ಹೋಯಿತು. ಇರಾನ್ ಅಲ್ಲಿ ಹೊಸ ಅಧಿಕಾರಿಶಾಹಿ ಆಡಳಿತ ಶಕ್ತಿಯು ಇಸ್ರೇಲಿನ ಅಸ್ತಿತ್ವವನ್ನೇ ಇಲ್ಲದಾಗಿಸಲು ಕಾತುರವಾಗಿತ್ತು.
ಈಗಲೂ ಸಹ ಅದಕ್ಕಾಗಿಯೇ ಲೆಬೆನಾನ್ ನ ಉಗ್ರ ಸಂಘಟನೆಯಾದ ಹಿಜ್ಬುಲ್ಲಾ ಹಾಗು ಪ್ಯಾಲೆಸ್ಟೀನ್ ಉಗ್ರ ಸಂಘಟನೆಯಾದ ಹಮಾಸ್ ಎರಡನ್ನೂ ಪೋಷಿಸುತ್ತಲೇ ಇದೆ.
ಲೆಬೆನಾನ್: 1982ರಲ್ಲಿ ಇಸ್ರೇಲ್ ನಡೆಸಿದ ದಾಳಿ ಹಾಗು ಲೆಬೆನಾನ್ ಸೈನ್ಯದಲ್ಲಿ ಪ್ಯಾಲೆಸ್ಟೀನಿಯರು ಇರುವ ಕಾರಣ ವೈಮನಸ್ಯ ಹೆಚ್ಚಾಗುತ್ತಲೇ ಹೋಯಿತು. 2006ರ ಹೊತ್ತಿಗೆಲ್ಲಾ ಪರಸ್ಪರ ದ್ವೇಷ ದುಪ್ಪಟ್ಟಾಯಿತು. ಲೆಬೆನಾನಿನ ಹಿಜ್ಬುಲ್ಲಾ ಉಗ್ರ ಸಂಘಟನೆಯು ಭಯೋತ್ಪಾದನಾ ಕೃತ್ಯಗಳಿಗೆ ಕಾರಣವಾಗಿ ಅಶಾಂತಿ ಉಂಟು ಮಾಡುತ್ತಲೇ ಇರುತ್ತದೆ. ಈಗಲೂ ಕೂಡ ಹಾಗೆ ಮಾಡುತ್ತಿದೆ.
ಸಿರಿಯಾ: ಗಡಿರೇಖೆ ವಿವಾದದ ವಿಚಾರವಾಗಿ ಸಿರಿಯಾ ಹಾಗು ಇಸ್ರೇಲ್ ಹಲವಾರು ಬಾರಿ ಯುದ್ಧ ನಡೆಸಿದೆ. 1948, 1967 ಹಾಗು 1973ರಲ್ಲಿಗಂಭೀರವಾದ ಯುದ್ಧಗಳು ಎರಡೂ ರಾಷ್ಟ್ರಗಳ ನಡುವೆ ನಡೆದಿತ್ತು.
ಪ್ಯಾಲೆಸ್ಟೀನ್: 20ನೇ ಶತಮಾನದಲ್ಲಿ ಶುರುವಾದ ಪ್ಯಾಲೆಸ್ಟೀನ್ – ಇಸ್ರೇಲ್ ಸಂಘರ್ಷ ಮುಗಿಯದ ಅಧ್ಯಾಯದಂತೆ ನಡೆಯುತ್ತಲೇ ಇದೆ. 1948, 1967ರಲ್ಲಿ ಹಾಗು ಇನ್ನೂ ಕೆಲವು ವರ್ಷಗಳಲ್ಲಿ ಸಂಘರ್ಷವು ತೀವ್ರವಾಯಿತು.
ಟರ್ಕಿ: 2000’s ದಶಕದಲ್ಲಿ ರ್ಟಿಕಿ ಹಾಗು ಇಸ್ರೇಲ್ ಸಂಬಂಧವು ಅಷ್ಟೇನು ಹಳಸಿರಲಿಲ್ಲ. 2010ದಲ್ಲಿ ಗಾಜ಼ಾದಲ್ಲಿ ನಡೆದ ಲಘು ನೌಕಾವ್ಯೂಹವು ಪರಸ್ಪರ ಇಸ್ರೇಲ್-ಟರ್ಕಿ ದ್ವೇಷವನ್ನು ಉಲ್ಬಣಿಸಿತು.
ಇರಾಕ್: ಈ ದೇಶವು ಇಸ್ರೇಲ್ ವಿರುದ್ಧ1948, 1967 ಹಾಗು 1973ರಲ್ಲಿ ಯುದ್ಧ ನಡಿಸಿತ್ತು. ನಂತರ ಇತ್ತೀಚೆಗಂತೂ ಅದಕ್ಕೆ ಯುದ್ಧದಿಂದ ಆದ ನಷ್ಟಗಳಿಂದಾಗಿ ಯಾವುದೇ ತಂಟೆ ತಕರಾರಿಗೆ ಹೋಗುತ್ತಿಲ್ಲ.
ಭೂ-ರಾಜಕೀಯ ಲೆಕ್ಕಾಚಾಗಳು,ಧಾರ್ಮಿಕ ಅಸಮಾಧಾನ, ಗಡರೇಖೆಯ ಕಿರಿಕ್ಕುಗಳು ಈ ಯುದ್ಧಗ್ರಸ್ಥತೆಯ ಪರಿಸ್ಥಿತಿ ಎದುರಾಗಿದೆ.
ಹಿಜ್ಬುಲ್ಲಾದ ಪ್ರಮುಖ ನಾಯಕರುಗಳು ಇಸ್ರೇಲ್ ನಿಂದ ಹತರಾದ ಬಗ್ಗೆ ಮಾಹಿತಿ:
ಜನವರಿ2024- ಅಲಿ ಹುಸೇನ್ ಬುರ್ಜಿ, ವಿಸ್ಸಿಮ್ ಹಸ್ಸನ್ ಅಲ್ ಟವಿಲ್.
ಫೆಬ್ರವರಿ2024- ಅಲಿ ಮೊಹಮ್ಮದ್ ಅಲ್ ಡೇಬ್ಸ್.
ಮಾಚ್೯2024- ಖಾಸ್ಸೆಮ್ ಸಖ್ಲಾವಿ, ಅಲಿ ಅಬಿಡ್ ಅಕ್ಸಾನ್ ನಯಿಮ್, ಇಸ್ಮಾಯಿಲ್ ಅಲ್ ಜಿನ್
ಏಪ್ರಿಲ್2024-ಅಲಿ ಅಹಮದ್ ಹಸ್ಸಿನ್, ಇಸ್ಮಾಯಿಲ್ ಯೂನೆಫ್ ಬಾಜ್,ಹೊಸ್ಸೇನ್ ಮುತ್ಸಾಫ಼ಾ ಶಾವ್ಲಿ, ಮಹಮ್ಮದ್ ಅತ್ತಿಯ
ಮೇ2024- ಹುಸ್ಸೇನ್ ಮಖ್ಖಿ
ಜೂನ್2024:ಸಮಿ ತಲೇಬ್ ಅಬ್ದುಲ್ಲಾ, ಅಬ್ಬಾಸ್ ಹಂಸ ಹಮಾಡ
ಜುಲೈ2024: ಮೊಹಮ್ಮದ್ ನಾಮೆಹ್ ನಾಸ್ಸಿರ್, ಮುಸ್ತಫಾ಼ ಸಲ್ಮಾನ್, ಫೌದ್ ಶುಕೃ
ಆಗಸ್ಟ್2024: ಅಲಿ ನಜಿ಼ ಆಬೆಡ್ ಅಲಿ, ಅಲಿ ಜಮಲ್ ಅಲ್ ದಿಲ್ ಜವಾದ್, ಇಬ್ರಾಹಿಂ ಜಮಿಲ್ ಅಲ್ ಆಶಿ, ಫಡಿ ಮುಹಮ್ಮದ್ ಶಿಹಾಬ್, ಹುಸ್ಸೇನ್ ಇಬ್ರಾಹಿಂ ಕಸಬ್.
ಸೆಪ್ಟೆಂಬರ್2024: ಇಬ್ರಾಹಿಂ ಅಖ್ಖಲ್
ಇಸ್ರೇಲ್ ಕಾರ್ಯಾಚರಣೆಯಿಂದ ಫಿನಿಷ್ ಮಾಡಿದ ಹಮಾಸ್ ಉಗ್ರ ಸಂಘಟನೆಯ ನಾಯಕರ ಪಟ್ಟಿಯನ್ನೊಮ್ಮೆ ಗಮನಿಸುವುದಾದರೆ:
ಆಕ್ಟೋಬರ್2023: ಆಯ್ಮನ್ ನೋಫಲ್, ಜಮೀಲಾ ಅಲ್ ಶಾಂತಿ, ಇಬ್ರಾಹಿಂ ಬಿಯಾರಿ
ನವೆಂಬರ್2023: ಕಲೀಲ್ ಖರಾಜ್
ಡಿಸೆಂಬರ್2023: ಸಲೇಹ್ ಅಲ್ ಅರೋವ್ರಿ
ಮಾಚ್೯2024: ಮಾವೀನ್ ಇಸ್ಸಾ
ಜುಲೈ2024: ಮೊಹಮ್ಮದ್ ಡಿ.ಇಫ್, ಇಸ್ಮಾಯಿಲ್ ಹನಿಯಾ
ಆಗಸ್ಟ್ 2024: ಜಬೇರ್ ಅಜ಼ೀಜ್, ಅಬ್ ಡೇಲ್ ಫತಾಹ್ ಅಲ್ ಜೆ಼ರಿರೇಯ್, ಸಮೀರ್ ಮೊಹಮ್ಮದ್ ಅಲ್ ಹಜ್, ಯೂಸ್ಸೆಫ್ ಅಲ್ ಕಹಲೋಟ್, ಅಹಮ್ಮದ್ ಅಬು ಆರ, ಅಂಗದ್ ಯೆಮಿನಿ, ರಾಫತ್ ದವಾಸಿ, ವಾಸ್ಸೆಮ್ ಹಜ಼ೆಮ್, ಅಹಮ್ಮದ್ ಫೌಜಿ಼ ನಾಜೆ಼ರ್ ಮಹಮ್ಮದ್ ವಾಡಿಯ್ಯ.
ಸೆಪ್ಟೆಂಬರ್2024: ಒಸಾಮಾ ತಬೇಶ್, ಸಮೀರ್ ಅಬುದಕ್ವಾ
ಇತ್ತೀಚೆಗೆ ಹಿಜ್ಬುಲ್ಲಾದ ನಾಯಕರಾದ ಹಸ್ಸನ್ ನಸ್ರಲ್ಲಾ, ನಬಿಲ್ ಕವೋಕ್ ಹತ್ಯೆ ಕೂಡ ಇಸ್ರೇಲ್ ವೈರಿಗಳಲ್ಲಿ ನಡುಕ ಹುಟ್ಟಿಸಿದೆ.
ಒಟ್ಟಿನಲ್ಲಿ,
“ನನ್ನನ್ನು ಬಂಧಿಸಿದರೆ ಅದು ತಪ್ಪಸ್ಸು,
ಬೆನ್ನತ್ತಿದರೆ ಅದು ಪವಿತ್ರ ಯಾತ್ರೆ,
ಕೊಂದು ಹಾಕಿದರೆ ಅದು ನನ್ನ ವೀರ ಮರಣ: ನಾನು ಜಿಹಾದಿ!”
-(ನೀನಾ ಪಾಕಿಸ್ತಾನ ಪುಸ್ತಕ, ರವಿ ಬೆಳಗೆರೆ)
ಎಂದು ಮೂಢನಂತೆ, ಶುದ್ಧ ಮತಾಂಧನಂತೆ ನಂಬಿ, ಆ ನಂಬಿಕೆಗಾಗಿ ಬೇರೆಯವರ ಪ್ರಾಣ ಮತ್ತು ತನ್ನ ಪ್ರಾಣವನ್ನು ತೆಗೆಯಲು ಸಹ ಹೇಸದವನು ಒಬ್ಬ ಉಗ್ರಗಾಮಿ. ಬದುಕಿನ ಸೌಂದರ್ಯವನ್ನೇ ನೋಡುವ ಒಳಗಣ್ಣನ್ನೇ ಕಳೆದುಕೊಂಡ ನತದೃಷ್ಟನಾತ ಅಂಧನಾತ. ಹಾಗಾಗಿ ಅವನ ಬದುಕಿಗೆ ಅರ್ಥವಿಲ್ಲ, ಅಂದವಿಲ್ಲ. ಅವನ ಸಾವು ಲೋಕಕ್ಕೇ ಲೇಸು. ಹಾಗಾಗಿ ಅವನ ಧಮನವೇ ಶಾಂತಿಗಾಗಿ ಮಾಡುವ ಕ್ರೂರತೆಯ ಕ್ಷಮನ…!