2012ರಲ್ಲಿ ಕೇಂದ್ರದ ಯುಪಿಎ ಸರಕಾರ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆಂದು ಪ್ರಸಿದ್ಧ ಮಾಜಿ ಇಸ್ರೋ ಅಧ್ಯಕ್ಷರಾಗಿದ್ದ ಡಾ.ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಒಂದು ವರದಿ ಸಲ್ಲಿಸಲು ಸಮಿತಿ ರಚಿಸಿತು. ಅದು ವರದಿ ಸಲ್ಲಿಸಿತ್ತಾದರೂ, ಅದರ ಅನುಷ್ಠಾನ ವಿವಾದದ, ವಿರೋಧದ, ಆಕ್ರೋಶದ ಕೇಂದ್ರ ಬಿಂದುವಾಗಿತ್ತು ರಾಜ್ಯದ ಪಶ್ಚಿಮ ಘಟ್ಟದ ಭಾಗದಲ್ಲಿ…!


ಕರ್ನಾಟಕ ಸರ್ಕಾರವು ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಇತ್ತೀಚಿನ ತಿಂಗಳುಗಳಲ್ಲಿ ಪರಿಶೀಲಿಸುವುದಾಗಿ ರಾಜ್ಯ ಸರಕಾರ‌ ತಿಳಿಸಿತ್ತು. ಈ ಪಶ್ಚಿಮ ಘಟ್ಟಗಳ ರಕ್ಷಣೆಯ ಸಲುವಾಗಿ ಮಂಡಿಸಲಾಗಿದ್ದ ವೈಜ್ಞಾನಿಕ ಎನಿಸಿದರೂ ಮಾನವನ ದಿನನಿತ್ಯದ ಜೀವನಕ್ಕೆ ತೀರ ನಿಷ್ಠೂರ ಹಾಗು ವ್ಯತಿರಿಕ್ತ ವರದಿಯನ್ನು ಈಗ ರಾಜ್ಯ ಸರಕಾರ ತಿರಸ್ಕರಿಸಿದೆ ಎಂದು ಗುರುವಾರ ನಡೆದ ಸಂಪುಟ ಸಭೆಯ ನಂತರ ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ಕಸ್ತೂರಿರಂಗನ್ ಸಮಿತಿಯ ವರದಿಯು ಪಶ್ಚಿಮ ಘಟ್ಟಗಳ ಒಟ್ಟು ವಿಸ್ತೀರ್ಣದ ಶೇಕಡ 37 ರಷ್ಟು ಅಂದರೆ ಸರಿಸುಮಾರು 60,000 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಪ್ರಸ್ತಾಪಿಸಿತ್ತು. ಈ ಪೈಕಿ 20,668 ಚದರ ಕಿ.ಮೀ ಪ್ರದೇಶವು 1,500 ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿರುವ ಕರ್ನಾಟಕದಲ್ಲಿ ಬರುತ್ತಿತ್ತು.

ಹಾಗಾಗಿ ರಾಜ್ಯದಲ್ಲಿ ಈ ವರದಿಯ ಅನುಷ್ಠಾನಕ್ಕೆ ಜನ ಸಾಮಾನ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಭೂಪಟದಲ್ಲಿ ಅಧ್ಯಯನ ನಡೆಸಿ, ಒಂದು ವರದಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಜನರ ಕಷ್ಟ ಕಾರ್ಪಣ್ಯಗಳನ್ನು ಕಡೆಗಣಿಸಿ ಪರಿಸರ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದ ಈ ವರದಿ ಜಾರಿ ಕಷ್ಟ ಸಾಧ್ಯವೇ ಆಗಿತ್ತು. ಈಗ ಅದಕ್ಕೆ ಕಾಂಗ್ರೆಸ್ ರಾಜ್ಯ ಸರಕಾರ ಎಳ್ಳು ನೀರು ಬಿಟ್ಟಿದೆ.

ಪರಿಸರ ಸೂಕ್ಷ್ಮ ಪ್ರದೇಶ: ಕಸ್ತೂರಿ ರಂಗನ್ ವರದಿಯು ಪಶ್ಚಿಮ ಘಟ್ಟಗಳ 37% ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿ ಅಲ್ಲಿ ಮಾನವ ಚಟುವಟಿಕೆಗಳಿಗೆ ಕಡಿವಾಣ ಹಾಗು ನಿರ್ಬಂಧ ಹಾಕುವಂತೆ ಸೂಚಿಸಿತ್ತು. ಆ ಇಲ್ಲಿ ವನ್ಯ ಜೀವಿಗಳ ವೈವಿಧ್ಯತೆಯನ್ನು ಕಾಪಾಡಲು ಹಾಗು ಸುಸ್ಥಿರ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ಶಿಫಾರಸ್ಸು ಮಾಡಿತ್ತು.

ಪರಿಸರ ರಕ್ಷಣೆಗೆ ಒತ್ತು: ಈ ವರದಿಯ ಶಿಫಾರಸ್ಸುಗಳು ಎಲ್ಲಾ ವಿಧವಾದ ಪರಿಸರಕ್ಕೆ ಹಾನಿ ಎಂದೆನಿಸಬಲ್ಲ ಮಾನವನ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲು ಶಿಫಾರಸ್ಸು ಮಾಡಿತ್ತು. ಬೃಹತ್ ಕಟ್ಟಡಗಳ ನಿರ್ಮಾಣ ಮಾಡುವಂತಿಲ್ಲ, ಗಣಿಗಾರಿಕೆ ಹಾಗು ಕ್ವಾರೆಯ ಚಟುವಟಿಕೆ ನಡೆಸುವಂತಿಲ್ಲ ಎಂಬ ಬಗ್ಗೆ ತೀರಾ ನಿಷ್ಠೂರ ಷರತ್ತುಗಳನ್ನು ಒಳಗೊಂಡಿತ್ತು.

ಡೇಟಾ-ಚಾಲಿತ ಶಿಫಾರಸುಗಳು: ವರದಿಯು ವ್ಯಾಪಕವಾದ ವೈಜ್ಞಾನಿಕ ಸಂಶೋಧನೆ ಮತ್ತು ಉಪಗ್ರಹ ಚಿತ್ರಣವನ್ನು ಆಧರಿಸಿತ್ತು, ಅದರ ಶಿಫಾರಸುಗಳಿಗೆ ದೃಢವಾದ ಅಡಿಪಾಯವನ್ನು ಒದಗಿಸುತ್ತಿತ್ತು. ಈ ವೈಜ್ಞಾನಿಕ ಆಧಾರವು ಪ್ರಸ್ತಾವಿತ ಕ್ರಮಗಳಿಗೆ ವಿಶ್ವಾಸಾರ್ಹತೆಯನ್ನು ನೀಡುತ್ತಿತ್ತು. ಮತ್ತು ಸಾಕ್ಷ್ಯಾಧಾರಿತ ನೀತಿ-ನಿರ್ಮಾಣದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿತ್ತು.

ಸಂರಕ್ಷಣೆಗೆ ಮಾರ್ಗದರ್ಶಿ ನೀತಿ: ಪರಿಸರದ ಸಂರಕ್ಷಣೆಗೆ ಮಾರ್ಗದರ್ಶಿ ನೀತಿಗಳನ್ನು ಈ ವರದಿ ಹಾಕಿಕೊಡಲು ಯಶಸ್ವಿ ಆಗುತ್ತಿತ್ತು. ಇದು ರಾಷ್ಟ್ರ ಹಾಗು ರಾಜ್ಯದ ಪರಿಸರ ಸಂರಕ್ಷಕ ನೀತಿಗಳನ್ನು ಅನುಷ್ಠಾನಕ್ಕೆ ಬಂದಿದ್ದರೆ ಬಹುಶಃ ಬಹುವಾಗಿ‌ ಪ್ರಭಾವಿಸುತ್ತಿತ್ತು.

ಯುನೆಸ್ಕೋದ ವಲ್ಡ್ ಹೆರಿಟೇಜ್ ಸೈಟ್: ಪಶ್ಚಿಮ ಘಟ್ಟದ ಪ್ರದೇಶಗಳನ್ನು ಯುನೆಸ್ಕೋ ವಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಿದೆ. ಆದ್ದರಿಂದ ಅದರ ರಕ್ಷಣೆಯನ್ನು ಈ ವರದಿ ಪ್ರತಿಪಾದಿಸುತ್ತಿದ್ದರಿಂದ ಇದು ಜಾಗತಿಕ ಪ್ರಾಕೃತಿಕ ಸಂರಕ್ಷಣೆಯನ್ನು ಎತ್ತಿ ಹಿಡಿಯುವಂತಿತ್ತು.

ಇವೆಲ್ಲಾ ಕಸ್ತೂರಿ ರಂಗನ್ ವರದಿಯ ಸಕಾರಾತ್ಮಕ ಅಂಶಗಳಾದರೆ, ಹಲವಷ್ಟು ನಕಾರಾತ್ಮಕ ಅಂಶಗಳು ಇದ್ದವು. ಹಾಗಾಗಿ ಇದು ಜನಸಾಮಾನ್ಯರ ತೀವ್ರ ವಿರೋಧಕ್ಕೆ ಗುರಿಯಾಗಿ ಆಕ್ರೋಶಕ್ಕೆ ಕಾರಣವಾಗಿತ್ತು. ಆ ನಕಾರಾತ್ಮಕ ಅಂಶಗಳ ಕುರಿತು ಬೆಳಕು ಚೆಲ್ಲುವುದಾದರೆ ಅವು ಇಂತಿವೆ:

ಕಾರ್ಯರೂಪ ಕಠಿಣಾತಿ ಕಠಿಣ:
ಈ ವರದಿಯು 37% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ, ಅಲ್ಲಿ ಮಾನವನ ಕೈವಾಡದ ಕಾರುಬಾರುಗಳನ್ನು ನಿಲ್ಲಿಸಬೇಕು ಎಂದು ವಾದಿಸುತ್ತಿದ್ದುದು  ಕಾರ್ಯರೂಪಕ್ಕೆ ತರಲು ತೀರಾ ಕಷ್ಟ ಸಾಧ್ಯವಾದಂತಹ ವಿಚಾರವಾಗಿತ್ತು.

ನಿರುದ್ಯೋಗ ಹಾಗು ಆದಾಯ ನಷ್ಟದ ಭಯ:
ವರದಿ ಅನುಷ್ಠಾನವು ಗಣಿಗಾರಿಕೆ ಹಾಗು ಕ್ವಾರಿ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಬೃಹತ್ ಕಟ್ಟಡಗಳ ನಿರ್ಮಾಣಕ್ಕೂ ನಿರ್ಬಂಧ ಹೇರುತ್ತಿತ್ತು ಎಂಬ ಅಂಶ ಜನಸಾಮಾನ್ಯರಲ್ಲಿ ಉದ್ಯೋಗ ಕಳೆದುಕೊಳ್ಳುವ ಮತ್ತು ಆದಾಯ ನಷ್ಟವಾಗುವ ಭಯವನ್ನು ಉಂಟು ಮಾಡಿತ್ತು. ದಿನ ನಿತ್ಯದ ಜೀವನಕ್ಕೆ ತೊಂದರೆ ಉಂಟಾಗುವ ಸಂಭವಗಳು ತುಂಬಾ ದಟ್ಟವಾಗಿ ಇತ್ತು.

ಅಭಿವೃದ್ಧಿಗೆ ಅಡಚಣೆ: ತೀರಾ ಮಾನವ ಚಟುವಟಿಕೆಗಳಿವೆ ಕಡಿವಾಣ ಹಾಕಲಿದ್ದ ಈ ವರದಿಯ ಅನುಷ್ಠಾನಕ್ಕೆ ಜನಪ್ರತಿನಿಧಿ ಹಾಗು ಸ್ಥಳೀಯ ನಾಯಕರಿಂದಲೂ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ವರದಿಯು ಅಭಿವೃದ್ಧಿಯ ಕಾರ್ಯಗಳಿಗೆ ಬಹಳ ಹಿನ್ನಡೆಯನ್ನು ಉಂಟು ಮಾಡುವ ಆತಂಕ ಸೃಷ್ಟಿಸಿತ್ತು.

ಶಕ್ತಿಗಳ ಹಾಗು ಅಭಿವೃದ್ಧಿ ಅಗತ್ಯತೆಗಳು ಅನಿವಾರ್ಯ:
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಈ ವರದಿ ಜಾರಿಗೆ ಬಂದಿದ್ದರೆ, ಬರೊಬ್ಬರಿ ಆರು ರಾಜ್ಯಗಳ ಅಭಿವೃದ್ಧಿ ಕುಂಟಿತವಾಗಿ ಅಗತ್ಯ ಶಕ್ತಿಗಳ ಪೂರೈಕೆಗೆ ತೊಂದರೆ ಉಂಟು ಮಾಡುತ್ತಿತ್ತು. ಆರ್ಥಿಕ ಪ್ರಗತಿಗೆ ಅಗತ್ಯವಿರುವ ಚಟುವಟಿಕೆಗಳಿಗೆ ನಿಯಂತ್ರಣ ಹೇರುವುದು ಈ ವರದಿಯ ಮೇಜರ್ ಮೈನಸ್ ಪಾಯಿಂಟ್ ಆಗಿತ್ತು.

ಸ್ಥಳೀಯರ ಕುರಿತು ನಿರ್ಲಕ್ಷ ಧೋರಣೆ: ಪಶ್ಚಿಮ ಘಟ್ಟಗಳ ಅಂದರೆ ಮಲೆನಾಡಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿಯ ಸಮಂಜಸ ಅಂಶಗಳನ್ನು ಈ ವರದಿ ಒಳಗೊಳ್ಳದೆ ಕೇವಲ ಪರಿಸರ ಸಂರಕ್ಷಣೆಗೆ ಮಾತ್ರವೇ ಒತ್ತು ನೀಡಿದ್ದು ದೊಡ್ಡ ದೋಷದಂತೆ ಕಂಡಿತು. ಸ್ಥಳೀಯ ಜನರ ಅಭಿಪ್ರಾಯ, ಸಲಹೆಗಳಿಗೆ ಪ್ರಾಶಸ್ತ್ಯವೇ ನೀಡದೆ  ಮಾನವರ ಚಟುವಟಿಕೆಗಳ ಮೇಲೆ ಅದು ಕೂಡ ಕೃಷಿಗೂ ಸೇರಿದಂತೆ ಕೇವಲ ನಿರ್ಬಂಧ ಹಾಗು ಕಡಿವಾಣಗಳ ಬಗ್ಗೆ ಮಾತ್ರವೇ ಒತ್ತು ನೀಡಿದ್ದು, ದೊಡ್ಡ ವಿರೋಧಕ್ಕೆ ಕಾರಣವಾಯಿತು.
ಜನರ ಹಿತಾಸಕ್ತಿಯನ್ನು ಕೊಂಚವೂ ಕಾಪಾಡದೆ ಪ್ರಾಕೃತಿಕ ಉಳಿವಿಗೆ ನೇರ-ನಿಷ್ಠೂರ, ಕಠಿಣ-ಕಠೋರ ಅಂಶಗಳನ್ನು ಸೂಚಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು.

ರಾಜಕೀಯ ಪ್ರತಿರೋಧ: ಮಲೆನಾಡಿನ  ಜನಸಾಮಾನ್ಯರು, ಸ್ಥಳೀಯರು ಕಸ್ತೂರಿ ರಂಗನ್ ವರದಿಯ ಜಾರಿಗೆ ಬಹಳ ವಿರೋಧ ವ್ಯಕ್ತಪಡಿಸುತ್ತಿದ್ದರು. ಅದಕ್ಕೂ ಕ್ಯಾರೆ ಎನ್ನದೆ ಜಾರಿಗೆ ತಂದರೆ, ಓಟು ಕಳೆದುಕೊಳ್ಳುವ ತಲೆನೋವಿನಲ್ಲಿದ್ದ ರಾಜಕಾರಣಿಗಳು, ಜನಪ್ರತಿನಿಧಿಗಳು ವರದಿಯ ಜಾರಿಗೆ ಪ್ರತಿರೋಧ ವ್ಯಕ್ತಪಡಿಸುತ್ತಾ, ಸರಕಾರದ ಗಮನ ಸೆಳೆದಿದ್ದರು.

ಈ ವರದಿ ಬಗ್ಗಿನ ಕೇಂದ್ರ ಸರಕಾರಗಳ ನಡೆ:
ಯುಪಿಎ ಅನುಷ್ಠಾನಕ್ಕೆ ಯತ್ನಿಸಿತ್ತು:
ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರವು ಪಶ್ಚಿಮ ಘಟ್ಟಗಳ ರಕ್ಷಣೆಗೆಂದು ಗಾಡ್ ಗಿಲ್ ವರದಿ ನಂತರ ಕಸ್ತೂರಿ ರಂಗನ್ ವರದಿಯನ್ನು 2012ರಲ್ಲಿ ಜಾರಿಗೆ ತಂದಿತ್ತು. ಅವರ ಮೈತ್ರಿಕೂಟವು ವರದಿಯ ಶೀಘ್ರ ಅನುಷ್ಠಾನಕ್ಕೆ ನಿರಂತರ ಪ್ರಯತ್ನಿಸಿ, ದೊಡ್ಡ ವಿರೋಧಕ್ಕೆ ಒಳಗಾಗಿತ್ತು.

ಎನ್.ಡಿ.ಎ ಜನರ ಅಭಿಮತಕ್ಕೆ ಒತ್ತು ನೀಡಿತ್ತು:

ಕಸ್ತೂರಿ ರಂಗನ್ ವರದಿಯ ಬಗ್ಗೆ 2014ರಿಂದ ನರೇಂದ್ರ ಮೋದಿ ಅವರ ನಾಯಕತ್ವದ ಪ್ರಧಾನಿ ಬಿಜೆಪಿಯ ಎನ್.ಡಿ.ಎ ಮೈತ್ರಿಕೂಟವು ಎಚ್ಚರದ ಸೂಕ್ಷ್ಮವಾದ ನಡೆಯನ್ನು ಇಡುತ್ತಾ ಬಂದಿತು. ಜನಸಾಮಾನ್ಯರ ಹಾಗು ಸ್ಥಳೀಯರ ಅಗತ್ಯತೆಗಳಿಗೆ ಪ್ರಾಶಸ್ತ್ಯ ನೀಡುತ್ತಾ, ಆರ್ಥಿಕ ಹಾಗು ಅಭಿವೃದ್ಧಿಯ ಅಗತ್ಯತೆಗಳಿಗೆ ಮಾನ್ಯತೆ ನೀಡುತ್ತಾ ಬಂದಿತು. ಆಡಳಿತದಲ್ಲಿ ಸಮತೋಲಿತ ನೀತಿಯನ್ನು ಪ್ರದರ್ಶಿಸುತ್ತಾ ಬಂದಿದೆ. ವರದಿಯ ಜಾರಿಗೆ ಅವಸರಿಸದೆ ಸ್ಥಳೀಯ ಜನರ ಮನಸ್ಥಿತಿಗೆ ಸರಿಯಾಗಿ ರಾಜ್ಯ ಸರಕಾರಗಳೊಂದಿಗೆ ಈ ವಿಚಾರದ ಕುರಿತು ಚರ್ಚೆಗಳನ್ನು ನಡೆಸಿ, ಯೋಜನೆಯ ಅನುಷ್ಠಾನದ ಬಗ್ಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಿತು.

ರಾಜ್ಯದ ಮುಖ್ಯಮಂತ್ರಿಗಳ ನಡೆ:
2012ರಿಂದ ಈಚೆಗೆ ಅಧಿಕಾರಕ್ಕೆ ಏರಿದ ಕರ್ನಾಟಕ ರಾಜ್ಯದ ಮೂರು ಮುಖ್ಯಮಂತ್ರಿಗಳೂ ಕೂಡ ಬೇರೆ ಬೇರೆ ಪಕ್ಷಕ್ಕೆ ಸೇರಿದ್ದವರು ಆಗಿದ್ದರೂ, ಕಸ್ತೂರಿ ರಂಗನ್ ವರದಿ ಜಾರಿಗೆ ನಿರಂತರ ವಿರೋಧ ವ್ಯಕ್ತ ಪಡಿಸಿದ್ದರು. ಜನರ ಅಭಿಪ್ರಾಯಕ್ಕೆ ಇಂಬು ನೀಡಿ, ವರದಿಯ ಜಾರಿಗೆ ಅಸಮ್ಮತಿ ವ್ಯಕ್ತಪಡಿಸಿದ್ದರು.

ಜುಲೈ-2012ರಿಂದ ಮೇ-2013ರ ತನಕ ಮುಖ್ಯಮಂತ್ರಿಗಳಾಗಿದ್ದ ಬಿಜೆಪಿ ಪಕ್ಷದ ಶ್ರೀ ಜಗದೀಶ್ ಶೆಟ್ಟರ್ ಅವರು,

ಮೇ-2013ರಿಂದ ಮೇ-2018ರವರೆಗೆ ಮುಖ್ಯಮಂತ್ರಿಗಳಾಗಿದ್ದ ಕಾಂಗ್ರೆಸ್ ಪಕ್ಷದ ಶ್ರೀ ಸಿದ್ದರಾಮಯ್ಯ ಅವರು

ಮೇ‌-2018ರಿಂದ ಜುಲೈ-ಜೆಡಿಎಸ್-2019ರವರೆಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು,

ನಂತರ ಮತ್ತೆ  ಮುಖ್ಯಮಂತ್ರಿಗಳಾಗಿ ಜುಲೈ-2019ರಿಂದ  ಜುಲೈ-2021ರ ತನಕ ಆಡಳಿತ ನಡೆಸಿದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು,

ಆಮೇಲೆ ಅಧಿಕಾರಕ್ಕೆ ಮುಖ್ಯಮಂತ್ರಿಗಳಾಗಿ ಏರಿ, ಜುಲೈ- 2021ರಿಂದ ಮೇ-2023ರವರೆಗೆ ಆಡಳಿತ ನಡೆಸಿದ ಬಿಜೆಪಿಯ ಬಸವರಾಜ ಬೊಮಾಯಿ
ಎಲ್ಲರೂ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತಲೇ ಬಂದಿದ್ದರು.

ಈಗ ಮತ್ತೆ ಪುನಃ ಮೇ-2023ರಿಂದ ಈಗ ಕೂಡ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಸ್ತೂರಿ ರಂಗನ್ ವರದಿಯ ಪ್ರಸ್ತಾಪವನ್ನೇ ತೆಗೆದು ಹಾಕುವ ದಿಟ್ಟ ನಡೆ ಇಟ್ಟಿದೆ.

ಆ ಮೂಲಕ ಎಲ್ಲಾ ರಾಜ್ಯ ಸರಕಾರಗಳು ಸೂಕ್ಷ್ಮ ಪರಿಸರ ಪ್ರದೇಶಗಳ ಸಂರಕ್ಷಣೆಗಿಂತ ಜನಸಾಮಾನ್ಯರ, ಸ್ಥಳೀಯರ ಹಿತಾಸಕ್ತಿಯೇ ಮಾನ್ಯವಾದದ್ದು ಎಂಬ ನೀತಿಯನ್ನು ಪಕ್ಷಾತೀತವಾಗಿ ಪಾಲಿಸಿದ್ದು ಶ್ಲಾಘನಾರ್ಹ ಎನ್ನಬಹುದು. ಆ ಮೂಲಕ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ ಜನತೆಯ ಪ್ರತಿನಿತ್ಯದ ಜೀವನಕ್ಕೆ ತೊಂದರೆ ಆಗುವ ಈ ವರದಿಯನ್ನು ನಿರ್ಲಕ್ಷಿಸಿದ್ದು ಜನಪರ ಕಾಳಜಿಯ ನಡೆ ಎನ್ನಬಹುದು. ನೈಸರ್ಗಿಕ ಹಾಗು ಆರ್ಥಿಕ ಸಮತೋಲತೆಯನ್ನು ಪ್ರತಿಪಾದಿಸಿ, ಕಾರ್ಯರೂಪಕ್ಕೆ ಬರಲು ವಿಫಲವಾದ ಕಸ್ತೂರಿ ರಂಗನ್ ವರದಿ ಮನಮೋಹನ್ ಸಿಂಗ್ ಅವರ ಯು.ಪಿ.ಎ ಸರಕಾರ ಮುನ್ನಲೆಗೆ ತಂದಿದ್ದ ವಿವಾದಾತ್ಮಕ ವಿಚಾರ ಈಗ ನಮ್ಮ ರಾಜ್ಯದ ಪಾಲಿಗೆ ಮುಗಿದ ಅಧ್ಯಾಯ ಎಂಬುದು ನಿಟ್ಟುಸಿರು ಬಿಡಬಹುದಾದಂತಹ ವಿಷಯ!