“ಹೆಚ್.ಎಸ್.ಆರ್ ಪ್ಲೇಟ್”
ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವಾಲಯವು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್.ಎಸ್.ಆರ್.ಪಿ)ಯ ಅಳವಡಿಕೆಯ ಅವಶ್ಯಕತೆಯನ್ನು ಮನಗಂಡು 2005ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲು ಆಶಿಸಿತ್ತು. ಈ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯವು ಕೂಡ ಕೇಂದ್ರ ಹಾಗು ರಾಜ್ಯ ಸರಕಾರಗಳಿಗೆ ಹೆಚ್.ಎಸ್.ಆರ್. ನಂಬರ್ ಪ್ಲೇಟ್ ಗಳ ಪರಿಣಾಮಕಾರಿ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತ್ತು. ಆದರೆ ಹಲವಷ್ಟು ಕಾರಣಗಳಿಂದಾಗಿ ಹೆಚ್.ಎಸ್.ಆರ್ ನಂಬರ್ ಪ್ಲೇಟ್ ಗಳ ಅಳವಡಿಕೆಯು ಆಮೆ ವೇಗದಲ್ಲಿ ಸಾಗಿದೆ.
ಆಮೆ ವೇಗದಲ್ಲಿ ಹೆಚ್.ಎಸ್.ಆರ್ ನಂಬರ್ ಪ್ಲೇಟ್ ಗಳ ಅಳವಡಿಕೆಯ ಕ್ರಮ ಆಗುತ್ತಿರುವುದಕ್ಕೆ ಇರುವ ಹಲವಷ್ಟು ಕಾರಣಗಳು ಯಾವುದು ಎಂದು ಗಮನಿಸುವುದಾದರೆ ಅವು ಇಂತಿವೆ…
*ಉದ್ಪಾದನೆ ಹಾಗು ವಿತರಣೆಯಲ್ಲಿ ವಿಳಂಬ:
ಹೆಚ್.ಎಸ್.ಆರ್.ಪಿಯ ಅಳವಡಿಕೆಯು ದೇಶದ ಮಿಲಿಯನ್ ಗಟ್ಟಲೆ ವಾಹನಗಳಿಗೆ ಆಗಬೇಕಿದೆ ಆದರೆ ಅವುಗಳ ಉತ್ಪಾದನೆ ಹಾಗು ವಿತರಣೆಯಲ್ಲಿ ತೀರಾ ವಿಳಂಬತೆ ಇದೆ.
*ಜಾರಿಗೊಳಿಸುವಲ್ಲಿ ಸವಾಲು:
ಎಲ್ಲಾ ರಾಜ್ಯಗಳ ಎಲ್ಲಾ ಪ್ರದೇಶದ ವಾಹನಗಳಿಗೂ ಈ ಹೆಚ್ ಎಸ್ ಆರ್ ನಂಬರ್ ಪ್ಲೇಟ್ ಅಳವಡಿಕೆ ಆಗಬೇಕಿದೆ ಆದರೂ ಕೆಲವೇ ಕೆಲವು ರಾಜ್ಯಗಳಲ್ಲಿ ಇದು ಕ್ಷಿಪ್ರವಾಗಿ ನಡೆಯುತ್ತಿದೆ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಇದು ತೀರಾ ಹಿಂದೆ ಬಿದ್ದಿದೆ.
*ಸಾರ್ವಜನಿಕರಿಗೆ ಜಾಗೃತಿಯ ಕೊರತೆ:
ಬಹುತೇಕ ದೇಶದ ವಾಹನ ಮಾಲಿಕರಿಗೆ ಎಚ್.ಎಸ್.ಆರ್ ನಂಬರ್ ಪ್ಲೇಟ್ ಎಂದರೆ ಏನು? ಅದರ ಉಪಯೋಗ ಮತ್ತು ಅನುಕೂಲಗಳೇನು? ಅದರಿಂದ ಹೇಗೆ ವಾಹನದ ಸುರಕ್ಷತೆ ಆಗುತ್ತದೆ? ಎಂಬ ಇನ್ನೂ ಇತ್ಯಾದಿ ಮಾಹಿತಿಗಳೇ ಗೊತ್ತಿಲ್ಲ. ಜಾಗೃತಿಯ ಕೊರತೆ ಇರುವುದರಿಂದ ಸಾರ್ವಜನಿಕರು ಇದನ್ನು ತೀರಾ ನಿರ್ಲತೆಯಿಂದ ಕಾಣುತ್ತಿದ್ದಾರೆ.
*ಕಾನೂನಾತ್ಮಕ ಹಾಗು ಆಡಳಿತಾತ್ಮಕ ಅಡಚಣೆ:
ಕೆಲವು ರಾಜ್ಯ ಸರಕಾರಗಳು ಇದರ ಅಳವಡಿಕೆಗೆ ಆಸಕ್ತಿ ತೋರಿಸದ ಕಾರಣ ಅಲ್ಲಿ ಜನರು ಕೂಡ ಇದಕ್ಕೆ ಹಿಂಜರಿಯುತ್ತಿದ್ದಾರೆ. ಹೆಚ್.ಎಸ್.ಆರ್ ನಂಬರ್ ಪ್ಲೇಟ್ ಗಳ ಕಡ್ಡಾಯ ಅಳವಡಿಕೆಯನ್ನು ವಿರೋಧಿಸಿ ಹಲವಷ್ಟು ಪಿಟೀಷನ್ ಗಳು ಸಲ್ಲಿಕೆ ಆಗಿವೆ. ಅದರ ವಿಚಾರಣೆ ನಡೆಯಬೇಕಿದೆ.
*ದುಬಾರಿ ಹಾಗು ಅಲಭ್ಯತೆ:
ಹೆಚ್.ಎಸ್.ಆರ್ ನಂಬರ್ ಪ್ಲೇಟ್ ಗಳು ಅಳವಡಿಕೆಯ ದರಗಳು ದುಬಾರಿ ಆಗಿದ್ದು, ಲಭ್ಯತೆ ಕೂಡ ಕಡಿಮೆ ಇದೆ. ದರಗಳು ಹೆಚ್ಚಿರುವುದು ವಾಹನ ಮಾಲಿಕರು ಹಿಂದೇಟು ಹಾಕುತ್ತಿದ್ದಾರೆ.
ಈಗಿನ ಬೆಳವಣಿಗೆಗಳು:
ನಂಬರ್ ಪ್ಲೇಟ್ ಅಳವಡಿಕೆ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಸೆ.18ರಂದು ಹೈಕೋರ್ಟ್ನಲ್ಲಿ ಬರಲಿದೆ. ಹೀಗಾಗಿ ದಂಡ ವಿಧಿಸುವ ಬಗ್ಗೆ ಇಲಾಖೆ ಅಧಿಕಾರಿಗಳು ತೀರ್ವನಿಸಿಲ್ಲ. ವಿಚಾರಣೆ ನಂತರ ದಂಡ ವಿಧಿಸುವುದೋ ಅಥವಾ ಮತ್ತೆ ಗಡುವು ವಿಸ್ತರಿಸುವುದೋ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಚ್ಎಸ್ಆರ್ಪಿ ಅಳವಡಿಸುವ ಗಡುವನ್ನು ಮೂರು ಬಾರಿ ವಿಸ್ತರಿಸಿದರೂ ಅಳವಡಿಸಿಕೊಳ್ಳಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ರಾಜ್ಯದ 1.70 ಕೋಟಿ ಹಳೇ ವಾಹನಗಳ ಪೈಕಿ ಈವರೆಗೆ 50 ಲಕ್ಷ ವಾಹನಗಳಿಗಷ್ಟೇ ಅಳವಡಿಸಿಕೊಂಡಿರುವುದರಿಂದ ಗಡುವು ವಿಸ್ತರಣೆ ಅನಿವಾರ್ಯವಾಗಿದೆ. 2019ರ ಏ.1ಕ್ಕಿಂತ ಮೊದಲು ನೋಂದಣಿಯಾಗಿರುವ ಹಳೇ ವಾಹನಗಳಿಗೆ ಈ ನಿಯಮ ಕಡ್ಡಾಯವಾಗಿದೆ. ನಂಬರ್ ಪ್ಲೇಟ್ ಜೋಡಣೆ ಪ್ರಕ್ರಿಯೆಯನ್ನು ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್ಗಳಿಗೆ ಟೆಂಡರ್ ಮುಖೇನ ಕೊಡಲಾಗಿದೆ. ರಾಜ್ಯದಲ್ಲಿ ನಂಬರ್ ಪ್ಲೇಟ್ ಪೂರೈಕೆ ಜವಾಬ್ದಾರಿಯನ್ನು ಏಳೆಂಟು ಕಂಪನಿಗಳಿಗೆ ಕೊಡಲಾಗಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಅಂದಾಜು 4000ಕ್ಕೂ ಅಧಿಕ ಡೀಲರ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ.
4ನೇ ಬಾರಿ ವಿಸ್ತರಣೆ?: 2023ರ ಆ.18ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಎಚ್ಎಸ್ಆರ್ಪಿ ಹಾಕಿಸಲು 2023ರ ನ.17ರ ಗಡುವು ವಿಧಿಸಿತ್ತು. ಮಾಲೀಕರ ನಿರಾಸಕ್ತಿ ಹಿನ್ನೆಲೆ 2024ರ ಫೆ.17ರವರೆಗೆ ಮತ್ತೆ ಮೇ 31ರವರೆಗೆ, ಪುನಃ ಸೆ.15ರವರೆಗೆ ಅವಕಾಶ ನೀಡಲಾಗಿತ್ತು.
ಪ್ಲೇಟ್ ಹಾಕಿಸುವುದು ಹೇಗೆ?:
Transport.karnataka.gov.in ಅಥವಾ www.siam.inಗೆ ಭೇಟಿ ಕೊಟ್ಟು ಬುಕ್ ಎಚ್ಎಸ್ಆರ್ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ.
ಹೈ ಸೆಕ್ಯುರಿಟಿ ರಿಜಿಸ್ಟೇಷನ್ ನಂಬರ್ ಪ್ಲೇಟ್ ಗಳು ಸುರಕ್ಷತೆಗಾಗಿ ಮಾಡಿಸಿದಂತಿರುತ್ತದೆ. ನಿಮ್ಮ ವಾಹನಗಳ ಸುರಕ್ಷತೆಗೆ ಇದರ ಅಳವಡಿಕೆ ಸೂಕ್ತ ರಹದಾರಿಯೇ ಆಗಿದೆ.
ಅಳವಡಿಕೆಯಿಂದ ಆಗುವ ಅನುಕೂಲಗಳೇನು?:
*ವಾಹನ ಕಳುವಿನ ತಡೆಕಟ್ಟುವಿಕೆ
ನಂಬರ್ ಪ್ಲೇಟ್ ಗಳ ನಕಲು ಮಾಡುವಿಕೆ ಹಾಗು ಮಾರ್ಪಾಡುವಿಕೆಯ ಅಪರಾಧಗಳನ್ನು ಇದು ಕಠಿಣವಾಗಿಸಿ, ವಾಹನ ಕಳುವಿನ ಸಂಬವವನ್ನು ತೀರಾ ಕಡಿಮೆ ಮಾಡುತ್ತದೆ.
*ಕೇಂದ್ರೀಕೃತ ಮಾಹಿತಿ ಮೂಲ:
ಪ್ರತಿಯೊಂದು ಹೆಚ್.ಎಸ್.ಆರ್ ನಂಬರ್ ಪ್ಲೇಟ್ ಕೇಂದ್ರೀಕೃತ ಮಾಹಿತಿ ಮೂಲಕ್ಕೆ ಹೊಂದಿಕೊಂಡಿರುವ ಕಾರಣ ವಾಹನದ ಇಂಜಿನ್ ಚಾಸಿಸ್ ನಂಬರ್ ಗಳ ಮಾಹಿತಿ ತ್ವರಿತವಾಗಿ ಪತ್ತೆ ಹಚ್ಚಬಹುದು. ಹಾಗಾಗಿ ಇದು ವಾಹನದ ಕಳುವು ಹಾಗು ದುರ್ಬಳಕೆಯ ಭಯವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲದು.
*ವಿಸ್ತರಿತ ಸುರಕ್ಷತಾ ಗುಣಲಕ್ಷಣಗಳು:
ಕ್ರೋಮಿಯಂ ಆಧಾರಿತ ಹೊಲೊಗ್ರಾಮ್, ಲೇಸರ್ ಕೆತ್ತಿದ ಪಿನ್, ಮರುಬಳಕೆ ಮಾಡಲಾಗದ ಸ್ನಾಪಾನ್ ಲಾಕ್ ಗಳು ಅತಿ ಹೆಚ್ಚಿನ ಸುರಕ್ಷತೆಯನ್ನು ನಿಮ್ಮ ವಾಹನಕ್ಕೆ ಒದಗಿಸುತ್ತದೆ.
*ಸುಧಾರಿತ ಗೋಚರತೆ: ಹೆಚ್.ಎಸ್.ಆರ್.ಪಿಯ ಮೇಲ್ಭಾಗದಲ್ಲಿ ಬಳಸಲಾಗುವ ಪ್ರತಿಫಲಿತ ಹಾಳೆ, ಸ್ಪಷ್ಟ ಅಕ್ಷರಗಳ ಮಾದರಿಯು ಸುಧಾರಿತ ಗೋಚರತೆಯನ್ನು ಹೊಂದಿರುತ್ತವೆ. ಇದು ಮಂದ ಬೆಳಕಿನ ಪರಿಸರದಲ್ಲೂ ಸುಧಾರಿತ ಗೋಚರತೆಯನ್ನು ನೀಡುತ್ತವೆ. ಇದು ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ.
*ಅನಧಿಕೃತ ವಾಹನಗಳಿಗೆ ನಿಗ್ರಹ:
ಹೆಚ್.ಎಸ್.ಆರ್ ನಂಬರ್ ಪ್ಲೇಟ್ ಗಳ ಅಳವಡಿಕೆಯಿಂದ ಅನಧಿಕೃತ ವಾಹನಗಳ ಸಂಚಾರ ನಿಲ್ಲುತ್ತದೆ. ಅಧಿಕೃತ ದಾಖಲೆಗಳು ಇರುವ ವಾಹನಗಳನ್ನು ಮಾತ್ರವೇ ಜನರು ಬಳಸಲು ಇದು ಅನುವು ಮಾಡುತ್ತದೆ.
*ಅಪರಾಧಗಳ ಪತ್ತೆಗೆ ಸಹಕಾರಿ:
ವಿವಿಧ ರೀತಿಯ ಅಪರಾಧಗಳು ಆದಾಗ ಅದರ ಪತ್ತೆಗೆ ಇದು ನೆರವಾಗುತ್ತದೆ. ಆ ಅಪರಾಧಗಳಿಗೆ ವಾಹನಗಳನ್ನು ಬಳಸಿದ್ದರೆ ಸಾಕು ಸಲೀಸಾಗಿ ಆರೋಪಿಗಳನ್ನು ಸೆರೆ ಹಿಡಿದು ಬಂಧಿಸಬಹುದು.