ಇತ್ತೀಚೆಗೆ ನಡೆದಿದ್ದ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನಮ್ಮ ದೇಶದ ಪ್ರಧಾನಿಗಳಾದ ಶ್ರೀ ಮಾನ್ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದನ್ನು ಅವರು ಸೆಕ್ಯುಲರ್ ಸಿವಿಲ್ ಕೋಡ್ ಎಂದು ಕರೆದಿದ್ದು ಕೂಡ ಬಹಳ ಸೂಕ್ತವೆನ್ನುವಂತಿದೆ. ಭಾರತದಲ್ಲಿ ಇರುವ ಪ್ರತಿ ಪ್ರಜೆಯ ಮದುವೆ, ವಿಚ್ಛೇದನ, ಉತ್ತರಾಧಿಕಾರ ಹಾಗು ಎಲ್ಲಾ ವೈಯಕ್ತಿಕ ವಿಚಾರಗಳನ್ನು ಸಮಾನತೆಯನ್ನು ಕಾಪಾಡುತ್ತಾ ನಿಯಂತ್ರಿಸಲು ಜಾರಿಯಾಗಬೇಕಿರುವ ಕಾನೂನೇ ‘ಏಕರೂಪ ನಾಗರಿಕ ಸಂಹಿತೆ’. ಈ ಕಾನೂನಿನ ಜಾರಿಯ ಕಲ್ಪನೆಯು ಭಾರತದ ಸಂವಿಧಾನದ 44ನೇ ವಿಧಿಯಲ್ಲಿ ಸೂಚಿಸಲಾದ ನಾಮ ನಿರ್ದೇಶಕ ತತ್ವಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ಸಿಕ್ಕ ನಂತರ ಇಲ್ಲಿಯವರೆಗೆ ಇದನ್ನು ರಾಜಕೀಯ ಲಾಭಗಳಿಗಾಗಿ ಬೇಕಂತಲೇ ಸೈಡ್ ಲೈನ್ ಮಾಡಿಕೊಂಡು ಬರಲಾಯಿತು. ಆದರೆ ಈ ಬಾರಿಯ ಬಿಜೆಪಿ ನೇತೃತ್ವದ ಎನ್. ಡಿ. ಎ ಸರಕಾರವು ಗಟ್ಟಿ ನಿರ್ಣಯ ತೆಗೆದುಕೊಂಡು ಈ ಕಾನೂನಿನ ಜಾರಿಯ ಕುರಿತು ಚಿಂತಿಸುತ್ತಿದೆ.
ಪ್ರಸ್ತುತ ರಾಷ್ಟ್ರದಲ್ಲಿ ಧಾರ್ಮಿಕ ನೆಲೆಯಲ್ಲಿ ಪ್ರತಿ ಧರ್ಮದ ಜನರಿಗೂ ಬೇರೆ ಬೇರೆ ವೈಯಕ್ತಿಕ ಕಾನೂನುಗಳು ಜಾರಿಯಲ್ಲಿದೆ. ಏಕರೂಪ ನೀತಿ
ನಾಗರಿಕರ ಸಂಹಿತೆ ಅಸಮಾನತೆ ಹೋಗಲಾಡಿಸಿ, ಎಲ್ಲರಿಗೂ ಅನ್ವಯವಾಗುವ ಈ ಕಾನೂನಿನ ಜಾರಿಯು ಶ್ಲಾಘನೀಯವಾಗಿದೆ.

ರಜತ್ ರಾಜ್ ಡಿ.ಹೆಚ್
ಸಂಪಾದಕರು

ಇದರ ಜಾರಿ ತೀರಾ ಅವಶ್ಯಕ ಏಕೆಂದರೆ:
*ಕಾಯ್ದೆಯು ಸಮಾನತೆಯ ಪರಮಾವಧಿ ಆಗಿದೆ:

ಈ ಕಾಯ್ದೆಯು ಕಟ್ಟು ನಿಟ್ಟಾಗಿ ಜಾರಿಯಾದರೆ, ಎಲ್ಲಾ ಧರ್ಮದ ಜನರನ್ನು ಸಮಾನರನ್ನಾಗಿ ಕಾಣುವ ಅವಕಾಶ ಕಾನೂನಿನಲ್ಲಿ ವೈಯಕ್ತಿಕ ಕಾನೂನಿನ ವ್ಯಾಪ್ತಿಯಲ್ಲಿ ಅಭ್ಯಸಿತವಾಗುತ್ತದೆ.

*ಲಿಂಗ ಸಮಾನತೆ ಹಾಗು ಲಿಂಗಿಕ ಭೇದದ ನಿರ್ಮೂಲನೆ:

ಈ ಕಾನೂನು ವೈಯಕ್ತಿಕ ವಿಚಾರಗಳಲ್ಲಿ ಲಿಂಗ ಆಧಾರಿತ ಅಸಮಾನತೆಯನ್ನು ಹೋಗಲಾಡಿಸಿ, ಗಂಡು-ಹೆಣ್ಣು ಎನ್ನುವ ತಾರತಮ್ಯ ಮಾಡದೆ ಸಮಾನತೆಯನ್ನು ಕಾಪಾಡಲಿದೆ.

*ರಾಷ್ಟ್ರೀಯ ಐಕ್ಯತೆಯನ್ನು ಗಟ್ಟಿಯಾಗಿಸುತ್ತದೆ:

ಧರ್ಮ ಮತದ ಹೆಸರಿನಲ್ಲಿ ಬೇರೆ ಬೇರೆ ವೈಯಕ್ತಿಕ ಕಾನೂನುಗಳನ್ನು ಕೊಡದೆ, ಎಲ್ಲರಿಗೂ ಕೋಮು ಸಾಮರಸ್ಯ ಹೆಚ್ಚಿಸುವ ಈ ಕಾನೂನು ರಾಷ್ಟ್ರೀಯ ಐಕ್ಯತೆ ಹೆಚ್ಚಿಸಲು ಪೂರಕವಾಗುವಂತಹದ್ದಾಗಿದೆ. ಇದು ಸಮಾಜವನ್ನು ಧರ್ಮಾಧಾರದಲ್ಲಿ ವಿಭಜಿಸಿ, ಜನರನ್ನು ಜೀವನ ನಡೆಸಲು ಅನುವು ಮಾಡಿಕೊಡುವ ಆಸ್ಪದಗಳು ಮುಂದೆ ಇರುವುದಿಲ್ಲ.

*ಕಾನೂನಿನ ಸರಳೀಕರಣ:

ಈಗ ಪ್ರತಿ ಧರ್ಮದ ಪ್ರಜೆಗಳಿಗೆ ತಮ್ಮ ಧರ್ಮಗಳ ಅನುಸಾರ ಪ್ರತ್ಯೇಕ ಕಾನೂನುಗಳನ್ನು ಪಾಲಿಸಬೇಕಾಗಿ ಇರುವುದಿಲ್ಲ. ಇದು ಕಾನೂನನ್ನು ಸರಳ ಹಾಗು ಸಬಲಗೊಳಿಸುವಲ್ಲಿ ಸಹಕಾರಿ ಮತ್ತು ಸಫಲ ಆಗಲಿದೆ.

*ಮಕ್ಕಳ ಹಾಗು ಮಹಿಳೆಯರ ಸುಭದ್ರತೆಗೆ ಒತ್ತು:

ಮಕ್ಕಳ ಹಾಗು ಮಹಿಳಾ ಶೋಷಣೆಗಳನ್ನು ತಡೆಯುವಲ್ಲಿ ಈ ಕಾನೂನು ಸಮರ್ಪಕವಾಗಿ ಪರಿಣಾಮ ಬೀರಲಿದೆ. ಅವರುಗಳ ಹಿತಾಸಕ್ತಿಯನ್ನು ಕಾಪಾಡುವುದರ ಮೂಲಕ ಅವರಿಗೆ ನ್ಯಾಯ ಒದಗಿಸುವಲ್ಲಿ ಈ ಕಾನೂನು ಶಕ್ತಿಶಾಲಿಯಾಗಿ ರೂಪುಗೊಳ್ಳಲಿದೆ.

*ಆಧುನೀಕರಣ ಹಾಗು ಜಾತ್ಯಾತೀತತೆಗೆ ಮಾನ್ಯತೆ:

ಬದಲಾಗುತ್ತಿರುವ ವಿಶ್ವ ದಿನ ಕಳೆದಂತೆ ವಿಶಾಲವಾಗಿದೆ. ಅದಕ್ಕೆ ತಕ್ಕಂತೆ ಆಧುನೀಕರಣವನ್ನು ಈ ಕಾನೂನು ಅಳವಡಿಸಿಕೊಂಡು ಹಳೆಯ ಗೊಡ್ಡು ಸಾಂಪ್ರದಾಯಿಕ ಪಿಡುಗುಗಳಿಗೆ ಬಲಿಯಾಗದಂತೆ ಭದ್ರವಾಗಿಸಿ, ಪ್ರಜೆಗಳನ್ನು ಕಾಪಾಡುತ್ತವೆ. ಸಂಸ್ಕೃತಿ ಹಾಗು ಸಂಸ್ಕಾರಗಳ ಹೆಸರಿನಲ್ಲಿ ಆನ್ಯಾಯಗಳು ಆಗುವುದನ್ನು ಇದು ತಪ್ಪಿಸಲಿದೆ. ಜಾತ್ಯಾತೀತತೆಯ ಈ ದೇಶದ ಮೂಲ ತತ್ವಕ್ಕೆ ಕೊಂಚವು ಧಕ್ಕೆ ಆಗದಂತೆ ಪರಿಹಾರಗಳನ್ನು ಒದಗಿಸುತ್ತದೆ.‌

ಪ್ರಪಂಚದ ಎರಡನೇ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರಜಾಪ್ರಭುತ್ವದ ಸಿದ್ಧಾಂತಗಳಲ್ಲಿ ಪ್ರಮುಖವಾದ ಭಾವೈಕ್ಯತೆ, ಜಾತ್ಯಾತೀತತೆಯನ್ನು ಸಮಾನತೆಯನ್ನು ಕಾಪಾಡುವುದರೊಂದಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ನೂತನ ಕಾನೂನು ಕಾರ್ಯರೂಪಕ್ಕೆ ಬರಲಿದೆ.

‘ವಿವಿಧತೆಯಲ್ಲಿ ಏಕತೆ’ ಹೊಂದಿರುವ ನಮ್ಮ ದೇಶದಲ್ಲಿ ಧಾರ್ಮಿಕ ಸಹಿಷ್ಣುತೆ, ಬ್ರಾತೃತ್ವ ಭಾವ, ನ್ಯಾಯದ ಕಾಪಾಡುವಿಕೆಗೆ ಏಕರೂಪ ನಾಗರಿಕ ಸಂಹಿತೆಯು ಪುಷ್ಠಿ ನೀಡಲಿದೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ಈಗಿರುವ ವೈಯಕ್ತಿಕ ಕಾನೂನುಗಳ ತಾರತಮ್ಯ ನೀತಿಯನ್ನು ಹೋಗಲಾಡಿಸಿ, ಸೂಕ್ತ ಹಾಗು ಸಮಂಜಸ ಸಮಾನ ಕಾನೂನಿನ ಪಾಲನೆ ಆಗಲಿದೆ. ಇದು ಸಂವಿಧಾನದ ಪ್ರಬಲತೆಯನ್ನು ಕೂಡ ಹೆಚ್ಚಿಸಲಿದೆ.