ಕರ್ನಾಟಕ ರಾಜ್ಯ ದೇಶದಲ್ಲೇ ಅತಿ ಸಹಿಷ್ಣುತೆ ಹೊಂದಿರುವ ಶಾಂತಿಯುತ ರಾಜ್ಯ ಎಂದರೆ ಅತಿಶಯೋಕ್ತಿಯೇನೂ ಇಲ್ಲ‌. ಇಲ್ಲಿ ಹಲವು ಅನ್ಯ ಭಾಷಿಗರು ಆರಾಮಾಗಿ ತಮ್ಮ ಜೀವನವನ್ನು ನೆಮ್ಮದಿಯಿಂದ ನಡೆಸುತ್ತಿದ್ದಾರೆ. ಆಶ್ರಯ, ಆಹಾರ, ನೀರನ್ನು ನೀಡಿ ನಮ್ಮ ರಾಜ್ಯ ಎಲ್ಲರನ್ನೂ ಸ್ವಾಗತಿಸುತ್ತಲೇ ಇದೆ. ಕನ್ನಡಿಗರು ವಿಶಾಲ ಮನಸ್ಥಿತಿಯಲ್ಲಿ ಅನ್ಯಭಾಷಿಗರನ್ನು  ಗೌರವ ಹಾಗು ಸ್ವಾಭಿಮಾನದೊಂದಿಗೆಯೇ ನಡೆಸಿಕೊಂಡಿದ್ದಾರೆ. ಆದರೆ ಅದೇಕೋ ಇತ್ತೀಚೆಗೆ ಕನ್ನಡಿಗರಿಗೆ ಈ ಅಂಶವೇ ಮುಳುವಾಗಿ ಪರಿಣಮಿಸುವಂತಿದೆ.

ಕರ್ನಾಟಕದಲ್ಲಿ ಒಟ್ಟು ಕನ್ನಡಿಗರ ಜನಸಂಖ್ಯೆ ಕೇವಲ 67%ನಷ್ಟೇ ಇದೆ. ಉಳಿದಂತೆ ಅನ್ಯ ಭಾಷಿಕರು ಅದರಲ್ಲೂ ಅನ್ಯ ರಾಜ್ಯದ ಜನರದೇ ಹಾವಳಿ ಆಗಿದೆ. ಕರ್ನಾಟಕ ಅವರ ಕರ್ಮಭೂಮಿಯಾದರೂ ಕನ್ನಡಿಗರ ನಡುವೆ ಅವರೂ ಒಬ್ಬರಂತೆ ಬದುಕಲು ಅವರೇಕೋ ಒಪ್ಪುತ್ತಿಲ್ಲ‌…ಕನ್ನಡವನ್ನು ಅವರ ನಾಲಿಗೆಯಲ್ಲಿ ಹೊರಳಲು ಸಿದ್ಧರಾಗುತ್ತಿಲ್ಲ…ಒಪ್ಪಲು ಅವರ ಅಹಂ ಬಹುಶಃ ಬಿಡುತ್ತಿಲ್ಲವೇನೋ…

ಅನ್ಯ ರಾಜ್ಯದ ಅನ್ಯ ಭಾಷಿಗರು ಬರಿ ವ್ಯಾಪಾರ ವ್ಯವಹಾರಗಳಲ್ಲಿ ಅವರ ಮೇಲುಗೈ ಸಾಧಿಸುವುದಲ್ಲದೆ ದೊಡ್ಡ ದೊಡ್ಡ ಐಟಿ, ಬಿಟಿ, ಕಾರ್ಪೊರೇಟ್ ಕಂಪೆನಿಗಳಲ್ಲೂ ತಮ್ಮ ಬಾಹುಳ್ಯವನ್ನು ಸ್ಥಾಪಿಸುತ್ತಲೇ ಇದ್ದಾರೆ. ಹಾಗಾಗಿ ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶಗಳೇ ವಿರಳವಾಗಿ ತಮ್ಮ ತಾಯಿನಾಡಿನಲ್ಲೇ ಮಾನ್ಯತೆ ದೊರೆಯದಂತೆ ಆಗಿದೆ. ಸಾಲದಕ್ಕೆ ಅನ್ಯ ರಾಜ್ಯದಿಂದ ಬಂದು ಇಲ್ಲಿ ದುಡಿಮೆ ಮಾಡುತ್ತಿರುವ ಅನ್ಯ ಭಾಷಿಗರು ಹಲವರು ಇತ್ತೀಚೆಗೆ  ಏಕೋ ಕನ್ನಡಿಗರನ್ನು ನಿಕೃಷ್ಠವಾಗಿ ಕಾಣಲು ಶುರುವಿಟ್ಟಿದ್ದಾರೆ.

ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಂತೂ ಖಾಸಗಿ ಕಂಪೆನಿಗಳಲ್ಲಿ ಅನ್ಯ ರಾಜ್ಯದ ಅನ್ಯ ಭಾಷಿಕರ  ರಾಜ್ಯಭಾರವೇ ಹೆಚ್ಚಾಗಿ ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಂತೆ ಆಗುತ್ತಿದೆ.

ಈ ಸಮಸ್ಯೆಯನ್ನು ಮನಗಂಡು ಗಂಭೀರವಾಗಿ ಪರಿಗಣಿಸಿ ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50  ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಇತ್ತೀಚೆಗೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು.

ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ ಎಂದೆಲ್ಲಾ ವ್ಯಕ್ತಪಡಿಸಿತ್ತು. ನಮ್ಮದು ಕನ್ನಡಪರವಾದ ಸರ್ಕಾರ, ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದೆಲ್ಲಾ ರಾಜ್ಯ ಸರಕಾರ ಜೋರಾಗಿ ಪುಂಗಿತ್ತು. ಇದೀಗ ಈ ವಿಧೇಯಕದ ಜಾರಿ ತಣ್ಣಗಾಗಿ ಕಣ್ಮರೆಯಾಗಿ ಬಿಟ್ಟಿದೆ.

ಖಾಸಗಿ ಕಂಪೆನಿಗಳು ರಾಜ್ಯದಿಂದ ಹೊರಹೋಗುವ ಬೆದರಿಕೆ ಹೂಡಿದ ಕೂಡಲೆ ಅದಕ್ಕೆ ಹೆದರಿ ರಾಜ್ಯ ಸರಕಾರ ತೆಪ್ಪಗಾಗಿದ್ದು, ರಾಜ್ಯದ ಕನ್ನಡಿಗರಿಗೆ ಮಾಡಿದ ಅನ್ಯಾಯವೇ ಅಲ್ಲವೇ? ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಲು ಅಶಕ್ತವಾದ ಸರಕಾರ ಅದೆಷ್ಟರ ಮಟ್ಟಿಗೆ ತನ್ನ ಇಚ್ಛಾಶಕ್ತಿಯ ಬಲ ಹೊಂದಿದೆ? ಕರುನಾಡಿನಲ್ಲಿಯೇ ಕನ್ನಡಿಗರು ಅವಕಾಶ ವಂಚಿತರಾದರೆ, ನಮ್ಮ ಈ ನಾಡಿನಲ್ಲಿ ನಾವು ಅನ್ಯ ರಾಜ್ಯದವರಿಗೆ ತೋರುವ ಔದಾರ್ಯದಂತೆ ನಮಗೂ ಅದೇ ಔದಾರ್ಯ ಅನ್ಯ ರಾಜ್ಯಗಳಿಗೆ ಹೋದರೆ ಸಿಕ್ಕತೇ? ನಾವುಗಳು ಕನ್ನಡಿರಾಗಿ ಉದ್ಯೋಗ ಅವಕಾಶಗಳನ್ನು ಅರಸಿ, ಅನ್ಯ ರಾಜ್ಯಗಳಿಗೆ ಹೋಗಬೇಕಾ?

ರಾಜ್ಯ ಸರಕಾರವು ಬರಿ ತನ್ನ ಆಡಳಿತ ಯಂತ್ರವನ್ನು ತನ್ನ ಅಧಿಕಾರ ಚಲಾಯಿಸುತ್ತಾ ಕ್ಷುಲ್ಲಕ ರಾಜಕಾರಣ ಮಾಡುವುದರಲ್ಲಿ, ರಾಜಕೀಯ ರಣತಂತ್ರ ಹೂಡುವುದರಲ್ಲೇ ತಲ್ಲೀಣಗೊಳಿಸದೆ ಕರುನಾಡಿನ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಿ, ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಮುಂದಾಗಬೇಕು. ಅನ್ಯ ರಾಜ್ಯದ ಅನ್ಯ ಭಾಷಿಗರ ದರ್ಪ ದೌಲತ್ತುಗಳಿಗೆ ಅಂಕುಶ ಹಾಕಲು ಕ್ರಮ ಕೈಗೊಳ್ಳಬೇಕು. ಕನ್ನಡಕ್ಕೆ ಹೆಚ್ಚಿನ ಪ್ರಾತಿನಿಥ್ಯ ದೊರಕುವಂತೆ ಹಲವಾರು ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರವೇ ಕನ್ನಡಿಗರ ಏಳಿಗೆ, ಕನ್ನಡದ ಬೆಳವಣಿಗೆ ಸಾಧ್ಯ. ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ ಮತ್ತು ಕನ್ನಡವೇ ಸರ್ವೋಚ್ಛ ಎಂಬುದು ಅಕ್ಷರಶಃ ನಿಜವಾಗಬೇಕಿದೆ.