ಮಡಿಕೇರಿ: ಹೊಗಳಿಕೆ ಮತ್ತು ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುತ್ತಲೆ, ತನ್ನನ್ನು ಆಯ್ಕೆ ಮಾಡಿದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ತಲಾ ೨ ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಿದ್ದು, ಈ ಬಗ್ಗೆ ಶ್ವೇತ ಪತ್ರ ಬಿಡುಗಡೆಗೂ ಸಿದ್ಧವಿರುವುದಾಗಿ ಶಾಸಕ ಕೆ.ಜಿ.ಬೋಪಯ್ಯ ದೃಢವಾಗಿ ನುಡಿದಿದ್ದಾರೆ.

ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾಭವನ ಟ್ರಸ್ಟನ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ‘ಸಂವಾದ’ದಲ್ಲಿ ಪಾಲ್ಗೊಂಡು, ತಮ್ಮ ನಾಲ್ಕು ಅವಧಿಯ ಶಾಸಕ ಸ್ಥಾನದ ಅವಧಿಯಲ್ಲಿನ ಅಭಿವೃದ್ಧಿಯ ನಡೆಗಳನ್ನು ಅವರು ಮೆಲುಕು ಹಾಕಿದರು.

ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸಕ್ತ ಆರ್ಥಿಕ ಸಾಲಿನಲ್ಲೆ ಕ್ಷೇತ್ರಕ್ಕೆ ೫೫೦೮ ಲಕ್ಷ ರೂ. ಅನುದಾನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ದೊರಕುವಂತೆ ನೋಡಿಕೊಂಡಿರುವುದಾಗಿ ಮಾಹಿತಿಯನ್ನಿತ್ತರು.

‘ಕೊಂಗಣ ಹೊಳೆ’ಯಿಂದ ಕುಡಿಯುವ ನಿರು- ವಿರಾಜಪೇಟೆ ಕ್ಷೇತ್ರದ ಪೊನ್ನಂಪೇಟೆ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ, ‘ಕೊಂಗಣ ಹೊಳೆ’ಯಿಂದ ನೀರು ಸರಬರಾಜಿನ ಯೋಜನೆ ಕಾರ್ಯಗತಗೊಳಿಸಲು ಉತ್ತಮ ಅವಕಾಶವಿದೆ. ವಿರಾಜಪೇಟೆ ಸೇರಿದಂತೆ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳು ವಿಫಲವಾಗುತ್ತಿರುವುದರಿಂದ ಅವುಗಳನ್ನು ನೀರಿನ ಮೂಲವಾಗಿ ಪರಿಗಣಿಸಲು ಸಾಧ್ಯವಾಗಲಾರದು. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ೬೦:೪೦ ಅನುಪಾದ ಅನುದಾನದಲ್ಲಿ ಪ್ರತಿ ಮನೆಗೆ ನಲ್ಲಿ ನೀರನ್ನು ಕಲ್ಪಿಸಲಾಗುತ್ತದೆಯಾದರು, ಇದರಲ್ಲಿ ಬೋರ್‌ವೆಲ್‌ಗಳನ್ನು ನೀರಿನ ಮೂಲವಾಗಿ ಪರಿಗಣಿಸುವುದು ಜಿಲ್ಲೆಗೆ ಸಂಬಂಧಿಸಿದಂತೆ ಉಚಿತವಲ್ಲವೆಂದು ತಿಳಿಸಲಾಗಿದೆಯೆಂದು ಮಾಹಿತಿ ನೀಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ‘ಮಲ್ಟಿ ವಿಲೇಜ್ ಯೋಜನೆ’ಯಡಿ ಬರಪ್ಪೊಳೆ, ಕಾವೇರಿ ಮತ್ತು ಕೊಂಗಣ ಹೊಳೆಯನ್ನು ಬಳಸಿ ಗ್ರಾಮೀಣ ಭಾಗಗಳಿಗೆ ನೀರೊದಗಿಸುವ ಚಿಂತನೆ ಇದೆ. ಜಲಜೀವನ್ ಮಿಷನ್ ಮತ್ತು ಮಲ್ಟಿ ವಿಲೇಜ್ ಸ್ಕೀಂಗಳೆರಡರಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಂದು ತಿಳಿಸಿದರಲ್ಲದೆ, ಅಮೃತ್ ಯೋಜನೆ’ಯಡಿ ಕಾವೇರಿ ನದಿ ನೀರನ್ನು ವಿರಾಜಪೇಟೆ ಸುತ್ತಮುತ್ತಲ ವ್ಯಾಪ್ತಿಗೆ ಮತ್ತು ಕುಶಾಲನಗರಕ್ಕೆ ಒದಗಿಸುವ ೬೪ ಕೋಟಿ ರೂ. ವೆಚ್ಚದ ಯೋಜನೆ ಇರುವುದಾಗಿ ತಿಳಿಸಿದರು.

ಅಧಿಕಾರಿಗಳ ಧೋರಣೆ ವನ್ಯಜೀವಿಗಳ ಹಾವಳಿಗೆ ಕಾರಣ- ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆ ಸೇರಿದಂತೆ ವಿವಿಧ ವನ್ಯ ಜೀವಿಗಳ ಹಾವಳಿಯ ಗಂಭೀರ ಸಮಸ್ಯೆಯತ್ತ ಶಾಸಕರ ಗಮನ ಸೆಳೆದಾಗ ಅವರು, ಎಸಿ ಕೊಠಡಿಗಳಲ್ಲಿ ಕುಳಿತು ಅಧಿಕಾರಿಗಳು ತೆಗೆದುಕೊಳ್ಳ್ಳುವ ನಿಲುವುಗಳಿಂದ ಸಮಸ್ಯೆ ಉಲ್ಬಣಿಸಿದೆ. ವನ್ಯ ಪ್ರಾಣಿಗಳಿಗೆ ಅರಣ್ಯದಲ್ಲಿ ಅಗತ್ಯ ಆಹಾರ ಮತ್ತು ನೀರು ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಇದಕ್ಕೆ ಮೂಲ ಕಾರಣ. ಸರ್ಕಾರ ಆದೇಶಗಳನ್ನು ಮಾಡಬಹುದಾದರು, ಅದನ್ನು ಅನುಷ್ಟಾನಗೊಳಿಸುವ ಅಧಿಕಾರಿ ವರ್ಗ ಆ ನಿಟ್ಟಿನಲ್ಲಿ ಕೆಲಸ ಮಾಡದಿದ್ದಲ್ಲಿ ಸಮಸ್ಯೆ ಬಗೆಹರಿಯುವುದಿಲ್ಲವೆಂದು ವಿಷಾದಿಸಿದರು.

ಕಾಡಾನೆ ಹಾವಳಿ ತಡೆಗೆ ಅಲ್ಲಲ್ಲಿ ಸೋಲಾರ್ ಬೇಲಿಗಳನ್ನು, ಕಂದಕಗಳನ್ನು ನಿರ್ಮಿಸಲಾಗಿದೆಯಾದರು, ಅವುಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಜಿಲ್ಲೆಯನ್ನು ಸುತ್ತುವರೆದಿರುವ ನಾಲ್ಕು ವನ್ಯ ಜೀವಿ ಸಂರಕ್ಷಣಾ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ಅಗತ್ಯವಾದ ಆಹಾರ, ನೀರು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಗಮನ ಹರಿಸದ ಅಧಿಕಾರಿಗಳು ಏಕ ರೂಪದ ತೇಗದ ಕಾಡು ರೂಪಿಸುತ್ತಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ಅರಣ್ಯ ಸಚಿವರಾಗಿ ಮಲೆನಾಡು ಭಾಗದ ಜನಪ್ರತಿನಿಧಿಗೆ ಅವಕಾಶ ನೀಡಬೇಕೆಂದು ನಾನು ಸಲಹೆ ನೀಡಿದ್ದೇನೆ. ಕಾಡು ಎನ್ನುವುದು ಏನೆಂದೇ ತಿಳಿಯದವರು ಅರಣ್ಯ ಸಚಿವರಾಗುವುದರಿಂದ ಸಮಸ್ಯೆಗೆ ಪರಿಹಾರ ರೂಪಿಸುವುದು ಕಷ್ಟವೆಂದು ಸೂಕ್ಷö್ಮವಾಗಿ ನುಡಿದರು.
‘ಐನ್ ಮನೆ’ ಸಂಸ್ಕೃತಿಯ ಕಲ್ಪನೆ ಇಲ್ಲದೆ ೬ ಕೋಟಿಗೆ ಕುತ್ತು!- ಕೊಡಗಿನ ಕೊಡವ ಜನಾಂಗದ ಅಭಿವೃದ್ಧಿಗೆ ಈ ಹಿಂದೆ ೧೦ ಕೋಟಿ ಅನುದಾನವನ್ನು ಘೋಷಿಸಲಾಗಿತ್ತು. ಇದರಲ್ಲಿ ೪ ಕೋಟಿಯನ್ನು ಕೊಡವ ಸಮಾಜಗಳ ಒಕ್ಕೂಟಕ್ಕೆ ಒದಗಿಸಲಾಯಿತಾದರೆ, ಉಳಿದ ಅನುದಾನವನ್ನು ಕೊಡವ ಸಂಸ್ಕೃತಿಯ ಮೂಲಸೆಲೆಯಾದ ‘ಐನ್ ಮನೆ’ಗಳಿಗೆ ಒದಗಿಸಬೇಕೆಂದು, ಕ್ರಿಡಾ ಚಟುವಟಿಕೆಗಳಿಗೆ ನೀಡಬೇಕೆನ್ನುವ ಸಲಹೆಗಳು ವಿವಿಧೆಡೆಗಳಿಂದ ಬಂದಿದೆ. ಈ ಹಂತದಲ್ಲಿ ‘ಐನ್ ಮನೆ’ ಸಂಸ್ಕೃತಿಯ ಉಳಿವಿಗೆ ನೀಡಬೇಕೆನ್ನುವ ಬಗ್ಗೆ ತಾನು ಸರ್ಕಾರಕ್ಕೆ ಅಧಿಕಾರಿಗಳಿಗೆ ಮನದಟ್ಟು ಮಾಡುವ ಪ್ರಯತ್ನಗಳನ್ನು ಮಾಡಿದ್ದೆನಾದರು, ಐನ್ ಮನೆ ಎನ್ನುವುದನ್ನು ‘ಮನೆ’ ಎನ್ನುವ ಸೀಮಿತ ದೃಷ್ಟಿಯಿಂದ ನೋಡಿದ್ದರಿಂದ ಅನುದಾನ ಹಾಗೆ ಉಳಿದಿದೆಯೆಂದು ಬೇಸರಿಸಿದರು.

ಕಾವೇರಿ ಹೂಳೆತ್ತುವುದಕ್ಕೆ ಕ್ರಮ- ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ ವಿಳಂಬಗೊಳ್ಳುತ್ತಿರುವ ಹಿನ್ನೆಲೆ, ಮುಂಗಾರಿನ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಕಳೆದ ಬಾರಿ ನದಿಯ ಹೂಳೆತ್ತಲಾಗಿತ್ತು. ಇದರಿಂದ ದೊಡ್ಡ ಪ್ರಮಾಣದ ಪ್ರವಾಹ ಪರಿಸ್ಥಿತಿ ಉದ್ಭವವಾಗಲಿಲ್ಲ. ಇದೀಗ ತಲಕಾವೇರಿಯ ಕೆಲ ಭಾಗದಲ್ಲಿ ನದಿ ಹರಿಯುವ ಪ್ರದೇಶದಲ್ಲಿ ಮತ್ತು ಭಾಗಮಂಡಲದಲ್ಲಿ ಕಾವೇರಿಯ ನದಿಯ ಸುಮಾರು ೩ ಕಿ.ಮೀ. ವರೆಗೆ ಹೂಳೆÉತ್ತುವ ೯೯ ಲಕ್ಷ ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರಕಿದೆಯೆಂದು ಮಾಹಿತಿ ನೀಡಿದರು.

ಭಾಗಮಂಡಲ ಸಂಗಮ ಕ್ಷೇತ್ರದ ಕನ್ನಿಕೆ ನದಿಯ ಪ್ರವಾಹ ನಿಯಂತ್ರಿಸಲು ತಡೆಗೋಡೆ ನಿರ್ಮಾಣ ಮಾಡಲು ಮತ್ತು ಅಲ್ಲಿನ ಹೂಳೆತ್ತಲು ೧.೦೨ ಕೋಟಿ ರೂ. ಕಾಮಗಾರಿ ನಡೆಯಲಿದೆಯೆಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದರು.

ಮಾದಕ ದ್ರವ್ಯ ಮಾರಾಟಕ್ಕೆ ಕಡಿವಾಣಕ್ಕೆ ಸೂಚನೆ- ಜಿಲ್ಲಾ ವ್ಯಾಪ್ತಿಯಲ್ಲಿ ಗಾಂಜಾ ಸೇರಿದಂತೆ ಮಾದಕದ್ರವ್ಯಗಳ ಮಾರಾಟ ದಂಧೆಗೆ ಕಡಿವಾಣ ಹಾಕಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೂತನ ಎಸ್‌ಪಿ ಅವರಿಗೆ ಈಗಾಗಲೆ ಅಗತ್ಯ ನಿರ್ದೇಶನ ನೀಡಿರುವುದಾಗಿ ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
ಮತಾಂತರ ತಡೆಗೆ ಕ್ರಮ- ಮತಾಂತರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾನೂನಿನಂತೆ ಮತಾಂತರಕ್ಕೆ ಪ್ರಚೋದನೆ ನೀಡುವುದೆ ಜಾಮೀನು ರಹಿತ ಕೃತ್ಯವಾಗಿದೆ. ಕಾನೂನಿನ ಮೂಲಕ ಇಂತಹ ಘಟನೆಗಳನ್ನು ನಿಗ್ರಹಿಸಬೇಕಾಗಿದೆಯೆಂದು ಅನಿಸಿಕೆ ವ್ಯಕ್ತಪಡಿಸಿದರು.
ಮಲ್ಟಿ ಸ್ಪಷಾಲಿಟಿ ಎನ್ನುವ ಆಗ್ರಹ ಬೇಡ- ಜಿಲ್ಲೆಯಲ್ಲಿ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯೇ ಬೇಕೆನ್ನುವ ಆಗ್ರಹ ಬೇಡ. ಮಡಿಕೇರಿಯಲ್ಲಿ ಇರುವ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ಇದೆ, ಒಳ್ಳೆಯ ವೈದ್ಯರಿದ್ದಾರೆ. ಮೈಸೂರು ಜಯದೇವದಂತಹ ಆಸ್ಪತ್ರೆಯೇ ಇಲ್ಲ್ಲಿಗೆ ಬೇಕೆಂದರೆ ಕಷ್ಟಸಾಧ್ಯವೆಂದು ತಿಳಿಸಿದ ಶಾಸಕರು, ಅಗತ್ಯ ಚಿಕಿತ್ಸಾ ಸೌಲಭ್ಯ ಇಲ್ಲಿದ್ದರು ರೋಗಿಗಳನ್ನು ಹೊರ ಆಸ್ಪತ್ರೆಗೆ ಕಳುಹಿಸುವ ಕೆಲ ಘಟನೆಗಳು ತನ್ನ ಗಮನಕ್ಕೆ ಬಂದಿದೆ. ಆ ರೀತಿ ಆಗಬಾರದೆಂದು ತಿಳಿಸಿದರು.

ದುರಾಸೆ ಇಲ್ಲ… ಭಾರತೀಯ ಜನತಾ ಪಾರ್ಟಿ ತನಗೆ ಎಲ್ಲವನ್ನೂ ನೀಡಿದೆ. ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ. ಪಕ್ಷ ಸ್ಪರ್ಧಿಸು ಅಂದರೆ ಸ್ಪರ್ಧಿಸುತ್ತೇನೆ. ಇತರೆ ಯಾರಿಗೆ ಅವಕಾಶ ಕೊಟ್ಟರು ಅದಕ್ಕೆ ತಾನು ಸಿದ್ಧ. ನಾನೇ ಸ್ಪರ್ಧಿಸಬೇಕೆನ್ನುವ ದುರಾಸೆ ಇಲ್ಲವೆಂದು ಶಾಸಕ ಕೆ.ಜಿ. ಬೋಪಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು.
ಪಕ್ಷದ ತಳ ಮಟ್ಟದಿಂದ ಬೆಳೆÉದು ಬಂದ ತನಗೆ ಪಕ್ಷ ಸಾಕಷ್ಟು ಅವಕಾಶಗಳನ್ನು , ಅಧಿಕಾರವನ್ನು ನಿಡಿದೆ. ಕೇಳಿಕೊಂಡು ಹೋಗುವ ಗುಣ ತನ್ನದಲ್ಲವಾದ್ದರಿಂದ ಮತ್ತಷ್ಟು ಉನ್ನತ ಸ್ಥಾನಗಳಿಗೇರುವ ಅವಕಾಶ ಪಡೆಯುವಲ್ಲಿ ವಿಫಲವಾಗಿರಬಹುದೆಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಅವರು ಮಾತನಾಡಿ, ನಲ್ಕು ಬಾರಿ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗೆಹರಿಕೆಗೆ ಸಾಕಷ್ಟು ಶ್ರಮಿಸಿದ್ದಾರೆಂದು ಹೇಳಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟನ್ ಖಜಾಂಚಿ ಕೆ. ತಿಮ್ಮಪ್ಪ ಮಾತನಾಡಿ, ಶಾಸಕ ಕೆ.ಜಿ. ಬೋಪಯ್ಯ ಅವರು ಹೋರಾಟ ಮತ್ತು ಕೆಲಸಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರಚಾರದಿಂದ ದೂರ ಉಳಿದವರೆಂದು ಅಭಿಪ್ರಾಯಿಸಿದರು.

ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಉಜ್ವಲ್ ರಂಜಿತ್ ಸ್ವಾಗತಿಸಿ, ವಂದಿಸಿದರು.ಸಂಘದ ಸದಸ್ಯ ಹಾಗು ಕೆಂದಾವರೆ ವೆಬ್ಸೈಟಿನ ಸಹ ಸಂಪಾದಕರಾದ ಕು. ರಂಜಿತ್ ಕವಲಪಾರ ಕಾರ್ಯಕ್ರಮವನ್ನು ನಿರೂಪಿಸಿದರು.