ಶಿಲ್ಪಕಲೆ ಹಾಗು ಮರದ ಕೆತ್ತನೆಗಳಲ್ಲಿ ಭಾರತದ ಶ್ರೇಷ್ಠತೆ ಅಮೋಘವಾದಂತಹದ್ದು. ಭಾರತೀಯ ಶಿಲ್ಪ ಕಲಾಕೃತಿಗಳು, ಮರದ ಕೆತ್ತನೆಗಳು ಇಂದಿಗೂ ಇಡೀ ಜಗತ್ತಿಗೇ ಅಚ್ಚರಿ ಹುಟ್ಟಿಸುವಂತಹದ್ದು. ವಿಶ್ವಕರ್ಮ, ಜಕ್ಕಣಾಚಾರ್ಯ, ಮಾಯಾ ಕಾಲದಿಂದ ಈಗಿನ ಹೊಸ ಯುಗದ ಶಿಲ್ಪಕಲಾ, ಕೆತ್ತನೆಯ ಕಲಾವಿದರಾದ ರಾಮ್ ಕಿಂಕರ್ ಬಾಯೆಜ್,  ತಪನ್ ತಾಲೂಕ್ದಾರ್, ಕೃಷ್ಣ ರೆಡ್ಡಿ ಅವರನ್ನು ಒಳಗೊಂಡು ತೀರಾ ಇತ್ತೀಚೆಗಿನ ಸುಬೋದ್  ಗುಪ್ತ, ಧ್ರುವ ಮಿಶ್ರಾ, ಅನೀಶ್ ಕಪೂರ್, ರವಿಂದರ್ ರೆಡ್ಡಿ ಹಾಗು ಮತ್ತೂ ಇತರರು ಭಾರತೀಯ ಶಿಲ್ಪಕಲಾ ಕರ ಕುಶಲ ಕಲೆಗೆ ಸಂಮೃದ್ಧಿಯನ್ನು ಯಥೇಚ್ಛವಾಗಿಯೇ ತಂದು ಕೊಟ್ಟಿದ್ದಾರೆ. ಭಾರತದ ಶಿಲ್ಪಕಲಾ ಪ್ರಾವಿಣ್ಯತೆಗೆ ಸಾಕ್ಷಿ ಎಂಬಂತೆ ನಮಗೆ ಮದ್ಯಪ್ರದೇಶದ ಖಜರಾಹೋ ದೇವಸ್ಥಾನ, ಕರ್ನಾಟಕದ ಹಳೆಬೀಡು ದೇವಸ್ಥಾನ, ಒಡಿಸ್ಸಾದ ಕೊನಾಕ್೯ ದೇವಸ್ಥಾನ, ಗುಜರಾತಿನ ಸೋಮನಾಥ ದೇವಸ್ಥಾನವೂ ಒಳಗೊಂಡಂತೆ ಹತ್ತು ಹಲವು ನಿದರ್ಶನಗಳು ನಮ್ಮ ಈ ದೇಶದ ಉದ್ದಗಲಕ್ಕೂ ಸಿಕ್ಕುತ್ತವೆ. ಆದ್ದರಿಂದ ಶಿಲ್ಪಕಲೆ, ಕರಕುಶಲ ವಸ್ತುಗಳ ಪ್ರಾವಿಣ್ಯತೆಯಲ್ಲಿ ಭಾರತ ಪ್ರಪಂಚಕ್ಕೆ ಮಾದರಿ ಆಗಬಲ್ಲುದು. ಕರ್ನಾಟಕದ ಕಾಶ್ಮೀರ ಕೊಡಗಿನಲ್ಲೂ ಅಂತಹ ಒಬ್ಬ ಅಸಮಾನ್ಯ ಶಿಲ್ಪ ಇದ್ದಾರೆ…!

ಕೇವಲ ಐದು ನಿಮಿಷದಲ್ಲಿ ಓದಿರಿ

ಆ ಶಿಲ್ಪ ಕಲೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಅತ್ಯಂತ ಪ್ರತಿಭಾಶಾಲಿ ಆಗಿರುವವರು ಚಟ್ಟಳ್ಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಚೇರಳ ಶ್ರೀಮಂಗಲ ಗ್ರಾಮದ ಶ್ರೀನಿವಾಸ್ ಹಾಗು ಸುಶೀಲ ದಂಪತಿಗಳ ಪುತ್ರ ಅನೀಶ್ ಕುಮಾರ್. ಓದಿನಲ್ಲಿ ಅಷ್ಟೇನು ಆಸಕ್ತಿ ಹೊಂದಿರದಿದ್ದ ಅನೀಶ್ ಅವರು ತಂದೆಯ ಆಚಾರಿ ಕೆಲಸ ನೋಡುತ್ತಲೇ ಬೆಳೆದುದ್ದರಿಂದ ಅದರಲ್ಲಿ ಅತೀವ ಆಸಕ್ತಿ ಹೊಂದಿದ್ದರು‌. ಅದನ್ನು ಕಲಿಯಲೂ ಬೇಕೆಂಬ ಉತ್ಕಟ ಉಮೇದು ಕೂಡ ಹುಟ್ಟಿತು. ಆದರೆ ತಂದೆ ಏನು ಹೇಳುತ್ತಾರೋ ಏನೋ ಎಂಬ ಭಯದಲ್ಲೇ ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣದ ತನಕ ಒಲ್ಲದ ಮನಸ್ಸಿನಲ್ಲೇ ವಿದ್ಯಾಭ್ಯಾಸ ಮಾಡಿದರು.

   ಹೀಗೆ ಒಂದು ದಿನ ಅವರ ಮನೆಯ ಬಳಿ ಅಯ್ಯಪ್ಪ ದೇವಸ್ಥಾನದ ಗಣಪತಿ ಗುಡಿಯ ನಿರ್ಮಾಣಕ್ಕೆಂದು ಬಂದಿದ್ದ ಆಚಾರಿಗಳಾದ ಮಾಲ್ದಾರೆಯ ದುರ್ಗಾಪ್ರಸಾದ್ ಹಾಗು ರಮೇಶ್ ಅವರಲ್ಲಿ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರಿಬ್ಬರೂ ಗುರು ಸ್ಥಾನದಲ್ಲಿ ನಿಂತು ಅನೀಶ್ ಕುಮಾರ್ ಅವರಿಗೆ ಎಲ್ಲವನ್ನು ಹೇಳಿಕೊಡಲು ಸಮ್ಮತಿಸಿದರು. ಅದೇ ದೇವಸ್ಥಾನದಲ್ಲಿ ದುರ್ಗಾಪ್ರಸಾದ್ ಹಾಗು ರಮೇಶ್ ಅವರಿಗೆ ಅನೀಶ್ ಪದ್ಧತಿಯಂತೆ ವೀಳ್ಯದೆಲೆ ಹಾಗು 101 ರೂ. ಗುರುಕಾಣಿಕೆ ನೀಡಿ, ಕಲಿಕೆಯನ್ನು ಆರಂಭಿಸಿದ್ದು ಒಂದು ಅಮೃತ ಘಳಿಗೆ ಎಂದು ಅನೀಶ್ ಅವರು ಗುರುವನ್ನು ಸ್ಮರಣಿಸುತ್ತಾರೆ.

Advertisement

ಅಲ್ಲಿ ಮರದ ಕೆತ್ತನೆಯ ಕೆಲಸದಲ್ಲಿ ತಕ್ಕಮಟ್ಟಿಗಿನ ಸಿದ್ಧಿ ಒಲಿದ ನಂತರ ಅನೀಶ್ ಅವರು ಪೊನ್ನಂಪೇಟೆಯ ಕೆತ್ತನೆ ಕಲಾವಿದರಾದ ಸಾಬು ಅವರಲ್ಲಿ ಮೂರು ವರ್ಷಗಳ ಕಾಲ ಮರದಿಂದ ಮೂರ್ತಿ ಕೆತ್ತನೆಯನ್ನು ಹಲವು ಮಾದರಿಗಳಲ್ಲಿ ತಯಾರಿಸುವುದನ್ನು ಕಲಿತರು. ಇಲ್ಲಿ ಮರ ಕೆತ್ತನೆಯ ಕಲೆಗೆ ಪಕ್ವತೆ ಸಿಗಲು ಅವಿರತ ತಾಲೀಮು ತರಬೇತಿಯನ್ನು ಅತ್ಯಂತ ಶ್ರಮ ಹಾಗು ಶ್ರದ್ಧೆ ವಹಿಸಿ ಪಡೆದುಕೊಂಡರು. ನಂತರ ಜನರೂ ಕೂಡ ಅನೀಶ್ ಅವರ ಕಲೆಯನ್ನು ಗುರುತಿಸಿ ಮೆಚ್ಚಿ ಹಲವಷ್ಟು ಕೆಲಸಗಳನ್ನು ನೀಡಿದರು. ಆ ಮೂಲಕ ಹಲವಾರು ದೇವಾಲಯ, ಮನೆಗಳಲ್ಲಿ ಮರದ ಕೆತ್ತನೆಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟರು. ಜಿಲ್ಲಾದ್ಯಂತ ನಡೆದ ಅದೆಷ್ಟೋ ಕ್ರೀಡಾಕೂಟಗಳಿಗೆ ಇವರು ಮಾಡಿದ್ದ ಕಲಾಕೃತಿಗಳನ್ನು ಸ್ಮರಣಿಕೆಯಾಗಿ ನೀಡಲಾಗಿದೆ.

ಆ ಪೈಕಿ ಚಟ್ಟಳ್ಳಿಯ ವಿರಾಂಜನೇಯ ಯುವಕ ಸಂಘದವರು ನಡೆಸಿದ ಕಬ್ಬಡ್ಡಿ ಪಂದ್ಯಾವಳಿಗೆ ಹಲಸಿನ ಮರದಿಂದ ಸುಮಾರು 15.5 ಕೆ.ಜಿ ತೂಕದ ಗದೆಯನ್ನು ಹಾಗು ಶೂಲ ಅದರೊಂದಿಗೆ ಭಗವದ್ ಧ್ವಜವನ್ನು ನಿಖರವಾಗಿ ಕೆತ್ತಿದ್ದು, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತ್ತು.

ಉರುವಲಾಗಿ ಉರಿದು ಭೂದಿ ಆಗಿ ಹೋಗುತ್ತಿದ್ದ ಅದೆಷ್ಟೋ ಅನುಪಯುಕ್ತ ಮರದ ಬೇರುಗಳನ್ನು ಮರದ ಮಿಲ್ ಗಳಿಂದ ಹಣ ಪಾವತಿಸಿ ಪಡೆದು, ಅದರಲ್ಲಿಯೂ ಹಲವಷ್ಟು ಪ್ರಾಣಿ ಪಕ್ಷಿಗಳ ಕಲಾಕೃತಿಗಳನ್ನು ಕೆತ್ತಿ, ದೊಡ್ಡ ಮಟ್ಟದ ಬೇಡಿಕೆಯಲ್ಲಿ ಅದನ್ನು ಮಾರಿದ್ದಾರೆ. ಅಷ್ಟಾವಕ್ರದ ಮರದ ಬೇರುಗಳಿಗೂ ತಮ್ಮ ಕಲ್ಪನೆಯ ಥೀಮ್ ಹೊಂದಿರುವ ಕೆತ್ತನೆಗಳನ್ನು ಮಾಡಿ ಜನರನ್ನು ಧಂಗಾಗಿಸಿದ್ದಾರೆ.

ಕೊಡಗಿನ ಪ್ರತಿಷ್ಠಿತ ಅಂತರಾಷ್ಟ್ರೀಯ ಕ್ಲಬ್ ಮಹೇಂದ್ರ ರೆಸಾರ್ಟಿಗೆ ಕೊಡಗಿನ ಮುಖ್ಯ ಬೆಳೆಯಾದ ಕಾಫಿ(ಬೀನ್ ) ಬೀಜಹಾಗು ಏಲಕ್ಕಿಯ ಮಾದರಿಗಳನ್ನು ಮರದಲ್ಲಿ ಕೆತ್ತಿ ತಯಾರಿಸಿ ನೀಡಿದ್ದರು. ಅದರಿಂದ ಸಂತುಷ್ಟರಾದ ರೆಸಾಟ್೯ನ ಆಡಳಿತ ಮಂಡಳಿ ರೆಸಾರ್ಟ್‌ ನ ಪ್ರತಿ ಕಾಟೇಜಿನಲ್ಲಿಡಲು ಕೂಡ ಒಟ್ಟು 75  ಮಾದರಿಗಳನ್ನು ಆರ್ಡರ್‌ ಮಾಡಿ ಖರೀದಿಸಿತ್ತು. ಇವುಗಳ ಕೆತ್ತನೆ ಅತ್ಯಂತ ಸೂಕ್ಷ್ಮ ಹಾಗು ನಾಜೂಕಾಗಿ ಇದ್ದಿದ್ದರಿಂದ ಅವು ಅತ್ಯಂತ ಅಧಿಕೃತ ಎಂಬಂತೆ ಗೋಚರಿಸುತ್ತಿದ್ದವು.

10 ವರ್ಷಗಳ ಮರದ ಕೆತ್ತನೆಯ ಉತ್ಕೃಷ್ಟ ಅನುಭವದ ನಂತರ ಪರಿಚಿತರೊಬ್ಬರು ನೀಡಿದ ಸಲಹೆ ಮೇರೆಗೆ ಶಿಲ್ಪಕಲೆ ಕಲಿಯಲೆಂದು ಅಂದುಕೊಂಡರು. 2016ರಿಂದ 2018ರವರೆಗೆ ಅನೀಶ್ ಅವರು ಕಾರ್ಕಳದ ಸಿ.ಇ ಕಾಮತ್ ಇನ್ಸ್ಟಿಟ್ಯೂಟ್ ಫಾರ್ ಆರ್ಟಿಶನ್ಸ್ ನಿಂದ ಶಿಲ್ಪಕಲೆಯ ಹಾಗು ಮರದ ಕೆತ್ತನೆಯ ಎರಡು ವರ್ಷಗಳ ತರಬೇತಿಯನ್ನು ಪಡೆದುಕೊಂಡರು. ತರಬೇತಿಯ ಸಮಯಾವಧಿಯಲ್ಲಿ ಅನೀಶ್ ಕುಮಾರ್ ಅವರು ಕೆತ್ತಿದ ಹಲವಷ್ಟು ಸೃಜನಾತ್ಮಕ ಕಲಾಕೃತಿಗಳು ಹಾಗು ವಿಶೇಷವಾಗಿ ಮಹಿಷಮರ್ದಿನಿಯ ಶಿಲ್ಪಕಲಾ ವಿಗ್ರಹ ಮುಂಬರಲಿರುವ ವಿದ್ಯಾರ್ಥಿಗಳಿಗೆ ಇನ್ಸ್ಟಿಟ್ಯೂಟ್ ಅಲ್ಲಿ study material ಆಗಿ ಸಂರಕ್ಷಿಸಿ ಇಡಲಾಗಿದೆ. ಈ ವಿಚಾರ ಅನೀಶ್ ಅವರಿಗೆ ಎಲ್ಲಾ ಪ್ರಶಸ್ತಿಗಳಿಗಿಂತ ದೊಡ್ಡದು ಎಂದು ಗರ್ವದಿಂದ ನುಡಿಯುತ್ತಾರೆ.

ಮಹಿಷ ಮರ್ದಿನಿ ಶಿಲ್ಪ ಕಲಾ ವಿಗ್ರಹ

ಇನ್ನುಳಿದಂತೆ ಆನೆ, ಸಿಂಹ, ಜಿಂಕೆ, ಮೊಸಳೆ, ದೀಪ ಸ್ಥಂಭ, ಶಂಖದ ಆಕೃತಿಗಳನ್ನು ಮರದ ಕೆತ್ತನೆಯಲ್ಲಿ ಅತ್ಯಂತ ಕರಾರುವಾಕ್ಕಾಗಿ ರೂಪಿಸಿದ್ದಾರೆ.

ಶಿಲ್ಪಕಲಾ ವಿನ್ಯಾಸಗಳಲ್ಲಿ ಅಯ್ಯಪ್ಪ ಸ್ವಾಮಿ, ದೊಡ್ಡಮ್ಮ ತಾಯಿ ಹಾಗು ಚಿಕ್ಕಮ್ಮತಾಯಿ, ಬಸವೇಶ್ವರ, ನಾಗದೇವರ ಕಲ್ಲು, ಗೌತಮ ಬುದ್ಧ, ಭದ್ರಕಾಳಿ, ಹನುಮಂತ, ಛತ್ರಪತಿ ಶಿವಾಜಿ, ಗುರು ಕಾರಣ ಹೀಗೆ ಹತ್ತು ಹಲವು ವಿಗ್ರಹಗಳನ್ನು ಅತ್ಯಂತ ಕಲಾತ್ಮಕವಾಗಿ ಕೆತ್ತಿದ್ದಾರೆ.

ಅತ್ಯಂತ ವಿನಯವಂತರಾದ ಅನೀಶ್ ಕುಮಾರ್ ಅವರು, ‘ನಾನು ಈ ವಿಗ್ರಹಗಳನ್ನೆಲ್ಲಾ ಕೆತ್ತುವಾಗ ನನ್ನ ಕೈ ಹಿಡಿದು ಯಾವುದೋ ಶಕ್ತಿ ಮಾಡಿಸುತ್ತಿದೆ ಎಂದೆನಿಸುತ್ತದೆ. ನಾನೇ ಇದನ್ನೆಲ್ಲಾ ಮಾಡಿದೆನಾ ಎಂದು ಒಮ್ಮೊಮ್ಮೆ ದಿಗ್ಭ್ರಮೆ ಆಗುತ್ತದೆ’ ಎಂದು ಸಾತ್ವಿಕತೆಯೊಂದಿಗೆ ನುಡಿದು ಏದುಸಿರೆಳೆಯುತ್ತಾರೆ.

ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಕಡೆಗಳಲ್ಲಿ ಸನ್ಮಾನಗಳು ಆಗಿವೆ. ಕಾರ್ಕಳ, ಮಾಲ್ದಾರೆ, ಸೋಮವಾರಪೇಟೆ, ಚಟ್ಟಳ್ಳಿ, ಕನಕಪುರ ಸೇರಿದಂತೆ ಮತ್ತೂ ಹಲವೆಡೆ ಸಂಘ ಸಂಸ್ಥೆಗಳು ಇವರಿಗೆ ಗೌರವಿಸಿ ಸನ್ಮಾನಗಳನ್ನು ಮಾಡಿದೆ.

ಪ್ರಸ್ತುತ ಮಡಿಕೇರಿ-ಕುಶಾಲನಗರ ನಡುವೆ ಸಿಗುವ ಬಸವನಹಳ್ಳಿ ಬಿ.ಎಂ ರಸ್ತೆ ಬದಿಯಲ್ಲಿ ‘ಓಂ ಶಿಲ್ಪ ಕಲಾ ಕೇಂದ್ರ’ವನ್ನು ಮಾಡಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ಶಿಲ್ಪ ಹಾಗು ಮರದ ಕಲಾಕೃತಿಗಳನ್ನು ತಯಾರಿಸಿ, ಪ್ರದರ್ಶನ ಹಾಗು ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ.

ನೀವು ಕೂಡ ಮನೆಯ ಕಿಟಕಿ, ಬಾಗಿಲುಗಳ ಕೆತ್ತನೆಗೆ, ವಿಗ್ರಹಗಳ ಕೆತ್ತನೆಗೆ, ಅಲಂಕಾರಿಕಾ ವಸ್ತುಗಳ ತಯಾರಿಕೆಗೆ ಅನೀಶ್ ಕುಮಾರ್ ಅವರನ್ನು ಸಂಪರ್ಕಿಸಬಹುದಾಗಿದೆ. ತಮ್ಮ ಅಗತ್ಯಗಳನ್ನು ತಿಳಿಸಿ ಆರ್ಡರ್ ನೀಡಲು ಸಂಪರ್ಕಿಸಿ 9482733564, 6362217619 ಸಂಖ್ಯೆಗೆ ಕರೆ ಮಾಡಿರಿ.