ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಅಶ್ಲೀಲ ಪದ ಬಳಕೆ ಸಂಬಂಧ ದಾಖಲಾಗಿದ್ದಂತ ಎಫ್‌ಐಆರ್ ಹಿನ್ನಲೆಯಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯವು, ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಿಡುಗಡೆಗೆ ಆದೇಶಿಸಿದೆ.
ಬೆಳಗಾವಿಯ ಜೆಎಂಎಫ್ ಸಿ ನ್ಯಾಯಾಲಯವು ಪರಿಷತ್ ಸದಸ್ಯ ಸಿ.ಟಿ ರವಿ ಅವರು ತಮ್ಮ ಬಂಧನದ ನಂತ್ರ ಜಾಮೀನಿಗಾಗಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಹೀಗಾಗಿ ಸಿ.ಟಿ ರವಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ರಸ್ತೆ ಮಾರ್ಗದ ಮೂಲಕ ಕಾರಿನಲ್ಲಿ ಕರೆತರಲಾಗುತ್ತಿದೆ.
ಈ ಬೆನ್ನಲ್ಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ಕೋರ್ಟ್ ನಲ್ಲಿ ಸಿ.ಟಿ ರವಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ಆರಂಭಿಸಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದ್ರೇ, ಸಿ.ಟಿ ರವಿ ಪರವಾಗಿ ಅಶೋಕ್ ಹಾರನಹಳ್ಳಿ ಪ್ರತಿವಾದ ಮಂಡಿಸಿದರು.
ವಾದ ಪ್ರತಿ ವಾದಗಳನ್ನು ಆಲಿಸಿದಂತ ನ್ಯಾಯಾಲಯವು, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ.