ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲ ಬ್ಯಾಚಿನ ವೈದ್ಯಕೀಯ ಮೂವರು ಪದವೀಧರ ವಿದ್ಯಾರ್ಥಿಗಳು ಕೊಡಗಿನ ಜನರು ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾರೆ.
ಭಾರತೀಯ ಸೇನೆಯ ವೈದ್ಯಕೀಯ ವಿಭಾಗವಾದ ಆರ್ಮಿ ಮೆಡಿಕಲ್ ಕೋರ್ ವಿಭಾಗಕ್ಕೆ ಈ ಬಾರಿ ಆಯ್ಕೆಯಾದ ಸುಮಾರು ಮುನ್ನೂರು ವೈದ್ಯರಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಈ ಮೂವರು ವೈದ್ಯರು ಸೇರಿದ್ದಾರೆ.ಡಾ ವೇದಾಂತ್ ಡಿ, ಡಾ ತಿಲಕ್ ನಿಥಿ ವೈ ಟಿ ಮತ್ತು ಡಾ ಸುಹಾಸ್ ಎಸ್ ಕುಮಾರ್ ಅವರಿಗೆ ಕ್ರಮವಾಗಿ ಮಿಲಿಟರಿ ಹಾಸ್ಪಿಟಲ್ ಕಿರ್ಕಿ, ಬೇಸ್ ಹಾಸ್ಪಿಟಲ್ ಗುವಾಹಾಟಿ ಮತ್ತು ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಬೆಂಗಳೂರಿಗೆ ವರದಿ ಮಾಡಿಕೊಳ್ಳುವ ಆದೇಶ ಪತ್ರಗಳನ್ನು ಪಡೆದಿದ್ದಾರೆ
ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಸೇನೆಯ ವೈದ್ಯಕೀಯ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವೈದ್ಯರನ್ನು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಗೆ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಅವರು ತಮಗೆ ನಿಗದಿಪಡಿಸಿದ ಸೇನೆಯ ವೈದ್ಯಕೀಯ ಸಂಸ್ಥೆಗೆ ವರದಿಮಾಡಿಕೊಂಡ ಬಳಿಗೆ ಈ ಅಧಿಕಾರಿಗಳ ಮಿಲಿಟರಿ ತರಬೇತಿಯು ಲಕ್ನೋ ನಗರದಲ್ಲಿರುವ ಆಫೀಸರ್ ಟ್ರೈನಿಂಗ್ ಕಾಲೇಜಿನಲ್ಲಿ ನಡೆಯುತ್ತದೆ.