ಮೊಬೈಲ್ ಕೊಡಿಸಲಿಲ್ಲವೆಂದು ,ಬೈಕ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮಕ್ಕಳು ಆತ್ಮಹತ್ಯೆಗೆ ಶರಣಾದ ಪ್ರಸಂಗಗಳನ್ನು ನಾವು ಕಂಡಿದ್ದೇವೆ.ಹಾಗೆಯೇ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು
ಅವರಲ್ಲಿ ಹುಡುಗ ಐದನೆಯ ತರಗತಿ ಹುಡುಗಿ ನಾಲ್ಕನೆಯ ತರಗತಿ ಇವರ ನಡುವೆ ಪರಸ್ಪರ ಪ್ರೀತಿಯಂತೆ, ಓಡಿ ಹೋಗಿ ಮದುವೆಯಾಗ
ಬೇಕೆಂದು ಇಬ್ಬರೂ ಶಾಲೆಯಿಂದ ಪಲಾಯನವಾಗಿದ್ದ ಸುದ್ದಿ ಬಹು ಚರ್ಚಿತವಾಗಿತ್ತು.ಇದು ನಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಪಕ್ಕವೇ ನಡೆದಿದ್ದ ಘಟನೆ!
ಒಂಭತ್ತನೇ ತರಗತಿಯ ಹುಡುಗಿಯರಿಬ್ಬರನ್ನು ಹತ್ತನೆಯ ತರಗತಿಯಲ್ಲಿದ್ದ ಹುಡುಗನೊಬ್ಬ,ಅವನೊಡನೆ ಅವನ ಗೆಳೆಯನೊಬ್ಬ ತಮಿಳುನಾಡಿಗೆ ಓಡಿಸಿಕೊಂಡು ಹೋಗುವ ಯೋಜನೆ ತಿಳಿದು ನಾಲ್ಕು ಕಿ.ಮೀ ದೂರದಲ್ಲಿ ಅವರನ್ನು ಜೋಡಿಗಳ ಸಹಿತ ವಶಕ್ಕೆ ಪಡೆಯಲಾಯಿತು!
ಏನಾಗುತ್ತಿದೆ ಇಂದಿನ ಮಕ್ಕಳಿಗೆ!
ಅಪ್ಪ ಅಮ್ಮ ಇವರ ಹೊಟ್ಟೆ ತುಂಬಿಸಲು ಕೂಲಿನಾಲಿ ಮಾಡಿ ಸಂಪಾದಿಸುತ್ತಿದ್ದರೆ ಅವರ ಬೆವರಿದ ಮುಖ ಹರಿದ ಬಟ್ಟೆ ಹಸಿದ ಹೊಟ್ಟೆ ಇವರ ಕಲ್ಪನೆಗೂ ನಿಲುಕದೆ ಶೋಕಿ ಮಾಡಲು ಹೊರಟಿದ್ದರಲ್ಲ!ದೂರದರ್ಶನ,ಚರವಾಣಿ
ಯಂತಹ ಸಾಧನಗಳು ಇಂದಿನ ಮಕ್ಕಳ ಮೇಲೆ ಎಂತಹ ನಿಷೇಧಾತ್ಮಕ ಪರಿಣಾಮವನ್ನು ಬೀರುತ್ತಿದೆ !ನೆನೆದರೆ ಎದೆಯಲ್ಲಿ ಸಣ್ಣ ಕಂಪನವೊಂದು ಮೂಡುತ್ತದೆ.
ಸಾವಿಗೆ ಶರಣಾಗುವ ನಿರ್ಧಾರದ ಹಿಂದೆ ತಾನು ಬಯಸಿದ್ದೆಲ್ಲವನ್ನು ಅಪ್ಪ ಅಮ್ಮನಿಂದ ಪಡೆಯುವುದು ತನ್ನ ಹಕ್ಕು ಎಂಬ ಮನೋಭಾವ ! ಹೆತ್ತವರು ತಮಗೆ ತಾವು ಬಯಸಿದ್ದನ್ನೆಲ್ಲ ಕೊಡಿಸುತ್ತಾರೆ,ಕೊಡಿಸಬೇಕೆಂಬ ಧೋರಣೆ,ಇಂದಿನ ಬಹುತೇಕ ಮಕ್ಕಳಲ್ಲಿ ಮನೆಮಾಡಿರುವುದೇ ಇದಕ್ಕೆ ಕಾರಣ!
ಬಾಹ್ಯ ಸಂಗತಿಗಳು ಹೇಗೆ ಆಂತರಿಕ ಬಂಧವನ್ನು ಜಾಳುಗೊಳಿಸುತ್ತವೆ ಎಂದು ನೆನೆದಾಗ ಮನಸ್ಸು ತೀರಾ ಹತಾಶೆಗೊಳಗಾಗುತ್ತದೆ.ಯಾರಾದರೂ ನಮ್ಮ ಮೇಲೆ ಚಾಡಿ ಹೇಳಿದಾಗ ಅಪ್ಪ ಹೇಳುತ್ತಿದ್ದರು,’ಅಣ್ಣಾ ! ನಮ್ಮ ಮಕ್ಕಳ ವಿಚಾರ ನಮಗೆ ಗೊತ್ತಿದೆ.ನೀವು ಹೇಳಿದ ತಪ್ಪನ್ನು ಅವರು ಖಂಡಿತಾ ಮಾಡಲಾರರು,ಏಕೆಂದರೆ ಅವರಿಗೆ ಸಂಸ್ಕಾರ ನೀಡಿದವರು ನಾವು’ ಎಂದು ಆತ್ಮವಿಶ್ವಾಸದಿಂದ ಹೇಳುವಾಗ
ಇಂತಹ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸವನ್ನು ಮಾಡಲಾದೀತೇ?ಇಂತಹ ಮಾತುಗಳು ಮಕ್ಕಳ ಬಾಳಿನ ಗತಿಯನ್ನು ದಡ ಮೀರದಂತೆ ರಕ್ಷಿಸುವ ಕೆಲಸ ಮಾಡಿಬಿಡುತ್ತದೆ.
ಒಮ್ಮೆ ಹೀಗಾಯಿತು…ನಾನು ನಾಲ್ಕು ವರ್ಷ ವಯಸ್ಸಿನ ಮಗು!
ಹಿರಿಯ ತಂಗಿ ನನ್ನಿಂದ ಎರಡು ವರ್ಷ ಚಿಕ್ಕವಳು!
ತಮ್ಮ ತೊಟ್ಟಿಲ ಮಗು ,’ಗಂಡು ಮಗು’ವೆಂದು ವಿಶೇಷ ಕಾಳಜಿ ಬೇರೆ.ಅಪ್ಪ ಶಾಲೆಗೆ ಹೋಗಿದ್ದರು ! ಅಮ್ಮ, ತೊಟ್ಟಿಲಲ್ಲಿ ನಿದ್ರಿಸುತ್ತಿದ್ದ ಅವನನ್ನು ನಮ್ಮ ಸುಪರ್ದಿಗೆ ವಹಿಸಿಬಿಟ್ಟು ಒಂದೂವರೆ ಮೈಲು ದೂರದಲ್ಲಿದ್ದ ಕಾವೇರಿ ಹೊಳೆಗೆ ಬಟ್ಟೆ ತೊಳೆಯಲು ಹೋಗಿದ್ದರು.ಅದೇಕೋ ಅಂದು ಅಮ್ಮನೆಣಿಕೆ ತಪ್ಪಾಗಿತ್ತು! ಅಮ್ಮ
ಇನ್ನೇನು ಹೊಳೆ ತಲುಪಿರಬಹುದು ಅಷ್ಟರಲ್ಲೇ ಎಚ್ಚರಾಗಿ ತಮ್ಮ ಅಳತೊಡಗಿದ.ಹಿರಿಯರಾರೂ ಸುತ್ತಮುತ್ತ ಇರಲಿಲ್ಲ.ಗಿಲಕಿ,ಚಪ್ಪಾಳೆ,ಹಾಡು,ನೃತ್ಯ,ಜೋಗುಳ….. ಯಾವುದೂ ಅವನ ಅಳು ನಿಲ್ಲಿಸಲು ಸಫಲವಾಗಲಿಲ್ಲ.
ಏನು ಮಾಡುವುದೆಂದು ತಿಳಿಯದೆ ಅಪ್ಪನ ಡ್ರಾಯರ್ ಎಳೆದು ಒಂದೇ ಒಂದು ಪೈಸೆ(ಆಗ ಅದು ತಾಮ್ರದ ನಾಣ್ಯ)
ತೆಗೆದುಕೊಂಡು ತಂಗಿಯ ಬಳಿ, ತೊಟ್ಟಿಲು ತೂಗುತ್ತಲೇ ಇರಲು ಹೇಳಿ ಒಂದೂವರೆ ಫರ್ಲಾಂಗ್ ದೂರದ ಅಂಗಡಿಗೆ ಓಡಿದೆ.ಆಗ ಪೈಸೆಗೆರಡು ಶುಂಠಿ ಮಿಠಾಯಿ ಸಿಗುತ್ತಿತ್ತು.ತಂದು ಒಂದನ್ನು ನನ್ನ ಪುಟ್ಟ ತಂಗಿಗೆ ತಿನ್ನಲು ಕೊಟ್ಟು ಮತ್ತೊಂದನ್ನು ಬೆರಳುಗಳ ತುದಿಯಲ್ಲಿ ಹಿಡಿದು ಮಗುವಿನ ಬಾಯಿಗಿಟ್ಟೆ.ಅದು ನಿಧಾನವಾಗಿ ಚೀಪತೊಡಗಿತು.ನನ್ನ ಬೆರಳುಗಳಲ್ಲಿ ಮಿಠಾಯಿ ಕರಗುವ ಮೊದಲೇ ಮಗು ನಿದ್ರೆ ಹೋಯಿತು.ಮತ್ತೆ ಅಮ್ಮ ಬರುವವರೆಗೆ ಎಚ್ಚರವಾಗಲಿಲ್ಲ!
ಅಪ್ಪನಿಗೆ ರಾತ್ರಿ ಊಟದ ಮೊದಲು ಖರ್ಚು ವೆಚ್ಚಗಳನ್ನು ತಾಳೆ ನೋಡುವ ಅಭ್ಯಾಸ! ಎಷ್ಟೋ ಹೊತ್ತಿನಿಂದ ತಾಳೆ ಸರಿಬರುತ್ತಿಲ್ಲ.ಊಟಕ್ಕೂ ಏಳುತ್ತಿಲ್ಲ.ಅಮ್ಮನನ್ನು ಕೇಳಿದರು.ಹಣವನ್ನೇನಾದರೂ ತೆಗೆದೆಯಾ ಎಂದು.’ಇಲ್ಲ’ ಎಂದರು.ನಮ್ಮಿಬ್ಬರನ್ನೂ ಬಳಿಗೆ
ಕರೆದು ನಿಲ್ಲಿಸಿ ಅವರು ಕಣ್ಣುಗಳನ್ನೇ ದಿಟ್ಟಿಸಲು ತಿಳಿಸಿದರು. ನನಗೆ ತಪ್ಪನ್ನು ಒಪ್ಪಿಕೊಳ್ಳಲು ಭಯ! ಅದಕ್ಕೆ ಹಲವು ಕಾರಣಗಳು! ನನಗಾಗಿ ತೆಗೆಯದಿದ್ದರೂ ನನಗೆ ಕಳ್ಳತನದ ಪಟ್ಟ ಸಿಗುವುದು ಒಂದಾದರೆ,ಅಪ್ಪನ ನಂಬಿಕೆಗೆ ದ್ರೋಹ ಬಗೆದ ಅಪರಾಧೀ ಪ್ರಜ್ಞೆ ! ಮೂರನೆಯದು ಅಷ್ಟು ಸಣ್ಣ ಮಗುವಿಗೆ ಅಂಗಡಿ ಮಿಠಾಯಿ ತಿನ್ನಿಸಿದ್ದು ತಪ್ಪೇನೋ ಎಂಬ ವಿಷಾದ! ಅಷ್ಟರಲ್ಲೇ ನನ್ನ ತಂಗಿ ಮೆಲ್ಲನೆ, ‘ಅಪ್ಪಯ್ಯಾ,ಅದು ಅಕ್ಕ ಕದ್ದಿದ್ದು,ಎಂದು ಮುದ್ದು ಮುದ್ದು ಭಾಷೆಯಲ್ಲಿ ಹೇಳಿದಾಗ,ಅಪ್ಪನ ದೂರ್ವಾಸ ರೂಪವನ್ನು ಎದುರಿಸಲಾರದೆ ನಡುಗತೊಡಗಿದೆ.ತಂಗಿ,ಅದನ್ನು ‘ಅಕ್ಕ ಏಕೆ ತೆಗೆದಳು’ಎಂದು ಹೇಳಲೂ ಇಲ್ಲ.ಅಪ್ಪ,ನನ್ನಲ್ಲಿ ಕಾರಣವನ್ನೂಕೇಳಲಿಲ್ಲ.
ಕೈಮುಂದೆ ಚಾಚಲು ಹೇಳಿ ಆ ಬೆಣ್ಣೆ ಹಸ್ತಕ್ಕೆ ಬಾಸುಂಡೆ ಬರುವಂತೆ ಹೊಡೆದರು.ಅಪ್ಪ ಶಿಕ್ಷಿಸುವಾಗ ಅಮ್ಮ ಎಂದೂ ಅಡ್ಡಬರುತ್ತಿರಲಿಲ್ಲ….ಸುಮ್ಮನೆ ಇದ್ದುಬಿಡುತ್ತಿದ್ದರು.ಅಡ್ಡ ಬಂದರೆ,ಎಲ್ಲಿ ಅಪ್ಪನ ಕೋಪದ ಬೆಂಕಿಗೆ ತುಪ್ಪಹಾಕಿದಂತಾಗುವುದೋ ಎಂಬ ಭಯವಿರಬೇಕು ಅಥವಾ ‘ ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ’ ಎಂಬ
ಮಾತಿನ ಪರಿಣಾಮವೋ…ಆ ಮೌನ ನನ್ನ ಮುಂದಿನ ದಿನಗಳಲ್ಲಿ ನನ್ನ ಪರಾನುಕಂಪೆಯ ಸ್ವಭಾವಕ್ಕಾಗಿ ನನ್ನ ಸಹೋದರಿ/ರರು ಎಲ್ಲರ ತಪ್ಪಿಗೂ ಶಿಕ್ಷೆಗೆ ನನ್ನನ್ನೇ ಗುರಿ ಮಾಡಿದ್ದಂತೂ ಸುಳ್ಳಲ್ಲ.
ಆದರೆ ಇದರ ಮತ್ತೊಂದು ಮಗ್ಗುಲನ್ನು ಅವಲೋಕಿಸಿದರೆ
ನಾನು ನನ್ನ ಕ್ರಿಯಾಶೀಲತೆಯಿಂದ ಅಪ್ಪನಿಗೇ ಆಪ್ತಳಾಗುತ್ತಾ ಸಾಗಿದ್ದೊಂದು ಭಾಗ್ಯವೇ ಸರಿ!
ಏಕೆಂದರೆ ಅಪ್ಪ,’ ವಜ್ರಾದಪೀ ಕಠೋರಾನಿ’ ನಿಜ!! ಆದರೆ ‘ಕೋಮಲಾನಿ ಸುಮಾದಪಿ’ಯೂ ಹೌದು!
ಸಿಟ್ಟಿಳಿದ ನಂತರ ಅಪ್ಪನ ಮಡಿಲು ನನಗೇ ಮೀಸಲು.ಮುದ್ದುಗರೆದು,ಕ್ಷಮೆ ಕೇಳಿ,ನನಗೆ ಇಷ್ಟವಾದ ತಿಂಡಿಯನ್ನು ಅಮ್ಮನಿಂದ ಮಾಡಿಸಿ,ಚಿಕ್ಕೆಜಮಾನಿಯನ್ನಾಗಿ ರೂಪಿಸುತ್ತಿದ್ದ ಅವರ ಸ್ವಭಾವ ನನಗೆ ಬಹಳ ಆಪ್ಯಾಯಮಾನ ವಾಗಿತ್ತು.ಹೊಡೆದ ನಂತರದ ಆ ಮುದ್ದು ಇದೆಯಲ್ಲ,ಅದರ ಸವಿಯನ್ನು ನನ್ನಂತೆ ಬೇರೆ ಯಾವ ಮಕ್ಕಳೂ ಸವಿಯುವ ಸೌಭಾಗ್ಯ ಪಡೆಯಲಿಲ್ಲ.ತಪ್ಪು ಮಾಡಿದಾಗಲೂ ಅಪ್ಪನನ್ನು ಎದುರಿಸಿ ಸಮರ್ಥಿಸಿಕೊಳ್ಳುವ
ದಿಟ್ಟತನ ನನ್ನಲ್ಲಿ ಕುಡಿಯೊಡೆಯಿತು.
‘ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ’ಎಂಬ ನಾಣ್ಣುಡಿಯಂತೆ,ನನ್ನನ್ನು ತಿದ್ದಿ ಮಾದರಿಯಾಗಿಸಿದರೆ ಸಹೋದರರ ಉಸ್ತುವಾರಿ
ಯನ್ನು ಇವಳೇ ನಿರ್ವಹಿಸಬಲ್ಲಳು ಎಂಬ ಅಚಲ ವಿಶ್ವಾಸವೂ ಆಗಲೇ ನನ್ನ ಗುರುವೂ ಆಗಿದ್ದ ಅಪ್ಪನಿಗಿತ್ತು!
ಒಂದು ಪೈಸೆಯ ನಾಪತ್ತೆಗೆ ನನ್ನ
ತಂಗಿ ಮಿಠಾಯಿ ತಿಂದ ಕೃತಜ್ಞತೆಗಾದರೂ ಕೊನೆಯವರೆಗೂ ಅದನ್ನು ಬಹಿರಂಗ ಪಡಿಸಲು ಹೋಗಲೇ ಇಲ್ಲ.ಇದು ನನ್ನ ಪುಟ್ಟ ಮನಸ್ಸಿನ ಮೇಲೆ ಈಗಲೂ ಮಾಯದಂಥ ಬರೆಯಾಗಿ ಅಳಿದುಬಿಟ್ಟಿದೆ.ಇತರರು
ಯಾರಿಂದಲೂ ಎಂತಹ ಸಂದರ್ಭದಲ್ಲೇ ಆಗಲಿ ನೆರವನ್ನು ನಿರೀಕ್ಷಿಸಲಾಗದು ಎಂದು ಸ್ಥಿತ ಪ್ರಜ್ಞತೆಯ ಪಾಠವನ್ನು ಬಾಲ್ಯದಲ್ಲೇ ಕಲಿಸಿದೆ.ಹಾಗಂತ ಅವರನ್ನು ಕಡೆಗಣಿಸುವ ಕೆಲಸವನ್ನು ನಾನೆಂದೂ ಮಾಡಲಿಲ್ಲ.
ಮತ್ತೆ ,’ಮನೆಯವರದೇ ಆದರೂ ಅದರ ಮೇಲೆ ನನಗೆ ಖಂಡಿತ ಹಕ್ಕಿಲ್ಲ,ನನಗೆಂದು ಬಯಸುವುದು ಮಹಾಪಾಪ!
ಅಪ್ಪ ಅಮ್ಮನ ಹೆತ್ತಋಣ ಪ್ರೀತಿಯ ಋಣ,ಸಾಕಿದ ಋಣ,ಮಾರ್ಗದರ್ಶನದ ಋಣ,
ಜ್ಞಾನದ ಋಣ ಯಾವುದನ್ನೂ ಮರೆಯದೆ ಮರುಸಂದಾಯ ಮಾಡಬೇಕಾದ ಗುರುತರ
ಋಣದಿಂದ ನಾವು ಪಾರಾಗಬೇಕಾದರೆ ಕೊನೆವರೆಗೆ ಅವರ ಸೇವೆಗಾಗಿ ನಾವು ಕಟಿಬದ್ಧರಾಗಿರಬೇಕಾದುದೇಮಾರ್ಗ’ ಎಂಬ ಜೀವನದ ಅಮೋಘ ಪಾಠವನ್ನು ಕಲಿತೆ
ಇಂತಹ ಹಲವು ಘಟನೆಗಳು ನನ್ನನ್ನುತಿದ್ದಿವೆ,ತೀಡಿವೆ,ನಿರ್ಲಿಪ್ತಿಯನ್ನು ಸಾಧಿಸಲು ಸಹಕರಿಸಿವೆ.
ಮೇಲಿನ ಎರಡು ಘಟನೆಗಳಿಗೆ ಪೂರಕವಾಗಿ ಈ
ಸಂದರ್ಭವನ್ನು ಏಕೆ ಉಲ್ಲೇಖಿಸಿದೆನೆಂದರೆ,
ಬದುಕುವ ಗುರಿಗೆ ನಮ್ಮನ್ನು ಕೀಲಿಸುವುದು ಇಂತಹ ಬದ್ಧತೆಗಳೇ ! ಏಕೆಂದರೆ ನಾವು ಮನೆಯಲ್ಲಿ ಒಟ್ಟು ಆರುಮಂದಿ ಇರುತ್ತಿದ್ದೆವು. ಅಪ್ಪ ಅಮ್ಮ ಹಾಗೂ ನಾವು ನಾಲ್ವರು ಮಕ್ಕಳು! ನಾಲ್ಕೂವರೆಗೇ ಎದ್ದು ಕುಮಾರವ್ಯಾಸ ಭಾರತವನ್ನು ಸುಶ್ರಾವ್ಯವಾಗಿ ವಾಚಿಸುತ್ತ ದಿನಕ್ಕೆ ಶುಭಾರಂಭ ಮಾಡಿ ಸಂಜೆಯಾಗುತ್ತಿದ್ದಂತೇ,ಅಮ್ಮ ದೀಪ ಬೆಳಗಿಸಿದ ಕೂಡಲೇ ದೇವರ ಮುಂದೆ ಭಜನೆ ಮಾಡಿಸಿ ಮತ್ತೆ ನಮ್ಮ ಅಧ್ಯಯನದ ಕಡೆಗೆ ನಿಗಾ ವಹಿಸುತ್ತಿದ್ದ ಅಪ್ಪ,ವಿರಮಿಸುತ್ತಿದ್ದುದಂತೂ ನಿದ್ರೆಯಲ್ಲೇ!
ಕಲಿಕೆಯಲ್ಲಿ ಹಿಂದುಳಿದ ತಮ್ಮ ವಿದ್ಯಾರ್ಥಿಗಳಿಗೆ ಸಂಜೆ ನಿಶ್ಶುಲ್ಕ ಬೋಧನೆಯ ಕಾರ್ಯವನ್ನೂ ನಿರ್ವಹಿಸುತ್ತಿದ್ದರು. ರಾತ್ರಿ ವಯಸ್ಕರ ಶಿಕ್ಷಣ, ಸಂಜೆ ಮದರಾಸು ಹಿಂದೀ ಪ್ರಚಾರ ಸಭೆಯ ಹಿಂದಿ ಪರೀಕ್ಷೆಗಳಿಗೂ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದರು.
ಹೀಗೆ ಕಲಿಯುತ್ತಾ ಕಲಿಸುವ,ಕಲಿಸುತ್ತಾ ಕಲಿಯುವ ಸುಖದ ಬೀಜವನ್ನು ಅಪ್ಪ ಬಾಲ್ಯದಿಂದಲೇ ನಮ್ಮಲ್ಲಿ ಬಿತ್ತಿದ್ದರು.
ಗ್ರಂಥ ಭಂಡಾರದಿಂದ ತಂದ
ಪುಸ್ತಕಗಳಂತೂ ನಮಗೆ ಪೆಪ್ಪರಮಿಂಟಿಗಿಂತ ಸವಿ!ದಿನ,ವಾರ,ಪಾಕ್ಷಿಕ,ಮಾಸಿಕ,ತ್ರೈಮಾಸಿಕ ,ವಾರ್ಷಿಕ ಪತ್ರಿಕೆಗಳ ಮಹಾಪೂರವೇ ಆಗ ನಮ್ಮೊಳಗಿನ ರಮ್ಯಲೋಕವನ್ನು ವಿಜ್ರಂಭಿಸಿತ್ತು!
ಓದಿಯಾದ ಮೇಲೆ ನಮ್ಮೆಲ್ಲರನ್ನು ಒಟ್ಟುಗೂಡಿಸಿ
ವಾರಕ್ಕೊಂದು ಬಾರಿ ಅಧ್ಯಯನದ ಬಗ್ಗೆ,ಚರ್ಚೆ ಸಂವಾದವಿರುತ್ತಿತ್ತು! ಅಪ್ಪನ ಅಮ್ಮನ ದಿನಚರಿಯ ಮೇಲೆ ಪ್ರಭಾವ ಬೀರಿದ ಘಟನೆಗಳ ವಿಶ್ಲೇಷಣೆಯೂ ನಡೆಯುತ್ತಿತ್ತು.ಈ ಮುಕ್ತ ಸಂವಾದದಲ್ಲಿ ವಯೋಭೇದದ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.
ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ!
ಇಂತಹ ಸನ್ನಿವೇಶದಲ್ಲಿ ನಮಗೆ ದೊರೆಯುತ್ತಿದ್ದ ಸಾಂಗತ್ಯ ಸುಖ ಎಲ್ಲ ಕಹಿಯನ್ನೂ ಆರೋಗ್ಯಕರವಾಗಿ ಬದಲಾಯಿಸುವಷ್ಟು ಶಕ್ತಿಶಾಲಿಯಾಗಿತ್ತು! ಸಮಾಜದ ಎಲ್ಲ ಮಂದಿಯೊಂದಿಗೆ ತರತಮವಿಲ್ಲದೆ ಬೆರೆಯುತ್ತಿದ್ದ ಅಪ್ಪ ಅಮ್ಮ ಎಲ್ಲ ನಿರ್ಬಂಧಗಳನ್ನೂ ಮೀರಿ ನಮಗೆ ಪೂಜ್ಯರಾಗಿದ್ದರು.
ಇಂತಹ ಪ್ರೀತಿಸುಧೆಯನ್ನು ಉಂಡು
ನಾವು ಬದುಕಿನ ರಣರಂಗಕ್ಕೆ
ಸಜ್ಜಾಗದಿದ್ದರೆ ಅದಕ್ಕಿಂತ ವಿಫಲತೆ ಬೇರುಂಟೆ?
ಬದುಕು ಎಷ್ಟೇ ಅಸಹನೀಯವೆನಿಸಿದಾಗಲೂ ಇದು ವಿಚಲಿತವಾಗದಂತೆ ನನ್ನನ್ನು ನಿರ್ಬಂಧಿಸಿದೆ ಜೀವಪರ,ಜೀವನ ಪರವಾಗಿ
ರೂಪಿಸಿದೆ!
ಶ್ರೀಮತಿ ಶಿವದೇವಿ ಅವನೀಶಚಂದ್ರ,