ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಮತ್ತೆ ಹುಲಿಯ ಘರ್ಜನೆ ಕೇಳಿಬಂದಿದ್ದು , ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹುಲಿ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ನಂತರ ಡಿ. 1ರಿಂದ ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಮಳೆಯಿಂದ ಕಾರ್ಯಾಚರಣೆ ಸ್ಥಗಿತವಾಗಿದ್ದ ಕಾರಣ . ಬೆಳ್ಳೂರು ಹಾಗೂ ಹೈಸೊಡ್ಲೂರು ಗ್ರಾಮದಲ್ಲಿ ಹುಲಿಯ ಘರ್ಜನೆ ಕೇಳಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬೆನ್ನಲ್ಲೇ ಇದೀಗ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ.

ಸ್ಥಳದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ಅವರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಅವರ ನಿರ್ದೇಶನದಂತೆ ಕಾರ್ಯಾಚರಣೆ ಆರಂಭವಾಗಿದೆ. ಶ್ರೀಮಂಗಲ, ಪೊನ್ನಂಪೇಟೆ, ನಾಗರಹೊಳೆ, ಮಾಕುಟ್ಟ, ವಿರಾಜಪೇಟೆ ಅರಣ್ಯ ಇಲಾಖೆಯ 88 ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಬೆಳ್ಳೂರು ಗ್ರಾಮದ ಖಾಸಗಿ ಅರಣ್ಯದಲ್ಲಿ ಹುಲಿಯ ಹೆಜ್ಜೆ ಗುರುತು ಕಂಡುಬಂದಿದ್ದು, ಇಲ್ಲಿ ಕಾಡು ಹಂದಿಯೊಂದನ್ನು ಹುಲಿ ಹಿಡಿದು ತಿಂದಿರುವ ರಕ್ತದ ಗುರುತು ಪತ್ತೆಯಾಗಿದೆ.

ಸಂಕೇತ್ ಪೂವಯ್ಯ ಮಾತನಾಡಿ, ಈಗಾಗಲೇ ಹೆಚ್ಚಿನ ಸಿಬ್ಬಂದಿಗಳೊಂದಿಗೆ ಹುಲಿ ಪತ್ತೆ ಕಾರ್ಯಾಚರಣೆ ವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ. ಕಾಫಿ ತೋಟದ ಒಳಗೆ ಸಾಕಾನೆ ಸಹಿತ ಕಾರ್ಯಾಚರಣೆಯಿಂದ ಬೆಳೆನಷ್ಟ ಉಂಟಾಬಾರದೆಂದು ಸಿಬ್ಬಂದಿ ಮೂಲಕ ತಂಡ ಮಾಡಿ ಕೂಂಬಿಂಗ್ ನಡೆಸಲಾಗುತ್ತಿದೆ. ಹುಲಿಯು ಖಾಸಗಿ ತೋಟದ ಅರಣ್ಯದಲ್ಲಿ ಇರುವ ಸುಳಿವು ದೊರೆತರೆ ಅರವಳಿಕೆ ಬಳಸಿ ಸೆರೆ ಹಿಡಿಯಲಾಗುವುದು ಎಂದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹುದಿಕೇರಿ ವಲಯ ಅಧ್ಯಕ್ಷ ಚಂಗುಲಂಡ ಸೂರಜ್, ಇಟ್ಟೀರ ಪೊನ್ನಣ್ಣ, ಭವೀನ್ ಕುಶಾಲಪ್ಪ, ರಮೇಶ್, ಮಂಡಂಗಡ ಯೋಗೇಶ್ ಭಾಗವಹಿಸಿದ್ದರು.