ಕಾರ್ಮಿಕರ ಮುಂದಾಳು, ಸಂಘರ್ಷಕ್ಕೆ ಸದಾ ಸಿದ್ಧ, ಕಾನೂನಿಗೂ ಬದ್ಧ!

ರಜತ್ ರಾಜ್ ಡಿ. ಹೆಚ್ 7483226251

ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಅನ್ಯಾಯ ನಡೆದಾಗ, ಅದರ ವಿರುದ್ಧ ನೀನು ಕೋಪಗೊಂಡರೆ, ನೀನು ನನ್ನ ಸಂಗಾತಿ- ಚೆಗ್ಯುವೆರಾ

ಸಮಾಜದಿ ಎಲೆಮರೆ ಕಾಯಿಗಳಂತೆ ಶಕ್ತಿ ನೀರಿ ಮೈ ಬಗ್ಗಿಸಿ ಬೆವರು ಹರಿಸಿ ಕಾರ್ಮಿಕ ವರ್ಗದ ಪರವಾಗಿ ಗಟ್ಟಿ ಧ್ವನಿಯಾಗಿ ಸಮಾಜದ ಮುಖ್ಯವಾಹಿನಿಗೆ ತಲುಪಲೆಂದು ಅವಿರತ ಹೋರಾಟಗಾರ ಮುದ್ಸದ್ಧಿ ಹೆಚ್.ಎಂ ಸೋಮಪ್ಪ. ಎಲ್ಲೋ ಶೋಷಿತ, ಧೀನ-ಧಮನಿತ, ಅಸಹಾಯಕ, ಬಲಹೀನ ಬಡವ ಸಂಕಷ್ಟದಲ್ಲಿ ನೆರವಿಗಾಗಿ ಅತೀತ ಶಕ್ತಿಗೆ ಮೊರೆಯಿಟ್ಟರೂ, ತನ್ನ ಕಾರ್ಮಿಕ ಸಂಘಟನೆಯ ಸೇನೆ ಕಟ್ಟಿಕೊಂಡು ಅವರ ಸಹಾಯಕ್ಕೆ ಧಾವಿಸಿ ಬರುವ ಕಾವಲಿಗ ಇವರು.

ಬಡವರ ಪರವಾದ ಸದಾ ಹೋರಾಟ, ಸಂಘಟನೆ, ಪ್ರತಿರೋಧದಲ್ಲಿ ಅವಿಶ್ರಮಿತವಾಗಿ ತೊಡಗುವ ಹೆಚ್.ಎಂ ಸೋಮಪ್ಪ ಅವರು ಅಪರಿಮಿತ ಜನಪರ ಕಾಳಜಿ ಹೊಂದಿರುವ ಸಹೃದಯ ಸಮಾಜ ಸುಧಾರಕರಾಗಿ ಜನ ಸೇವೆಯಲ್ಲೇ ಮಗ್ನರಾಗಿದ್ದಾರೆ.

ಜುಲೈ 7, 1969ರಲ್ಲಿ ಬಿಳಿಗೇರಿ ಗ್ರಾಮದಲ್ಲಿ ಮೊಂಟ ಹಾಗು ಗಿರಿಜಾ ದಂಪತಿಯ ಮಗನಾಗಿ ಜನಿಸಿದ ಇವರು ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವರು. ಶಾಲಾ ಶಿಕ್ಷಣವನ್ನು ಕುಂಬೂರು, ಮಾದಾಪುರ ಸರಕಾರಿ ಶಾಲೆ, ಸೋಮವಾರಪೇಟೆ ಚೆನ್ನಮ್ಮ ಕಾಲೇಜು ಮತ್ತು ಬಂಟ್ವಾಳ ಎಸ್.ವಿ.ಎಸ್ ಶಾಲೆಯಲ್ಲಿ ಮುಗಿಸಿದರು. ನಂತರ ಅನಿವಾರ್ಯ ಕಾರಣಗಳಿಂದ ಶಿಕ್ಷಣವನ್ನು ಮೊಟಕುಗೊಳಿಸಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮೇರಿಕನ್ ಮೂಲದ ಕಂಪೆನಿ ಒಂದರಲ್ಲಿ ಎಲೆಕ್ಟ್ರೀಷನ್ ಆಗಿ ಕೆಲಸ ಮಾಡುತ್ತಿದ್ದರು‌.

1986ರಲ್ಲಿ ದಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎ.ಐ.ಟಿ.ಯು.ಸಿ) ಕಾರ್ಮಿಕ ಸಂಘಟನೆಯಿಂದ ಬುಲಾವ್ ಬಂದಿದ್ದರಿಂದ ಕೊಡಗಿಗೆ ಶಿಪ್ರವಾಗಿ ಮರಳಿದರು. ಆ ಕಾರ್ಮಿಕ ಸಂಘಟನೆಯ ಸಾಮಾನ್ಯ ಕಾರ್ಯಕರ್ತನಾಗಿದ್ದುಕೊಂಡು ಬೇರು ಮಟ್ಟದಿಂದ ನಾಯಕರಾಗಿ ಬೆಳೆಯಬೇಕೆಂದು ನಿಶ್ಚಯಿಸಿದರು. ಆ ಸಮಯದಲ್ಲಿ ಸಂಭವಿಸಿದ್ದ ಕಾರ್ಮಿಕನ ಮೇಲಿನ ಕಾಡಾನೆ ದಾಳಿಯ ಪ್ರಕರಣದಲ್ಲಿ ಸತ್ತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗದೆ ಹೋದದ್ದನ್ನು ಕಂಡು ಸೋಮಪ್ಪ ಅವರು ಮಮ್ಮಲ ಮರುಗಿದ್ದರು. ಅದು ಅವರು ನಾಯಕರಾಗಿ ಸಮಾಜದಲ್ಲಿ ಬೆಳೆಯಲು ಗುರುತಿಸಿಕೊಳ್ಳಲು ತೀಕ್ಷ್ಣತೆಯನ್ನು ನೀಡಿತ್ತು.

Advertisements

ಸಮಾಜದ ತಳ ವರ್ಗದವರಿಗೆ ಶಕ್ತಿ ತುಂಬುವ ಸೇವಕ

ಕೆಳ ಮಟ್ಟದ ಶ್ರಮಿಕ ವರ್ಗದವರಿಗೆ ಸದಾ ಬೆಂಬಲವಾಗಿ ನಿಂತು ಅವರ ಕಷ್ಟ ಕಾರ್ಪಣ್ಯಗಳಿಗೆ ತಮ್ಮ ಸಂಘಟನಾ ಬಲದಿಂದ ಸಕಾರಾತ್ಮಕವಾಗಿ ಸ್ಪಂದಿಸುವ ಹೆಚ್.ಎಂ ಸೋಮಪ್ಪ ಅವರು,

*ತೋಟದ ಕಾರ್ಮಿಕರನ್ನು ಬಿಪಿಎಲ್ ಪಟ್ಟಿಗೆ ಸೇರಿಸುವುದು.
*94c ನಿವೇಶನ ಹಕ್ಕು ಪತ್ರವನ್ನು ಹಾಗು ನಿವೇಶನಗಳನ್ನು ವಸತಿ ರಹಿತರಿಗೆ ಕೊಡುವಂತೆ ಮಾಡುವುದು.
*ಬಿಪಿಎಲ್ ಕಾರ್ಡಿಗೆ ಬೇಕಾಗಿರುವ ಆದಾಯದ ಮಿತಿಯನ್ನು ಏರಿಸಲು ಒತ್ತಾಯಿಸುವುದು.
*ಕೃಷಿಯಿಂದ ಜೀವನೋಪಾಯ ಮಾಡಲು ಭೂರಹಿತರಿಗೆ ಪೈಸಾರಿ ಜಾಗವನ್ನು ವಿತರಣೆ ಮಾಡಲು ಒತ್ತಾಯಿಸುವುದು.
*ಸಾಗುವಳಿ ಚೀಟಿಯನ್ನು ಭೂರಹಿತ ಕೃಷಿಕರಿಗೆ ಅಧಿಕೃತವಾಗಿ ನೀಡಲು ಒತ್ತಡ ಹೇರುವುದು.‌
*ಸರಕಾರದಿಂದ ಕನಿಷ್ಠ ಕೂಲಿ ವೇತನವನ್ನು ನಿಗದಿ ಪಡಿಸುವುದು.
*ಪಡಿತರ ಚೀಟಿಯಲ್ಲಿನ ನ್ಯೂನತೆಗಳನ್ನು ಸರಿ ಪಡಿಸಲು ಜಾಗೃತಿ ತರುವುದು.
*ಕಾಡಾನೆ ದಾಳಿಯಿಂದ ಸಾವನ್ನಪ್ಪುವ ಹಾಗು ಗಂಭೀರ ಗಾಯಕ್ಕೆ ಒಳಗಾಗುವ ಬಡ ಕಾರ್ಮಿಕ ಕುಟುಂಬದವರಿಗೆ ಸೂಕ್ತ ಪರಿಹಾರವನ್ನು ಸಾರಕಾರ ನೀಡುವಂತೆ ಮಾಡುವುದು.
*ಕಾರ್ಮಿಕರಿಗೆ ವಿವಿಧ ರೀತಿಯಲ್ಲಿ ಅನ್ಯಾಯವಾಗುವಾಗ ಅದರ ವಿರುದ್ಧ ಧ್ವನಿ ಎತ್ತಿ ವಿರೋಧಿಸುವುದು.
*ಅಸಂಘಟಿತ ಕಾರ್ಮಿಕ ವಲಯದ ಹಿತರಕ್ಷಣೆ ಆಗ್ರಹಿಸುವುದು. ಅವರಿಗೆ ಪಿಂಚಣಿ, ಕನಿಷ್ಠ ವೇತನ ನಿಗದಿ ಪಡಿಸುವಂತೆ ಮನವಿ ಮಾಡುವುದು.
*ಬಡ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಶಿಕ್ಷಣಕ್ಕೆ ಅಗತ್ಯವಾಗಿರುವ ಸೌಲಭ್ಯಗಳು ದೊರೆಯುವಂತೆ ಮಾಡುವುದು.
*ಬಡವರ ಪರವಾದ ಕಾನೂನುಗಳ ಜಾರಿ ಹಾಗು ಅನುಷ್ಠಾನಕ್ಕೆ ಜಾಗೃತಿ ಮೂಡಿಸಿ ಬೇಡಿಕೆ ಇಡುವುದು.
*ಆದಿವಾಸಿ, ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಮತ್ತು ಅವರಿಗೆ ಲೋಪವಾಗದಂತೆ ಮೂಲಭೂತ ಹಕ್ಕುಗಳು ದೊರೆಯುವಂತೆ ಮಾಡುವುದು.
*ರೈತರ, ಬೆಳೆಗಾರರ ಸಂಕಷ್ಟಗಳನ್ನು ಸರಕಾರದ ಗಮನಕ್ಕೆ ತರುವಂತೆ‌ ಮಾಡಿ, ಕೀಟ ಬಾಧೆ, ಕಾಡುಮೃಗಗಳ ಕಾಟ ಮತ್ತು ಅಕಾಲಿಕ ಮಳೆಯಿಂದ ಬೆಳೆ ನಾಶ ಆದಾಗ ಅವುಗಳಿಗೆ ಸೂಕ್ತ ಪರಿಹಾರ ಸರಕಾರದಿಂದ ಸಿಗುವಂತೆ ಮಾಡುವುದು.

ಈ ಮೇಲಿನ ಎಲ್ಲಾ ವಿಧದ ಹೋರಾಟ ತಮ್ಮ ಸಂಘಟನಾ ಚಾತುರ್ಯ ಹಾಗು ಬಲದಿಂದ ಪ್ರತಿಭಟನೆ, ಧರಣಿ, ಅಹೋರಾತ್ರಿ ಧರಣಿ, ಮುತ್ತಿಗೆ, ಉಪವಾಸ ಸತ್ಯಾಗ್ರಹ, ಸಮಾವೇಶ, ರಸ್ತೆ ತಡೆ, ಮಾನವ ಸರಪಳಿ ರಚನೆ, ಮೌನ ಪ್ರತಿಭಟನೆ ಎಲ್ಲವನ್ನೂ ಮಾಡುತ್ತಾ ಶಾಂತಿಯುತ ರೀತಿಯಲ್ಲಿ ನ್ಯಾಯಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.ಆ ಮೂಲಕ ಕೊಡಗಿನಾದ್ಯಂತ ಜನರಿಗೆ ಚಿರಪರಿಚಿತರಾಗಿದ್ದಾರೆ.

ವಿವಿಧ ಹುದ್ದೆಗಳಲ್ಲಿ ಜನಸೇವೆ:

*2005ರಲ್ಲಿ ತಮ್ಮ ಹುಟ್ಟೂರಾದ ಬಿಳಿಗೇರಿಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಜಯಭೇರಿ ಆಗಿ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದರು.
*ಮಾದಾಪುರದಲ್ಲಿ 2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
*2014ರಲ್ಲಿ ಮಾದಾಪುರ ಗ್ರಾಮ ಪಂಚಾಯ್ತಿಯಿಂದ ಚುನಾವಣೆಯಲ್ಲಿ ಗೆದ್ದು, ಸದಸ್ಯರಾಗಿ ಜನಸೇವೆಯನ್ನು ಮಾಡಿದರು. ಈ ಅವಧಿಯಲ್ಲಿ 2018 ಇಸವಿಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ, ಅದರಿಂದಾಗಿ ಸಾವು ನೋವಿಗೆ ಒಳಗಾದ ಸಂತ್ರಸ್ಥರಿಗಾಗಿ ದುಡಿದರು.
*2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸಿ.ಪಿ.ಐ ಪಕ್ಷದಿಂದ ಸ್ಪರ್ಧಿಸಿದ್ದರು.

ಪ್ರಸ್ತುತ ಸೇವೆ:

ಕಾರ್ಮಿಕ ನಾಯಕರಾಗಿ ಸತತ ಸೇವೆಯಲ್ಲಿ ತೊಡಗಿರುವ ಎಚ್‌ಎಂ ಸೋಮಪ್ಪ ಅವರು ದಿ ಆಲ್ ಇಂಡಿಯಾ ಟ್ರೇಡ್ ಇಂಡಿಯಾ ಕಾಂಗ್ರೆಸ್(ಎ.ಐ.ಟಿ.ಯು.ಸಿ) ಜಿಲ್ಲಾಧ್ಯಕ್ಷರಾಗಿ ಬಹಳಷ್ಟು ಕಾರ್ಮಿಕರ ಸೇವೆಗೆ ದುಡಿಯುತ್ತಿದ್ದಾರೆ. ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ರಾಜಕೀಯ ಕ್ಷೇತ್ರದಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮೂಲಕ ರಾಜ್ಯಾಧ್ಯಕ್ಷರಾಗಿ ತಳ ಮಟ್ಟದ ಬಡವರ ಪರವಾದ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿ ಕನ್ನಡದ ಸೇವೆ ಸಿದ್ಧ- ಬದ್ಧರಾಗಿದ್ದಾರೆ.

ಕೌಟುಂಬಿಕ ಹಿನ್ನಲೆ:

ಪ್ರೇಮಾ ಎಂಬುವವರನ್ನು ವಿವಾಹವಾಗಿರುವ ಇವರು ಮಗಳು ಸುಮಾ ಹಾಗು ಮಗ ಸುಶಾಂತ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸಾಮಾಜಿಕ ಜೀವನಕ್ಕೆ ಕಾಲಿಡಲು ಅವರ ಗುರುವಾದ ಎ.ಐ.ಟಿ.ಯು.ಸಿ ರಾಜ್ಯ ಕಾರ್ಯದರ್ಶಿಗಳಾದ ಗುಣಶೇಖರ್ ಅವರೇ ಕಾರಣ ಎನ್ನುತ್ತಾರೆ.

ಮುಂದಿನ ಗುರಿ:

ಸಾಮಾಜಿಕ ಹಾಗು ಆರ್ಥಿಕವಾಗಿ ಹಿಂದುಳಿದ ಜನರನ್ನು ಮೇಲ್ಸ್ಥರಕ್ಕೆ ತರುವ ಪ್ರಯತ್ನ ಮಾಡುವುದು. ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆಯ ಸದಸ್ಯತ್ವವನ್ನು ಹೆಚ್ಚಿಸುವುದು. ಆ ಮೂಲಕ ಕಾರ್ಮಿಕರಿಗೆ ಸಂಘಟಿತವಾಗಲು ಪ್ರೇರೇಪಿಸುವುದು. ಮನುಷ್ಯರೆಲ್ಲರೂ ಒಂದೇ. ಸಮಾಜದಲ್ಲಿ ಮೇಲು ಕೀಳೆಂಬುದು ಹೋಗಬೇಕು‌. ಎಲ್ಲರಿಗೂ ಸಮ ಬಾಳು, ಎಲ್ಲರಿಗೂ ಸಮ ಪಾಲು ಎಂಬುದು ಅಕ್ಷರಶಃ ಸತ್ಯವಾಗಬೇಕು. ಬಡವರ ಬಾಳು ಹಸನಾಗಿ ಎಲ್ಲರಿಗೂ ಮೂಲಭೂತ ಹಕ್ಕು, ಸೌಕರ್ಯಗಳು ದೊರೆತು ಸಮ ಸಮಾಜ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ನಾನು ಯಾವ ಅಡೆ ತಡೆ ಬಂದರೂ ಜಗ್ಗದೆ ಕುಗ್ಗದೆ ಸಮಾಜ ಸೇವೆಗೆ ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ ಇದೆ ನನ್ನ ಗುರಿ ಎಂದು ದೃಢ ಧ್ವನಿಯಲ್ಲಿ ಹೇಳುವರು.