ಇತ್ತೀಚೆಗಷ್ಟೇ ರಷ್ಯಾದ ಕಜ಼ಾನ್ ಅಲ್ಲಿ ನಡೆದ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾರತ-ಚೀನಾ ಸಂಧಾನ ಹಾಗು ಸಹಕಾರದ ಕುರಿತು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಹಾಗು ಚೀನಾ ಅಧ್ಯಕ್ಷರಾದ ಜ಼ೀ ಜಿಂಗ್ ಪಿಂಗ್ ನಡುವೆ ರಷ್ಯಾ ಅಧ್ಯಕ್ಷರಾದ ಪುಟಿನ್ ಅವರ ಮಧ್ಯಸ್ಥಿಕೆಯಲ್ಲಿ ಗಂಭೀರವಾಗಿ ನಡೆದಿದೆ.

ಗಡಿ ಸಂಘರ್ಷ ಹಾಗು ಆರ್ಥಿಕ ವಿಚಾರಗಳ ಕುರಿತು ಸುಧಾರಣೆ ತಂದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಚೀನಾ ಮೇಲೆ ಹೇರಿದ್ದ ಹಲವು ಕಟ್ಟು  ನಿಟ್ಟಿನ ಭಾರತದ ಕ್ರಮಗಳನ್ನು ಈಗ ಸಡಿಲಿಸುವ ಆಲೋಚನೆ ನಡೆದಿದೆ. ಹಾಗಾದರೆ ಭಾರತದ ಆತ್ಮನಿರ್ಭರ್(ಸ್ವಾವಲಂಭಿ) ಆಗುವ ಕನಸು ಕಮರಲಿದೆಯೇ? ಆ ನಿಟ್ಟಿನಲ್ಲಿ ಶುರು ಮಾಡಿದ ಮೇಕ್ ಇನ್ ಇಂಡಿಯಾ ಮಹತ್ವಾಕಾಂಶಿ ಯೋಜನೆ ಏನಾಗಿದೆ?  ಎಂಬುದು ಜನ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ…!

‘Make in India’ ಕಥೆ ಏನು?

ಭಾರತವನ್ನು ಜಾಗತಿಕ ಉತ್ಪಾದಕ ಹಬ್ ಮಾಡುವ ಧ್ಯೇಯದೊಂದಿಗೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಶುರು ಮಾಡಿದ್ದ ‘ಮೇಕ್ ಇನ್ ಇಂಡಿಯಾ’ ಹೊಸ ಸಂಚಲನವನ್ನೇ ಮಾಡಲಿದೆ ಎಂದು ನಂಬಲಾಗಿತ್ತು. ಹೊಸದೊಂದು ಕನಸಿನ  ಆಶಾವಾದವನ್ನು ಈ ಯೋಜನೆ ಅಭಿವೃದ್ಧಿ ಶೀಲ ರಾಷ್ಟ್ರವಾದ ಭಾರತ ಹೊಂದಲು ಈ ಯೋಜನೆ ಕಾರಣವಾಗಿತ್ತು.

ಈ ಯೋಜನೆ 2022ರ ಹೊತ್ತಿಗೆ ಪ್ರತಿ ವರ್ಷವೂ 12%-14%ದಷ್ಟು ಉತ್ಪಾದಕತೆಯ ವಲಯದಲ್ಲಿ ಬೆಳವಣಿಗೆ ತಂದು 100 ಮಿಲಿಯನ್ ಉದ್ಯೋಗಗಳ ಸೃಷ್ಟಿ  ಮಾಡುವ ಗುರಿ ಹೊಂದಿತ್ತು.

ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದರೂ ಆಡಳಿತಾತ್ಮಕ ಅಡಚಣೆಗಳು, ಕ್ರಮಬದ್ಧತೆಯಲ್ಲಿನ ಸಂಕೀರ್ಣತೆ, ಮೂಲ ಸೌಕರ್ಯಗಳಲ್ಲಿ ಹಿನ್ನಡೆಯಿಂದಾಗಿ ವಿದೇಶಿ ಬಂಡವಾಳ ಹೂಡಿಕೆ ತರುವಲ್ಲಿ ವೈಫಲ್ಯದಿಂದಾಗಿ ಗುರಿ ಸಾಧನೆ ಸಾಧ್ಯವಾಗಲಿಲ್ಲ.

ಉತ್ಪಾದನೆಯ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲ್ಯಗಳಿಗೂ ಹಾಗು ಭಾರತೀಯರಿಗೆ ಇರುವ ಕೌಶಲ್ಯಗಳಿಗೂ ನಡುವಣ ಗಮನಾರ್ಹ ಅಂತರವಿದೆ.   ಅಗತ್ಯತೆಯ ಕೌಶಲ್ಯಯುತ ಮಾನವ ಸಂಪನ್ಮೂಲ ಪೂರೈಕೆಯಲ್ಲಿ ದೊಡ್ಡ ಸೋಲು ಉಂಟು ಮಾಡಿದ್ದರಿಂದ ಅದೂ ಕೂಡ ಯೋಜನೆಗೆ ದೊಡ್ಡ ಹಿನ್ನಡೆಯನ್ನು ಮಾಡಿತು.

ಉತ್ಪಾದಕ ಕ್ಷೇತ್ರದ ಬೆಳವಣಿಗೆಗೆ ವಿದೇಶಿ ಬಂಡವಾಳದ ಅಗತ್ಯವಿತ್ತು. ಕೇಂದ್ರ ಸರಕಾರ ಆ ನಿಟ್ಟಿನಲ್ಲಿ ಹಲವಷ್ಟು ಪ್ರಯತ್ನಗಳನ್ನು ಪಟ್ಟರೂ ಅಗತ್ಯವಿದ್ದಷ್ಟು ಬಂಡವಾಳ ಹರಿದು ಬರಲಿಲ್ಲ. ನಿರೀಕ್ಷಿತ ಬಂಡವಾಳ ವಿದೇಶಗಳು ಹೂಡದ ಪರಿಣಾಮ ಕೂಡ ಈ ಯೋಜನೆಯ ಹಿನ್ನಡೆಗೆ ಮುಖ್ಯ ಕಾರಣವಾಯಿತು.

ಕೋವಿಡ್ 19 ಸಾಂಕ್ರಾಮಿಕ ರೋಗ ಜಗತ್ತಿನೆಲ್ಲೆಡೆ ತೀವ್ರವಾಗಿ ಬಾಧಿಸಿದ್ದು ಜಾಗತಿಕ ಆರ್ಥಿಕ ಪರಿಸ್ಥಿತಿಗಳನ್ನೇ ಅಮತೋಲನಕ್ಕೆ ದೂಡಿತ್ತು. ಆರ್ಥಿಕ ವಿಚಾರಗಳು ಸಹ ಯೋಜನೆಗೆ ಬೇಕಾದಂತೆ ಪೂರಕವಾಗಿಲ್ಲದಿದ್ದರಿಂದ ಆರ್ಥಿಕ ಬೆಂಬಲವೂ ಅಪೇಕ್ಷಿಸಿದ ಮಟ್ಟಕ್ಕೆ ಸಿಗಲಿಲ್ಲ.

ಸ್ನೇಹ ಬಂಧನ ಇದು ಸ್ವಾವಲಂಭಿ ಆಗಲು ಕುತ್ತು!

ಈಗ ಮತ್ತೆ ಚೀನಾ ಭಾರತ ಸ್ನೇಹ ಮೇಕ್ ಇನ್ ಇಂಡಿಯಾಗೆ ದೊಡ್ಡ ಮಟ್ಟಿಗಿನ ಏಟು ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಹಲವಷ್ಡು ಸುಧಾರಣೆಗಳು ನಮ್ಮ ದೇಶದ ಸ್ವಾವಲಂಭಿಯಾಗುವ ಹಾದಿಗೆ ಕುತ್ತಾಗಿ ಪರಿಣಮಿಸುವ ದಟ್ಟವಾದ ಸಾಧ್ಯತೆ ಇದೆ. ಜೊತೆಗೆ ಹಲವಷ್ಟು ಅಪಾಯಗಳ ಸಂಭವಗಳು ಮತ್ತೆ ಪೆಡಂಭೂತದಂತೆ ನಮ್ಮ ದೇಶವನ್ನು ಚೀನಿ ಡ್ರಾಗನ್ ರಾಷ್ಟ್ರ ಕಾಡಬಹುದು.

ಹೆಚ್ಚಲಿದೆ ಪೈಪೋಟಿ:

ಭಾರತ-ಚೀನಾದ ಸ್ನೇಹದಿಂದ ಚೀನಿ ಬಂಡವಾಳ ಹೂಡಿಕೆ ಹಾಗು ಆಮದಿನಲ್ಲಿ ಗಮನಾರ್ಹ ಹೆಚ್ಚಳ ಕಂಡು ಬರಬಹುದು. ಭಾರತೀಯ ಉತ್ಪಾದಕ ಕಂಪೆನಿಗಳಿಗೆ ಇದು ತೀವ್ರವಾದ ಸ್ಪರ್ಧೆಯನ್ನು ಒಡ್ಡಲಿದೆ. ಸುಧಾರಿತ ತಂತ್ರಜ್ಞಾನ ಮತ್ತು ದೊಡ್ಡ ಮಟ್ಟಿಗಿನ ಆರ್ಥಿಕ ಬಲದೊಂದಿಗೆ ಚೀನಿ ಕಂಪೆನಿಗಳು ಭಾರತೀಯ ಸ್ಥಳೀಯ ವ್ಯವಹಾರದಲ್ಲಿ ಕೈಯಾಡಿಸಿ ಮೇಲುಗೈ ಸಾಧಿಸಬಹುದು.

ಆಮದು-ರಫ್ತು ಅಸಮತೋಲನ:

ಈಗಾಗಲೇ ಚೀನಾದಿಂದ ಆಮದು ಮಾಡಿಕೊಳ್ಳುವ ಹಣದ ಮೊತ್ತ ಚೀನಾಗೆ ಭಾರತದ ರಫ್ತು ವಿಚಾರದಲ್ಲಿ ತಾಳೆ ಹಾಕುವಾಗ ದೊಡ್ಡ ಅಸಮತೋಲನವಿದೆ. ಈ ಅಸಮತೋಲನ ಇನ್ನೂ ಹೆಚ್ಚಿ, ಆಮದು ಮತ್ತಷ್ಟು ಜಾಸ್ತಿ ಆಗಿ ಬಿಡುವ ಅಪಾಯ ಎದುರಾಗಬಹುದು.

ಅವಲಂಭನೆ ಹೆಚ್ಚುವ ಸಾಧ್ಯತೆಯಿದೆ:

ಭಾರತ-ಚೀನಾ ಸಂಧಾನ ಚೀನಾದಿಂದ ಕಚ್ಚಾ ವಸ್ತುಗಳು ಹಾಗು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುವ ಗಾತ್ರ ಮತ್ತಷ್ಟು ದೊಡ್ಡದಾಗಬಹುದು.

ಬೌದ್ಧಿಕ ಆಸ್ತಿಗಳ ರಕ್ಷಣೆ ಸಾವಾಲಾಗಲಿದೆ:

ಚೀನಾ- ಇಂಡಿಯಾ ಸಹಭಾಗಿತ್ವ ಹೆಚ್ಚಿದಷ್ಟು ಭಾರತದ ಹೊಸ ಸ್ಟಾಟ್೯ ಅಪ್ ಗಳ ಬೌದ್ಧಿಕ ಆಸ್ತಿಗಳ ರಕ್ಷಣೆ ದೊಡ್ಡ ಸವಾಲಾಗಿ ಬಿಡಬಹುದು. ಭಾರತೀಯ ಹೊಸ ಕಂಪೆನಿಗಳ ತಂತ್ರಜ್ಞಾನ ಹಾಗು ಆವಿಷ್ಕಾರಗಳ ಹಂಚಿಕೊಳ್ಳುವಿಕೆ ಕೂಡ ದೊಡ್ಡ ಹಿನ್ನಡೆ ಆಗಬಹುದು. ಐಪಿ ಕಳ್ಳತನ ಹಾಗು ಅಡ್ಡ ದಾರಿಗಳಿಂದ ಚೀನಾ ಮತ್ತೆ ಅದರ ಕುತಂತ್ರ ಮಾಡಬಹುದು.

ಭಾರತದ ಸ್ಟಾಟ್೯ ಅಪ್ ಗಳಿಗೆ ಟಕ್ಕರ್:

ಚೀನಾದ ಆ್ಯಪ್ ಗಳು ಈ ಹಿಂದೆ ಬ್ಯಾನ್ ಆಗಿದ್ದವನ್ನು ಮತ್ತೆ ಆರಂಭಿಸುವ ಬಗ್ಗೆಯೂ ಎರಡೂ ರಾಷ್ಟ್ರಗಳ ನಡುವಣ ಚರ್ಚೆ ನಡೆದಿದ್ದು, ಆತಂಕ ಹೆಚ್ಚಿಸಿದೆ. ಹಾಗೊಂದು ವೇಳೆ ಆದರೆ ಹಲವಷ್ಟು ವಿಚಾರಗಳಲ್ಲಿ ಭಾರತಕ್ಕೆ ತೊಂದರೆ ಆಗಲಿದೆ. MoJ, Chingari, Roposo, Mitron, Koo ನಂತಹ ಭಾರತೀಯ ಆ್ಯಪ್ ಗಳು ಆರಂಭವಾಗಿ ಚೆನ್ನಾಗಿ ಬೆಳೆಯುತ್ತಿವೆ. ಚೀನಾ ಆ್ಯಪ್ ಗಳು ಮತ್ತೆ ಭಾರತಕ್ಕೆ ಲಗ್ಗೆ ಇಟ್ಟರೆ, ಮತ್ತೆ ಭಾರತೀಯ ಆ್ಯಪ್ ಗಳಿಗೆ ದೊಡ್ಡ ಪ್ರತಿ ಸ್ಪರ್ಧಿಯಾಗಿ ಬಿಡಬಹುದು.

ಚೀನಾ ಭಾರತ ಸ್ನೇಹದಿಂದ ಎರಡು ರಾಷ್ಟ್ರದ ಸಂಬಂಧದಲ್ಲಿ ಸುಧಾರಣೆ ಆಗಿ, ಗಡಿ ತಂಟೆಗಳು ಇಲ್ಲದಾಗಿ ಶಾಂತಿ ಸ್ಥಾಪನೆ ಆಗಬಹುದು. ಪರಸ್ಪರರಶ ವ್ಯಾಪಾರ ವ್ಯವಹಾರಗಳು ಸಲೀಸಾಗಿ ನಡೆಯುವ ಸಾಧ್ಯತೆ ಇದೆ. ನಮ್ಮ ದೇಶಕ್ಕೆ ಯು.ಎನ್.ಒ ನಲ್ಲಿ ಶಾಶ್ವತ ಸದಸ್ಯತ್ವ ಕೊಡುವಲ್ಲಿ ಚೀನಾ ಕೂಡ ಸಮ್ಮತಿ ನೀಡಬಹುದು ಇಷ್ಟು ಬಿಟ್ಟರೆ ಬೇರೆ ಎಲ್ಲಾ ವಿಧವಾಗಿಯೂ ಚೀನಾಗೆ ಭಾರತದಿಂದ ಲಾಭ ಭರಪೂರವಾಗಿ ಆಗಲಿದೆ.