ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದ ಕೊಡಗು ಜಿಲ್ಲೆ
ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು (ಎಂಎಸ್‍ಎಂಇ) ಕ್ಯಾಟಲಿಸ್ಟ್ ವಿಮೆನ್ ಎಂಟ್ರೆಫ್ರೆನ್ಸ್ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಕೊಡಗು ಜಿಲ್ಲೆ ಹೋಂ-ಸ್ಟೇ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ನೋಂದಾಯಿತ ಹೋಂಸ್ಟೇಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಗಾರವು ಸೋಮವಾರ ನಗರದ ಹೋಟೆಲ್ ಮಯೂರ ವ್ಯಾಲಿ ವ್ಯೂನಲ್ಲಿ ನಡೆಯಿತು.
ಆರ್ಥಿಕವಾಗಿ ಲಾಭದಾಯಕ ಹಾಗೂ ಜವಾಬ್ದಾರಿಯಾಗಿ ಹೋಂಸ್ಟೇ ನಡೆಸುವ ಬಗ್ಗೆ ಹಾಗೂ ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳಿಗೆ ಬಾರ್ಕೋಡ್ ಅಳವಡಿಸುವ ಬಗ್ಗೆ ಇತರೆ ವಿಷಯದ ಬಗ್ಗೆ ಸಮಗ್ರವಾಗಿ ಎಂಎಸ್‍ಎಂಇ ಸಂಸ್ಥೆಯ ವಿಷಯ ತಜ್ಞರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿರುವ ನೋಂದಾಯಿತ ಹೋಂ-ಸ್ಟೇಗಳಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಜಿಲ್ಲೆಯ ಉತ್ಪನ್ನಗಳಾದ ಕಾಫಿ, ವೈನ್, ಚಾಕೋಲೇಟ್, ಜೇನು, ಮಸಾಲೆ ಪದಾರ್ಥಗಳಿಗೆ ಮೌಲ್ಯ ವರ್ಧನೆ ಮಾಡುವ ಬಗ್ಗೆ ಹಾಗೂ ಮಾರ್ಕೆಟಿಂಗ್ ಮಾಡುವ ಬಗ್ಗೆ ಹಾಗೂ ಸ್ವಾಸ್ಥ್ಯ ಕೇಂದ್ರ ಭಾರತ ಸರ್ಕಾರದ ಎಂಎಸ್‍ಎಂಇ ನೋಂದಾಣಿ ಬಗ್ಗೆ ತಿಳಿಸಿದರು.
ಜಿಲ್ಲೆಯ ನೋಂದಾಯಿತ ಹೋಂ-ಸ್ಟೇಗಳು ಎಂಎಸ್‍ಎಂಇ ನೋಂದಾಣಿ ಮಾಡುವ ಕುರಿತು ಹಾಗೂ ಅದರ ಪ್ರಾಯೋಜನಗಳ ಬಗ್ಗೆ ಸುಮನ್ ಎಸ್ ರಾಜು, ಸಹಾಯಕ ನಿರ್ದೇಶಕರು ಎಂಎಸ್‍ಎಂಇ ಮಂಗಳೂರು ಇವರು ಮಾಹಿತಿ ನೀಡಿದರು.
ಬಿಸಿನೆಸ್ ಸ್ಟ್ರಾಟೆಜಿಸ್ ಫಾರ್ ಎಂಟ್ರೆಪ್ರೆನುರ್ಸ್ ಎಂಬ ವಿಷಯದ ಬಗ್ಗೆ ಸಂಗೀತಾ ಶಶ್ರೀಂಧ್ರ, ಕ್ಯಾಟಲಿಸ್ಟ್ ವಿಮೆನ್ ಎಂಟ್ರೆಫ್ರೆನ್ಸ್ ಲೀಡ್ ಮಂಗಳೂರು ರವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ನೋಂದಾಯಿತ ಹೋಂ-ಸ್ಟೇ ಮಾಲೀಕರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಮಾತನಾಡಿದರು. ಹೋಂ-ಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್ ಅವರು ಹೋಂ ಸ್ಟೇಗಳ ನಿರ್ವಹಣೆ, ಬೆಳವಣಿಗೆ, ಅಭಿವೃದ್ಧಿ ಹಾಗೂ ಕಸವಿಲೇವಾರಿ ಸಂಬಂಧ ಮಾತನಾಡಿದರು.
ಸೋಮವಾರಪೇಟೆ ತಾಲ್ಲೂಕು ಹೋಂಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಸಿ.ಕೆ.ರೋಹಿತ್, ಸುಮಾರು 65 ಕ್ಕೂ ಹೆಚ್ಚು ಹೋಂಸ್ಟೇಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚರಾದ ಜತೀನ್ ಬೋಪಣ್ಣ ಇತರರು ಇದ್ದರು.
ಕೊಡಗು ಜಿಲ್ಲೆಗೆ ಪ್ರತೀ ವರ್ಷ 40 ರಿಂದ 50 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇಲ್ಲಿನ ಸ್ಥಳೀಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗ ದೊರೆಯುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 4 ಸಾವಿರದಷ್ಟು ಹೋಂ ಸ್ಟೇಗಳಿದ್ದು, ಇಲ್ಲಿಯವರೆಗೆ 2010 ಹೋಂ ಸ್ಟೇಗಳು ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಗೂಗಲ್‍ನಲ್ಲಿ ಅತೀ ಹೆಚ್ಚು ಕೊಡಗಿನ ಪ್ರವಾಸೋದ್ಯಮ ಕ್ಷೇತ್ರವನ್ನು ಹುಡುಕಿರುವುದು ಕಂಡುಬಂದಿದೆ. ಆ ನಿಟ್ಟಿನಲ್ಲಿ ರಾಜ್ಯದ ಪ್ರವಾಸೋದ್ಯಮದಲ್ಲಿ ಕೊಡಗು ಪ್ರಮುಖ ಸ್ಥಾನವನ್ನು ಹೊಂದಿದೆ ಎಂದರು.
2023 ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ಸುಮಾರು 43,69,507 ಮಂದಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. 2024 ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ 20,67,168 ಮಂದಿ ಪ್ರವಾಸಿಗರು ಭೇಟಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದರು.
ಕೊಡಗು ಜಿಲ್ಲೆಯ ಪ್ರಾಕೃತಿಕ ಸಂಪತ್ತು, ಪರಂಪರೆ, ಸಾಂಪ್ರದಾಯಿಕತೆ ಮತ್ತು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಪವಿತ್ರ ಕ್ಷೇತ್ರಗಳಿಗೆ ವಿಶೇಷ ಸ್ಥಾನ ಹೊಂದಿದೆ. ಹಸಿರನ್ನೇ ಉಸಿರಾಗಿಸಿಕೊಂಡಿರುವ ನಿಸರ್ಗದ ಪ್ರಾಕೃತಿಕ ಹಾಗೂ ಸ್ವಾಭಾವಿಕ ಸಂಪನ್ಮೂಲವನ್ನು ಹೊಂದಿರುವ ಕೊಡಗನ್ನು ಕಾಣುತ್ತೇವೆ. ಕೊಡಗು ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿ ಸಸ್ಯ ಸಂಪತ್ತನ್ನು ಹೊಂದಿ ಹಚ್ಚ ಹಸುರಿನಿಂದ ಕೂಡಿರುವ ಜಿಲ್ಲೆಯಾಗಿದೆ. ಮನೋಹರವಾದ ಪ್ರಾಕೃತಿಕ ಸೌಂದರ್ಯ ಆಕರ್ಷಿಸಿರುವುದು ವಿಶೇಷವಾಗಿದೆ ಎಂದರು.
ಎತ್ತರದ ಪರ್ವತ ಶ್ರೇಣಿಗಳು, ನದಿ, ತೊರೆ, ಹಳ್ಳ ಕೊಳ್ಳಗಳು, ಕಣಿವೆಗಳು, ಜಲಪಾತಗಳನ್ನು ಕೂಡಿದ್ದ ನಿಸರ್ಗ ರಮಣೀಯ ಪ್ರದೇಶವು ಪಶ್ಚಿಮಘಟ್ಟದಲ್ಲಿ ಕಂಡುಬಂದಿರುವುದು ವಿಶೇಷವೇ ಸರಿ. ಪ್ರವಾಸೋದ್ಯಮವು ಭಾರತದಲ್ಲಿ ಅತೀ ದೊಡ್ಡ ಸೇವಾ ವಲಯವಾಗಿದ್ದು, ರಾಷ್ಟ್ರದ ಜಿಡಿಪಿಗೆ ಪ್ರವಾಸೋದ್ಯಮ ಕೊಡುಗೆಗೆ ಶೇ.6 ರಷ್ಟು, ರಾಜ್ಯದ ಕೊಡುಗೆ ಶೇ.14 ರಷ್ಟು ಅಧಿಕವಾಗಿದೆ. 30 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಮಾಡಿರುವುದು ಪ್ರವಾಸೋದ್ಯಮದ ಮಹತ್ವವನ್ನು ಸಾರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ವಿವರಿಸಿದರು.