ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 113 ರನ್ಗಳಿಂದ ಗೆದ್ದುಕೊಂಡಿರುವ ನ್ಯೂಜಿಲೆಂಡ್ ತಂಡ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ದಾಖಲೆ ನಿರ್ಮಿಸಿದೆ. ವಾಸ್ತವವಾಗಿ 1955 ರಿಂದ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಮಾಡುತ್ತಿರುವ ನ್ಯೂಜಿಲೆಂಡ್ ತಂಡ, ಇದುವರೆಗೆ ಭಾರತದ ನೆಲದಲ್ಲಿ ಈ ಸರಣಿಯನ್ನು ಹೊರತುಪಡಿಸಿ 12 ಟೆಸ್ಟ್ ಸರಣಿಗಳನ್ನುನ ಆಡಿತ್ತು. ಆದರೆ ಈ ಯಾವ ಸರಣಿಯಲ್ಲೂ ಕಿವೀಸ್ ತಂಡ ಗೆಲ್ಲುವುದಕ್ಕೆ ಟೀಂ ಇಂಡಿಯಾ ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೀಗ ರೋಹಿತ್ ಪಡೆ ತವರಿನಲ್ಲಿ ಮೊದಲ ಬಾರಿಗೆ ಕಿವೀಸ್ ವಿರುದ್ಧ ಸೋತ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಮೊದಲು ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು 8 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಕಿವೀಸ್ ತಂಡ, ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದು ಭಾರತದ ನೆಲದಲ್ಲಿ ಇತಿಹಾಸ ನಿರ್ಮಿಸಿದೆ. ಇತ್ತ ಈ ಸೋಲಿನೊಂದಿಗೆ ತವರಿನಲ್ಲಿ ಟೀಂ ಇಂಡಿಯಾದ ಅಜೇಯ ಟೆಸ್ಟ್ ಸರಣಿಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.