ಜನರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಕೂಡುಮಂಗಳೂರು ಗ್ರಾ.ಪಂ ಸದಸ್ಯರು ಒತ್ತಾಯಿಸಿದ್ದಾರೆ.

ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಾದ ಬಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೂಡುಮಂಗಳೂರು ಗ್ರಾ.ಪಂ ಸದಸ್ಯರು ಒತ್ತಾಯಿಸಿದ್ದಾರೆ. ಪಂಚಾಯಿತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ದೊರಕುತ್ತಿಲ್ಲ. ಚರಂಡಿ ಸ್ವಚ್ಚತೆ, ಬೀದಿ ದೀಪ ಅಳವಡಿಕೆ ಸೇರಿದಂತೆ ಪಂಚಾಯಿತಿಯಲ್ಲಿ ಹಲವು ಸಮಸ್ಯೆಗಳಿವೆ. ಇದರ ಬಗ್ಗೆ ಪಂಚಾಯಿತಿ ಸಭೆಗಳಲ್ಲಿ ಪ್ರಸ್ತಾಪಿಸಿದರೆ ಅದು ಕಡತಗಳಿಗೆ ಮಾತ್ರ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಬೆಳಿಗ್ಗೆ ೧೧ ಗಂಟೆಗೆ ನಡೆಯಬೇಕಾದ ಸಭೆಗೆ ಅಧ್ಯಕ್ಷರೇ‌ ಹಾಜರಿರುವುದಿಲ್ಲ‌. ಭಾಗಶಃ ಸದಸ್ಯರು ಸಮಯಕ್ಕೆ ಸರಿಯಾಗಿ ಇರಿವುದಿಲ್ಲ. ಮುಂದಿನ ದಿನಗಳಲ್ಲಿ ಇದು ಮರುಕಳಿಸಿದರೆ ಸಭೆ ಬಹಿಷ್ಕರಿಸಲಾಗುವುದು ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ತಿಳಿಸಿದರು.

ಆನೆಕೆರೆ ಬಳಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಫಿಲೋಮಿನ ತಿಳಿಸಿದರು. ಕಸ ಹಾಕಿದವರಿಗೆ ದಂಡ ವಿಧಿಸುವಂತೆ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಚರಂಡಿ ಸ್ವಚ್ಚತೆ, ಬೀದಿ ದೀಪ ನಿರ್ವಹಣೆ, ಕಸ ವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸದಸ್ಯರು ಸಭೆಯಲ್ಲಿ ಚರ್ಚೆ ನಡೆಯಿತು. ಇದರ ಬಗ್ಗೆ ಸೂಕ್ತ ‌ಕ್ರಮ ಕೈಗೊಳ್ಳುವ ಬಗ್ಗೆ ಸದಸ್ಯರಾದ ಗಿರೀಶ್, ಪಾರ್ವತಿ ಧರ್ಮಪ್ಪ, ಮಣಿ, ಕೆ.ಬಿ.ಶಂಶುದ್ಧೀನ್ ಹಾಗೂ ಇತರರು ಒತ್ತಾಯಿಸಿದರು.

ನಂತರ‌ ೨೦೨೪-೨೫ನೇ ಸಾಲಿನ ೧೫ ನೇ ಹಣಕಾಸಿನ ಕ್ರಿಯಾಯೋಜನೆಯನ್ನು ಅನುಮೋದಿಸಲಾಯಿತು. ನಂತರ ಪಂಚಾಯಿತಿ ಏಳು ವಾರ್ಡ್ ಗಳಲ್ಲಿ ವಾರ್ಡ್ ಸಭೆ ನಡೆಸಲು ತೀರ್ಮಾನಿಸಲಾಯಿತು. ‌ಪಂಚಾಯಿತಿ ಜಮಾ‌ ಖರ್ಚಿನ ಬಗ್ಗೆ ಚರ್ಚಿಸಿ ಅನುಮೋದಿಸಲಾಯಿತು. ನಂತರ ಸಾರ್ವಜನಿಕರ ಅರ್ಜಿ ವಿಕೇವಾರಿ ಮಾಡಲಾಯಿತು. ಪಂಚಾಯಿತಿ ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಪಂಚಾಯಿತಿ ಸಿಬ್ಬಂದಿಗಳು ಇದ್ದರು.