ಹೈಪ್ಲೈಯರ್ಸ್ ತಂಡದಿಂದ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ತಂಡಗಳಿಗಾಗಿ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-, 2024ಅನ್ನು ಡಿ.4ರಿಂದ 8ರವರೆಗೆ ಆಯೋಜಿಸಲಾಗಿದೆ,ಈ ಬಗ್ಗೆ ಮಾಹಿತಿ ನೀಡಿದ ಹೈಪ್ಲೈಯರ್ಸ್ ತಂಡದ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ವಿ. ಬಾಡಗ ಗ್ರಾಮದಲ್ಲಿ 3ನೇ ಬಾರಿಗೆ ಜರುಗುತ್ತಿದೆ. ವಿ.ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯುವ ಈ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿರುವುದಾಗಿ ಮಾಹಿತಿ ನೀಡಿದರು.

ಕುಟುಂಬ ತಂಡಗಳಲ್ಲಿ ಗರಿಷ್ಠ 4 ಅತಿಥಿ ಆಟಗಾರರು ಭಾಗವಹಿಸಬಹುದಾಗಿದೆ. ಆದರೆ ಅತಿಥಿ ಆಟಗಾರರು ಕಡ್ಡಾಯವಾಗಿ ಕೊಡವ ಆಟಗಾರರಾಗಿರಬೇಕು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಕೊಡವ ಸಾಂಪ್ರದಾಯಿಕ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿರುವ ರಂಜು ಪೂಣಚ್ಚ, ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಕಳೆದ ಎರಡು ವರ್ಷ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಪಂದ್ಯಾವಳಿ ಜರುಗಲಿದ್ದು, ಗ್ರಾಮಸ್ಥರು ಮತ್ತು ಪ್ರಾಯೋಜಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ಬಾರಿ ಆಯೋಜಿಸಿದ್ದ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 19 ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿ 25 ತಂಡಗಳನ್ನು ನಿರೀಕ್ಷಿಸಲಾಗಿದೆ ಎಂದರು.