ಸಾಹಿತ್ಯ ಲೋಕದ
ಬೆಡಗು,ಜವಾಬ್ದಾರಿಗಳ ತೊಡಕು ಎರಡನ್ನೂ ತೂಗಿಸಿಕೊಂಡು ಹೋಗುವಷ್ಟರಲ್ಲಿ ಅದು ಹೇಗೆ ಸಾಧ್ಯವಾಯಿತು ಇಲ್ಲಿಯವರೆಗೆ ಬರಲು!
ಇದೇ ಕನಸೆ? ಅಲ್ಲ ಜೀವನವೆ?
ಜೀವನವನ್ನು ಅರ್ಥೈಸುತ್ತಾರೆ ಹಲವರು,ಜೀವದ ಜೀವಾಳವೇ….ಜೀನಾ…… ವನ
ಅದು ನವ ನವೀನ! ಏನೂ ಅರಿಯದ ವಯಸ್ಸಿನಲ್ಲಿ..ಏನೆಂದುಕೊಳ್ಳುತ್ತೇವೆ ನಾವು! ಈ ಬದುಕು ಸುಂದರ,ಆನಂದ ಮಂದಿರ!
ನಾವು ನಮ್ಮ ಹಾಗೇ ಇರಬಹುದಾದ ಅಪ್ಪಟ ಸಾಚಾತನದ ಬಾಳ ಹಂದರ!
ಕವಿ ಕುವೆಂಪುರವರು ಉದ್ಗರಿಸಿದಂತೆ ‘ಮಗು ಹುಟ್ಟುತ್ತ ವಿಶ್ವಮಾನವ…ಬೆಳೆಯುತ್ತಾ ಅಲ್ಪಮಾನವ’!
ಯಾರನ್ನೇ ಕಂಡರೂ ಮುಕ್ತವಾಗಿ ನಕ್ಕುಬಿಡುವ ಮಗುವಿಗೆ ಯಾರ ನಿರ್ದೇಶನದ ಅಗತ್ಯವಿಲ್ಲದೆಯೂ ಇಲ್ಲದೆ ಫಕ್ಕನೆ ನಗಲು ಬರುತ್ತದೆ.ಆಗ ವಾತಾವರಣವೆಲ್ಲ ಎಷ್ಟು ಆಹ್ಲಾದಕರವಾಗಿಬಿಡುತ್ತದೆ!ಇದನ್ನು ಮುಗ್ಧತೆಯೆನ್ನುತ್ತೇವೆ.ಹಾಲು ಹಸುಳೆಯ ಮನೋವೃತ್ತಿ ಎನ್ನುತ್ತೇವೆ.ಹಾಗಾದರೆ ಅದು ಬೆಳೆಯುತ್ತಾ ಬಂದಂತೆ ನಾವೇಕೆ ಅದನ್ನು ಅದರ ಹಾಗೆಯೇ ಇರಲು ಬಿಡುವುದಿಲ್ಲ? ಸನ್ನೆಗೋಲಿನಂತೆ ಹೆಜ್ಜೆಹೆಜ್ಜೆಗೂ
ಕಟ್ಟುಪಾಡುಗಳನ್ನು ವಿಧಿಸಿ ಈ ಜಗಜೀವನದ ಪಾಶಕ್ಕೆ ಒಡ್ಡಿ ಬಿಡುತ್ತೇವೆ.’ಅದು ವಿಶ್ವದ ಮಗು ವಿಶ್ವಕ್ಕೇ ಸಲ್ಲಬೇಕಾದ ಮಗು,ವಿಶ್ವದೊಳಗೆ ಬಾಳಬೇಕಾದ ಮಗು’ಎಂದು ಯೋಚಿಸುವ ಗೊಡವೆಗೇ ಹೋಗುವುದಿಲ್ಲ.ಮಕ್ಕಳೆಲ್ಲ
ರಲ್ಲೂ ಭಗವಂತನನ್ನೇ ಕಾಣುವ ನಾವು ಬೆಳೆಯುತ್ತಾ ಹೋದಂತೆ
ಅಪರಿಚಿತರಂತೆ,ಅಶಕ್ತರಂತೆ,
ನಮ್ಮದೇ ನೆರಳಾಗಿರಬೇಕೆಂದು ನಿರೀಕ್ಷೆ ಮಾಡುವುದರಲ್ಲಿ ಅರ್ಥವಿದೆಯೇ?
ನಾವು ಅಲ್ಪಮಾನವತೆಯ ಪರಿಧಿಯೊಳಗೆ ಸೇರಿ ಹೋದಂತೆ ಅವರಲ್ಲಿಯೂ ಅದನ್ನೇ ನಿರೀಕ್ಷಿಸುವುದು ಸರಿಯೆ?
ಬದುಕು ನಿಗೂಢ ! ಅದರ ಪುಟಗಳು ತೆರೆಯುವುದು ವರ್ತಮಾನದಲ್ಲಷ್ಟೆ! ಮತ್ತೆ ಹಿಂದಿನ ನೆನಪುಗಳು ವಿಫಲತೆಯ ಖಡ್ಗದ ಮೊನೆಯಾಗಿಯೋ,ಸಫಲತೆಯ ಹೆಮ್ಮೆಯಾಗಿಯೋ ನಮ್ಮನ್ನು ಸುಖ ಸಂತೋಷದ ಘಳಿಗೆಗಳಿಗೆ ಎರವಾಗಿಸುತ್ತವೆ ಅಥವಾ ನೆನಪಿನ ಕಲ್ಲು ಸಕ್ಕರೆಯಂತೆ ಮುದಗೊಳಿಸುತ್ತವೆ.ಅದಕ್ಕೇ ಎಲ್ಲರಿಗೂ ಇಳಿವಯಸ್ಸಿನಲ್ಲೂ ತುಂಬಾ ಸುಖ ಕೊಡುವ ಸಾಧನವೇ ಬದುಕಿನ ಹಿನ್ನೋಟದಲ್ಲಿ ಸಿಗುವ ಚಪ್ಪರಿಕೆ ! ಅದೇ ಹಲವೊಮ್ಮೆ ಮೌಲ್ಯಗಳನ್ನು ಹೊಮ್ಮಿಸುವುದಂತೂ ಅಷ್ಟೇ ಸತ್ಯ! ಇದುವೆ ಬರಹಗಾರನ ಸಾಮರ್ಥ್ಯಕೋಶಕ್ಕೆ ತುಂಬಿ ಬಿಡುವ ಅನರ್ಘ್ಯ ರತ್ನಭಂಡಾರ ! ಅವುಗಳ ಪ್ರಾಮಾಣಿಕ ಅಭಿವ್ಯಕ್ತಿಗೆ ಮನ ತುಡಿಯುತ್ತಿದ್ದರೂ ಬದುಕು ನಮ್ಮನ್ನು ಕಾಣದ ಸೂತ್ರದಲ್ಲಿ ಬಂಧಿಸಿ ಆಗಸದಲ್ಲಿ ಹಾರಾಡುವಂತೆ ಸೂಚಿಸುತ್ತದೆ.ಇದು ಬದುಕಿನ ವ್ಯಂಗ್ಯವೋ ವಾಸ್ತವವೋ ಅಥವಾ ಎಲ್ಲರಿಗೂ ಇರುವ ಅಸಹಾಯಕತೆಯೋ ಎಂಬ ವಾಸ್ತವವನ್ನು ಮುಚ್ಚಿದ ಪರದೆಯೊಳಗಿಂದ ವೀಕ್ಷಿಸಲಾಗದೆ,’ಇದು ದೇವರು ನನಗೊಬ್ಳನಿ/ಳಿಗೇ ಕೊಟ್ಟ ಶಿಕ್ಷೆಯೇನೋ’ಎಂದು ನಿಟ್ಟುಸಿರಿಟ್ಟು ಸ್ವೀಕರಿಸಿ ಬಿಡುತ್ತೇವೆ.ನಾವು ಸ್ವೀಕರಿಸಿದ್ದು ತಪ್ಪೋ ಸರಿಯೋ ಎಂದು ಒಂದು ಹಂತದಲ್ಲಿ ಅರಿವಿಗೆ ಬರುವುದಿಲ್ಲ.ಆದರೆ ಅದನ್ನು ನಿರಾಕರಿಸುವ ಸಾಧ್ಯತೆಯೂ ಇತ್ತು ಎಂಬುದು ಭಗವಂತನೆಂಬ ಆ ಕಾಣದ ಶಕ್ತಿ ನಮಗೆ ನೀಡಿರುವ ಅವಕಾಶ !
ನಿರಾಕರಿಸಿದ್ದರೆ ನಾನು ಗೆದ್ದುಬಿಡುತ್ತಿದ್ದೆನೇನೋ ಎಂಬ
ಕಲ್ಪನೆ ಹೆಜ್ಜೆ ಹೆಜ್ಜೆಗೆ ನಮ್ಮನ್ನು ಘಾಸಿಗೊಳಿಸುತ್ತದೆ.ಆದರೆ ಅದರ ಪರಿಣಾಮವೂ ವ್ಯತಿರಿಕ್ತವಾದಾಗ ,’ತನ್ನ ಆಯ್ಕೆಯಲ್ಲಿ ತಾನು ಗೆದ್ದೆ’ ಎಂಬ ನಿಟ್ಟುಸಿರು ಹೊರಪುಟಿದು ಮನದ ತಲ್ಲಣಗಳನ್ನು ಶಾಂತಗೊಳಿಸುತ್ತದೆ.ಈ ಜಿಜ್ಞಾಸೆ ನನ್ನನ್ನು ಪ್ರತಿಯೊಬ್ಬರ ಸಮಸ್ಯೆಗಳನ್ನು ಕಂಡಾಗ
ಕಾಡುತ್ತಲೇ ಇರುತ್ತದೆ.ಸಂತೋಷವಿರುವವರ
ಬಾಳನ್ನು ಕಂಡಾಗ, ‘ಸದ್ಯ! ಭಗವಂತ ಅವರ ಬದುಕನ್ನಾದರೂ ನೆಮ್ಮದಿಯಿಂದ ಇರಿಸಿದ್ದಾನಲ್ಲ!’ ಎಂದು ಖುಷಿಯಾಗುತ್ತೇನೆ.
ಆದರೆ ನನ್ನ ನೋವನ್ನು ಅವರೆದುರು ಹೇಳಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ.ಇದಕ್ಕೆ ಕಾರಣಗಳು ಎರಡು! ಒಂದು ಅವರ ಹರುಷದ ಸಂದರ್ಭ ವನ್ನು ಕಲಕಬಾರದೆಂಬುದು.
ಎರಡು
ನನ್ನ ಯಾವುದೇ ದುಮ್ಮಾನವೂ ಅವರ ಖುಷಿಗೆ ಅಡ್ಡಬರಬಾರ ದೆಂಬುದು ಜೊತೆಗೆ ಅಪರಿಮಿತ ಸ್ವಾಭಿಮಾನ!
ಬಹುಶ: ಆನಂದವಾಗಿರುವವರಿಂದ ನಾನು ಅಂತರವನ್ನು ಕಾಯ್ದುಕೊಳ್ಳುತ್ತೇನೆ.ನೊಂದ
ವರ ನೋವಿಗೆ ಸ್ವಲ್ಪಕಾಲ ವಿನಿಯೋಗಿಸಿ ಅವರೊಂದಿಗೆ ಮಿಡಿಯುತ್ತೇನೆ.ಆದರೆ ಬೃಹತ್ತಾದ ಸಮಾಜ ಸೇವೆ ಮಾಡಲು ನನಗೆಲ್ಲಿದೆ ಸಮಯ? ಸಾಂಸಾರಿಕ ಬಂಧನದಲ್ಲಿ ನಿಭಾಯಿಸಬೇಕಾದ, ‘ಮುಗಿದರೂ ಮುಗಿಯದೇ ಉಳಿದ’ ಕರ್ತವ್ಯದ ಮಾಲೆ ಪಟಾಕಿ ಇದೆಯಲ್ಲ!
ಅದು ಸದ್ದು ಮಾಡುವುದೇ ಹೆಚ್ಚು! ಏಕಾಂತ ನೀಡುವುದಿಲ್ಲ,ಪತಂಗದಂತೆ ಮೇಲೇರ ಬಿಡುವುದಿಲ್ಲ.
ಎಲ್ಲವನ್ನೂ ಹೊತ್ತು ನಭಕ್ಕೇರುವ ಸಾಮರ್ಥ್ಯವೂ ನನಗಿಲ್ಲ! ಬಿಟ್ಟು ಹೇಡಿಯಂತೆ ಓಡಿಹೋಗಿ ಬಹುದಾದ ಪಲಾಯನವಾದಿಯೂ ನಾನಲ್ಲ.
ಏಕೆಂದರೆ ನಾನು ಪೂಜಿಸುವ ಧ್ಯಾನಿಸುವ ಕಲ್ಪಿಸುವ ಭಗವಂತ ಎಷ್ಟೊಂದು ಪ್ರೇಮಮಯಿಯಾಗಿದ್ದಾನೆ!
ನನ್ನ ಮೌನದಲ್ಲಿ ಜೊತೆಗೂಡುತ್ತಾನೆ.
ನನ್ನ ಮಾತಿನಲ್ಲಿ ಕಸುವು ತುಂಬುತ್ತಾನೆ.
ನನ್ನ ಕಲ್ಪನೆಯಲ್ಲಿ ಬಹುಬಗೆಯ
ರೂಪವನ್ನು ತಾಳಿ ನಿರಂತರ ನವನವೋನ್ಮೇಷ ನೀಡುತ್ತಾನೆ.’ನನ್ನ ಅಸ್ತಿತ್ವವೇ ಇಲ್ಲವಾಯಿತು’ ಎನ್ನುವ ಸಂದರ್ಭದಲ್ಲಿ ಕಂಗೆಟ್ಟು ನೆನೆದಾಗ ಯಾರದೋ ರೂಪದಲ್ಲಿ ಯಾವುದೋ ಬಗೆಯಲ್ಲಿ ಮುಳುಗದಂತೆ ಬೆಂಡಾಗಿ ಕಾಯುತ್ತಾನೆ.ಅಂದು
ಕೊಳ್ಳುತ್ತೇನೆ , ‘ಇದು ಅವನ ಕರುಣೆಯೋ ಕರ್ತವ್ಯವೋ ‘ಎಂದು!
ಏನೇ ಆದರೂ ಅವನ ಈ ನಡೆ
ಕಷ್ಟದಲ್ಲಿ ಬಹಳ ಆಪ್ಯಾಯಮಾನ ವಾಗಿರುತ್ತದೆ.ಹೆಣ್ಣಾಗಿ ಹುಟ್ಟಿ ಜಗತ್ತಿನಲ್ಲಿ ಮಾನವ ಆಕಾರ ತಳೆದ ನನಗೆ ಎದೆಯ ತುಂಬ ಹರಡಿ ನಿಂತ ಪ್ರೀತಿಯ ಪುಷ್ಕರಿಣಿಯಲ್ಲಿ ಅರಳಿದ ತಾವರೆ ಮಾತ್ರ ಗೊತ್ತು!ಭಗವಂತನ ನೆಚ್ಚಿನ ಆವಾಸವೂ ಅದಾಗಿದೆ ಎಂಬ ಐತಿಹ್ಯಕ್ಕೆ ನನ್ನ ಸಹಮತವೂ ಇದೆ.
ನೀರು ಯಾವ ರೂಪದಲ್ಲೇ ಇರಲಿ ನನಗೆ ಅದು ಆಪ್ತ!
ಅಚ್ಛೋದ ಸರೋವರದ ಕಲ್ಪನೆ
ನನಗೆ ಬಹಳ ಖುಷಿ ಕೊಡುವ ಸಂಗತಿ!
ತಿಳಿಯಾದ ನೀರು, ಸುತ್ತ ಆವೃತವಾಗಿರುವ ಹಸಿರು ಹೂವುಹಣ್ಣು,ಪಕ್ಷಿಗಳ ಕಲರವ,ಮುಗಿಲ ಓಟವನ್ನು ಬಿಂಬಿಸುವ ಜಲಮುಕುರ!
ಮೆಲ್ಲ ಸುಳಿದು ಕಚಗುಳಿಯಿಟ್ಟು
ವಿನೋದಿಸುವ ತಂಬೆಲರ,ರಂಗುರಂಗಿನ ಚಿಟ್ಟೆಗಳ ಓಳಿ! ತನ್ನೊಡನೆ ಎಲ್ಲಿಂದಲೋ ಪರಿಮಳ ತಂದು ಸುರಿದು ಬಿಡುವ ಮಂದಾನಿಲ!
ಎಲ್ಲಿಂದಲೋ ಬಿದ್ದ ಒಣಕಡ್ಡಿಯೋ ಹಣ್ಣೆಲೆಯೋ ಅಲ್ಲಿ ವರ್ತುಲವೊಂದನ್ನು ನಿರ್ಮಿಸಿ ಅದನ್ನು ಅನಂತವಾಗಿಸುವ ಬೆರಗು!
ವಿಹರಿಸುವ ಬಾತು, ಹಂಸ ಕೊಕ್ಕರೆಗಳು,ಮೀನಾಟ ಕಪ್ಪೆ ನೆಗೆತ,ಬಗೆಬಗೆಯ ಮಿಡತೆಗಳ ಚಿಣ್ಣಾಟ ,ವಿಚಿತ್ರ ಧ್ವನಿಯ ಸಂವಾದ!
ಎಷ್ಟು ಏಕಾಗ್ರಗೊಳಿಸುತ್ತದೆ ಮನವನ್ನು ! ಅದೇ ಕಾರಣಕ್ಕೆ ಋಷಿಮುನಿಗಳು ದೃಷ್ಟಾರರಾಗಲು ಸಾಧ್ಯವಾಯಿತೇನೋ!
ಇಷ್ಟೆಲ್ಲಾ ಹೇಳಬೇಕಾಯಿತು
ನನ್ನ ಬಾಲ್ಯದ ಬದುಕಿನ ಸ್ಮೃತಿ ಸಂಪುಟ ತೆರೆಯಲು!
ಕಾಡಿನ ಸಿಂಹದಂತೆ ವ್ಯಕ್ತಿತ್ವವಿದ್ದ
ಅಪ್ಪನ ಮೊದಲ ಮಗಳಾಗಿ
ಆಪ್ತಳಾಗಿ ಕಾನನದೊಳಗೆಲ್ಲ ಕಾಡು ಮೃಗದಂತೆ ಸಂಚರಿಸಿ,ಅಪರೂಪದ ಹಣ್ಣುಗಳ ಸವಿದು ಬೆಳೆದ ಬಾಲ್ಯ ಎಷ್ಟೇ ಕಷ್ಟಕರವಾಗಿದ್ದರೂ ನನ್ನ ಕೌತುಕದ ಸ್ವಭಾವಕ್ಕೆ ಸಿಕ್ಕ ಉಡುಗೊರೆಯೇ ಎಂಬ ಸಂತಸ ನನ್ನದು.ಅದನ್ನು ನಿಮ್ಮೆದುರು ತೆರೆದಿಡುವ ಪ್ರಯತ್ನ ನನ್ನದು!
ಶ್ರೀಮತಿ ಶಿವದೇವಿ ಅವನೀಶಚಂದ್ರ
ಚೆಟ್ಟಿಮಾನಿ ಕೊಡಗು
ಪಿನ್ 571247
ಮೊ.6364321144