ಸೀತಾರಾಂ ಯಚೂರಿ ಓರ್ವ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್೯ಸಿಸ್ಟ್)ನ ನಾಯಕರಾಗಿ ದೊಡ್ಡ ಹೆಸರು ಪಡೆದವರು. ಅವರು ತತ್ವ, ಆದರ್ಶ ಮತ್ತು ಸಿದ್ಧಾಂತಗಳಿಗೆ ಎಂದಿಗೂ ಬದ್ಧವಾಗಿ ತಮ್ಮ ರಾಜಕೀಯ ಜೀವನ ನಡೆಸಿದವರು. ಭಾರತದಲ್ಲಿ ಎಡಪಂಥೀಯ ರಾಜಕಾರಣ ಒಂದು ಸ್ವರೂಪ ಪಡೆದುಕೊಳ್ಳಲು ಗಮನೀಯ ಪಾತ್ರ ವಹಿಸಿದ ನಾಯಕರಾಗಿ ಇವರು ಗುರುತಿಸಿಕೊಂಡಿದ್ದರು. ಇವರ ಸಾರ್ವಜನಿಕ ಜೀವನದ ಕೊಡಗು ಜನ ಮನಕ್ಕೆ ಇಂದಿಗೂ ಎಂದಿಗೂ ಮಾದರಿ ಆಗುವಂತಹದ್ದು. ಅಂತಹ ನಾಯಕ ನಿನ್ನೆ ಅನಾರೋಗ್ಯದಿಂದ ಅಸುನೀಗಿದ್ದಾರೆ…
ದೆಹೆಲಿಯ ಸೇಂಟ್ ಸ್ಟಿಫನ್ಸ್ ಕಾಲೇಜಿನಲ್ಲಿ ಕಲಾ ವಿಭಾಗದ ಬಿ.ಎ ಆರ್ಥಶಾಸ್ತ್ರ (ಹಾನರ್ಸ್) ಪಡೆದ ನಂತರ ಜವಹರಲಾಲ್ ನೆಹೆರು ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ನಂತರ ಪಿ.ಹೆಚ್.ಡಿ ಮಾಡಲು ಸೇರಿದ್ದರು ಆದರೂ ರಾಜಕೀಯ ಜೀವನದಿಂದಾಗಿ ಮುಗಿಸಲು ಸಾಧ್ಯವಾಗಲಿಲ್ಲ.
ಇವರ ರಾಜಕೀಯ ಜೀವನ 1974ರಲ್ಲಿ ಜವಹರ್ ಲಾಲ್ ನೆಹೆರು ಯೂನಿವರ್ಸಿಟಿ(ಜೆ.ಎನ್.ಯು) ಇಂದ ಆರಂಭವಾಯಿತು. ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾಕ್೯ಸಿಸ್ಟ್) ಪಕ್ಷದ ವಿದ್ಯಾರ್ಥಿ ಸಂಘಟನೆ ಆಗಿದ್ದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್.ಎಫ್.ಐ) ಸಂಘಟನೆಯಿಂದ ಗುರುತಿಸಿಕೊಂಡು ತನ್ನದೇ ಆದ ಛಾಪನ್ನು ಮೂಡಿಸಿ, ಕಾಲೇಜಿನ ಯೂನಿಯನ್ನಿನ ಅಧ್ಯಕ್ಷರಾಗಿ ಚುನಾಯಿತರಾದರು. ಅಲ್ಲಿಂದ ಆರಂಭವಾದ ಅವರ ರಾಜಕೀಯ ಜೀವನ ದೊಡ್ಡ ಮಟ್ಟದಲ್ಲಿ ಬೆಳೆಯಿತು.
1975ರಿಂದ 1977ರವರೆಗೆ ಅಂದಿನ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಗುರುತ್ತರ ಹೋರಾಟ ನಡೆಸಿದ್ದರು. 1975 ಒಂದು ಬಾರಿ ಬಂಧನಕ್ಕೆ ಈಡಾಗಿದ್ದರು ಆದರೂ ನಂತರ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲೆಮರಿಸಿಕೊಂಡಿದ್ದರು. ನಂತರ ಇವರ ಹೋರಾಟದ ಕಿಚ್ಚನ್ನು ಗುರುತಿಸಿ, ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್ಸಿಸ್ಟ್) ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯ ಜಂಟಿ ಕಾರ್ಯದರ್ಶಿ ನಂತರದ ದಿನಗಳಲ್ಲಿ ಅಧ್ಯಕ್ಷರ ಸ್ಥಾನವನ್ನು ನೀಡಿ ಪ್ರೋತ್ಸಾಹಿಸಿತು. ಅಧ್ಯಕ್ಷರಾಗಿ ತರುಣತೆಯೊಂದಿಗೆ ಬಹಳ ಸಮರ್ಥವಾಗಿ ವಿಶಾಲ ಭಾವದಿಂದ ಸ್ಥಾನವನ್ನು ನಿರ್ವಹಿಸಿ, ಪಕ್ಷದಲ್ಲಿ ಎಲ್ಲರ ಶ್ಲಾಘನೆಯನ್ನು ಅವರು ಪಡೆದರು.
ಅಷ್ಟೊತ್ತಿಗಾಗಲೇ 1975ರಲ್ಲೇ ಸೀತಾರಾಂ ಯಚೂರಿ ಅವರು ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್) ಪಕ್ಷದಲ್ಲಿ ಸೇರಿದ್ದರು. 1984ರಲ್ಲಿ ಪಕ್ಷದ ಕೇಂದ್ರೀಯ ಕಮಿಟಿಗೆ ಇವರನ್ನು ಆಯ್ಕೆ ಮಾಡಲಾಯಿತು. 1992ರಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಪಾಲಿಟ್ ಬ್ಯೂರೋದ ಸದಸ್ಯರನ್ನಾಗಿ ಮಾಡಿತು ಅವರ ಪಕ್ಷ. ಯುವ ನಾಯಕರಾಗಿ ಸಬಲವಾಗಿ ಬೆಳೆದ ಯಚೂರಿ ಅವರು ವಿದ್ಯಾರ್ಥಿ ಹಕ್ಕುಗಳ ಪ್ರತಿಪಾದನೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೋರಾಟ ಹಾಗು ಸಮಾಜದಲ್ಲಿ ಆರ್ಥಿಕವಾದ ಸಮಾನತೆ ಮೂಡಬೇಕೆಂದು ನಿರಂತರ ಪರಿಣಾಮಕಾರಿಯಾದ ಹೋರಾಟದ ಬದುಕು ನಡೆಸಿಕೊಂಡು ಬಂದರು.
ಮಾರ್ಕ್ಸಿಸ್ಟ್-ಲೆನಿನಿಷ್ಟ್ ಐಡಿಯಾಲಜಿಗೆ ಕಟ್ಟರ್ ನಿಷ್ಟಾವಾದಿಗಳಾಗಿದ್ದ ಯಚೂರಿ ಅವರು, ಕಾರ್ಮಿಕರ ಹಕ್ಕುಗಳ ರಕ್ಷಣೆ, ಸಾಮಾಜಿ ಹಾಗು ಆರ್ಥಿಕ ಸಮಾನತೆಗಾಗಿ ನಿರಂತರ ಧ್ವನಿಯನ್ನು ಎತ್ತಿದರು. ಸದಾ ನವ ಉದಾರವಾದಿ ನೀತಿಗಳನ್ನು ಟೀಕಿಸುತ್ತಾ, ಅವರ ಭಾಷಣಗಳು ಮತ್ತು ಬರಹಗಳು ಸಮ ಸಮಾಜದ ನಿರ್ಮಾಣದ ಗುರಿಯನ್ನು ಸದಾ ವಹಿಸುತ್ತಿದ್ದವು.
ಭಾರತದಲ್ಲಿ ಎಡಪಂಥೀಯ ಜಾತ್ಯಾತೀತ ರಾಜಕೀಯ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಯಚೂರಿ ಅವರ ಕೊಡುಗೆ ಅಪಾರವಿತ್ತು. ಯಾವಾಗಲೂ ಜೀವದ ಉದ್ದಕ್ಕೂ ಕೋಮುವಾದದ ವಿರುದ್ಧ ಹಾಗು ಬಲ ಪಂಥೀಯ ಧೋರಣೆಗಳ ಎದುರಾಳಿಯಾಗಿ ಒಂದು ಒಗ್ಗಟ್ಟಿನ ಸಂಘಟಿತ ಶಕ್ತಿಯನ್ನು ಹುಟ್ಟುಹಾಕುವಲ್ಲಿ ಬಲವಾದ ನಾಯಕರಾಗಿ ಇದ್ದರು.
ಹಲವಾರು ವಿಚಾರಗಳಲ್ಲಿ ಅವರ ಪಕ್ಷದ ನಿಲುವು-ನಡೆಗಳನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿ ಆಗುತ್ತಿದ್ದ ಸೀತಾರಾಂ ಯಚೂರಿ ಅವರು ತಮ್ಮ ಪ್ರಚುರವಾದ ಭಾಷಣದಿಂದ ಎಲ್ಲರ ಮನ ಗೆಲ್ಲುತ್ತಿದ್ದರು. ಕೇವಲ ತಮ್ಮ ಪಕ್ಷದ ಒಳಗೇ ಅಲ್ಲದೆ ಸಮಸ್ತ ರಾಜಕೀಯ ರಂಗದಲ್ಲಿ ಗೌರವಯುತ ವ್ಯಕ್ತಿತ್ವವಾಗಿ ಬೆಳೆದಿದ್ದರು.
2005 ರಿಂದ 2017ರವರೆಗೆ ಮೇಲ್ಮನೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸದಸ್ಯರಾಗಿ ಅವರ ಭಾಷಣಗಳು ತೀರಾ ಗಂಭೀರ ಹಾಗು ಅಧ್ಯಯನಶೀಲತೆಯಿಂದ ಕೂಡಿರುತ್ತಿದ್ದವು.
ಜಾತಿಯಿಂದ ಅವರು ಬ್ರಾಹ್ಮಣರಾಗಿ ಮೇಲ್ಜಾತಿಯಲ್ಲಿ ಜನಿಸಿದರೂ ಕೂಡ ಜೀವನ ಪರ್ಯಂತ ಜಾತಿ ಅಸಮಾನತೆಯ ವಿರುದ್ಧ, ಸಮ ಸಮಾಜದ ಪರವಾಗಿ ಧ್ವನಿ ಎತ್ತಿ ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರು, ದಲಿತರು ಮತ್ತು ಷೋಷಿತವರ್ಗದವರುಗಳ ಕಷ್ಟ-ಕಾರ್ಪಣ್ಯಗಳಿಗೆ ಸಕಾರಾತ್ಮಕವಾಗಿ ಸದಾ ಸ್ಪಂದಿಸುತ್ತಾ ಬಂದರು.
ಸಮ ಸಮಾಜದ ನಿರ್ಮಾಣದೆಡೆಗೆ ತಮ್ಮ ಗುರಿಯನ್ನು ನೆಟ್ಟು ಹಲವಷ್ಟು ಕಾನ್ಫರೆನ್ಸ್ ಹಾಗು ಫಾರಂಗಳಲ್ಲಿ ಭಾಗಿಯಾಗಿ ವಾಗ್ಮಿಯಾಗಿ ಪಾಲ್ಗೊಂಡು ತಮ್ಮ ಚಿಂತನಾ ಲಹರಿಗಳನ್ನು ಯೋಚನಾ ಮಾದರಿಯನ್ನು ಜನತೆಗೆ ಮನಗಾಣಿಸುತ್ತಿದ್ದರು.
ಆರ್ಥಿಕ ನೀತಿ,ವಿದೇಶಾಂಗ ನೀತಿ ಹಾಗು ಸಾಮಾಜಿಕ ಕಲ್ಯಾಣದ ವಿಚಾರಗಳಲ್ಲಿ ಗಹನವಾದ ಚರ್ಚೆಗಳಲ್ಲಿ ಪಾಲ್ಗೊಂಡು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ನೀತಿಗಳ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಯುಪಿಎ ಸರಕಾರ ಮೈತ್ರಿಯಲ್ಲಿ ಕೈ ಜೋಡಿಸಿ, ಸರಕಾರದ ರಚನೆಯಲ್ಲಿ 2004ರಲ್ಲಿ ಯಚೂರಿ ಅವರು ಭಾಗಿಯಾಗಿದ್ದರು. 2024ರ ಈ ಲೋಕಸಭಾ ಚುನಾವಣೆಯಲ್ಲಿಯೂ ಇಂಡಿ ಘಟಬಂಧನದಲ್ಲಿಯೂ ಇವರ ಪಾತ್ರ ಇತ್ತು.
ಎಡಪಂಥೀಯ ನಾಯಕರಾಗಿ ಸೀತಾರಾಮ್ ಯಚೂರಿ ಅವರು ತಮ್ಮ ಪ್ರಖರ ಚಿಂತನಾ ಲಹರಿ ಹಾಗು ವಿಚಾರಧಾರೆಗಳನ್ನು ಒಳಗೊಂಡು ಐದು ಪುಸ್ತಕಗಳನ್ನು ಬರೆದಿದ್ದಾರೆ.
1. ಲೆಫ್ಟ್ ಹ್ಯಾಂಡ್ ಡ್ರೈವ್: ಮಾರ್ಕ್ಸಿಸ್ಟ್ ವಿಮರ್ಶಕರಾಗಿ ಸಮಕಾಲೀನ ಆರ್ಥಿಕ ಹಾಗು ರಾಜಕೀಯ ಬೆಳವಣಿಗೆಗಳ ಕುರಿತು ಅವರು ಬರೆದ ಅಂಕಣ ಮತ್ತು ಲೇಖನಗಳ ಸಂಗ್ರಹ ಈ ಪುಸ್ತಕದಲ್ಲಿ ಇದೆ.
2.ವಾಟ್ ಈಸ್ ದಿಸ್ ಹಿಂದೂ ರಾಷ್ಟ್ರ?: ಈ ಪುಸ್ತಕದಲ್ಲಿ ಅವರು ಹಿಂದೂ ರಾಷ್ಟ್ರದ ಕಲ್ಪನೆ ಬಗ್ಗೆ ಟೀಕಿಸುತ್ತಾ ಜಾತ್ಯಾತೀತ ಹಾಗು ಸಮ ಸಮಾಜದ ಪ್ರತಿಪಾದನೆಯನ್ನು ಮಾಡಿದ್ದಾರೆ.
3. ಸೆಕ್ಯುಲರಿಸಂ ಇನ್ 21ಸ್ಟ್ ಸೆಂಚುರಿ: ನವ ಯುಗದಲ್ಲಿ ಸಮಾಜವಾದದ ತತ್ವಗಳ ಅನ್ವಯಿಸುವಿಕೆ, ಜಾಗತಿಕ ಹಾಗು ರಾಷ್ಟ್ರೀಯ ಸವಾಲುಗಳ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.
4.ಕಮ್ಯುನಲಿಸಂ ವರ್ಸಸ್ ಸೆಕ್ಯುಲರಿಸಂ: ಕಮ್ಯುನಲಿಸಂನ ಉದಯದ ಬಗ್ಗೆ ಮತ್ತು ಭಾರತದ ಮೂಲಭೂತ ತತ್ವವಾಗಿ ಜಾತ್ಯಾತೀತತೆಯನ್ನು ಪ್ರತಿಪಾದಿಸುತ್ತದೆ.
5.ಆನ್ ಗೋಲ್ವಾಲ್ಕರ್ಸ್ ಫ್ಯಾಸಿಸ್ಟಿಕ್ ಐಡಿಯಾಲಜಿ ಆ್ಯಂಡ್ ಸ್ಯಾಫ್ರನ್ ಬ್ರಿಗೇಡ್ಸ್ ಪ್ರಾಕ್ಟಿಸ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೈದ್ಧಾಂತಿಕ ನೆಲೆಗಟ್ಟನ್ನು ಈ ಪುಸ್ತಕ ರಚನಾತ್ಮಕವಾಗಿ ಟೀಕಿಸುತ್ತದೆ ಮತ್ತು ಭಾರತದ ರಾಜಕಾರಣದ ಮೇಲೆ ಅದರ ಪರಿಣಾಮವೇನು ಎಂಬುದರ ಬಗ್ಗೆ ವಿವರಿಸುತ್ತದೆ.
ಸೀತಾರಾಂ ಯಚೂರಿ ಅವರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೂ, ತಮ್ಮ ಜೀವನದ ಉದ್ದಕ್ಕೂ ಎಡಪಂಥೀಯ ಕಮ್ಯುನಿಷ್ಟ್ ರಾಜಕೀಯ ಮುತ್ಸದ್ಧಿಗಳಾಗಿ ನಿರಂತರ ಬಡವರ ಪರವಾದ ಸಾಮಾಜಿಕ ನ್ಯಾಯದ ಹೋರಾಟ, ಜಾತಿ ಅಸಮಾನತೆ, ಆರ್ಥಿಕ ಹಾಗು ಸಾಮಾಜಿಕ ಅಸಮಾನತೆ ವಿರುದ್ಧ ಧನಿ, ಸಮ ಸಮಾಜದ ನಿರ್ಮಾಣದ ಹೋರಾಟದಲ್ಲಿ ನಿರಂತರ ಇದ್ದರು. ಎಂದಿಗೂ ತತ್ವ ಸಿದ್ಧಾಂತಗಳಿಗೆ ದ್ರೋಹ ಬಗೆಯದೆ ನಿಷ್ಠರಾಗಿ ಬದ್ಧತೆಯೊಂದಿಗೆ ನಡೆದುಕೊಂಡರು. ಸೈದ್ಧಾಂತಿಕ ವ್ಯತ್ಯಾಸವನ್ನು ಹೊರತು ಪಡಿಸಿದರೆ, ಅವರ ಬೇರೆ ವಿರೋಧಿಗಳೂ ಗೌರವದಿಂದ ನೋಡುವಂತೆ ನಡೆದುಕೊಂಡರು. ಪಕ್ಷದ ಜನರಲ್ ಸೆಕ್ರೇಟರಿ ಹುದ್ದೆಯಲ್ಲಿ ಪ್ರಸ್ತುತ ಇದ್ದರು. ಈಗ ತಮ್ಮ 72ನೇ ವಯಸ್ಸಿಗೆ ದೀರ್ಘ ಕಾಲದ ಅನಾರೋಗ್ಯದಿಂದ ವಯೋ ಸಹಜವಾದ ಮರಣವನ್ನು ಹೊಂದಿದ್ದಾರೆ. ಈ ಬಗ್ಗೆ ಸೈದ್ಧಾಂತಿಕ ವ್ಯತ್ಯಾಸವಿದ್ದರೂ, ಆರ್.ಎಸ್.ಎಸ್ ತನ್ನ ಎಕ್ಸ್ ಖಾತೆಯಲ್ಲಿ “He was a committed and sensitive political leader. Pray for peace to the departed soul,” ಎಂದು ತನ್ನ ನುಡಿನಮನ ಸಲ್ಲಿಸಿದ್ದು ಅಚ್ಚರಿ ಮೂಡಿಸುತ್ತದೆ.