ಈಗಾಗಲೇ ಎನ್. ಡಿ .ಎ ಸರಕಾರ ದೇಶದಲ್ಲಿ ಪೂರ್ಣ ಬಹುಮತದ ಸುಭದ್ರ ಸರಕಾರದಿಂದ ಯಶಸ್ವಿ ಹತ್ತು ವರ್ಷದ ಒಳ್ಳೆಯ ಉತ್ತಮ ಆಡಳಿತ ನಡೆಸಿದೆ. ಈಗ ಎರಡು ಹಂತಗಳ ಲೋಕಸಭಾ ಚುನಾವಣೆಯ ಹಂತಗಳು ನಡೆದಿದ್ದು, ಮೂರನೇ ಹಂತದ ಮತದಾನವಷ್ಟೇ ಬಾಕಿ ಇದೆ.
ವಿರೋಧ ಪಕ್ಷ ಕಾಂಗ್ರೆಸ್ ಈ ಬಾರಿ ಹೇಗಾದರೂ ಅಧಿಕಾರಕ್ಕೆ ಏರಲೇ ಬೇಕು ಎಂಬ ಹಪಹಪಿಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಅಸಾಧ್ಯ ಅಮೀಷಗಳನ್ನು ಜನರಿಗೆ ಒಡ್ಡಿದೆ. ಅದೆಲ್ಲಕ್ಕಿಂತ ಈಗ ದೇಶದ ಜನತೆಯ ಗಮನ ಸೆಳೆದು ತೀವ್ರ ಚರ್ಚೆಗೆ ಗ್ರಾಸವಾಗಿರುವುದು ಅದರ ಸಂಪತ್ತಿನ ಮರುಹಂಚಿಕೆಯ ವಿಚಾರ!
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ನವ ಸಂಕಲ್ಪ ಆರ್ಥಿಕ ನೀತಿ ಎಂದು ನೀಡಲಾಗಿರುವ ಅಂಶಗಳು ಜನವಲಯದಲ್ಲಿ ತೀವ್ರವಾದ ಚರ್ಚೆಗೆ ಈಡಾಗಿರುವ ಅಂಶವಾಗಿದೆ. ಭಾರತೀಯ ಕಾಂಗ್ರೆಸ್ಸಿನ ಅಂತರಾಷ್ಟ್ರೀಯ ಚೇರ್ಮೆನ್ ಆದ ಸ್ಯಾಮ್ ಪಿತ್ರೋಡ ಅವರು ಹೇಳಿರುವ ವಿದೇಶಿ ಮಾದರಿಯ ಅನುವಂಶಿಯ ತೆರಿಗೆ ಪದ್ಧತಿ, ಸಂಪನ್ಮೂಲ ಮರುಹಂಚಿಕೆಯ ವಿಚಾರ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದೆ.
ಅವರ ಪ್ರಕಾರ ಒಬ್ಬ ವ್ಯಕ್ತಿ ಸತ್ತ ನಂತರ ಅವನ ಪಿತ್ರಾರ್ಜಿತ ಆಸ್ತಿಯು ಅವನ ಮಕ್ಕಳಿಗೆ ಕೇವಲ 45% ದೊರೆಯಲಿದ್ದು, ಮಿಕ್ಕ 55% ಸರಕಾರ ಕಸಿದುಕೊಳ್ಳಲಿದೆ. ನಂತರ ಅದನ್ನು ಬಡವರಿಗೆ ಹಂಚುತ್ತೇವೆ ಎಂಬ ವಿಚಾರಧಾರೆಯನ್ನು ಮುಂದಿಟ್ಟಿದ್ದಾರೆ. ಇದು ತೀರಾ ವಿವಾದಕ್ಕೆ ಈಡಾಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. 5 ಏಪ್ರಿಲ್ 2024ರಂದು ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಣಾಳಿಕೆಯು ಈ ವಿವಾದವನ್ನು ಮುನ್ನಲೆಗೆ ಎಳೆದು ತರಲು ಕಾರಣವಾಗಿದೆ.
ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಸಹ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದರೆ, ಜಾತಿ ಆಧಾರಿತ ಸರ್ವೇ ನಡೆಸಿ ಜನರ ಹಣದ ಮರು ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಕ್ರಾಂತಿಯನ್ನೇ ಸೃಷ್ಟಿಸಲಿದ್ದೇವೆ ಎಂದು ಒತ್ತಿ ಹೇಳಲಾಗಿದೆ.
2006ರಲ್ಲಿ ಆಗಿನ ಕಾಂಗ್ರೆಸ್ ಆಡಳಿತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ದೇಶದಲ್ಲಿ ಸಂಪನ್ಮೂಲದ ಮೊದಲ ಹಕ್ಕು ಮುಸ್ಲಿಂ ಅಲ್ಪ ಸಂಖ್ಯಾತರಿಗೆ ಸಲ್ಲಬೇಕು ಎಂದು ತಮ್ಮ ಕಾಂಗ್ರೆಸ್ ಪಕ್ಷದ ನಿಲುವು- ಒಲವು ಎರಡನ್ನೂ ನೇರವಾಗಿ ದೇಶದ ಜನರೆದುರು ಇಟ್ಟಿದ್ದರು. ಅದಲ್ಲದೆ ಕಾಂಗ್ರೆಸ್ ನೇಮಿತ ರಂಗನಾಥ್ ಮಿಶ್ರಾ ಕಮಿಟಿ ಕೂಡ ಮುಸ್ಲಿಮರಿಗೆ 10% ಗಿಂತ ಹೆಚ್ಚಿನ ಒ. ಬಿ.ಸಿ ಮೀಸಲಾತಿ ನೀಡುವ ಬಗ್ಗೆ ಅಂಶವನ್ನು ಸರಕಾರದ ಎದುರಿಗೆ ಇಟ್ಟಿತ್ತು. ಅದರ ಪ್ರತಿಫಲನದಂತೆ ಈಗಾಗಲೇ ಕಾಂಗ್ರೆಸ್ ಆಂಧ್ರಪ್ರದೇಶ್, ಕೇರಳ ಹಾಗು ಕರ್ನಾಟಕದಲ್ಲಿ ಮುಸ್ಲಿಮರಿಗೆ ವಿಶೇಷ ಮೀಸಲಾತಿ ನೀಡಿ ಆಗಿದೆ. ಕರ್ನಾಟಕದಲ್ಲಿ 2ಬಿ ಕ್ಯಾಟಗರಿಯಲ್ಲಿ ಚಿನ್ನಪ್ಪ ರೆಡ್ಡಿ ಕಮಿಟಿ ಶಿಫಾರಸ್ಸಿನ ಅನ್ವಯ ಒಬಿಸಿ ಕೋಟಾದಲ್ಲಿ ಆರಕ್ಷಣೆ ನೀಡಿ ಆಗಿದೆ. ಅಧಿಕಾರದ ಗದ್ದುಗೆ ಹಿಡಿದರೆ, ಆರ್ಟಿಕಲ್ 370 ಅನ್ನು ಮರು ಜಾರಿಗೆ ತರುವ ಅಪಾಯಕಾರಿ ಅಂಶವನ್ನೂ ಕಾಂಗ್ರೆಸ್ ಪ್ರತಿಪಾದಿಸುತ್ತಿದೆ.
ಇವೆಲ್ಲದರ ಹಿಂದೆ ಕಾಂಗ್ರೆಸ್ ಮುಸಲ್ಮಾನರ ತುಷ್ಠೀಕರಣಕ್ಕೆ ಮುಂದಾಗಿರುವುದಂತೂ ನಮಗೆ ನಿಸ್ಸಂಶಯವಾಗಿ ತಿಳಿಯುತ್ತದೆ. ಮತ್ತು ಹಿಂದೂಗಳನ್ನು ಕಡೆಗಣಿಸಿರುವುದು ಕೂಡ ಅಷ್ಟೇ ದಿಟ ತಿಳಿಯುತ್ತದೆ.
ಸಂಪನ್ಮೂಲದ ಮರು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ವಿವಾದಾತ್ಮಕ ಅಂಶದ ಬಗ್ಗೆ ಪ್ರಧಾನಿ ಮೋದಿ ಅವರು ಟೀಕೆಗಳನ್ನು ಪರಿಣಾಮಕಾರಿಯಾಗಿಯೇ ಮಾಡಿದ್ದಾರೆ. ಆದರೂ ಕಾಂಗ್ರೆಸ್ ಜನರು ಗೊಂದಲಕ್ಕೀಡಾಗುವಂತೆ ಈ ವಿಚಾರವನ್ನು ಮತ್ತಷ್ಟು ಗೊಜಲಾಗಿಸಿದೆ.
ಅಷ್ಟಕ್ಕೂ ಶ್ರೀಮಂತರ ಹಣವನ್ನು ಕಸಿದುಕೊಂಡು ಬಡವರಿಗೆ ನೀಡೋದು ಸಂಪತ್ತಿನ ಮರುಹಂಚಿಕೆಯ ಸರಿ ವಿಧಾನವಲ್ಲವೇ ಅಲ್ಲ. ಬಡವರ ಕಲ್ಯಾಣ ಮಾಡುವಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅವರ ಪ್ರಗತಿಗೆ ಸರಕಾರ ಸಕಾರಾತ್ಮಕವಾಗಿ ಶ್ರಮಿಸಬೇಕು. ಅದನ್ನು ಈಗಾಗಲೇ ಎನ್.ಡಿ.ಎ ಮೈತ್ರಿಕೂಟ ಮೋದಿ ಅವರ ನಾಯಕತ್ವದಲ್ಲಿ ಮಾಡಿದೆ. ಕಾಂಗ್ರೆಸ್ ಅದನ್ನು ಬಿಟ್ಟು ಅದ್ವಾನವಾಗುವಂತಹ ಆಲೋಚನೆಯನ್ನು ಪ್ರಣಾಳಿಕೆಯ ರೂಪದಲ್ಲಿ ಜನರ ಮುಂದೆ ಇಟ್ಟು ಬಿಟ್ಟಿದೆ.
ಈ ರೀತಿಯ ಅವೈಜ್ಞಾನಿಕ ರೀತಿಯ ಸಂಪತ್ತು ಹಂಚಿಕೆ ಮಾಡಿ ಜಿಂಬಾವೆ, ವೆನಿಜ಼ುವೆಲ್ಲಾದಂತಹ ದೇಶ ದೀವಾಳಿ ಎದ್ದು, ಬರ್ಬಾದ್ ಆಗಬಿಟ್ಟಿತು. ಚೀನಾ, ರಷ್ಯಾ ಅಮೇರಿಕಾದಂತಹ ಬೃಹತ್ ರಾಷ್ಟ್ರದಲ್ಲಿ ಈ ಅಸಮಾನತೆ ತೊಲಗಿಸುವ ಬರದಲ್ಲಿ ಈ ರೀತಿಯ ಸಂಪತ್ತಿನ ಮರುಹಂಚಿಕೆ ಮಾಡಿ ಯಡವಟ್ಟು ಆಗಿದೆ. ಅದನ್ನು ಭಾರತವೂ ಅನುಕರಿಸುವುದರಲ್ಲಿ ಯಾವುದೇ ತರ್ಕ-ತಂತ್ರ ಸರಿಯಿಲ್ಲ ಎಂದೆನಿಸುತ್ತದೆ.
ಇನ್ನಾದರೂ ಈ ಓಲೈಕೆಯ ತುಷ್ಠೀಕರಣದ ಆಮೀಷ ಪೂರಿತ ಆಡಳಿತ ನಡೆದುವ ವಿಧಾನವನ್ನು ಸುಧಾರಿಸಿಕೊಳ್ಳಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಗತಿಸಿದೆ ಆದರೂ ಜನರನ್ನು ಸ್ವಾವಲಂಭನೆಯ ಹಾದಿಯನ್ನು ತುಳಿಯಲು ಪೂರಕವಾದ ಪರಿಸ್ಥತಿಯನ್ನು ಸೃಷ್ಟಿಸುವಲ್ಲಿ ಕಾಂಗ್ರೆಸ್ ಅಷ್ಟರ ಮಟ್ಟಿಗೇನು ಯಶ ಕಂಡಿಲ್ಲ.
ಯಾವುದಕ್ಕೂ ಮತದಾರ ಪ್ರಭು ಯಾರಿಗೆ ಮತ ಹಾಕಿದ್ದಾನೆ? ಯಾರನ್ನು ಗೆಲ್ಲಿಸಿ ಅ಼ಧಿಕಾರಕ್ಕೆ ತರುತ್ತಾನೆ? ಎಂಬುದನ್ನು ತಿಳಿಬೇಕಾದರೆ ಜೂನ್ ತನಕ ಕಾದು ನೋಡಬೇಕಿದೆ.