ಹೆಚ್ಚಲಿದೆ ನಿಶ್ಚಿತವಾಗಿ ಪ್ರವಾಸಿ ತಾಣಗಳ ಗತ್ತು ಗೈರತ್ತು!

ಕೇಂದ್ರದಲ್ಲಿ 2014ರಲ್ಲಿ ಸ್ಪಷ್ಟ ಬಹುಮತದಿಂದ ಬಿಜೆಪಿ ನೇತೃತ್ವದಲ್ಲಿ ಎನ್.ಡಿ.ಎ ಸರಕಾರವು ಗದ್ದುಗೆಗೆ ಏರಿದ ನಂತರ ಪ್ರವಾಸೋದ್ಯಮದ ಪ್ರಗತಿಗೆ ಟೊಂಕ ಕಟ್ಟಿ ನಿಂತಂತಿದೆ. ಪ್ರಾಥಮಿಕ ಹಂತದಲ್ಲಿ ಈ ನಿಟ್ಟಿನಲ್ಲಿ 2014-15ನೇ ಸಾಲಿನಲ್ಲಿ ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ‘ಸ್ವದೇಶಿ ದರ್ಶನ್’ ಯೋಜನೆಯನ್ನು ರೂಪುಗೊಳಿಸಲಾಯಿತು. ತನ್ಮೂಲಕ ರಾಜ್ಯಗಳಿಗೆ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಅವಶ್ಯಕತೆ ಇರುವ ಎಲ್ಲಾ ಹಣಕಾಸು ಅಗತ್ಯಗಳನ್ನು ಪೂರೈಸಿ, ಅದರ ಶ್ರೇಯಸ್ಸಿನತ್ತ ಒತ್ತು ನೀಡುವುದೇ ಇದರ ಉದ್ದೇಶವಾಗಿದೆ.

     ನಂತರ ‘ಸ್ವದೇಶಿ ದರ್ಶನ 2’ ಎಂಬ ಯೋಜನೆಯ ಎರಡನೇ ಭಾಗವನ್ನು ಆರಂಭಿಸಲಾಗಿದೆ. ಅದರ ಮೂಲಕ ಸುಮಾರು 15 ರಾಜ್ಯಗಳಲ್ಲಿ ಭಾರತದ ಹೊಸ ಹೊಸ ದೇಶಿಯ ಪ್ರವಾಸೋದ್ಯಮ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ‘Vocal for Local’ ಎಂಬ ಮಂತ್ರದೊಂದಿಗೆ ‘ಆತ್ಮ ನಿರ್ಭರ್ ಭಾರತ್’ನ ಕನಸನ್ನು ನನಸಾಗಿಸಲು ಶ್ರಮಿಸಲಾಗುತ್ತಿದೆ.

    ಈ ಮಹತ್ವಾಕಾಂಶಿ ಯೋಜನೆಯು ಪ್ರವಾಸೋದ್ಯಮದ ಸ್ಥಳೀಯ ಆರ್ಥಿಕತೆಯ ಶಕ್ತಿಯನ್ನು ಪುಷ್ಠೀಕರಿಸಿ, ವಿಸ್ತರಿಸಲು ಪ್ರೋತ್ಸಾಹವನ್ನು ಧಾರಾಳವಾಗಿ ನೀಡುತ್ತದೆ. ಅದರೊಂದಿಗೆ ಸ್ಥಳೀಯ ಮಟ್ಟದಲ್ಲಿ ಸ್ವ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಿ, ಖಾಸಗಿ ವಿಭಾಗದಲ್ಲಿನ ಬಂಡವಾಳ ಹಚ್ಚಿಸಲು ಉತ್ತೇಜನ ನೀಡುತ್ತದೆ.

     ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಚರಿಷ್ಮಾ ನೀಡುವ ನಿಟ್ಟಿನಲ್ಲಿ ಈ ಯೋಜನೆ ಅವುಗಳ ಅಭಿವೃದ್ಧಿಗೆ ಹಾಗು ಪುನಶ್ಚೇತನಕ್ಕೆ ಮನ್ನಣೆ ನೀಡುತ್ತದೆ. 2020ರಲ್ಲಿ  ಕೇಂದ್ರ ಪ್ರವಾಸೋದ್ಯಮ ಇಲಾಖೆಯು ದೇಶಿಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ದೇಖೋ ಅಪ್ನಾ ದೇಶ್’ ಎಂಬ ಹೊಸ ಹೆಜ್ಜೆಯನ್ನಿಟ್ಟು ದೇಶಿಯ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳನ್ನು ಹಾಗು ಉತ್ತಮ ಸೌಲಭ್ಯಗಳನ್ನು ನೀಡಲು ಮುಂದಾಗಿದೆ‌.

     2015ರಿಂದ ಈಚೆಗೆ ಕೇಂದ್ರ ಸರಕಾರವು ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆಂದು ಪ್ರಮುಖ 27 ಯೋಜನೆಗಳಿಗೆ 2261.50 ಕೋಟಿ ರೂಪಾಯಿಗಳನ್ನು 21 ರಾಜ್ಯಗಳಿಗೆಂದು ಬಿಡುಗಡೆ ಮಾಡಿದೆ. 2014ದಿಂದ ಈಚೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪರೋಕ್ಷ ಹಾಗು ಪ್ರತ್ಯಕ್ಷ ರೂಪದಲ್ಲಿ ಸುಮಾರು 36.7 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗಿದೆ. ಬ್ಯಾಂಕಿಂಗ್, ಆಟೋಮೋಟಿವ್ , ಉತ್ಪಾದನಾಕ್ಷೇತ್ರ, ರಾಸಾಯನಿಕ, ಶೈಕ್ಷಣಿಕ ರಂಗ, ಸೇವಾ ಹಾಗು ಗಣಿಗಾರಿಕಾ ವಿಭಾಗದಲ್ಲಿ ಉದ್ಯೋಗಗಳ ಸೃಷ್ಟಿ ಮಾಡಲಾಗಿದೆ.

ಧಾರ್ಮಿಕ ಪ್ರವಾಸೋದ್ಯಮಕ್ಕೆ ಎನ್.ಡಿ.ಎ  ವಿಶೇಷ ಒತ್ತು!

ಭಾರತ ಸಾಂಸ್ಕೃತಿಕ ಹಾಗು ಪರಂಪರೆಯಲ್ಲಿ ಬಹಳ ಶ್ರೀಮಂತವಾದ ದೇಶವಾಗಿದ್ದು, ಪ್ರಪಂಚವನ್ನೇ ಈ ಕಾರಣದಿಂದ ಸೆಳೆಯುವ ಶಕ್ತಿಯನ್ನು ಹೊಂದಿದೆ.

ಜಗತ್ತಿನ ಪುರಾತನ ನಗರದ ಅಭ್ಯುದಯ

ಜಗತ್ತಿನ ಅತ್ಯಂತ ಪುರಾತನ ನಗರ ಹಾಗು ಭಾರತದ ಧಾರ್ಮಿಕ ಪ್ರವಾಸೋದ್ಯಮದ ರಾಜಧಾನಿ ಎಂದೇ ಹೆಸರುವಾಸಿ ಆಗಿರುವ ನಗರ ಕಾಶಿಯತ್ತ ಚಿತ್ತ ಹರಿಸಿ ಕೇಂದ್ರ ಅದರ ಸರ್ವತೋಮುಖ ಏಳಿಗೆಗೆ ಅಣಿಯಾಗಿ ಕಾರ್ಯೋನ್ಮುಖವಾಯಿತು.

ಶ್ರೀ ಕಾಶಿ ವಿಶ್ವನಾಥ್ ಧಾಮ್ ಹೆಸರಿನ ಯೋಜನೆಗೆ 8 ಮಾಚ್೯, 2019ರಂದು ಪ್ರಧಾನಿಗಳು ಅಡಿಪಾಯ ಹಾಕಿದರು. ಈ ಯೋಜನೆಯ ಪ್ರಥಮ ಹಂತವು 23 ಕಟ್ಟಡಗಳ ನಿರ್ಮಾಣವನ್ನು ಒಳಗೊಂಡು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಿತು. 3000 ಚದರ ಅಡಿಗೆ ಸೀಮಿತವಾಗಿದ್ದ ಈ ಯೋಜನೆ ಕೊನೆ ಹಂತಕ್ಕೆ ಬರುವಾಗ 5 ಲಕ್ಷ ಚದರ ಅಡಿಗಳಿಗೆ ವಿಸ್ತರಿಸಿಕೊಂಡಿತು. ಒಟ್ಟು ಈ ಯೋಜನೆಗೆ  800 ಕೋಟಿ ರೂ. ವೆಚ್ಚ ತಗುಲಿತು. ಯೋಜನೆಯ ಪ್ರಗತಿಯ ಹಂತದಲ್ಲಿ ಇಲ್ಲಿ 40 ಪುರಾತನ ದೇವಸ್ಥಾನಗಳು ಇದ್ದುದನ್ನು ಮರುಶೋಧಿಸಲಾಗಿತ್ತು…!

ಪ್ರಧಾನಿಗಳ ಅತೀವ ಕಾಳಜಿಯಿಂದ ಹಾಗು ಮೇಲುಸ್ತುವಾರಿಯಿಂದ ಈ ಯೋಜನೆಯು ಅತ್ಯಂತ ಸುಸಜ್ಜಿತ ಹಾಗು ವ್ಯವಸ್ಥಿತವಾಗಿ 13 ಡಿಸೆಂಬರ್ 2021ರಂದು ಉದ್ಘಾಟಿತಗೊಂಡಿತು.

ಪ್ರಾಚೀನ ಪವಿತ್ರ ಕೇದಾರನಾಥ ದೇವಾಲಯದ ಜೀರ್ಣೋದ್ಧಾರ

2013ರಲ್ಲಿ ಸಂಭವಿಸಿದ ತೀವ್ರ ಪ್ರವಾಹದಿಂದ ಘಾಸಿಗೊಂಡಿದ್ದ ಕೇದಾರನಾಥ ದೇವಾಲಯದ ಪುನರ್ ನಿರ್ಮಾಣ ಕಾರ್ಯವು 2014ರಲ್ಲಿ ಆರಂಭವಾಯಿತು. ಅಧಿಕಾರಕ್ಕೆ ಬಂದ ತಕ್ಷಣ ಕೇಂದ್ರ ಸರಕಾರ ಕೈಗೆತ್ತಿಕೊಂಡ ಮುತುವರ್ಜಿಪೂರಿತ ಯೋಜನೆ ಇದಾಗಿತ್ತು. 700 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಪ್ರವಾಹದಿಂದಾಗಿ ಘಾಸಿಗೊಂಡಿದ್ದ ಕೇದಾರನಾಥ ದೇವಸ್ಥಾನದ ಪುನರ್ ನಿರ್ಮಾಣದ ಸಂಪೂರ್ಣ ಕಾಮಗಾರಿ ಹೊಂದಿದೆ.

ಪಾಂಡವರಿಂದ ನಿರ್ಮಿತವಾದ ದೇವಾಲಯ ಎಂದು ನಂಬಲಾಗುವ ಈ ಕ್ಷೇತ್ರವು ಹಿಂದೂಗಳ 12 ಜ್ಯೋತಿರ್ ಲಿಂಗಗಳ ಪೈಕಿ ಒಂದಾಗಿದೆ. ‘ಚೋಟಾ ಚಾರ್ ಧಾಮ್’ ಎಂದು ಕರೆಯಲ್ಪಡುವ ಭಾರತದ 4 ತೀರ್ಥ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ.

ಆದಿ ಶಂಕರಾಚಾರ್ಯರ ಬೃಹತ್ ವಿಗ್ರಹ ಸ್ಥಾಪನೆ

ಕೇದಾರನಾಥ ದೇವಾಲಯದ ಆವರಣದಲ್ಲಿಯೇ ಆದಿ ಶಂಕರಾಚಾರ್ಯರ ಬೃಹತ್ ವಿಗ್ರಹ ನಿರ್ಮಾಣ ಕಾರ್ಯವನ್ನು ಸೆಪ್ಟೆಂಬರ್ 2020ರಂದು ಮುಗಿದು ಉದ್ಘಾಟಿಸಲ್ಪಟ್ಟಿತು.

12 ಅಡಿ ಗಾತ್ರದ ಈ ವಿಗ್ರಹವನ್ನು 35ಟನ್ ಕಲ್ಲಿನಲ್ಲಿ ಮೈಸೂರಿನ ಶಿಲ್ಪಿಗಳಿಂದ ಕೆತ್ತಲ್ಪಟ್ಟಿತು. 8ನೇ ಶತಮಾನದ ಅದ್ವೈತ ವೇದಾಂತ ಸಾರಿದ ತತ್ವ ಯೋಗಿ ಹಾಗು ಸಮಾಜ ಸುಧಾರಕರಾದ ಆದಿ ಶಂಕರಾಚಾರ್ಯರನ್ನು ನೆ‌ನಪಿಸುವಂತೆ ನಿರ್ಮಾಣವಾದ ಈ ವಿಗ್ರಹವೂ ಇಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಸೋಮನಾಥ ದೇವಾಲಯಕ್ಕೆ ಕಾಯಕಲ್ಪ

ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೇ ಸೋಮನಾಥ ದೇವಾಲಯಕ್ಕೆ ಜೀರ್ಣೋದ್ಧಾರ ಯೋಜನೆಯನ್ನು ರೂಪಿಸಬೇಕು ಎಂಬ ಉದ್ದೇಶ ಹೊಂದಿದ್ದರು. ಇದಕ್ಕಾಗಿ ಕೇಂದ್ರ ಸರಕಾರವು ಈಗಾಗಲೇ 47 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿ ಆಗಿದೆ.

ಶ್ರೀ ಮಹಾಕಾಲ ಲೋಕ್ ಕಾರಿಡಾರ್ ನಿರ್ಮಾಣ

ಮಹಾದೇವ ಶಿವನ ಮಹಾಕಾಲೇಶ್ವರ ದೇವಸ್ಥಾನಕ್ಕೆ ಸಂಪೂರ್ಣ ನವೀಕೃತ ರೂಪ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು, ಅದಕ್ಕಾಗಿ 2.5 ಹೆಕ್ಟೇರ್ ಅಷ್ಟು ಜಾಗವನ್ನು ಸಿದ್ಧಗೊಳಿಸುತ್ತಿದ್ದು, ಒಟ್ಟು 40 ಎಕರೆಯಲ್ಲಿ ಈ ಉದ್ದೇಶಿತ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ. ಈ ಯೋಜನೆ ಒಟ್ಟು 705 ಕೋಟಿ ವೆಚ್ಚದ್ದಾಗಿದ್ದು, ಇದರಲ್ಲಿ 900 ಮೀಟರ್ ಉದ್ದವಿರುವ ಕಾರಿಡಾರ್ ವೆಚ್ಚವೇ 350 ಕೋಟಿ ರೂಪಾಯಿ ವೆಚ್ಚ ತಗುಲುತ್ತದೆ.

ಶ್ರೀ ರಾಮ ಮಂದಿರ ಯೋಜನೆ ಚಾಲ್ತಿಯಲ್ಲಿದೆ

ಭಾರತದ ಉಚ್ಛ ನ್ಯಾಯಾಲಯದ ತೀರ್ಪಿನ ನಂತರ ರಾಮಮಂದಿರದ ಯೋಜನೆಯ ಆರಂಭಕ್ಕೆ ಸುಮುಹೂರ್ತ ಕೂಡಿ ಬಂತು. 5 ಆಗಸ್ಟ್, 2020ರಂದು ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಂದ ಯೋಜನೆಗೆ ಅಡಿಗಲ್ಲು ಇಡಲಾಯಿತು.

ಈ ಯೋಜನೆಯನ್ವಯ ರಾಮ ಮಂದಿರದ ಜಾಗದಲ್ಲೇ ಸೂರ್ಯ, ಗಣೇಶ, ಶಿವ, ದುರ್ಗ, ವಿಷ್ಣು, ಬ್ರಹ್ಮನ ದೇವಸ್ಥಾನಗಳೂ ಇಲ್ಲಿ ನಿರ್ಮಿತವಾಗುತ್ತಿವೆ. ಈ ಬೃಹತ್ ಯೋಜನೆಗೆ ಬೇಕಾದ ಹಣವನ್ನು ಜನರಿಂದಲೇ ದೇಣಿಗೆ ರೂಪದಲ್ಲಿ ಈಗಾಗಲೇ ಸಂಗ್ರಹಿಸಲಾಗಿದೆ. ಜನವರಿ 2024ರಲ್ಲಿ ಭವ್ಯ-ದಿವ್ಯವಾದ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯವು ಸಂಪೂರ್ಣಗೊಂಡು ಪ್ರವಾಸಿಗರಿಗೆ, ಭಕ್ತಾದಿಗಳಿಗೆ ಮುಕ್ತವಾಗಲಿದೆ. ಈ ಮಂದಿರವನ್ನು ಅತ್ಯಂತ ಬಲಿಷ್ಠವಾಗಿ 1,000 ವರ್ಷ ಬಾಳಿಕೆ ಬರುವಂತೆ ಕಟ್ಟಲಾಗುತ್ತಿರುವುದು ಗಮನಾರ್ಹ ಸಂಗತಿ.

ಕಣಿವೆ ನಾಡಿ‌ನಲ್ಲಿ ಪ್ರವಾಸೋದ್ಯಮಕ್ಕೆ ಪುಷ್ಠಿ

370 ಕಾಯ್ದೆಯ ತೆರವಿನ ನಂತರ ಜಮ್ಮು ಕಾಶ್ಮೀರದಲ್ಲಿಯೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರವು ಕಟಿಬದ್ಧವಾಗಿದ್ದು, ಇಲ್ಲಿ ಒಟ್ಟು 1,842 ದೇವಸ್ಥಾನಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಮುಂದಾಗಿದೆ.

ವಿಶ್ವದ ಅತ್ಯಂತ ಎತ್ತರದ ವಿಗ್ರಹ ಉಕ್ಕಿನ ಮನುಷ್ಯನದ್ದು!

ಭಾರತದ ಏಕೀಕರಣಕ್ಮೆ ಅತೀ ಮುಖ್ಯ ಪಾತ್ರವನ್ನು ವಹಿಸಿದ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಶ್ರೀ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯನ್ನು ವಿಶ್ವದಲ್ಲೇ ಅತ್ಯಂತ ಬೃಹತ್ ಎಂಬಂತೆ ನಿರ್ಮಿಸಿ, ಭಾರತ ಸರಕಾರ ಹೊಸ ಯೋಜನೆಗೆ ನಾಂದಿ ಹಾಡಿತು. ಇದು 182 ಮೀಟರ್ ಎತ್ತರದ ಭಾರೀ ಗಾತ್ರದ ಪ್ರತಿಮೆಯಾಗಿದ್ದು, ಇಲ್ಲಿಗೆ ಪ್ರತಿ ವರ್ಷ ಮಿಲಿಯನ್ ಗಟ್ಟಲೆ ಪ್ರವಾಸಿಗರು ಭೇಟಿ ನೀಡುತ್ತಾರೆ. 2018ರಲ್ಲಿ ಲೋಕಾರ್ಪಣೆಗೊಂಡ ಈ ಪ್ರತಿಮೆಗೆ 27 ಬಿಲಿಯನ್ ಹಣದ ವೆಚ್ಚವಾಯಿತು. ಆದರೆ ಪ್ರವಾಸೋದ್ಯಮದ ಪ್ರಮುಖ ಸ್ಥಳವಾಗಿ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ನೀರಿನಲ್ಲಿ ತೇಲುವ ಅರಮನೆಯೇ ‘ಗಂಗಾ ವಿಲಾಸ’ ಕ್ರ್ಯೂಸ್!

ಐವತ್ತೊಂದು ದಿನಗಳ ಪ್ರಯಾಣದಲ್ಲಿ ಪ್ರವಾಸಿಗರು ‘ಗಂಗಾ ವಿಲಾಸ’ ಎಂಬ ಈ ಹಡಗು ಒಟ್ಟು 5 ರಾಜ್ಯಗಳು, 2 ದೇಶಗಳ ನಡುವೆ ದಾಟಿ, 3,200 ಕಿಲೋ ಮೀ ಸಾಗುವ ಈ ಕ್ರೂಸ್ ವಾರಣಾಸಿಯಿಂದ ಹೊರಟು ಅಸ್ಸಾಂನ ದಿಬ್ರೂಗಢದಲ್ಲಿ ಯಾತ್ರೆ ಅಂತ್ಯಗೊಳಿಸುತ್ತದೆ.

ಇದು ವಿಶ್ವದಲ್ಲೇ ಅತಿ ದೂರದ ಹಾದಿಯಲ್ಲಿ ಸಾಗುವ ಕ್ರ್ಯೂಸ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವುದು ಭಾರತೀಯ ಪ್ರವಾಸೋದ್ಯಮಕ್ಕೆ ಗರಿಮೆಯೇ ಸರಿ.

ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕ ಭರ್ಜರಿಯಾಗಿ ಸಿದ್ಧಗೊಂಡಿತು

ಮರಾಠ ಸಾಮ್ರಾಜ್ಯದ ವೀರ ಧೀರ ರಾಜ ಛತ್ರಪತಿ ಶಿವಾಜಿ ಪ್ರತಿಮೆಯನ್ನು ಮುಂಬೈಯ ಅರೆಬಿಯನ್ ಸಮುದ್ರದಲ್ಲಿ ಸಿದ್ಧಗೊಳಿಸುವ ಯೋಜನೆಯು ಆಕ್ಟೋಬರ್ 2022ರಂದು ಮುಕ್ತಾಯವಾಯಿತು.

2016 ಡಿಸೆಂಬರ್, 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಗೆ ಅಡಿಗಲ್ಲು ಇರಿಸಿದರು. 2,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಪ್ರತಿಮೆಯು  210 ಮೀಟರ್ ಅಳತೆಯಲ್ಲಿದೆ. ಅರಬಿ ಸಮುದ್ರದ ತಟದಲ್ಲಿರುವ ಈ ಪ್ರತಿಮೆ ಅತ್ಯಂತ ವಿಹಂಗಮವಾಗಿದೆ.

ಇದಿಷ್ಟೇ ಅಲ್ಲದೆ, ಭಾರತ ಸರಕಾರ ಪ್ರವಾಸೋದ್ಯಮವನ್ನು ಪಸರಿಸುವ ಸಲುವಾಗಿ ಹಲವಷ್ಟು ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವಂತಹ ಕ್ರಮಗಳಿಗೂ ಮುಂದಾಗಿದೆ. ಫೆಬ್ರವರಿ 2022ಕ್ಕೆ ಕೇಂದ್ರ ಸರಕಾರ ಪ್ರವಾಸೋದ್ಯಮ ಇಲಾಖೆ 16 ಹೊಸ ಯೋಜನೆಗಳನ್ನು 1,300 ಕೋಟಿ ವೆಚ್ಚದಲ್ಲಿ ಜಾರಿಗೆ ತರಲು ಮುಂದಾಯಿತು. ಸ್ವದೇಶ್ ದರ್ಶನ್ ಸ್ಕೀಮ್ ಮೂಲಕ ಪ್ರವಾಸೋದ್ಯಮ ಇಲಾಖೆಯು 2014-15ರಿಂದ ಮಾಚ್೯ 2022ರವರೆಗೆ 5,500 ಕೋಟಿ ರೂಪಾಯಿ ಹೂಡಿಕೆ ಮಾಡಿ, 76 ಯೋಜನೆಗಳಲ್ಲಿ  31 ರಾಜ್ಯಗಳಲ್ಲಿ ಬಿಡುಗಡೆ ಮಾಡಿದೆ‌. 2014 ಆಕ್ಟೋಬರ್ ಇಂದ ಈಚೆಗೆ ಪ್ರವಾಸಿಗರಿಗೆಂದೇ E-Tourist Visaಗಳನ್ನು ವಿದೇಶಿಗರಿಗೆ ನೀಡುತ್ತಿದೆ. ಇದು ಪ್ರವಾಸೋದ್ಯಮದ ಉತ್ತೇಜನಕ್ಕೆ ಬಲವಾದ ಕಸುವು ತುಂಬುತ್ತಿದೆ. 2019ರಲ್ಲಿ ಭಾರತ ಸರಕಾರವು 2.36 ಮಿಲಿಯನ್  E-tourist visaಗಳನ್ನು ನೀಡಿತ್ತು. ಇದು ಪ್ರವಾಸೋದ್ಯಮದ ಬಲವರ್ಧನೆಗೆ ಇಂಬನ್ನು ನೀಡಿದೆ. ಇನ್ನು ಭಾರತದ ಪ್ರವಾಸೋದ್ಯಮ ಇಲಾಖೆಯ ಜಾಹಿರಾತುಗಳ ವಿಚಾರಕ್ಕೆ ಬರುವುದಾದರೆ, ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯು ವಿದೇಶಗಳಲ್ಲಿ 8 ಕಛೇರಿಗಳನ್ನು ಹೊಂದಿದೆ. ಇದು ಜಾಗತಿಕ ಮಾರುಕಟ್ಟೆಯನ್ನು  ಭಾರತೀಯ ಪ್ರವಾಸೋದ್ಯಮಕ್ಕೆ ಒದಗಿಸಿ ಕೊಡುವಲ್ಲಿ ವಿದೇಶಿಗರನ್ನು ಭಾರತದತ್ತ ಸೆಳೆಯುತ್ತಿದೆ. ಪ್ರಚಾರ ಕಾರ್ಯವನ್ನು ವಿದೇಶದ ಮುದ್ರಣ ಮಾಧ್ಯಮ,  ದೃಶ್ಯ ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ನೀಡುವ ಮೂಲಕ ಮಾಡಲಾಗುತ್ತಿದೆ. ಅದರೊಂದಿಗೆ ಭಾರತೀಯ ಪ್ರವಾಸೋದ್ಯಮ ಪ್ರತಿನಿಧಿಗಳಿಂದ ಮೇಳಗಳು ಹಾಗು ಪ್ರದರ್ಶನಗಳಲ್ಲಿ ಭಾಗವಹಿಸುವಿಕೆ, ಸೆಮಿನಾರ್ ಗಳ ಆಯೋಜನೆ, ಕಾರ್ಯಾಗಾರಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುವಿಕೆ, ಸೆಮಿನಾರ್ ಗಳ ಆಯೋಜನೆ, ರೋಡ್ ಶೋ, ಕಾನ್ಸಟ್೯, ಕರಪತ್ರಗಳ ವಿತರಣೆ ಮತ್ತು ಮೇಲಾಧಾರಗಳ ಮುದ್ರಣ ಹಾಗು ಹಂಚಿಕೆಯಿಂದಲೂ ಪ್ರವಾಸೋದ್ಯಮ ವೃದ್ಧಿಯಾಗುತ್ತಿದೆ.

ಇನ್ಮುಂದೆ ಭಾರತದ ಪ್ರವಾಸೋದ್ಯಮಕ್ಕೆ ಪರ್ವ ಕಾಲ

2028ರ ವರ್ಷಕ್ಕೆ ಭಾರತಕ್ಕೆ 30.5 ಬಿಲಿಯನ್ ಪ್ರವಾಸಿಗರು ಪರ್ಯಟನೆಗಾಗಿ ಬರಲಿದ್ದಾರೆ ಎಂದು ಊಹಿಸಲಾಗಿದೆ. ಪ್ರವಾಸೋದ್ಯಮದಿಂದಾಗಿ ದೇಶದಲ್ಲಿ ಒಟ್ಟು 53 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. 

2028ರ ಹೊತ್ತಿಗೆಲ್ಲಾ ಭಾರತದ ಪ್ರವಾಸೋದ್ಯಮವು ಜಗತ್ತಿನ ಮೂರನೇ ಅತಿ ದೊಡ್ಡ ಪ್ರವಾಸೋದ್ಯಮದ ಆರ್ಥಿಕತೆಯಾಗಿ ಬೆಳೆದು ನಿಲ್ಲಲಿದೆ. ನವ ನೂತನ ಯೋಜನೆಗಳ ರೂಪಿಸಿ ಆ ಮೂಲಕ ದುಡಿಯುವ ವರ್ಗಕ್ಕೆ ಅಪಾರವಾದ ಉದ್ಯೋಗದ ಅವಕಾಶಗಳನ್ನು ಮಾಡಿಕೊಡಲಿದೆ.