“It’s not about ideas, it’s about making ideas happen” -Scott Belsky.
ಮನುಷ್ಯ ವ್ಯಾಪಾರ ವ್ಯವಹಾರದಲ್ಲಿ ಎಲ್ಲೆ ಮೀರಿ ಬೆಳೆಯುತ್ತಿದ್ದಾನೆ. ಚತುರತೆ, ತಂತ್ರಗಾರಿಕೆ ಮತ್ತು ಯಾರನ್ನಾದರೂ ಒಪ್ಪಿಸುವ ಯುಕ್ತಿ ಕಸವನ್ನು ರಸವಾಗಿಸಿ ಮಾರಬಲ್ಲ ತಾಕತ್ತು ತಂದು ಕೊಟ್ಟುಬಿಡುತ್ತದೆ. ಸಾಕಿ ಸಲಹುವ ಪ್ರಾಣಿಗಳಿಗೆ ಪರ್ಯಾಯವಾಗಿ ಖರೀದಿಸಿರಿ ಎಂಬ ವಾದದೊಂದಿಗೆ ಮಾರುಕಟ್ಟೆಗೆ ಬಂದ ಗೋಲಾಕಾರದ ಬಂಡೆಯ ತುಂಡು ‘ಪೆಟ್ ರಾಕ್’ ಉತ್ಪನ್ನವೂ ಅಂತಹುದೇ ವಿಚಿತ್ರ ಪರಿಕಲ್ಪನಾತ್ಪಕ ಉತ್ಪನ್ನ…!

‘ತಲೆ ಒಂದಿದ್ದರೆ ಎಲೆ ಮಾರಿಯಾದರೂ ಬದುಕಬಹುದು’ ಎಂಬ ಗಾದೆಯನ್ನು ನಿಜವಾಗಿಸಿದ್ದು, ‘ಪೆಟ್ ರಾಕ್’ ಕಂಪೆನಿಯ ಮಾಲಿಕ ಅಮೇರಿಕಾ ಮೂಲದ ಗ್ಯಾರಿ ದಾಹಲ್!
ಗ್ಯಾರಿ ದಾಹಲ್ ಜಾಹಿರಾತು ವಿಷಯದಲ್ಲೇ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ, ಸ್ವತಂತ್ರ ಜಾಹಿರಾತು ಕರಡುಗಳ ಬರಹಗಾರನಾಗಿ ಕೆಲಸ ಮಾಡಲು ಆರಂಭಿಸಿದನು.
ಅದು 1975 ಇಸವಿಯ ಒಂದು ದಿನ. ತನ್ನ ಸಹೋದ್ಯೋಗಿ ಗೆಳೆಯರೊಂದಿಗೆ ಜನರು ಸಾಕು ಪ್ರಾಣಿಗಳನ್ನು ಲಾಲನೆ ಪಾಲನೆ ಮಾಡುವಲ್ಲಿ ಪಡುವ ಕಷ್ಟ ಕಾರ್ಪಣ್ಯಗಳ ಬಗ್ಗೆ ಮಾತನಾಡುತ್ತಿರುವಾಗ ತಟ್ಟನೆ ಹೊಳೆದಿತ್ತು ಬಂಡೆಯ ತುಂಡೊಂದನ್ನು ಸಾಕುವ ವಿಚಿತ್ರ ಪರಿಕಲ್ಪನೆ. ಸಾಕು ಪ್ರಾಣಿ ಪಕ್ಷಿಗೆ ಪರ್ಯಾಯವಾಗಿ ಗೋಲಾಕಾರದ ಸಣ್ಣ ಗಾತ್ರದ ಕಪ್ಪು ಕಲ್ಲನ್ನು ಸಲಹುವ ಆಲೋಚನೆಯನ್ನು ಜನರಲ್ಲಿ ಬಿತ್ತುವ ವ್ಯಪಾರದ ತಂತ್ರ!
ಈ ಚಿಂತನೆಗೆ ಒರೆ ಹಚ್ಚಿ ಸಾಕಾರಗೊಳಿಸಲು ಅಣಿಯಾದರು. ಅದೇ ವರ್ಷ ‘ಪೆಟ್ ರಾಕ್’ ಎಂಬ ಹೆಸರಿನಲ್ಲಿ 4 ಡಾಲರ್ ಗಳಿಗೆ ಕ್ರಿಸ್ಮಸ್ ಸಮಯದಲ್ಲಿ ಮಾರಾಟಕ್ಕೆ ಇಳಿಸಿದರು.

ಗ್ಯಾರಿ ದಾಹಲ್ ಜಾಹಿರಾತು ಕ್ಷೇತ್ರದ ವಿದ್ಯೆ ಹಾಗು ಅನುಭವ ಹೊಂದಿದ್ದರಿಂದ ಈ ಬಂಡೆಯ ತುಂಡನ್ನು ಜನರು ಕೊಳ್ಳಲು ಹೇಗೆ ಮುಗಿಬೀಳುವಂತೆ ಮಾಡುವುದೆಂಬ ಬಗ್ಗೆ ಸುಜ್ಞಾನವಿತ್ತು.
ಸರಿಯಾದ ಜಾಹಿರಾತು, ಬ್ರಾಂಡಿಂಗ್ ನಿಂದಾಗಿ ‘ಪೆಟ್ ರಾಕ್’ ಎಂಬ ಗೋಲಾಕಾರದ ಕಲ್ಲನ್ನು ಕೂಡ ಹಾಸ್ಯಭರಿತ ಹಾಗು ಅಸಹಜವಾದ ವಸ್ತುವಿನಂತೆ ಕಂಡಿತು. ಇದನ್ನು ಜನರು ತಮ್ಮ ಆಪ್ತರು, ಗೆಳೆಯ-ಗೆಳತಿಯರಿಗೆ ಉಡುಗೊರೆಯಾಗಿ ಕೂಡ ನೀಡಲು ಶುರು ಮಾಡಿದ್ದರು. ಈ ಪರಿಕಲ್ಪನೆಗೆ ಪ್ರಾಮುಖ್ಯತೆ ಸಿಕ್ಕಿ, ಜನರು ಈಗಲೂ ಖರೀದಿಸುತ್ತಿರುವ ಈ ಉತ್ಪನ್ನದ ಹಿಂದೆ ದೊಡ್ಡ ಜಾಹಿರಾತಿನ ಕೌಶಲ್ಯ ಅಡಗಿದೆ. ಬ್ರಾಂಡಿಂಗ್ಗಿನ ಅತ್ಯುನ್ನತ ಯತ್ನಗಳು ಕೆಲಸ ಮಾಡಿವೆ.
ಗ್ಯಾರಿ ದಾಹಲ್ ಜನರಿಗೆ ಪ್ರಾಣಿಗಳನ್ನು ಸಾಕಿ ಸಲಹಲು ಆಗುವ ಕಷ್ಟ, ಎದುರಾಗುವ ಸವಾಲುಗಳು ಎಲ್ಲವೂ ಚೆನ್ನಾಗಿ ತಿಳಿದಿತ್ತು. ಅದಕ್ಕೆ ‘ಪೆಟ್ ರಾಕ್’ ಎಂಬ ಕಂಪೆನಿ ಹೆಸರಿನಲ್ಲಿ ಚಿಕ್ಕ ಗೋಲಾಕಾರದ ಅಂದದ ಕಪ್ಪು ಕಲ್ಲನ್ನೇ ಜನರಿಗೆ ಪರ್ಯಾಯವಾದ ಐಡಿಯಾವನ್ನಾಗಿ ಬಿತ್ತಿ, ಮಾರಲು ಮುಂದಾದ. ಹಾಗೆ ಮಾಡುತ್ತಾ ಕಟ್ಟಿದ್ದು, ಬರೊಬ್ಬರಿ 500 ಕೋಟಿ ಕಂಪೆನಿಯನ್ನು ಎಂದರೆ ನೀವು ನಂಬಲೇಬೇಕು.
ಅಮೇಜ಼ಾನ್, ಫ್ಲಿಪ್ ಕಾಟ್೯ನಂತಹ ಆನ್ ಲೈನ್ ಶಾಪಿಂಗ್ ಆ್ಯಪ್ ನಲ್ಲಿ ಇಂದಿಗೂ ಪೆಟ್ ರಾಕ್ 8,398 ರೂಪಾಯಿಗಳಲ್ಲಿ ಮಾರಾಟವಾಗುತ್ತಲೇ ಇದೆ.
2022ರಲ್ಲಿ ಸೂಪರ್ ಇಂಪಲ್ಸ್ ಎಂಬ ಆಟಿಕೆಯ ಕಂಪೆನಿಯು ‘ಪೆಟ್ ರಾಕ್’ ಕಂಪೆನಿಯ ಹಕ್ಕುಗಳನ್ನು ಖರೀದಿಸಿತು. ಮತ್ತು ಪುನಶ್ವೇತನಕ್ಕಾಗಿ ಮತ್ತಷ್ಟು ಬ್ರಾಂಡಿಂಗ್ ಮಾಡಿತು.

ದಕ್ಷಿಣ ಕೊರಿಯಾದಲ್ಲಿ ‘ಪೆಟ್ ರಾಕ್’ ವ್ಯಾಪಕವಾದ ಪ್ರಸಿದ್ಧಿ ಪಡೆದು ಇದು ಧ್ಯಾನ ಹಾಗು ಜಿಗುಪ್ಸೆಯ ಹೋಗಲಾಡಿಸುವಿಕೆಗೆ ಇದು ಮೂಲ ಉತ್ಪನ್ನವಾಗಿ ಬಳಕೆ ಆಗುತ್ತಿದೆ.
ಪೆಟ್ ರಾಕ್ ಜನಪ್ರಿಯ ಸಂಸ್ಕೃತಿಯಲ್ಲಿ ಜಾಗ ಪಡೆಯಿತು. ಸಿನಿಮಾ, ಟಿವಿಗಳ ಶೋಗಳಲ್ಲಿ ಹಾಗು ವಿಡಿಯೋ ಗೇಮ್ ಗಳಲ್ಲಿ ಇದರ ಬಳಕೆಯಾಯಿತು. ನಿರ್ಜೀವ ವಸ್ತುವನ್ನು ಜನ ಪ್ರಾಣಿಗಳಿಗೆ ಪರ್ಯಾಯವಾಗಿ ಖರೀದಿಸಿ, ಸಾಕುವ ಮುಂದಾಗಿದ್ದಾರೆ.
ಜಾಹಿರಾತು ಜನರಿಗೆ ಕಿರಿಕಿರಿ ಆಗುವಂತೆ ಇರದೆ ಒಂದು ಹೊಸ ಪರಿಕಲ್ಪನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಿ, ನಿರ್ಜೀವ ವಸ್ತುವನ್ನು ಕೂಡ ಭಾವುಕ ಜೀವಿಗಳ ಬದಲು ಖರೀದಿಸುವಂತೆ ಮಾಡುವುದು ಯುಕ್ತಿಗೆ ಇರುವ ನೈಜ ತಾಕತ್ತು ಎಂದರೆ ಅತಿಶಯೋಕ್ತಿಯಲ್ಲ!
