ಕೃಪೆ: •ಚಿತ್ರ ವರದಿ- ಸುನಿಲ್ ಪೊನ್ನೆಟಿ
ಸೋಮವಾರಪೇಟೆ ತಾಲೂಕು ಗರ್ವಾಲೆ ಗ್ರಾಮದಲ್ಲೊಂದು ಬೃಹತ್ ಗಾತ್ರದ ಸಂಪಿಗೆ ಮರ ಇದೆ. ಈ ಮರಕ್ಕೆ ಅಂದಾಜು 500 ವರ್ಷ ಆಗಿರಬಹುದು ಎನ್ನುವುದು ಸ್ಥಳೀಯರ ನಂಬಿಕೆ. ವಿಶೇಷ ಎಂದರೆ ಈ ಮರ ಇರುವುದು ಖಾಸಗಿ ಜಾಗದಲ್ಲಿ. ತನ್ನ ಮನೆಯ ಒಬ್ಬ ಹಿರಿಯ ಸದಸ್ಯನನ್ನು ನೋಡಿಕೊಳ್ಳುವಂತೆ ಈ ಮರವನ್ನು ತೋಟದ ಮಾಲೀಕ ನಾಪಂಡ ಪೂಣಚ್ಚ ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.
ಕೊಡಗಿನಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆ. ಕೃಷಿಕರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಬೆಳೆ ಇದು. ಕಾಫಿಯಲ್ಲಿ ಪ್ರಮುಖವಾಗಿ ಅರೆಬಿಕಾ ಮತ್ತು ರೋಬಸ್ಟಾ ತಳಿಯ ಗಿಡಗಳನ್ನು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸೋಮವಾರಪೇಟೆ ಭಾಗದಲ್ಲಿ ಅರೆಬಿಕಾ ಕಾಫಿ ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಹೆಚ್ಚು ನಿರ್ವಹಣೆ ಬಯಸುವ ಬೆಳೆ ಇದು. ಇದೇ ಕಾರಣಕ್ಕೆ ಹೊಸದಾಗಿ ತೋಟ ಮಾಡುವವರು ರೋಬಸ್ಟಾ ಗಿಡ ನಾಟಿ ಮಾಡುತ್ತಾರೆ. ಇದೇ ರೀತಿಯಲ್ಲಿ ಗರ್ವಾಲೆ ಗ್ರಾಮದ ನಾಪಂಡ ಪೂಣಚ್ಚ ತಮ್ಮ ಪಿತ್ರಾರ್ಜಿತ 5 ಎಕರೆ ಜಾಗದಲ್ಲಿ ರೋಬಸ್ಟಾ ಗಿಡಗಳನ್ನು ಕೆಲವು ವರ್ಷಗಳ ಹಿಂದೆ ನೆಡುತ್ತಾರೆ.
ರೋಬಸ್ಟಾ ಗಿಡಗಳಿಗೆ ಹೆಚ್ಚು ನೆರಳು ಆಗುವುದಿಲ್ಲ. ಹಾಗಾಗಿ ತಮ್ಮ ತೋಟದಲ್ಲಿನ ಹೆಚ್ಚುವರಿ ಮರಗಳನ್ನು ತೆರವು ಮಾಡಲು ಪೂಣಚ್ಚ ನಿರ್ಧರಿಸುತ್ತಾರೆ.
ಅಷ್ಟರಲ್ಲಿ ಅವರಿಗೆ ತೋಟದೊಳಗೆ ಇರುವ ಸಂಪಿಗೆ ಮರದ ನೆನಪಾಗುತ್ತದೆ. ಕಾಫಿ ತೋಟಕ್ಕೆ ನೆರಳು ಕಡಿಮೆ ಮಾಡಲು ಬೇರೆ ಮರ ಕಡಿದರೆ ಸಂಪಿಗೆ ಮರಕ್ಕೆ ತೊಂದರೆ ಆಗಬಹುದು ಎಂದು ಇವರೊಳಗಿನ ಜಾಗೃತ ಮನಸ್ಸು ಎಚ್ಚರಿಸುತ್ತದೆ. ಕಾಫಿ ತೋಟಕ್ಕಿಂತ ಸಂಪಿಗೆ ಮರವನ್ನು ಉಳಿಸಿಕೊಳ್ಳುವುದೇ ಇವರ ಆದ್ಯತೆ ಆಗುತ್ತದೆ. ಯಾಕೆಂದರೆ ಅದು ಸಾಮಾನ್ಯ ಸಂಪಿಗೆ ಮರ ಅಲ್ಲ. 500ಕ್ಕೂ ಹೆಚ್ಚಿನ ವರ್ಷಗಳಿಂದ ಇಲ್ಲಿನ ಎಲ್ಲಾ ಬೆಳವಣಿಗೆಗಳಿಗೆ ಮೂಕ ಸಾಕ್ಷಿ ಆಗಿ ನಿಂತಿರುವ ಬೃಹತ್ ಗಾತ್ರದ ಸಂಪಿಗೆ ಮರ.

ತಮ್ಮ ಕುಟುಂಬದ ಹಿಂದಿನ ತಲೆಮಾರುಗಳನ್ನೆಲ್ಲಾ ಕಂಡಿರುವ ಈ ಸಂಪಿಗೆ ಮರದ ಜತೆ ಭಾವನಾತ್ಮಕ ನಂಟು ಹೊಂದಿರುವ ಪೂಣಚ್ಚ ಅವರಿಗೆ ಜೀವವೈವಿಧ್ಯತೆಯ ವಿಷಯಕ್ಕೆ ಬಂದಾಗ ಇದು ಪರಿಸರಕ್ಕೆ ಬೆಲೆ ಕಟ್ಟಲಾಗದ ಆಸ್ತಿಯೂ ಹೌದು ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಹಾಗಾಗಿ ಕಾಫಿ ತೋಟದ ಬಗೆಗಿನ ತಮ್ಮ ಆಲೋಚನೆಯನ್ನೇ ಬದಲಿಸಿಕೊಳ್ಳುತ್ತಾರೆ. ಬದುಕುವುದಕ್ಕೆ ಕಾಫಿ ತೋಟ ಬೇಕು. ಹಾಗಂತ ಸಂಪಿಗೆ ಮರಕ್ಕೆ ತೊಂದರೆ ಆಗುವ ಯಾವುದೇ ರೀತಿಯ ಆಧುನಿಕ ಕೃಷಿ ಪದ್ಧತಿ ಅನುಸರಿಸದೇ, ಸಹಜ ಕೃಷಿಯನ್ನೇ ಅಪ್ಪಿಕೊಳ್ಳುತ್ತಾರೆ. ವೈಜ್ಞಾನಿಕ ಕೃಷಿಗೆ ಹೋಲಿಸಿದರೆ ಸಹಜ ಕೃಷಿಯಲ್ಲಿ ಇಳುವರಿ ಕಡಿಮೆ ಎನ್ನುವುದು ಗೊತ್ತಿದ್ದರೂ ಸಂಪಿಗೆ ಮರದ ರಕ್ಷಣೆಯೇ ಇವರಿಗೆ ಮುಖ್ಯವಾಗುತ್ತದೆ.
ಪೂಣಚ್ಚ ಅವರ ಕಾಫಿ ತೋಟಕ್ಕೆ ಹೋದರೆ ಅದು ತೋಟ ಎಂದು ಹೇಳಲು ಆಗದ ರೀತಿಯಲ್ಲಿ ಇದೆ. ಸಾಮಾನ್ಯವಾಗಿ ಕಾಫಿ ಗಿಡಗಳನ್ನು ನಿರ್ಧಿಷ್ಟ ಅಳತೆಗೆ ಕತ್ತರಿಸಿ ಅದರ ಮೇಲೆ ಎತ್ತರಕ್ಕೆ ಬೆಳೆಯದಂತೆ ಮಾಡಲಾಗುತ್ತದೆ. ಕಾಫಿ ಗಿಡ ಎಷ್ಟು ಹಳೆಯದಾದರೂ ಗಿಡದಂತೆಯೇ ಉಳಿದುಕೊಂಡಿರುತ್ತದೆ. ಆದರೆ ಪೂಣಚ್ಚ ಅವರ ತೋಟದಲ್ಲಿ ಕಾಫಿ ಗಿಡಗಳಿಗೆ ಯಾವುದೇ ವಿಶೇಷ ಆರೈಕೆ ಇಲ್ಲ. ಹಾಗಾಗಿ ಇಲ್ಲಿ ಕಾಫಿ ಗಿಡಗಳೂ ಮರಗಳಾಗಿವೆ. ವಿಶಾಲವಾದ ಸಂಪಿಗೆ ಮರ ಮುತ್ತಜ್ಜನಂತೆ ಕಂಡುಬಂದರೆ ‘ಕಾಫಿ ಮರ’ ಸೇರಿದಂತೆ ಉಳಿದ ಗಿಡ ಮರಗಳು ಈ ಅಜ್ಜನ ನೆರಳಲ್ಲಿರುವ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಂತೆ ಭಾಸವಾಗುತ್ತದೆ.
5 ಶತಮಾನಕ್ಕೂ ಹೆಚ್ಚಿನ ಆಯುಷ್ಯ ಕಳೆದಿರುವ ಸಂಪಿಗೆ ಮರ ಸಂರಕ್ಷಣೆಯ ಏಕಮಾತ್ರ ಉದ್ದೇಶದಿಂದ ಈ ನೆಲ, ಇಲ್ಲಿಯ ಹವಾಮಾನ, ಪ್ರಾಕೃತಿಕ ಸ್ಥಿತಿ-ಗತಿಗೆ ಹೊಂದಿಕೊಳ್ಳುವ, ಸ್ಥಳೀಯ ಜೀವವೈವಿಧ್ಯತೆಗೆ ಸಂಬಂಧಿಸಿದ ಕೃಷಿಯನ್ನಷ್ಟೇ ಪೂಣಚ್ಚ ಮಾಡುತ್ತಾರೆ. ಪ್ರಕೃತಿಗೆ ವಿರುದ್ಧ ಹೋಗದೇ ಪ್ರಕೃತಿಗೆ ಪೂರಕವಾದ ಚುಟುವಟಿಕೆಗಳಿಗೆ ಮಾತ್ರ ತಮ್ಮ ತೋಟದಲ್ಲಿ ಆದ್ಯತೆ ಕೊಡುತ್ತಾರೆ. ಇದರ ಒಂದು ಭಾಗವಾಗಿಯೇ ವಿಶಿಷ್ಟವಾದ ‘ಆದಿ’ ತಳಿಯ ಕರಿಮೆಣಸು ಅಭಿವೃದ್ಧಿಪಡಿಸಿದ್ದಾರೆ. ಗರ್ವಾಲೆಯಂಥ ಬೆಟ್ಟ, ಗುಡ್ಡಗಳಲ್ಲಿ ಮಾತ್ರ ಬೆಳೆಯುವ ಕರಿಮೆಣಸು ಸಂಗ್ರಹಿಸಿ ‘ಆದಿ’ ತಳಿ ರೂಪಿಸಲಾಗಿದ್ದು, ಇವರ ಈ ಅನ್ವೇಷಣೆಗಾಗಿ ರಾಷ್ಟ್ರೀಯ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದಾರೆ.

ಸ್ಥಳೀಯ ಬೆಳೆಗಳಿಗೆ ಇರುವ ಸ್ಥಿರತೆ ಇತರ ಪ್ರದೇಶಗಳ ಬೆಳೆಗಳಿಗೆ ಇರುವುದಿಲ್ಲ ಎನ್ನುವುದನ್ನು ನಂಬಿರುವ ಪೂಣಚ್ಚ ತಮ್ಮ ತೋಟದ ‘ಕಾಫಿ ಮರ’ ಗಳಿಗೆ
ತಾವೇ ಅಭಿವೃದ್ಧಿಪಡಿಸಿರುವ ಆದಿ ತಳಿಯ ಕರಿಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಈ ಭಾಗದಲ್ಲಿ ಮಾತ್ರ ಕಂಡುಬರುವ ವಿಶೇಷ ತಳಿಯ ಫ್ಯಾಷನ್ ಫ್ರೂಟ್ ಗುರುತಿಸಿ ಅದಕ್ಕೆ ‘ಗರ್ವಾಲೆ ಫ್ಯಾಷನ್ ಫ್ರೂಟ್’ ಎಂದು ಹೆಸರಿಸಿ ಅದನ್ನೂ ಅಭಿವೃದ್ಧಿ ಪಡಿಸುತ್ತಿದ್ದಾರೆ. ಗಂಡು ರೆಕ್ಕೆಯಿಂದ ಕಾಫಿ ಗಿಡಗಳ ಅಭಿವೃದ್ಧಿ, ನೇಂದ್ರ ಬಾಳೆಯ ಲಕ್ಷಣಗಳನ್ನು ಹೊಂದಿರುವ ‘ನರೇಂದ್ರ’ ಬಾಳೆ.. ಹೀಗೆ ಇವರ ಅನ್ವೇಷಣೆಗಳು ನಡೆಯುತ್ತಲೇ ಇದೆ. ಇವೆಲ್ಲಕ್ಕೂ ಪ್ರೇರಣೆ ಅದೇ ಹಳೆಯ ಸಂಪಿಗೆ ಮರ.
ಬಿಳಿಗಿರಿ ರಂಗನ ಬೆಟ್ಟದಲ್ಲಿ ಇರುವ ದೊಡ್ಡ ಸಂಪಿಗೆ ಮರಕ್ಕೆ 2 ಸಾವಿರ ವರ್ಷ ಆಗಿರಬಹುದು ಎಂದು ಹೇಳಲಾಗುತ್ತದೆ. ಆ ಮರ ಸುಮಾರು 34 ಮೀ. ಎತ್ತರ 20 ಮೀ. ಅಗಲ ಇದೆ. ಗರ್ವಾಲೆಯಲ್ಲಿ ನಾಪಂಡ ಪೂಣಚ್ಚ ಅವರ ತೋಟದಲ್ಲಿ ಇರುವ ಸಂಪಿಗೆ ಮರಕ್ಕೆ 500ಕ್ಕೂ ಹೆಚ್ಚಿನ ವರ್ಷಗಳಾಗಿದೆ. ಇದರ ಸುತ್ತಳತೆ ಸುಮಾರು 34 ಅಡಿ. ಎತ್ತರ ಅಂದಾಜು 86 ಅಡಿಗಳು. ದೇವ ಸಂಪಿಗೆ ಎಂದು ಕರೆಯಲಾಗುವ ಈ ಮರದಲ್ಲಿ ಈಗಲೂ ಹೂವುಗಳಾಗುತ್ತದೆ. ಆದರೆ ಕಾಯಿಕಟ್ಟುವುದಿಲ್ಲ. ಹಾಗಾಗಿ ಇದು ಗಂಡು ಮರ ಇರಬಹುದು ಎನ್ನುತ್ತಾರೆ ಪೂಣಚ್ಚ.
ಸುಮಾರು 5 ಶತಮಾನ ವಯೋಮಾನದ ಈ ಸಂಪಿಗೆ ಮರ ತನ್ನಲ್ಲಿ ದೊಡ್ಡ ಸಂಖ್ಯೆಯ ಜೀವಿಗಳಿಗೆ ಆಶ್ರಯ ಕೊಟ್ಟಿದೆ. ಈ ಮರದ ಮೇಲೆಯೇ ಬೈನೆ ಮತ್ತು ಹಲಸಿನ ಮರಗಳು ಹುಟ್ಟಿಕೊಂಡಿವೆ. ಇದರಲ್ಲಿ ಗೂಡು ಕಟ್ಟಿಕೊಂಡಿರುವ ವೈವಿಧ್ಯಮಯ ಪಕ್ಷಿಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಜೇನು ಗೂಡುಗಳೂ ಈ ಮರದಲ್ಲಿವೆ. ಪರಾಶ್ರಯ ಬಳ್ಳಿಗಳು ಹರಡಿಕೊಂಡಿವೆ. ಮರದ ಪೊಟರೆಯಲ್ಲಿ ಬಾವಲಿಗಳು ನೆಲೆಯಾಗಿವೆ. ಮರದ ಬುಡ ಭಾಗದಲ್ಲಿನ ಗುಹೆಯಂಥ ಜಾಗದಲ್ಲಿ ಮುಳ್ಳುಹಂದಿಗಳು, ಮೊಲಗಳೂ ವಾಸ ಮಾಡುತ್ತವೆ.
ಮುಂದಿನ ತಲೆಮಾರುಗಳಿಗೂ ಈ ಸಂಪಿಗೆ ಮರ ದಾಟಿಸುವ ಸಂಬಂಧ ಸಂರಕ್ಷಣೆಗಾಗಿ ಪೂಣಚ್ಚ ಪಣತೊಟ್ಟಿದ್ದಾರೆ. ಇದಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಮಾರ್ಗದರ್ಶನ ನೀಡುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದಾರೆ.
ಪೊನ್ನಂಪೇಟೆಯಲ್ಲಿರುವ ಅರಣ್ಯ ಮಹಾವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ಗಮನಕ್ಕೂ ವಿಷಯವನ್ನು ತಂದಿದ್ದಾರೆ. ಆಸಕ್ತರಿಗೆ ಈ ಮರದ ವೀಕ್ಷಣೆಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಹತ್ತಿರ ತೆರಳಲು ಅವಕಾಶ ಇಲ್ಲ.
ಇನ್ನು ಗರ್ವಾಲೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಐತಿಹಾಸಿಕ ಸಂಗತಿಗಳ ಕುರುಹುಗಳು ಕಂಡು ಬಂದಿದೆ. ಈ ಗತಕಾಲದ ಮರ ಇರುವ ಪ್ರದೇಶದಲ್ಲಿ ಕಲ್ಲುಗಳನ್ನು ಬಳಸಿ ಮಾಡಿದ ಹಳೆಯ ಕಾಲದ ಕಟ್ಟೆಯೊಂದಿದೆ. ನೀರಿನ ಹರಿವಿಗೆ ಅಡ್ಡಲಾಗಿ ಕಟ್ಟಿ ಬೇರೆ ಕಡೆಗೆ ನೀರು ಹರಿಸಲು ಮಾಡಿರುವ ಚಿಕ್ಕ ಅಣೆಕಟ್ಟೆಯೊಂದರ ಪಳೆಯುಳಿಕೆಯಂತೆ ಈ ಕಟ್ಟೆ ಕಂಡುಬರುತ್ತಿದೆ. ಈ ಕಟ್ಟೆಗೂ ಸಂಪಿಗೆ ಮರಕ್ಕೂ ಸಂಬಂಧ ಇರುವ ಸಾಧ್ಯತೆಯೂ ಇರಬಹುದು ಎನ್ನುತ್ತಾರೆ ಪೂಣಚ್ಚ. ನಾಗರಿಕತೆಯ ಬೆಳವಣಿಗೆ ಹಾದಿಯಲ್ಲಿ ಗರ್ವಾಲೆ ಗ್ರಾಮದಲ್ಲಿ ಜನವಸತಿ ರೂಪುಗೊಂಡ ಬಗ್ಗೆ ಸಂಶೋಧನೆಗಳಿಗೂ ಈ ಪ್ರದೇಶ ಪೂರಕವಾಗಿದ್ದು, ಆಸಕ್ತರು ಈ ಬಗ್ಗೆ ಗಮನಹರಿಸಬಹುದು ಎನ್ನುತ್ತಾರೆ ಅವರು.
Advertisements

ನಾಪಂಡ ಪೂಣಚ್ಚ ಪ್ರಕೃತಿ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿದ್ದಾರೆ. ಈ ಭಾಗದ ಜೀವವೈವಿಧ್ಯತೆಗೆ ಪೂರಕವಾಗಿಯೇ ಅವರು ಕೃಷಿ ಮಾಡುತ್ತಿದ್ದಾರೆ. ಆದಿ ಕರಿಮೆಣಸು ಅಭಿವೃದ್ಧಿ ಸಂದರ್ಭ ಅದು ಕರಿಮೆಣಸೇ ಅಲ್ಲ ಎಂದು ಬಹುತೇಕರು ಕುಹಕ, ವ್ಯಂಗ್ಯ ಮಾಡಿದ್ದರು. ಆದರೆ ಅವೆಲ್ಲವನ್ನೂ ಮೀರಿ ಸಾಧನೆ ಮಾಡಿದ್ದಾರೆ. ಅವರ ತೋಟದಲ್ಲಿನ ಗತಕಾಲದ ಸಂಪಿಗೆ ಮರ ಉಳಿಸಿಕೊಳ್ಳಲು ಕೃಷಿ ಪದ್ಧತಿಯನ್ನೇ ಪೂಣಚ್ಚ ಬದಲಿಸಿಕೊಂಡು ಪ್ರಕೃತಿಗೆ ಪೂರಕವಾಗಿ ಕೃಷಿ ಮಾಡುತ್ತಿರುವುದು ವಿಶೇಷ.
ಈ ಬೃಹತ್ ಸಂಪಿಗೆ ಮರದ ಪೊಟರೆಯಲ್ಲಿ ಮೊದಲಿನಿಂದಲೂ ಬೆಂಕಿಯಿಂದ ಸುಟ್ಟ ಗುರುತುಗಳಿದೆ. ಇಲ್ಲಿ ಯಾವಾಗ ಬೆಂಕಿ ಹತ್ತಿಕೊಂಡಿತ್ತು ಎನ್ನುವುವುದು ನನಗೆ ಗೊತ್ತಿಲ್ಲ. ನಮ್ಮ ತಂದೆಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಅಜ್ಜನನ್ನು ಕೇಳಿದಾಗ ಅವರೂ ಗೊತ್ತಿಲ್ಲ ಅಂದಿದ್ದರು. ಹೀಗೆ ಶತಮಾನಗಳಿಂದ ಹಲವು ವಿದ್ಯಮಾನಗಳಿಗೆ ಮೂಕ ಸಾಕ್ಷಿಯಾಗಿ ನಮ್ಮ ತೋಟದಲ್ಲಿ ಈ ಸಂಪಿಗೆ ಮರ ನಿಂತಿದೆ. ಈ ಮರದ ಸಂರಕ್ಷಣೆ ನನ್ನ ಕರ್ತವ್ಯ ಎಂದು ನಂಬಿದ್ದೇನೆ. ಈ ನಿಟ್ಟಿನಲ್ಲೇ ನನ್ನ ಎಲ್ಲಾ ಚಟುವಟಿಕೆಗಳೂ ನಡೆಯುತ್ತಿದೆ ಎನ್ನುತ್ತಾರೆ
ನಾಪಂಡ ಪೂಣಚ್ಚ
