ಕೊಡಗಿನ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ ಇದು…
ಬೈಸಿಕಲ್ ಗಳಲ್ಲಿ ಸಂಚರಿಸುವುದು ಆರೋಗ್ಯಕ್ಕೆ ತೀರಾ ಒಳ್ಳೆಯದು. ಸೈಕ್ಲಿಂಗ್ ನಿಂದ ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗ ಆಗುತ್ತದೆ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೈಕ್ಲಿಂಗ್ ಸಹಕಾರಿ ಆಗಬಲ್ಲದು.

ಸೈಕ್ಲಿಂಗ್ ದಿನವೂ ಮಾಡುವುದರಿಂದ ಹೃದಯ ರೋಗದ ಅಪಾಯದಿಂದ ದೂರವಿರಬಹುದು. ಕೈ ಕಾಲುಗಳ ಸ್ನಾಯುಗಳು ಬಲವಾಗುತ್ತದೆ. ಕ್ಯಾಲರಿ ಕರಗಿ ದೇಹದ ತೂಕವನ್ನು ನಿರ್ವಹಣೆ ಮಾಡಬಹುದು. ಪ್ರಪಂಚದಾದ್ಯಂತ ನೆಥರ್ ಲ್ಯಾಂಡ್, ಡೆನ್ಮಾಕ್೯, ಜರ್ಮನಿ, ಸ್ವೀಡನ್, ಸ್ವಜರ್ ಲ್ಯಾಂಡ್, ಜಪಾನ್, ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಸೈಕಲ್ ಅನ್ನು ಅವ್ಯಾಹತವಾಗಿ ಬಳಸುತ್ತಾರೆ. ಬೈಸಿಕಲ್ ಯಾವುದೇ ಮಾಲಿನ್ಯಗಳಿಗೆ ಎಡೆಮಾಡದೆ ಸಂಚಾರಕ್ಕೆ ಹೇಳಿ ಮಾಡಿಸಿದ್ದಾದರಿಂದ ಇದಕ್ಕೆ ಪರಿಸರ ಸ್ನೇಹಿ ಎಂಬ ಹೆಗ್ಗಳಿಕೆ ಇದೆ.

ಇತ್ತೀಚೆಗೆ ಒಂದು ಜರ್ಮನ್ ಕಂಪೆನಿಯ ಬೈಸಿಕಲ್ ಮಾರುಕಟ್ಟೆಗೆ ಬಂದಿದೆ. ಅಕ್ಷರಶಃ ಪರಿಸರ ಸ್ನೇಹಿ ಎಂಬ ಹಿರಿಮೆ ಇದಕ್ಕೆ ಬಂದಿದೆ. ಎಲ್ಲರಿಗಿಂತ ಹೆಜ್ಜೆ ಮುಂದೆ ಹೋಗಿ, ಈ ರೀತಿಯ ಸುಸ್ಥಿರ ಸಂಚಾರ ಮಾಡಲು ಬೈಸಿಕಲ್ ಮಾರುಕಟ್ಟೆಗೆ ತಂದಿದ್ದು ‘ಐಗಸ್’ ಕಂಪೆನಿ. ಬೈಸಿಕಲ್ ಹೆಸರೂ ಐಗಸ್ ಎಂದೇ ಇಟ್ಟಿದ್ದಾರೆ.
ಇದೇಕೆ ಬಹುತೇಕ ಪರಿಸರ ಸ್ನೇಹಿ ಅಂತ ಗಮನಿಸುವುದಾದರೆ, ಇದು ತಯಾರಾಗುವುದು 90% ಪುನರ್ಬಳಕೆಗೊಂಡ ಪ್ಲಾಸ್ಟಿಕ್ ತ್ಯಾಜ್ಯದಿಂದ. ಮೀನುಗಾರಿಕೆಯ ಬಲೆಗಳು, ಶಾಂಪು ಬಾಟಲಿಗಳು ತ್ಯಾಜ್ಯವಾದ ನಂತರ ಅದನ್ನು ಬಳಸಿ ಪುನರ್ಬಳಕೆ ಮಾಡಿ, ಈ ಬೈಸಿಕಲ್ ತಯಾರಿಸಿದ್ದಾರೆ.
ಇದರ ತೂಕವು 17 ಕೆ.ಜಿಗಳಾಗಿದ್ದು, 50-584 ಅಗಲವಾದ ಚಕ್ರಗಳನ್ನು ಹೊಂದಿದೆ. ರಾತ್ರಿ ಹೊತ್ತಿನಲ್ಲಿ ಬಳಸಲು ಸಾಕಷ್ಟು ಬೆಳಕು ದಾರಿಗೆ ಬೀರುವ ಹೆಡ್ ಲೈಟ್ ಕೂಡ ಅಳವಡಿಸಲಾಗಿದೆ. ಮತ್ತೊಂದು ವಿಶೇಷ ಅಂಶವೆಂದರೆ, ಇದು ಹವಾಮಾನ ಪ್ರತಿರೋಧಕ, ಶಿಥಿಲತೆ ಹೊಂದದ, ನಿರ್ವಹಣಾ ಮುಕ್ತ ಎಂಬ ಪ್ಲಸ್ ಪಾಯಿಂಟ್ ಗಳನ್ನು ಹೊಂದಿದೆ.
ಭಾರತದಲ್ಲಿ ಐಗಸ್ ಬೈಸಿಕಲ್ 27 ಜನವರಿ, 2025ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಕಂಪೆನಿಯ ಅಧಿಕೃತ ವೆಬ್ ಸೈಟ್ ಅಲ್ಲಿ ಹೆಚ್ಚಿನ ಮಾಹಿತಿಗಳು ಖರೀದಿಸುವುದಾದರೆ ಸುಲಭದಲ್ಲಿ ಲಭ್ಯವಿದೆ.
ಐಗಸ್ ಕಂಪೆನಿಯು ಶುರುವಾಗಿ 60 ವರ್ಷಗಳೇ ತುಂಬಿರುವ ಕಾರಣಕ್ಕೆ ಈ ಸಾಲು 12 ತಿಂಗಳುಗಳ ಕಾಲ ಇವರ ಕಂಪೆನಿಯ ಬೈಸಿಕಲ್ 6,000 ಕಿಲೋ ಮೀಟರ್ ಗಳಷ್ಟು ಸಂಚಾರ ಮಾಡಿ, 16 ದೇಶಗಳನ್ನು ಸುತ್ತಲಿದೆ. ಭಾರತದಲ್ಲಿ ಮುಖ್ಯ ನಗರಗಳಾದ ಮುಂಬೈ, ಬೆಂಗಳೂರು, ಚೆನೈ, ಪುಣೆಗಳನ್ನು ಈಗಾಗಲೇ ಸಂಚರಿಸಿ, ಲೋಕ ಪರ್ಯಟನೆಯನ್ನು ಮುಂದುವರೆಸಿದೆ.
ಈ ರೀತಿ ಪ್ಲಾಸ್ಟಿಕ್ ಎಂಬ ಮಾಲಿನ್ಯಕಾರಕ ವಸ್ತುವನ್ನು ತ್ಯಾಜ್ಯವಾಗಿ ಬಿಟ್ಟು ಬಿಡುವ ಬದಲು ಪರಿಸರ ಸ್ನೇಹಿಯಾದ ಬೈಸಿಕಲ್ ಅದರಿಂದ ತಯಾರಿಸಿದ ಐಗಸ್ ಕಂಪೆನಿಯಂತೆ ಇನ್ನೂ ಹಲವು ವಸ್ತುಗಳ ಉತ್ಪಾದನೆ ಮಾಡಿ, ಮಾರುವ ಕಂಪೆನಿಗಳು ಯೋಚಿಸಿದರೆ ಪರಿಸರ ಉಳಿಸಲು ಅದು ನಿಜಕ್ಕೂ ನೆರವಾಗುತ್ತದೆ.
ವ್ಯಾಪಾರ, ಲಾಭ, ಹಣದ ಹಿಂದೆ ಓಡುವ ವಿವಿಧ ಉತ್ಪನ್ನಗಳ ತಯಾರಕ ದೊಡ್ಡ ಕಂಪೆನಿಗಳು ಸಾಮಾಜಿಕ ಜವಾಬ್ದಾರಿ ಹಾಗು ಪರಿಸರದ ಕುರಿತು ಕಾಳಜಿಯನ್ನು ಹೊಂದಿರಬೇಕು ಎಂಬುದಕ್ಕೆ ಇದು ಸೂಕ್ತ ನಿದರ್ಶನವಾಗಬಲ್ಲದು...!
