ಒಂದು ಕಾಲು ಪೋಲಿಯೋ ಬಾಧಿತ ಮತ್ತೊಂದು ಗ್ಯಾಂಗ್ರೀನ್ ಇಂದಾಗಿ ಕತ್ತರಿಸಲ್ಪಟ್ಟಿತು. ಆದರೂ ಯಾವುದಕ್ಕೂ ಅಂಜದೆ ಅಳುಕದೆ ಬದುಕಿನ ಉತ್ಸಾಹ ಕಳೆದುಕೊಳ್ಳದ ಇವರಿಗೆ ಮನೆಯಲ್ಲೇ ಸುಮ್ಮನೆ ಕಳಿತುಕೊಳ್ಳೊದೆಂದರೆ ಶುದ್ಧ ಬೋರು. ಹಾಗೆಂದು ರಸ್ತೆ ಬದಿಯಲ್ಲಿ ಕುಳಿತುಕೊಳ್ಳುವ ಇವರು ಯಾರಿಗೂ ಕೈ ಚಾಚಿ ಭಿಕ್ಷೆ ಬೇಡುವುದಿಲ್ಲ. ಯಾರಾದರೂ ಹಣದ ಸಹಾಯ ಮಾಡಲು ಬಂದರೆ ಬೇಡ ಎಂದೂ ಹೇಳುವುದಿಲ್ಲ…
ಕೇವಲ ಐದು ನಿಮಿಷದಲ್ಲಿ ಓದಿ…
ಅಸಲಿಗೆ ಈ ಅಂಕಣದ ಪ್ರಾರಂಭದಲ್ಲಿ ನಾನು ‘ಮಾದ ಶೆಟ್ಟಿ’ ಅವರ ಹೆಸರಿನೊಂದಿಗೆ ವಿಳಾಸವನ್ನೂ ಬರೆಯಬೇಕು ಅಂದುಕೊಂಡಿದ್ದೆ. ಅದಕ್ಕಾಗಿ ಅವರ ಆಧಾರ್ ಕಾರ್ಡಿನ ಫೋಟೋವನ್ನೂ ಇದೇ ತಿಂಗಳ ಹದಿನೆಂಟನೇ ತಾರೀಖಿಗೆ ತೆಗೆದು ಇಟ್ಟಿದ್ದೆ. ಹತ್ತೊಂಬತ್ತರಂದು ನಮ್ಮ ಆಫಿಸ್ ಉದ್ಘಾಟನೆ ಇದ್ದ ಕಾರಣ ಅಂದು ನಾನು ತೆಗೆದಿರುವ ಆಧಾರ್ ಕಾರ್ಡಿನ ಫೋಟೋ ಸರಿಯಾಗಿ ಬಂದಿದೆಯೇ ಎಂದು ಗಮನಿಸುವ ಸಂಯಮ ಇರಲಿಲ್ಲ.
ಈಗ ನೋಡಿದರೆ ಮಾದ ಶೆಟ್ಟಿ ಅವರ ಮುಖಕ್ಕೆ ನನ್ನ ಮೊಬೈಲ್ ಕ್ಯಾಮರಾ ಝೂಮ್ ಆಗಿ, ಆಧಾರ್ ಸಂಖ್ಯೆಯ ಹೊರತಾಗಿ ಮತ್ತೇನೂ ಕಾಣದಂತಹ ಸ್ಥಿತಿಯಲ್ಲಿ ಆ ಫೋಟೋ ಬಂದು ಬಹಳ ನಿರಾಸೆಯಾಗಿದೆ. ಅಷ್ಟಕ್ಕೂ ಈ ಮಾದಶೆಟ್ಟಿಯ ವಿಳಾಸ, ಊರು ಇಲ್ಲೀಗ ಅಷ್ಟೊಂದೇನೂ ಮುಖ್ಯ ಅಲ್ಲ ಬಿಡಿ. ಅವರು ಮೂಲತಃ ಮೈಸೂರು ಜಿಲ್ಲೆಯವರಾದರೂ ನಿಮಗೆ ಬಹುತೇಕ ದಿನಗಳಲ್ಲಿ ಮಡಿಕೇರಿಯ ಕಾಲೇಜು ರಸ್ತೆಯಲ್ಲಿರುವ ಪ್ಯಾರಿಸ್ ಹೋಟೆಲಿನ ಮುಂಭಾಗದಲ್ಲಿ ಬೆಳಗಿನ ಹೊತ್ತು ಕಾಣ ಸಿಗುತ್ತಾರೆ. ರಾತ್ರಿ ಅವರು ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣದಲ್ಲೇ ಮಲಗುತ್ತಾರೆ. ಹತ್ತು, ಹದಿನೈದು ದಿನಕ್ಕೊಮ್ಮೆ ಮೈಸೂರು ಬಸ್ಸು ಹತ್ತಿ, ಮನೆ ಕಡೆ ವಿಚಾರಿಸಿಕೊಂಡು, ಮರಳಿ ಇಲ್ಲಿಗೇ ಬರುತ್ತಾರೆ.
ಆದರೂ ಇರಲಿ ಎಂದುಕೊಂದು ಇಂದಾದರೂ ಹೋಗಿ ಅವರ ಆಧಾರ್ ಕಾರ್ಡಿನ ಫೋಟೋವನ್ನು ಸರಿಯಾಗಿ ತೆಗೆಯೋಣ ಎಂದು ನೋಡಿದರೆ, ದುರಾದೃಷ್ಟವಶಾತ್ ಅವರು ಮೈಸೂರು ಬಸ್ಸು ಹತ್ತಿ ಬಿಟ್ಟಿದ್ದಾರೆ. ಬಿಡಿ ಆಧಾರ್ ಕಾರ್ಡಿನ ಗುರುತು ಇಲ್ಲದೆಯೂ ನೀವು ಅವರನ್ನು ಸುಲಭವಾಗಿ ಕಂಡು ಹಿಡಿಯಬಹುದು. ಅವರ ಬಲಗಾಲನ್ನು ಮೊಣಕಾಲಿನವರೆಗೆ ಕತ್ತರಿಸಿದ್ದಾರೆ. ಅವರ ಮತ್ತೊಂದು ಕಾಲು ಪೋಲಿಯೋ ಹೊಡೆತಕ್ಕೆ ವಕ್ರವಾಗಿದೆ. ಕಳ್ಳಿ ಕಳ್ಳಿ ಪಟ್ಟೆಯ ವಿನ್ಯಾಸದ ಹಳೆಯ ಪಂಚೆ ಹಾಗು ಬಿಳಿಯದೊಂದು ಬಣ್ಣ ಮಾಸಿದ ಶರ್ಟ್ ಹಾಕಿಕೊಂಡು ನಾನು ಮೇಲೆ ಸೂಚಿಸಿರುವ ಅದೇ ಸ್ಥಳದಲ್ಲಿ ಅವರು ಕುಳಿತಿರುತ್ತಾರೆ. ನಿಮಗೆ ಹಾಗೂ ಗುರುತಿಗೆ ಕಷ್ಟವಾದರೆ, ಅವರ ಬಳಿಯೊಂದು ಸರಕಾರಿ ಆಸ್ಪತ್ರೆಯವರು ಕೊಟ್ಟಿರುವ ಕಬ್ಬಿಣದ ದೊಡ್ಡದೊಂದು ಬಾಕ್ಸ್ ಆಕಾರದ ಊರುಗೋಲಿದೆ. ಅವರ ಕತ್ತರಿಸಲ್ಪಟ್ಟ ಕಾಲಿನ ಬಳಿಯೇ ಕೃತಕ ಕಾಲೊಂದು ಅವರಿಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಬಿದ್ದುಕೊಂಡಿರುತ್ತದೆ.
ಈ ಮಾದಶೆಟ್ಟಿ ಅವರಿಗೂ ನನಗೂ ಇಂದು ನಿನ್ನೆಯಿಂದ ಪರಿಚಯ ಅಲ್ಲ. ಕೋವಿಡ್ ಬಂದು ಹಲವರನ್ನು ಕೊಲ್ಲುವ ಮೊದಲೇ ನನಗೆ ಅವರು ಪರಿಚಯ. ಅವರನ್ನು ನಾನು ಭಿಕ್ಷುಕ ಅನ್ನಲು ಸ್ವಲ್ಪ ಸಂಕಟವಾಗುತ್ತದೆ. ಹಾಗಾಗಿ ನಾನು ಅವರನ್ನು ಪ್ರಾಮಾಣಿಕ ಭಿಕ್ಷುಕರ ಸಾಲಿಗೆ ಸೇರಿಸುತ್ತೇನೆ. ಭಿಕ್ಷೆಯನ್ನೂ ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಬೇಡುವ ನಮ್ಮ ಮಾದಶೆಟ್ಟಿ ಅವರದ್ದು ದುರಂತ ಬದುಕು ಅಂತ ನಮಗೆಲ್ಲರಿಗೂ ಅನ್ನಿಸಿದರೂ, ಅವರು ಹಾಗೇನೂ ಅಂದುಕೊಳ್ಳದೆ ಆರಾಮಾಗಿಯೇ ಇರುವಂತೆ ಕಾಣಿಸುತ್ತಾರೆ. ಹುಟ್ಟಿನಲ್ಲೇ ಪೋಲಿಯೋ ಅವರ ಎರಡೂ ಕಾಲನ್ನು ಊನ ಮಾಡಿದ್ದರೂ, ಅವರು ಅದೇ ಊನ ಕಾಲಿನಲ್ಲಿ ಸಾಕಷ್ಟು ನಡೆದಾಡುತ್ತಿದ್ದವರು. ಭಿಕ್ಷಾಟನೆಯ ಸ್ಥಳದವರೆಗೂ ನಡೆದುಕೊಂಡೇ ಹೋಗಿ ಅಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದವರು. ಅಷ್ಟಕ್ಕೂ ಅವರಿಗೆ ಭಿಕ್ಷೆ ಬೇಡುವ ಅನಿವಾರ್ಯತೆ ಏನೂ ಇಲ್ಲ. ಅವರೇ ನನಗೆ ಹೇಳಿರುವಂತೆ ಅವರಿಗೆ ಮದುವೆ ಆಗಿದೆ. ಅವರ ಹೆಂಡತಿ ಕೆಲಸಕ್ಕೂ ಹೋಗುತ್ತಾರೆ. ಕೆಲಸ ಎಂದರೆ ಕೂಲಿ. ಅವರಿಗೊಬ್ಬಳು ಮಗಳು ಇದ್ದು, ಮಗಳಿಗೂ ಮದುವೆ ಆಗಿದೆ. ಮನೆಯಲ್ಲಿ ಕೂತು ಸುಮ್ಮನೆ ಹೆಂಡತಿ ದುಡಿದದ್ದನ್ನು ತಿನ್ನಲು ಬಹಳ ಸಂಕಟ ಪಡುವ ಅವರು ತಮ್ಮ ಹೆಂಡತಿಗೆ ನೆರವಾಗುವ ಸಲುವಾಗಿ ಮಾತ್ರ ಹೀಗೆ ಬಂದು ಇಲ್ಲಿ ಕೂರುತ್ತಾರೆ.
ಹೀಗೆ ಕುಳಿತುಕೊಳ್ಳುವ ಅವರು ಅಮ್ಮಾ ತಾಯಿ ಎಂದು ಕೇಳಿ, ಯಾರಿಗೂ ಕಿರಿಕಿರಿ ಮಾಡಿ, ಭಿಕ್ಷೆ ಕೇಳದೆ. ಸುಮ್ಮನೆ ಕುಳಿತು ಏನನ್ನೋ ಗಾಢವಾಗಿ ಯೋಚಿಸುತ್ತಿರುತ್ತಾರೆ. ಅವರನ್ನೂ ಅವರ ಊನ ಕಾಲನ್ನೂ ನೋಡುವ ದಾರಿಹೋಕರು ಅವರಾಗಿಯೇ ಒಂದಿಷ್ಟು ಚಿಲ್ಲರೆ ಹಾಕಿದರೆ ಇವರು ಬೇಡ ಅನ್ನುವುದಿಲ್ಲ. ಕೊರೋನಾ ಕಾಲದಲ್ಲಿ ಇವರಿಗೆ ಶುಗರು ಏರಿ, ಎಡಗಾಲಿಗೆ ಗ್ಯಾಂಗ್ರೀನ್ ಆಗಿ, ಮೈಸೂರಿನ ಸಿವಿಲ್ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಉಚಿತವಾಗಿ ಕಾಲನ್ನು ಕತ್ತರಿಸುವ ಏರ್ಪಾಡು ಮಾಡಿದ್ದರಂತೆ. ಈ ವಿಚಾರವನ್ನು ತಮ್ಮ ಕತ್ತರಿಸಿದ ಕಾಲನ್ನು ನನಗೆ ತೋರಿಸುತ್ತಾ, ಅವರು ಹೇಳಿದ್ದು ಈಗಲೂ ನನಗೆ ನೆನಪಿದೆ. ಅವರು ಹಾಗೆ ಹೇಳುವಾಗ ನನಗೆ ಅಚ್ಚರಿ ಆಗಿತ್ತು. ಅವರ ರಿಯಾಕ್ಷನ್ ಕಂಡು ನಾನು ಚಿಂತಾಕ್ರಾಂತನೂ ಆಗಿದ್ದೆ. ಇದ್ದ ಕಾಲು ಕಳೆದು ಕೊಂಡ ಮಾದಶೆಟ್ಟರನ್ನು ಕರುಣೆಯಲ್ಲಿ ಅಂದು ನಾನು ಮಾತನಾಡಿಸಿದ್ದೆ. ಅವರು ನೋಡಿದರೆ ಸಿದ್ದರಾಮಯ್ಯನವರ ಮಗನ ಇನ್ಫ್ಲೂಯನ್ಸ್ ವಿಚಾರವಾಗಿ ಸಿಕ್ಕಾಪಟ್ಟೆ ಹೆಮ್ಮೆಯಿಂದ ಇದ್ದರು ಹಾಗೂ ಆ ಕಾಲು ಹೋದದ್ದು ಏನೇನೂ ಅಲ್ಲ ಅನ್ನುವಂತೆ ನನ್ನೊಂದಿಗೆ ಮಾತನಾಡಿದ್ದರು. ‘ಶೆಟ್ಟರೇ ಯಾಕೀತರಹ?’ ಅಂತ ಕೇಳಿದ್ದಕ್ಕೆ. ‘ಅಯ್ಯೋ ರೋಗದ ಕಾಲು ಯಾರಿಗೆ ಬೇಕು ಸಾರ್.. ಈಗ ನೋಡಿ ನೋವಿಲ್ಲ, ಏನಿಲ್ಲ.’ ಅಂತ ಮುಲಾಜಿಲ್ಲದೆ ತಮ್ಮ ತುಂಡಾದ ಕಾಲನ್ನೇ ತಿರುವಿ-ಮರುವಿ ತೋರಿಸಿದ್ದರು.
ಹೀಗೆ ತೀರಾ ಪ್ರಾಕ್ಟಿಕಲ್ ಆಗಿರುವ ಮಾದ ಶೆಟ್ಟಿ ಅವರಿಗೆ ಬೋರು ಅನ್ನಿಸಿದರೆ, ಅವರ ಪಕ್ಕದಲ್ಲೇ ತರಕಾರಿ ವ್ಯಾಪಾರ ಮಾಡುವ ದಂಪತಿಗೆ ನೆರವಾಗುತ್ತಿರುತ್ತಾರೆ. ಹಲವು ಬಾರಿ ಹೂಕೋಸಿನ ಬೇಡದ ಸಿಪ್ಪೆ ತೆಗೆಯುತ್ತಾ ನನ್ನೊಂದಿಗೆ ಕಷ್ಟ ಸುಖ ಹಂಚಿಕೊಂಡಿದ್ದಾರೆ. ಈಗ ಈ ಲೇಖನ ಅವರ ಮೇಲೆ ಬರೆಯಲು ನನಗೆ ಇನ್ನೊಂದು ಕಾರಣವೂ ಇದೆ. ಹದಿನೆಂಟನೇ ತಾರೀಖು ನಾನು ಅವರ ಆಧಾರ್ ಕಾರ್ಡಿನ ಫೋಟೋವನ್ನು ತಪ್ಪಾಗಿ ತೆಗೆದೆ ಅಂದೆನಲ್ಲ. ಅಂದು ಅವರು ಎಂದಿನಂತೆ ಅಲ್ಲೇ ಕುಳಿತಿದ್ದರು. ಆದರೆ ಅವರ ಪಕ್ಕದಲ್ಲಿ ಅವರಿಗೆ ಸಂಬಂಧವೇ ಇಲ್ಲದ ಮನುಷ್ಯರ ಭಾರವನ್ನು ನಿಖರವಾಗಿ ತೋರಿಸುವ ಡಿಜಿಟಲ್ ಮಷಿನ್ ಒಂದಿತ್ತು. ‘ಇದೇನು ಶೆಟ್ಟರೇ’ ಅಂದೆ. ‘ನಿಮ್ಮಂತೋರು ಕೊಟ್ಟರು ಸಾರ್’ ಅಂದರು. ಅಬ್ಬಬ್ಬಾ ಅಂದರೇ ಶುಗರ್ ಲೆಸ್ ಖಾಲಿ ಟೀ ಕುಡಿಸಬಲ್ಲವನಾದ ನನ್ನನ್ನು ಅವರಿಗ್ಯಾಕೆ ಹೋಲಿಸಿದರು ಅನ್ನುವುದು ಅರ್ಥವಾಗದೇ, ಅವರೇಕೆ ಇದನ್ನು ಇವರಿಗೆ ಕೊಟ್ಟರು ಎಂದೂ ತಿಳಿಯದೆ ಕೆಲಕಾಲ ಅಲ್ಲೇ ನಿಂತುಕೊಂಡಿದ್ದೆ. ನನ್ನ ಗೊಂದಲ ಅರ್ಥಮಾಡಿಕೊಂಡ ಶೆಟ್ಟರು ಜೀಪಲ್ಲಿ ಬಂದ ದಾನಿಗಳೊಬ್ಬರು ಇವರಿಗೆ ಇದನ್ನು ಕೊಟ್ಟು ಹೋಗಿದ್ದನ್ನೂ, ದಾರಿ ಹೋಕರಿಗೆ ತೂಕ ನೋಡಲು ಸಹಾಯ ಮಾಡಿ, ಕೊಟ್ಟಷ್ಟು ತೆಗೆದುಕೊಳ್ಳಿ ಎಂದು ಹೇಳಿಯೂ ಹೋದರು ಅನ್ನುವುದನ್ನೂ ತಿಳಿಸಿದರು. ಮತ್ತೊಬ್ಬರು ಬಂದು ಜೊತೆಗೆ ಒಂದಿಷ್ಟು ಪೆನ್ ಅನ್ನೂ ಶೆಟ್ಟರ ಕೈಗೆ ಕೊಟ್ಟು. ಇದನ್ನು ತಲಾ ಹತ್ತು ರೂನಂತೆ ಮಾರಿ ಎಂದು ಸಲಹೆಯನ್ನೂ ನೀಡಿದ್ದರು. ಹೊಸ ಮಷಿನ್ ನೋಡಿದ ಮಡಿಕೇರಿಯ ಮಂದಿ ತೂಕ ಪರೀಕ್ಷಿಸಿಕೊಂಡು, ಹತ್ತಿಪ್ಪತ್ತು ರೊಕ್ಕ ಕೊಟ್ಟು ಹೋಗುತ್ತಿದ್ದರು. ಅಂದು ಒಳ್ಳೆ ಕಲೆಕ್ಷನ್ ಮಾಡಿದ್ದ ಶೆಟ್ಟರು ಜೇಬಿನಿಂದ ಹಣ ತೆಗೆದು ನನಗೆ ಮಾತ್ರ ಕಾಣಿಸುವಂತೆ ತೋರಿಸಿ, ‘ನೋಡಿ ಸರ್’ ಅಂದಿದ್ದರು. ನಾನು ಖುಷಿಯಾಗಿ ಮೆಷಿನ್ ನೊಂದಿಗೆ ಅವರ ಫೋಟೋ ತೆಗೆದಾಗ ಇದನ್ನು ‘ನಮ್ ಹೆಂಗಸರ ಫೋನಿಗೆ ಕಳುಹಿಸಿ ಸರ್. ನಾನು ಕೆಲಸ ಮಾಡ್ತಾ ಇವ್ನಿ, ಭಿಕ್ಷೆ ಬೇಡ್ತಿಲ್ಲಾ.. ಅಂತ ಅವಳಿಗೆ ಒಸಿ ಹೇಳಿ ಸಾರ್..’ ಅಂತ ಆಧಾರ್ ಕಾರ್ಡ್ ನನ್ನ ಕೈಗೆಕೊಟ್ಟಿದ್ದರು. ಆಧಾರ್ ಕಾರ್ಡಿನ ತಪ್ಪಾದ ಫೋಟೋ ತೆಗೆದ ನಾನು, ನಾಳೆ ನನ್ನ ಆಫಿಸ್ ಓಪನ್ ಶೆಟ್ರೆ ಈಗ ಸ್ವಲ್ಪ ಬಿಝಿ, ಬಿಝಿ ಎಲ್ಲಾ ಮುಗಿಸಿ ಬರುತ್ತೇನೆ. ಮತ್ತೇ ಫೋಟೋ ಕಳುಹಿಸುತ್ತೇನೆ ಎಂದು ಅಲ್ಲಿಂದ ಹೊರಟಿದ್ದೆ.
ಮೊನ್ನೆ ನೋಡಿದರೆ, ತೂಕ ನೋಡುವ ಮಿಷನ್ ಇಲ್ದೆ, ಪೆನ್ನೂ ಇಲ್ದೆ ಅವರು ಯಥಾವತ್ತಾಗಿ ಹಳೆಯ ಸ್ಟೈಲ್‌ನಲ್ಲಿ ಅಲ್ಲೇ ಕುಳಿತಿದ್ದರು. ಯಾಕೆ? ಏನಾಯ್ತು? ಅಂತ ನಾನೂ ಕೇಳಲಿಲ್ಲ. ಬಹುಶಃ ಆ ಮಿಷನ್ ಅನ್ನು ಹ್ಯಾಂಡಲ್ ಮಾಡೋದು ಅವರಿಗೆ ಕಷ್ಟ ಆಗಿರಬಹುದು.
ಹೊಸದಕ್ಕೆ ಹೊಂದಿಕೊಳ್ಳೋದು ಅಷ್ಟು ಸುಲಭವೇ? ಹೇಳಿ. ಆದರೆ ಅವರಿಗೆ ನನ್ನ ಮುಖ ನೋಡಲು ಎಂದಿನ ಉತ್ಸಾಹ ಇರಲಿಲ್ಲ. ಸಣ್ಣ ಗಿಲ್ಟ್ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇಂದು ಹೋಗಿ, ‘ ಬಿಡಿ ಶೆಟ್ರೆ ಅದೆಲ್ಲಾ ಮಾಮೂಲಿ ನೀವು ಹೀಗೆ ಸುಮ್ಮನೆ ಕೂತಿರಿ. ಬೋರಾದಾಗ ತರಕಾರಿ ಸಿಪ್ಪೆ ತೆಗೆಯುತ್ತಿರಿ.’ ಅಂತ ಹೇಳೋಣ ಅನ್ನಿಸಿತ್ತು. ಈಗ ನೋಡಿದ್ರೆ ಅವರು ಊರಿಗೆ ಹೋಗಿ ಬಿಟ್ಟಿದ್ದಾರೆ. ಇನ್ನು ಅವರು ಬರುವವರೆಗೂ ನಾನು ಕಾಯಲೇಬೇಕು…