ಜೋರಿದೆ ಅರಾಜಕತೆ, ಹಣದುಬ್ಬರದ ರಾಜ್ಯಭಾರ!

ಭಾರತದ ನೆರೆದೇಶ ಹಾಗು ಸಾಂಪ್ರದಾಯಿಕ ವೈರಿ ಪಾಕಿಸ್ತಾನ ಈಗ ದಿಕ್ಕೆಟ್ಟು ದೀವಾಳಿ ಆಗಿದೆ. ಜಗತ್ತಿನೆಡೆಗೆ ಭಿಕ್ಷಾಪಾತ್ರೆ ಹಿಡಿದು ಕೈ ಚಾಚಿದೆ. ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿದು ಹಣದುಬ್ಬರ ಹೆಚ್ಚುತ್ತಲೇ ಇದೆ. ಜನರು ಹಸಿವಿನಿಂದ ತತ್ತರಿಸಿ ಹೋಗಿದ್ದಾರೆ. ಆಹಾರಕ್ಕಾಗಿ ಹಾದಿ ಬೀದಿ ರಂಪಾಟ ಹೊಡೆದಾಟವನ್ನೇ ನಡೆಸುವಷ್ಟು ಜನರು ಉದ್ವಿಗ್ನಗೊಂಡಿದ್ದಾರೆ. 50 ವರ್ಷಗಳಲ್ಲಿಯೇ ಕಂಡುಕೇಳರಿಯದ ಚಿಂತಾಜನಕ ಸ್ಥಿತಿಗೆ ಬಂದು ತಲುಪಿದೆ ಪಾಕಿಸ್ತಾನ್. 75 ವರ್ಷಗಳಲ್ಲಿ ವಿಭಜನೆ ಆದಾಗಿನಿಂದಲೇ ಇದ್ದ ಸಂಪತ್ತನ್ನೆಲ್ಲಾ ಅಭಿವೃದ್ಧಿಗೆ ಹೂಡುವ ಬದಲು ಭಯೋತ್ಪಾದನೆಯನ್ನು ಬೆಳೆಸಿದ ಪಾಕ್ ಅಳಿವಿನಂಚಿಕೆ ಈಗ ಬಂದು ತಲುಪಿರುವುದು ಆಶ್ಚರ್ಯವೇನಲ್ಲ.

ಪಾಕಿಸ್ತಾನದ ದುರ್ಗತಿಗೆ ಹಲವಾರು ವಿಚಾರಗಳು ಕಾರಣವಾಗಿವೆ. ರಾಜಕೀಯ, ಆರ್ಥಿಕ ಹಾಗು ಮುಗ್ಗಟ್ಟುದುರಂತಗಳೇ ಇಂದು ಆ ದೇಶಕ್ಕೆ ಈ ಪರಿಸ್ಥಿತಿ ತಲುಪಲು ಪ್ರಮುಖ ಕಾರಣಗಳಾಗಿದೆ.

ಈಗ ಪಾಕಿಸ್ತಾನದ ತುಂಬಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೈಗೆಟುಗದ ದರ ತಲುಪಿ ಜನ ಕಂಗಾಲಾಗಿದ್ದಾರೆ. ಜನರು ಹೊಟ್ಟೆಗೆ ಹಿಟ್ಟಿರದೆ ಆಹಾರಕ್ಕಾಗಿ ಅಂಗಲಾಚುವ ದೈನೀಯತೆ ಎದುರಾಗಿದೆ. ಗಿಲ್ಗಿಟ್, ಬಲ್ಟಿಸ್ತಾನ್ ಹಾಗು ಪಿ.ಒ.ಕೆ ಪ್ರಾಂತ್ಯದ ಜನರು ಭಾರತದೊಂದಿಗೆ ಬೆಸೆದುಕೊಳ್ಳಲು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಲಡಾಕ್ ನೊಂದಿಗೆ ತಮ್ಮ ಪ್ರದೇಶವನ್ನು ವಿಲೀನಗೊಳಿಸಲು ಹೋರಾಡುತ್ತಿದ್ದಾರೆ ಅಲ್ಲಿನ ಜನ.

Advertisement

ಇಲ್ಲಿ ತನಕ ಪಾಕಿಸ್ತಾನವು 29 ಪ್ರಧಾನಿಗಳ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದು, ಯಾವ ಪ್ರಧಾನಿಯೂ ಕೂಡ 5 ವರ್ಷಗಳ ಪೂರ್ಣಾವಧಿಯನ್ನು ಮುಗಿಸಿಲ್ಲ. 29 ಪ್ರಧಾನಿಗಳಲ್ಲಿ 18 ಪ್ರಧಾನಿಗಳನ್ನು ಸ್ಥಾನದಿಂದ ಭ್ರಷ್ಟಾಚಾರ ಅಥವಾ ಸೇನೆಯ ಪ್ರಾಬಲ್ಯದಿಂದಾಗಿ ಕಿತ್ತೊಗೆಯಲಾಗಿದೆ. ಹೀಗೆ ಸರಕಾರಗಳು ಬದಲಾಗುತ್ತಿದ್ದಂತೆ ಅದರ ಆರ್ಥಿಕ ನೀತಿಗಳೂ ಬದಲಾಗಿ ಆರ್ಥಿಕ ಮುಗ್ಗಟ್ಟುಗಳು ಸಂಭವಿಸಲು ಕಾರಣವಾಗುತ್ತವೆ. ಸರಕಾರಗಳ ಅಸ್ಥಿರತೆಯು ಪಾಕಿಸ್ಥಾನದಲ್ಲಿ ಆಗಿಂದಾಗ್ಗೆ ಆರ್ಥಿಕ ನೀತಿಗಳ ಬದಲಾವಣೆಗೆ ಕಾರಣವಾಗಿ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿ ಕುಸಿತಕ್ಕೆ ನಿರಂತರ ಕಾರಣವಾಗಿವೆ.

ವಿಶ್ವ ಬ್ಯಾಂಕ್ ಪ್ರಕಾರ ಈ ವರ್ಷವೂ ಕೂಡ ಪಾಕಿಸ್ತಾನದ ಆರ್ಥಿಕತೆ 2% ಬೆಳೆದರೆ, 21%ನಷ್ಟು ಹಣದುಬ್ಬರ ಹೆಚ್ಚಾಗಲಿದೆ. ರಫ್ತು 30 ಬಿಲಿಯನ್ ಡಾಲರ್ ಗಳಷ್ಟು ಆದರೆ ಆಮದು 90 ಬಿಲಿಯನ್ನಷ್ಟು ಇದೆ. ಈ ಕಾರಣಕ್ಕೆ ವಿದೇಶಿ ವಿನಿಮಯದಲ್ಲಿ ಕೂಡ ಅಸಮತೋಲನವಿದೆ.

ಪಾಕಿಸ್ತಾನದಲ್ಲಿ ಮೇಲಿಂದ ಮೇಲೆ ನಡೆದ ಹೀಟ್ ವೇವ್, ಬರ ಪರಿಸ್ಥಿತಿ ಹಾಗು ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ತೀವ್ರ ಹೊಡೆದ ನುಂಗಲಾಗದನಷ್ಟವನ್ನು ಉಂಟು ಮಾಡಿದವು. ಪಾಕಿಸ್ತಾನದ 81 ಜಿಲ್ಲೆಗಳಲ್ಲಿ ತೀವ್ರವಾಗಿ ಬಾಧಿಸಿದ ಪ್ರವಾಹ 78,000 ಚದರ ಕಿಲೋ ಮೀ ಕೃಷಿ ಭೂಮಿಯನ್ನು ಜಲಾವೃತಗೊಳಿಸಿ ಬೆಳೆ ನಷ್ಟ ಅತೀವವಾಯಿತು. ದೇಶದ ಸುಮಾರು 80%  ಬೆಳೆಯು ನಾಶವಾಗಿ ಬಿಟ್ಟಿತು.

ಪರಿಸ್ಥಿತಿಗಳು ಇಷ್ಟೇ ಹೀನಾಯವಾಗಿ ಇದ್ದು, ಯಾವ ದೇಶಗಳೂ ಪಾಕಿಸ್ತಾನಕ್ಕೆ ನೆರವಿನ ಹಸ್ತ ನೀಡದೆ ಹೋದರೆ ಪಾಕಿಸ್ತಾನ ಏನಾಗುಗ್ತದೋ ಆ ದೇವರೇ ಬಲ್ಲ!