MAD HONEY ಒಂದು ವಿಶಿಷ್ಟವಾದ ಮತ್ತು ಅಪರೂಪದ ಜೇನುತುಪ್ಪ, ಇದು ಗ್ರ್ಯಾಯೊನೊ ಎಂಬ ಒಂದು ರೀತಿಯ ವಿಷ ಪದಾರ್ಥ ಹೊಂದಿರುತ್ತದೆ. ಇದರ ಸೇವನೆ ಅತಿಯಾದರೆ ಆಪತ್ತು ಕೂಡ ಒದಗಬಹುದು. ಈ ಜೇನುತುಪ್ಪವು ರೋಡೋಡೆಂಡ್ರಾನ್ ಎಂಬ ವಿರಳ ಹೂವಿನ ಮಕರಂದದಿಂದ ಬರುವ ಸಂಯುಕ್ತವಾಗಿದೆ.

ಈ ಜೇನುತುಪ್ಪವನ್ನು ಪ್ರಾಥಮಿಕವಾಗಿ ನೇಪಾಳ ಮತ್ತು ಟರ್ಕಿ ದೇಶಗಳ ಪರ್ವತ ಪ್ರದೇಶಗಳಲ್ಲಿ ದೈತ್ಯ ಹಿಮಾಲಯನ್ ಜೇನುಹುಳು,ಅಪಿಸ್ ಡೋರ್ಸಾಟಾ ಲಬೋರಿಯೋಸಾ ಎಂಬ ಜಾತಿಯ ಜೇನು ಹುಳಗಳು ಉತ್ಪಾದಿಸುತ್ತವೆ. ಇದರ ಬೇಟೆಗಾಗಿ ಗುರುಂಗ್ ಎಂಬ ನೇಪಾಳದ ಗುಡ್ಡ ಗಾಡಿನ ಅರೆ ಅಲೆಮಾರಿ ಬುಡಕಟ್ಟಿಗೆ ಸೇರಿದ ಜನರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಪಣಕ್ಕಿಟ್ಟು ಇಳಿಯುತ್ತಾರೆ.

‘MAD HONEY’ಯ ಬೇಟೆ ಗುರುಂಗ್ ಬುಡಕಟ್ಟಿನ ಜನರಿಗೆ ಕೇವಲ ಜೇನುತುಪ್ಪ ತೆಗೆಯುವ ಕ್ರಿಯೆ ಅಲ್ಲ ಬದಲಿಗೆ ಅದರೊಂದಿಗೆ ಅವರ ಸಂಸ್ಕೃತಿಕ ಬೇರುಗಳು ಬೆಸೆದುಕೊಂಡಿದೆ. ಈ ಜೇನುತುಪ್ಪದ ಬೇಟೆ ಆಡುವುದು ಅಕ್ಷರಶಃ ಸಾವಿನೊಂದಿಗೆ ಸರಸವಾಡಿದಂತೆ ಆದರೂ ಅದರ ಹಿಂದೆ ಹಲವಷ್ಟು ನಂಬಿಕೆಗಳು ಅಡಕವಾಗಿವೆ.

Ad:Prakruthi dhama Homestay

ಈ ಜೇನಿನ ಬೇಟೆ ಆಡುವುದು ಅವರ ಪಿತೃ ಪೂರ್ವಜರುಗಳಿಗೆ ಗೌರವ ನೀಡುವುದಕ್ಕೆ ಸಮವಾಗಿದೆ. ತಲೆ ತಲೆಮಾರುಗಳಿಂದ ಬಂದ ಈ ವಿರಳ ಕಾಡು ಜೇನಿನ ಬೇಟೆ ಸಂಸ್ಕೃತಿಯ ಪರಂಪರೆಯ ಭಾಗವಾಗಿ ರೂಢಿಯಾಗಿದೆ‌.

ಹಾಗೆ ಬೇಟೆಗೆ ಹೊರಡುವ ಮುನ್ನ ಗುರುಂಗ ಬುಡಕಟ್ಟಿನ ಜನ ಶ್ರದ್ಧಾಭಕ್ತಿಯಿಂದ ಪೂಜೆ, ಪುನಸ್ಕಾರ ಹಾಗು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಅರಣ್ಯದಲ್ಲಿನ ಅಗೋಚರ ಶಕ್ತಿಗೆ ನಮಿಸಿ, ಬಿಲಯನ್ನೂ ನೀಡಿ, ಆಶೀರ್ವಾದಕ್ಕೆ ಹಾಗು ರಕ್ಷಣೆಗೆ ವಂದಿಸುತ್ತಾರೆ.

ಈ ಕಾಡು ಜೇನಿನ ಬೇಟೆಯು ಅವರುಗಳನ್ನು ಆಧ್ಯಾತ್ಮಿಕ ಲೋಕಕ್ಕೆ ಹತ್ತಿರವಾಗಿಸುತ್ತದೆ. ಜೊತೆಗೆ ಆಧ್ಯಾತ್ಮಿಕ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಈ ಪ್ರಾರ್ಥನೆ ಹಾಗು ಪೂಜಾ ವಿಧಿ ವಿಧಾನವು ನೆರವಾಗುತ್ತದೆ ಎಂದು ಇವರುಗಳು ಬಲವಾಗಿ ನಂಬುತ್ತಾರೆ.

ಆ ಕಾಡು ಜೇನುಹುಳಗಳಿಗೂ ಯಾವುದೇ ಹಾನಿಯನ್ನು ಉಂಟು ಮಾಡದೆ ಪರಿಸರ ಹಾಗು ಅವುಗಳ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡೆ ಮಾಡಲಾಗುವ ಬೇಟೆ ಇವರಿಗಿರುವ ಪ್ರಾಕೃತಿಕ ಒಡನಾಟವನ್ನು ಎತ್ತಿ ತೋರಿಸುತ್ತದೆ.

Ad: Airtel Xstream Fiber

ಈ ಬೇಟೆಯ ಸಾಹಸವು ತಮ್ಮ ಸಮುದಾಯದ ಒಗ್ಗಟ್ಟನ್ನು ಹಾಗು ಸಾಮಾಜಿಕ ಬೆಸುಗೆಯನ್ನು ಬಿಗಿಯಾಗಿಸುತ್ತದೆ ಎಂದು ಕೂಡ ಅವರ ನಂಬಿಕೆ. ಈ ಜೇನುತುಪ್ಪದ ಬೇಟೆಯ ನಂತರ ತಮಗೆ ಬಳಕೆಗೆ ಬೇಕಾಗಿರುವಷ್ಟನ್ನು ಇಟ್ಟುಕೊಂಡು ಮಿಕ್ಕಿದ್ದನ್ನು ಮಾರುಕಟ್ಟೆಗೆ ಮಾರಿ ಕೊಂಚ ಆದಾಯವನ್ನು ಗಳಿಸುತ್ತಾರೆ. ಇದು ಅಲ್ಲಿನ ಸ್ಥಳೀಯ ಆರ್ಥಿಕತೆಗೂ ಗುಣಾತ್ಮಕ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.

Ad: Prakruthi Paradise Homestay

ಈ ಕಾಡು ಜೇನು ಹಿಮಾಲಯದ ಪ್ರದೇಶದ ಕಡಿದಾದ ಬೆಟ್ಟಗಳ ಅಂಚಿನ ಬಂಡೆಗೆ ಅಂಟಿಕೊಂಡಂತೆ ಕಟ್ಟುವ ಜೇನಿನ ಗೂಡುಗಳಿಂದ ಅತ್ಯಂತ ರಣರೋಚಕವಾಗಿ ತೆಗೆಯಲಾಗುತ್ತದೆ. 2,500 ಮೀಟರ್ ಎತ್ತರದಲ್ಲಿ ಈ ಜೇನಿನ ಲಭ್ಯತೆ ನಿರಂತರ ಪ್ರಯತ್ನದ ನಂತರವಷ್ಟೇ ಸಿಗುತ್ತದೆ.

ಹಿಮಾಲಯದ ದೂರದ ಮತ್ತು ಪ್ರಾಚೀನ ಪರಿಸರವು ಈ ಕಾಡು ಜೇನನ್ನು ಮಾಲಿನ್ಯಕಾರಕಗಳಿರದೆ, ಪರಿಶುದ್ಧವಾಗಿ ಇರಲು ಕಾರಣವಾಗಿರುತ್ತದೆ. ಸಾಂಪ್ರದಾಯಿಕ ಕೊಯ್ಲು ವಿಧಾನಗಳು ಜೇನುತುಪ್ಪದ ಶುದ್ಧತೆ ಹಾಗು ರುಚಿಯನ್ನು ಯಥಾ ಸ್ಥಿತಿಯಲ್ಲಿರಲು ಸಹಾಯ ಮಾಡುತ್ತದೆ.

ಈ ವಿಶಿಷ್ಟವಾದ ಗುಣಗಳಿರುವ ಜೇನುತುಪ್ಪವು ಔಷಧಿಯ ಅಂಶಗಳನ್ನು ಹೊಂದಿದ್ದು, ಅಧಿಕ ರಕ್ತದ ಒತ್ತಡ, ಮಧುಮೇಹ ಮತ್ತು ಸಂಧಿವಾತಕ್ಕೆ ಶಮನಕಾರಿ ಆಗಬಹುದು.‌ ಬಿದಿರಿನ ಏಣಿ, ದಪ್ಪನೆಯ ಧಿರಿಸು, ದಟ್ಟ ಹೊಗೆ ಹಾಕಿ ಹಿರಿಯರ ಮಾರ್ಗದರ್ಶನದೊಂದಿಗೆ ಅಗತ್ಯ ಉಪಕರಣಗಳೊಂದಿಗೆ ಗುಂಪಿನಲ್ಲಿ ಸರಿಯಾದ ಸಮಯ ನೋಡಿ ಬೇಟೆ ಮಾಡುತ್ತಾರೆ.

ಗುರುಂಗ್ ಸಮುದಾಯವನ್ನು ತಮು ಎಂದೂ ಕೂಡ ಕರೆಯುತ್ತಾರೆ. ನೇಪಾಳದ ಗಂದಕಿ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡು ಬರುವ ಇವರುಗಳು ಟಿಬೆಟ್ಟಿನಲ್ಲಿ ಬುದ್ಧಿಸಂ ಪಸರಿಸುವ ಮುನ್ನ ಕಾಲದಲ್ಲೇ ನೇಪಾಳಕ್ಕೆಂದು ವಲಸೆ ಬರುತ್ತಾರೆ.

Ad: Coorgology homestay

ಗುರುಂಗ್ ಸಮುದಾಯದ ಜನ ನೇಪಾಳಿ ಭಾಷೆ ಮಾತನಾಡುವ ಜನರಾಗಿದ್ದು, ಬೌದ್ಧ, ಹಿಂದೂ ಹಾಗು ಬಾನ್ ಎಂಬ ಪ್ರಾಚೀನ ಅನಿಮಿಸ್ಟಿಕ್ ಧರ್ಮಗಳನ್ನು ಪರಿಪಾಲನೆ ಮಾಡುತ್ತಾರೆ. ಟಗರು, ಕುರಿಗಳನ್ನು ಪಾಲನೆ ಮಾಡಿ ಕೂಡ ಜೀವನ ಸಾಗಿಸುತ್ತಾರೆ.

ಭಾರತದಲ್ಲಿ ಗುರುಂಗ್ ಜನಾಂಗ:

ಸ್ವಭಾವತಃ ಶೂರರು, ವೀರರು ಆಗಿರುವ ಗುರುಂಗ್ ಬುಡಕಟ್ಟು ಜನಾಂಗದ ಜನರು ಭಾರತದಲ್ಲೂ ಇದ್ದಾರೆ. ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟ್ ಅಲ್ಲಿ ವಿವಿಧ ಹುದ್ದೆಗಳಲ್ಲಿ ತಮ್ಮ ಅಪೂರ್ವ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಬಲಶಾಲಿ ತಾಕತ್ತು ಇರುವ ಇವರುಗಳು ಭಾರತೀಯ ರಾಜ್ಯಗಳಾದ ಸಿಖ್ಖಿಂ, ಪಶ್ಚಿಮ ಬಂಗಾಳ ಹಾಗು ಅಸ್ಸಾಂನಲ್ಲಿ ಈ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಇನ್ನುಳಿದ ಜನರು ಕೃಷಿ, ವ್ಯಾಪಾರ ವ್ಯವಹಾರದಲ್ಲಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ…

‘Mad Honey Hunting’ಗೆ ಎಂಟೆದೆ ಗುಂಡಿಗೆಯೇ ಬೇಕು. ಅದು ಗುರುಂಗ್ ಬುಡಕಟ್ಟು ಸಮುದಾಯದವರಲ್ಲಿ ಇರುವುದರಿಂದಲೇ ಅಷ್ಟರ ಮಟ್ಟಿಗೆ ಅವರು ಈ ಬಗ್ಗೆ ಜಗತ್ಪ್ರಸಿದ್ಧಿಯನ್ನು ಪಡೆದಿದ್ದಾರೆ…

ಪ್ರಪಾತದಿಂದ ಬೀಳುವ ಅಪಾಯ:

ಕಡಿದಾದ ಬೆಟ್ಟಗಳ ಬಂಡೆ ಅಂಚಿನ ಆಳಕ್ಕೂ ಕ್ಯಾರೆ ಎನ್ನದೆ ‘Mad honey’ಗಾಗಿ ಗುರುಂಗ್ ಜನರು ಮನೆಯಲ್ಲೇ ತಯಾರಿಸಿದ ಬಿದಿರಿನ ಏಣಿ ಹಾಗು ಹಗ್ಗವನ್ನು ಬಳಸುತ್ತಾರೆ. ಅದು ಕೆಲವೊಂದು ಸಲ ತುಂಡಾಗಿ ಬಿದ್ದು, ಪ್ರಾಣಾಪಾಯ ಆಗುತ್ತವೆ.

ಜೇನುಹುಳಗಳ ದಾಳಿ:

ದೈತ್ಯ ಹಿಮಾಲಯನ್ ಜೇನುಹುಳಗಳು ಸಾಮಾನ್ಯ ಜೇನುಹುಳಗಳಂತೆ ಇರುವುದಿಲ್ಲ. ಅವುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಹೊಗೆ ಹಾಕಿದರೂ,ದಪ್ಪನೆಯ ಧಿರಿಸು ತೊಟ್ಟರೂ, ಇತರೆ ರಕ್ಷಣಾ ಕ್ರಮಗಳನ್ನು ತೆಗೆದುಕೊಂಡರೂ ಕೆಲವೊಮ್ಮೆ ಎಲ್ಲವೂ ನಿಶ್ಪ್ರಯೋಜಕವಾಗಿ ಬಿಡುತ್ತದೆ. ದಾಳಿಯಿಂದ ಸಾವು ಕೂಡ ಸಂಭವಿಸುವುದನ್ನು ತಳ್ಳಿ ಹಾಕುವಂತಿಲ್ಲ.

ಅತಿಯಾದ ಪರಿಶ್ರಮದಿಂದ ಆರೋಗ್ಯ ಸಮಸ್ಯೆ:

ಬರಿಗಾಲಿನಲ್ಲೇ ಈ ಸಾಹಸಕ್ಕೆ ಹೊರಟು ಬಿಡುವ ಗುರುಂಗ್ ಜನ ಅತೀವ ಅವಿರತ ಶ್ರಮ ವಹಿಸಿ ಈ ಕಾಡು ಜೇನನ್ನು ತೆಗೆಯುತ್ತಾರೆ.‌ ಹಾಗಾಗಿ ಅತಿಯಾದ ಪರಿಶ್ರಮದಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ವಿಪರೀತ ಆಯಸ್ಸು, ನಿರ್ಜಲೀಕರಣ, ನಿಶಕ್ತಿ, ಭ್ರಮೆ ಇನ್ನೂ ಇತರೆ ವಿಚಿತ್ರ ಆರೋಗ್ಯ ಸಮಸ್ಯೆಗಳನ್ನು ತರಬಹುದು.

ಹವಾಮಾನ ಸಂಬಂಧಿತ ಅಪಘಾತಗಳು:

ಮಳೆ ಅಥವಾ ಬಿರುಸಾದ ಗಾಳಿಯಂತಹ ಹವಾಮಾನದಲ್ಲಿನ ಹಠಾತ್ ಬದಲಾವಣೆಗಳು ಈಗಾಗಲೇ ಖತರ್ನಾಕ್ ಕೆಲಸವನ್ನು ಇನ್ನಷ್ಟು ಅಪಾಯಕಾರಿಯಾಗಿಸಬಹುದು. ಜಾರುವಿಕೆ ಹಾಗು ಕಳಪೆ ಗೋಚರತೆಯೂ ಅಪಘಾತಗಳ ಅಪಾಯವನ್ನು ಹೆಚ್ಚಸಬಹುದು.

ಪ್ರತಿ ವರ್ಷವೂ ಗುರುಂಗ್ ಜನಾಂಗ ಈ ವಿಶಿಷ್ಠ ಜೇನಿನ ಬೇಟೆಯಲ್ಲಿ ಹಲವು ಜನರ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಆದರೂ ಶೌರ್ಯ, ಸಾಹಸ, ಶಕ್ತಿಗೆ ಹೆಸರಾದ ಗುರುಂಗ್ ಬುಡಕಟ್ಟು ಜನರು ಈ ಹಿಮಾಲಯನ್ ಕಾಡು ಜೇನಿನ ಬೇಟೆಗೆ ಎಂದೂ ಹಿಂದೇಟು ಹಾಕುವುದಿಲ್ಲ. ಅವರ ಜೀವನದ ಭಾಗವೇ ಆಗಿರುವ ಈ ಅಪಾಯಕಾರಿ ಸಾಹಸ ಅವರುಗಳಿಗೆ ಕರಗತವಾದ ಕಲೆ.