
ಮಡಿಕೇರಿಯ ಹೆಸರಾಂತ ಯೋಗ ಶಿಕ್ಷಕಿ ಶಿಲ್ಪ ರೈ ಅವರ ವಿಶೇಷ ಸಂದರ್ಶನ
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿಲ್ಪ ರೈ ಅವರ ನಿಜ ಹೆಸರು ಪ್ರತಿಭಾ ರೈ.
ಶಾಲಾ ಮಾಸ್ಟರ್ ಆಗಿದ್ದ ತಂದೆ ಜಗನ್ನಾಥ ಶೆಟ್ಟಿ ಹಾಗೂ ತಾಯಿ ಸರೋಜಿನಿ ಅವರು ಪ್ರೀತಿಯಿಂದ ಕರೆಯುತ್ತಿದ್ದ ಶಿಲ್ಪ ಹೆಸರಿನಿಂದಲೇ ಅವರೀಗ ಪ್ರಸಿದ್ಧರಾಗಿದ್ದಾರೆ.

ತನ್ನ ಎರಡನೇ ತರಗತಿಯಿಂದಲೇ ಸಾಹಿತ್ಯದೊಡನಾಟ ಇಟ್ಟುಕೊಂಡಿರುವ ಇವರು ಎಸ್ ಎಲ್ ಭೈರಪ್ಪ ಹಾಗೂ ತೇಜಸ್ವಿ ಅವರ ಅಪ್ಪಟ ಅಭಿಮಾನಿ.
ಭೈರಪ್ಪನವರ ‘ಗೃಹ ಭಂಗ’ ನನ್ನನ್ನು ಸಾಕಷ್ಟು ಪ್ರೇರೇಪಿಸಿದೆ ಎನ್ನುವ ಶಿಲ್ಪ, ದ್ವಿತೀಯ ಪಿಯುಸಿಗೆ ಓದನ್ನು ಕಡಿತಗೊಳಿಸಿ, ಬಿ ಆರ್ ರವೀಂದ್ರ ರೈ ಅವರನ್ನು ಮದುವೆ ಆಗಿ, ಮಡಿಕೇರಿಯಲ್ಲಿ ನೆಲೆಸಿ ಇದೀಗ ಸುಮಾರು 23 ವರ್ಷಗಳೇ ಕಳೆದಿದೆ.
ಮದುವೆ ಆಗಿ ಪತಿಯ ಸಹಕಾರದಿಂದ ಓದು ಮುಂದುವರೆಸಿದ ಶಿಲ್ಪ ಮನಃಶಾಸ್ತ್ರ ವಿಭಾಗದಲ್ಲಿ ಎಂ.ಎ ಪದವಿ ಹಾಗೂ ಯೋಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುತ್ತಾರೆ
ಮಗ ಎಂ.ಬಿ.ಬಿ.ಎಸ್ ಮುಗಿಸಿದ್ದು, ಈಗ ಡಾಕ್ಟರ್ ಆಕರ್ಶ್. ಮಗಳು ಅಗನ್ಯ ಇಂಜಿನಿಯರಿಂಗ್ ವಿದ್ಯಾರ್ಥಿನಿ.
ತನ್ನ ಇಪ್ಪಂತೆಂಟನೇ ವಯಸ್ಸಿನಲ್ಲಿ ಸಹಜ ಆರೋಗ್ಯ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಮಡಿಕೇರಿಯ ಬಾಲಭವನದ ಪತಂಜಲಿ ಯೋಗ ಶಿಕ್ಷಣ ಕೇಂದ್ರಕ್ಕೆ 21 ದಿನಗಳ ತರಬೇತಿಗೆ ಸೇರಿಕೊಂಡ ಶಿಲ್ಪ ಇದೀಗ ಪರಿಣಿತ ಯೋಗ ಶಿಕ್ಷಕಿ.

ತನ್ನ ಯೋಗ ಪಯಣದಲ್ಲಿ ಅನೇಕರಿಂದ ತರಬೇತಿ ಪಡೆದಿರುವ ಶಿಲ್ಪ ರೈ ಪತಂಜಲಿ ಯೋಗ ಶಿಕ್ಷಣ ಶಿಬಿರದ ತರಬೇತುದಾರ ರಾಮಸ್ವಾಮಿ ಅವರನ್ನು ತನ್ನ ಮೊದಲ ಯೋಗ ಗುರು ಅನ್ನುತ್ತಾರೆ. ಅಲ್ಲಿ ಸುದೀರ್ಘ ಕಾಲ ಹಲವರಿಂದ ಯೋಗ ಶಿಕ್ಷಣವನ್ನು ಪಡೆದ ಶಿಲ್ಪ, ಎರಡು ವರ್ಷಗಳ ಕಾಲ ಮಂಗಳೂರಿನಲ್ಲಿ ನೆಲೆಸುವ ಅನಿವಾರ್ಯತೆ ಎದುರಾದಾಗ ಮಂಗಳೂರಿನ ಆವಿಷ್ಕಾರ್ ಯೋಗ ತರಬೇತಿ ಕೇಂದ್ರಕ್ಕೆ ಸೇಪರ್ಡೆಯಾಗಿ, ಖ್ಯಾತ ಯೋಗ ತರಬೇತುದಾರ ಕುಶಾಲಪ್ಪ ಗೌಡ ಅವರಲ್ಲಿ ಮೂರುತಿಂಗಳ ‘ಯೋಗ ಶಿರೋಮಣಿ’ ಕೋರ್ಸ್ ನೊಂದಿಗೆ ಉನ್ನತ ಮಟ್ಟದ ತರಬೇತಿ ಪಡೆದುಕೊಳ್ಳುತ್ತಾರೆ.

ಮೊದಲಿಗೆ ಸಮಯ ಕಳೆಯುವ ಸಲುವಾಗಿ ಹಾಗೂ ಕಲಿಕೆಯ ನಿರಂತರತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾನು ವಾಸಿಸುತ್ತಿದ್ದ ಮಂಗಳೂರಿನ ಅಪಾರ್ಟ್ಮೆಂಟ್‌ನ ಗೃಹಿಣಿಯರಿಗೆ ಉಚಿತವಾಗಿ ಯೋಗ ತರಬೇತಿ ನೀಡಲು ಶುರುಮಾಡಿದ ಶಿಲ್ಪ, ನಂತರ ಮಂಗಳೂರಿನ ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ಶಿಬಿರಾರ್ಥಿಗಳಿಗೆ ತರಬೇತುದಾರಳಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದುಕೊಳ್ಳುತ್ತಾರೆ.
‘ಅಲ್ಲಿ ನಾನು ಎಂಟರಿಂದ ಎಂಭತ್ತು- ತೊಂಬತ್ತು ವರ್ಷಗಳವರೆಗಿನವರಿಗೆ ಏಕಕಾಲದಲ್ಲಿ ಅವರ ದೈಹಿಕ ಕ್ಷಮತೆಯನ್ನು, ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಹೇಗೆ ಯೋಗ ತರಬೇತಿ ನೀಡುವುದು ಎಂಬುದನ್ನು ಕಲಿತೆ’ ಎಂದು ಹೇಳುವ ಇವರು ಮಂಗಳೂರಿನಿಂದ ಮಡಿಕೇರಿಗೆ ಮರಳಿ, ಇದೀಗ ಮಡಿಕೇರಿಯ ಎಲ್ ಐ ಸಿ ರಸ್ತೆಯಲ್ಲಿ ‘ಪ್ರಣವ್’ ಯೋಗ ತರಬೇತಿ ಕೇಂದ್ರವನ್ನು ಸ್ವಂತವಾಗಿ ಪ್ರಾರಂಭಿಸಿ, ಸುಸಜ್ಜಿತ ಯೋಗ ಕೇಂದ್ರವನ್ನು ನಡೆಸುತ್ತಾ ಹಲವರಿಗೆ ಯೋಗ ಗುರು ಆಗಿದ್ದಾರೆ.
ನಮ್ಮ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಅವರು…

ಯೋಗ ದೇಹದೊಂದಿಗೆ ಉಸಿರಾಟದ ಏರಿಳಿತಕ್ಕೆ ಒತ್ತು ಕೊಟ್ಟು ಮಾಡುವ ಪ್ರಕ್ರಿಯೆ ಆಗಿದ್ದು, ಇದರಿಂದ ದೇಹ ಹಾಗೂ ಮನಸ್ಸು ಸದೃಢ ಹಾಗೂ ಆರೋಗ್ಯವಾಗುವುದರೊಂದಿಗೆ ಸಕಾರಾತ್ಮಕ ನೆಲೆಗಟ್ಟಿನತ್ತ ನಮ್ಮನ್ನು ಮುನ್ನಡೆಸಲು ಪೂರಕವಾಗುತ್ತದೆ ಅನ್ನುತ್ತಾರೆ.
‘ಯೋಗ ಒಂದು ನಿರಂತರ ಕಲಿಕೆಯಾಗಿದ್ದು, ಇಲ್ಲಿ ನಾನು ಸದಾ ಯೋಗದ ವಿದ್ಯಾರ್ಥಿ’ ಎಂದು ಹೇಳುವ ಶಿಲ್ಪ ‘ಪ್ರತಿ ಕ್ಷಣ ನಾನು ಹೊಸದನ್ನು ಕಲಿಯುತ್ತಾ ಕಲಿತದ್ದನ್ನು ಇತರರಿಗೆ ಹೇಳಿಕೊಡುವ ಆತ್ಮತೃಪ್ತಿ ಪಡೆಯುತ್ತಿದ್ದೇನೆ ನನ್ನ ಗುರಿ ಹಾಗೂ ಸಂತೋಷವನ್ನು ಇದರಲ್ಲಿ ಕಂಡುಕೊಂಡಿದ್ದೇನೆ’ ಎಂದು ಹೇಳುತ್ತಾರೆ.
ಹಲವು ಮಹಿಳೆಯರಿಗೆ ಪ್ರಸವ ನಂತರ ಹಾಗೂ ಹಾರ್ಮೋನ್ ವ್ಯತ್ಯೇಯದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಆಗುತ್ತಿದ್ದು, ಯೋಗ ಅವರಿಗೆ ಪರಿಹಾರ ಆಗುತ್ತದೆ ಎಂದು ತಾನು ಸ್ವ ಅನುಭವದಿಂದ ಕಂಡುಕೊಂಡಿರುವುದರಿಂದ ಹೆಚ್ಚು ಮಹಿಳೆಯರಿಗೆ ತನ್ನ ಯೋಗ ಕೇಂದ್ರದಲ್ಲಿ ತರಬೇತಿ ನೀಡಲು ಆದ್ಯತೆ ನೀಡುತ್ತೇನೆ ಜೊತೆಗೆ ತನ್ನ ಪತಿ ಉದ್ಯಮಿ ರವೀಂದ್ರ ರೈ ಹಾಗೂ ಹಲವು ಪುರುಷರೂ ತನ್ನ ಯೋಗ ತರಬೇತಿ ಕೇಂದ್ರದಲ್ಲಿ ದಿನನಿತ್ಯ ಯೋಗ ತರಬೇತಿ ಪಡೆಯುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ತಾನು ಮನಃಶಾಸ್ತ್ರದ ವಿದ್ಯಾರ್ಥಿಯೂ ಆಗಿರುವುದರಿಂದ ದೈಹಿಕ ಹಾಗೂ ಮಾನಸಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ತರಬೇತಿ ನೀಡುವುದಾಗಿ ಹೇಳುವ ಶಿಲ್ಪ.
ಯೋಗ ಜಾತಿ ಧರ್ಮ ಮತಗಳನ್ನೆಲ್ಲಾ ಮೀರಿದ್ದು, ಪ್ರಕೃತಿಯ ಭಾಗವಾಗಿರುವ ಮನುಷ್ಯನನ್ನು ಪ್ರಕೃತಿಯೊಡನೆ ಯೋಗ ಹೆಚ್ಚು ಬೆಸೆಯುವ ಕೆಲಸ ಮಾಡುತ್ತದೆ ಎಂದು ಧೃಡವಾಗಿ ನಂಬುತ್ತಾರೆ.
ವರ್ಷಕ್ಕೊಂದು ದಿನ ಯೋಗ ಮಾಡುವವರು ಹಾಗೂ ತಪ್ಪಾಗಿ ಯೋಗ ತರಬೇತಿ ಮಾಡುವವರು ಯೋಗ ಮಾಡದೇ ಇರುವುದು ಹೆಚ್ಚು ಒಳಿತು ಎಂದು ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಅವರು ತನ್ನ ಯೋಗ ಕೇಂದ್ರದ ಕುರಿತು ನಾನು ಎಲ್ಲೂ ಪ್ರಚಾರ ಮಾಡುವುದಿಲ್ಲ ಸ್ವ ಆಸಕ್ತಿಯಿಂದ ಯೋಗಕೇಂದ್ರಕ್ಕೆ ಹಲವರು ಆಕರ್ಷಿತರಾಗಿ ಆಗಮಿಸುತ್ತಿದ್ದು ನಿರಂತರತೆಯಿಂದ ಮಾತ್ರ ಯೋಗದಿಂದ ಏನಾದರೂ ನಮಗೆ ಲಾಭ ಆಗಿದೆಯೇ ಎಂದು ತಿಳಿಯಲು ಸಾಧ್ಯ, ಯಾವುದೇ ವಿಚಾರ ಆದರೂ ನಿರಂತರತೆ ಹಾಗೂ ತೀವ್ರವಾಗಿ ತೊಡಗಿಸಿಕೊಳ್ಳುವಿಕೆ ಮಾತ್ರ ಹೆಚ್ಚು ಪರಿಣಾಮಕಾರಿಯಾದ ಫಲಿತಾಂಶವನ್ನು, ಫಲವನ್ನು ನೀಡಲು ಸಾಧ್ಯ ಎಂದು ಶಿಲ್ಪ ಅವರು ಕಿವಿಮಾತು ಹೇಳುತ್ತಾರೆ.
ನಮ್ಮ ಆರೋಗ್ಯ ನಮ್ಮ ಕುಟುಂಬದ ಮೇಲೆ ನೇರ ಪರಿಣಾಮ ಬೀರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಅವರು ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿದ್ದರೆ ಮಾತ್ರ ಮನೆಯಲ್ಲಿ ನೆಮ್ಮದಿ ನೆಲೆಸಲು ಸಾಧ್ಯ ಹಾಗಾಗಿ ಆರೋಗ್ಯದ ಸಮತೋಲನಕ್ಕೆ ಯೋಗ ವ್ಯಾಯಾಮ, ನಡಿಗೆ, ಅತ್ಯಮೂಲ್ಯ ಮಾರ್ಗೋಪಾಯಗಳು ಎಂದು ಹೇಳುತ್ತಾರೆ.

ತಾನು ಯೋಗದಿಂದ, ಯೋಗ ತರಬೇತಿ ನೀಡುವುದರಿಂದ ಹಾಗೂ ನಿರಂತರ ಕಲಿಕೆಯಿಂದ ಆರೋಗ್ಯ, ನೆಮ್ಮದಿ ಹಾಗೂ ಆತ್ಮತೃಪ್ತಿಯನ್ನು ಸಾಧಿಸಿರುವ ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುವ ಶಿಲ್ಪ ಅವರು ತಾನು ಲಾಭದ ಉದ್ದೇಶಕ್ಕಾಗಿ ಈ ತರಬೇತಿ ನೀಡುತ್ತಿಲ್ಲ, ಆತ್ಮತೃಪ್ತಿ ಹಾಗೂ ಸಾಕಷ್ಟು ನಮಗೆ ನೀಡುವ, ನೀಡುತ್ತಿರುವ ಸಮಾಜಕ್ಕೆ ಏನಾದರೂ ಮರಳಿಸುವ ನಿಟ್ಟಿನಲ್ಲಿ ಇದನ್ನು ಸೇವಾರ್ಥಕವಾಗಿ ಮಾಡುತ್ತಿದ್ದೇನೆ ಅನ್ನುವ ಶಿಲ್ಪ ತನ್ನ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಸಾಕಷ್ಟು ಮಹಿಳೆಯರಿಗೆ ತೆರೆಮರೆಯಲ್ಲಿ ಉಚಿತವಾಗಿ ಯೋಗ ತರಬೇತಿ ನೀಡುತ್ತಾರೆ.
ಆನ್ಲೈನ್ ತರಬೇತಿಗಿಂತಲೂ ನೇರವಾಗಿ ತರಬೇತಿ ಪಡೆಯುವುದು ಉತ್ತಮ ಎಂದು ಅಭಿಪ್ರಾಯ ಪಡುವ ಇವರು ಈ ಆಧುನಿಕ ಹಾಗೂ ಒತ್ತಡದ ಯುಗದಲ್ಲಿ ಅನಿವಾರ್ಯವಾಗಿ ಕೆಲವು ತಾಸು ಆನ್ಲೈನ್ ಯೋಗ ತರಬೇತಿಯನ್ನೂ ನೀಡುತ್ತಾರೆ.
ದಿನಕ್ಕೆ ಐದುಗಂಟೆಗಳ ಕಾಲ ತಾನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಶಿಲ್ಪ ಅವರು ತರಬೇತಿ ನೀಡಲು ಸಾಕಷ್ಟು ಪೌಷ್ಠಿಕಾಂಶದ ಅಗತ್ಯ ತನಗಿದ್ದರೂ ಕೆಲವು ವರ್ಷಗಳಿಂದ ಶಾಖಾಹಾರಿಯಾಗಿ ಪೌಷ್ಠಿಕಾಂಶವನ್ನು ಬ್ಯಾಲನ್ಸ್ ಮಾಡುತ್ತಾರೆ.

“ಯಾಕೆ ಶಿಲ್ಪ ಅವರೇ.. ಯೋಗ ಹೇಳಿಕೊಡಲು ಪ್ರೊಟಿನ್ ಜಾಸ್ತಿ ಸಿಗುವ ನಾನ್ ವೆಜ್ ತಿಂದು ಶಕ್ತಿ ವೃದ್ಧಿಸಿಕೊಳ್ಳಬಹುದಲ್ಲಾ?” ಎಂದು ನಾನು ಕೇಳಿದರೆ ಸಸ್ಯಾಹಾರ ಏನೋ ಮನಸ್ಸಿಗೆ ನೆಮ್ಮದಿ ಕೊಡುತ್ತಿದೆ ರಂಜಿತ್ ಮೊದಲು ಸ್ವಲ್ಪ ನನಗೂ ಕಷ್ಟವಾಗುತ್ತಿತ್ತು. ಹಾಲು, ಬೆಣ್ಣೆ, ತುಪ್ಪ, ಗಿಣ್ಣು, ಪನ್ನೀರ್ ಇತ್ಯಾದಿಗಳೊಂದಿಗೆ ಮ್ಯಾನೇಜ್ ಮಾಡುತ್ತಿದ್ದೇನೆ ಎಂದು ಮುಗುಳ್ನಗುತ್ತಾರೆ.
