Take up one idea. Make that one idea your life- think of it, dream of it, live on that idea, every part of your body, be full of that idea, and just leave every other idea alone. This is the way to success.
                   -Swami Vivekananda

ಈ ಮೇಲಿನ ಸ್ವಾಮಿ ವಿವೇಕಾನಂದ ಅವರು ನುಡಿಗಳನ್ನು ಪಾಲಿಸುವುದು ತೀರಾ ಕಷ್ಟವೇ. ವ್ಯಾಮೋಹಗಳೇ ತುಂಬಿರುವ ಮನಸ್ಸಿನಲ್ಲಿ ಒಂದು ಗುರಿಗಾಗಿ ಕನಸು ಕಂಡು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜೀವನದ ಮತ್ತೆಲ್ಲ ವಿಷಯವನ್ನು ಬಿಟ್ಟು ಬಿಡುವುದು ಅಷ್ಟು ಸುಲಭವಲ್ಲ. ಅದು ತೀರಾ ಬೆರಳೆಣಿಕೆಯ ಜನರಿಗೆ ಮಾತ್ರ ಸಾಧ್ಯವಾಗುತ್ತದೆ.

ಟೆಲಿಗ್ರಾಂ ಮೊಬೈಲ್ ಆ್ಯಪಿನ ಸಿ.ಇ.ಒ ಪೌಲ್ ಡುರೋವ್ ಅವರು ಒದೊಮ್ಮೆ ಟಿವಿ ಚಾನಲ್  ಒಂದಕ್ಕೆ ಸಂದರ್ಶನ ನೀಡುವಾಗ, ‘ನಾನು ರಿಯಲ್ ಎಸ್ಟೇಟ್ ಆಸ್ತಿಗಳನ್ನಾಗಲಿ ಅಥವಾ ದುಬಾರಿ ಐಶಾರಾಮಿ ವಸ್ತುಗಳನ್ನು ಕೊಂಡುಕೊಳ್ಳಲು ಇಚ್ಛಿಸುವುದಿಲ್ಲ. ಆ ವಿಚಾರವನ್ನೇ ನಾನು ದೂರವಿಡುತ್ತೇನೆ.
ನಾನು ಆಸ್ತಿ ಅಥವಾ ಮನೆಯನ್ನು ಕೊಂಡುಕೊಂಡರೆ ಒಂದು ಭೌಗೋಳಿಕ ಜಾಗಕ್ಕೆ ಅಂಟಿಕೊಂಡಂತೆ ಆಗುತ್ತದೆ. ಮನುಷ್ಯ ಸ್ವಾತಂತ್ರ್ಯದೊಂದಿಗೆ ಸ್ವಚ್ಛಂದವಾಗಿರಬೇಕು.
ನಾನು ಒಂದು ದೊಡ್ಡ ಧ್ಯೇಯುದ್ದೇಶವನ್ನು ನಿಜವಾಗಿಸಲು ಹೊರಟಿದ್ದೇ‌ನೆ. ಆಸ್ತಿ ಅಥವಾ ಮನೆ ಮಾಡಲು ಹೋದರೆ ನಾನು ನನ್ನ ಗುರಿ ಸಾಧನೆಯ ಹಾದಿಯಲ್ಲಿ ವಿಚಲಿತನಾಗುತ್ತೇನೆ. ಟೆಲಿಗ್ರಾಂ ಆ್ಯಪ್ ಜಗತ್ತಿನ ಬಿಲಿಯನ್ ಗಟ್ಟಲೆ ಜನರು ಸಂವಹನಕ್ಕೆ ಬಳಸುವಂತೆ ಮಾಡಬೇಕು. ಅದಕ್ಕಾಗಿ ನಾನು ರಾತ್ರಿ ಹಗಲು ಎನ್ನದೆ ಶ್ರಮಿಸುತ್ತೇ‌ನೆ. ಇದೇ ನನ್ನ ಇಡೀ ಜೀವನದ ಉದ್ದೇಶವಾಗಿದೆ. ಇದನ್ನಲ್ಲದೆ ಬೇರೇನನ್ನೂ ನಾನು ಯೋಚಿಸಲು ಕೂಡ ಇಷ್ಟ ಪಡುವುದಿಲ್ಲ.’ ಎಂದು ತಮ್ಮ ವಿಭಿನ್ನವಾದ ದೃಷ್ಟಿಕೋನವನ್ನು ಬಿಚ್ಚಿಟ್ಟಿದ್ದರು. ಇದನ್ನು ಕೇಳಿ ಸ್ವತಃ ಸಂದರ್ಶಕನೇ ಅವಾಕ್ ಆಗಿದ್ದ.‌ 

ಈ ಮನುಷ್ಯನ ಈ ಮಾತುಗಳನ್ನು ಆಳವಾಗಿ ಯೋಚಿಸುವಾಗ ರಾಷ್ಟ್ರ ಕವಿ ಕುವೆಂಪು ಅವರು ಓ ನನ್ನ ಚೇತನ ಎಂಬ ಭಾವ ಗೀತೆಯಲ್ಲಿ ಬರೆದ ಸಾಲುಗಳು ನೆನಪಾಗುತ್ತದೆ.

‘ಎಲ್ಲಿಯೂ ನಿಲ್ಲದಿರು,
ಮನೆಯನೆಂದು ಕಟ್ಟದಿರು,
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು….
ಓ ನನ್ನ ಚೇತನ…ಆಗು ನೀ ಅನಿಕೇತನ