ಬೆಂಗಳೂರು: ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಆರೋಪ ಸಂಬಂಧ ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ಎಲ್ಲ ತನಿಖಾ ಪ್ರಕ್ರಿಯೆ ರದ್ದು ಕೋರಿ ಪ್ರದೀಪ್‌ ಈಶ್ವರ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, ”ಅರ್ಜಿದಾರರ ವಿರುದ್ಧದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದದ್ದು. ಹೀಗಾಗಿ, ಪ್ರಕರಣ ರದ್ದುಗೊಳಿಸಬೇಕು,” ಎಂದು ಮನವಿ ಮಾಡಿದರು. ಅದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ನ.15 ಕ್ಕೆ ಮುಂದೂಡಿತು.

ಶಾಸಕ ಪ್ರದೀಪ ಈಶ್ವರ್‌ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರದೀಪ್‌ ಈಶ್ವರ್‌ ವಿರುದ್ಧ ಪ್ರತಾಪ್‌ ಸಿಂಹ ತಮ್ಮ ಮೇಲೆ ಏಕವಚನದಲ್ಲಿ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಆ ಪ್ರಕರಣ ರದ್ದು ಕೋರಿ ಶಾಸಕ ಪ್ರದೀಪ ಈಶ್ವರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.