ಸಂತೆ ಸುಂಕ ಎತ್ತುವಳಿ ಟೆಂಡರ್ ದಿನಾಂಕ ನಿಗದಿ
ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಾದ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ, ಕೂಡುಮಂಗಳೂರು ಗ್ರಾ.ಪಂ ನ ೨೦೨೩-೨೪ ನೇ ಸಾಲಿನ ಆಯವ್ಯಯನ್ನು ಮಂಡಿಸಲಾಯಿತು.
೨೦೨೩-೨೪ ನೇ ಸಾಲಿನ ಆಯವ್ಯಯವನ್ನು ಪಿಡಿಓ ಸಂತೋಷ್ ಅವರು ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಯಿತು. ಸಭೆಯ ಪ್ರಾರಂಭದಲ್ಲಿ ಎಂದಿನಂತೆ ಹಿಂದಿನ ತಿಂಗಳ ಜಮಾ ಖರ್ಚನ್ನು ಹಾಗೂ ನಡಾವಳಿಯನ್ನು ಅನುಮೋದಿಸಲಾಯಿತು.
ಬೇಸಿಗೆ ಪ್ರಾರಂಭವಾದ ಹಿನ್ನಲೆ ಕುಡಿಯುವ ನೀರಿನ ಸಮಸ್ಯೆಯುಂಟಾಗಬಹುದು. ಆದ್ದರಿಂದ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು. ಅಲ್ಲದೇ ಜಲ್ ಜೀವನ್ ಮಿಷನ್ ಯೋಜನೆಯು ಪ್ರಾರಂಭವಾಗಿ ವರ್ಷಗಳು ಕಳೆದಿದೆ. ಕಾಮಗಾರಿ ಅಪೂರ್ಣವಾಗಿದೆ. ಆದಷ್ಟು ಬೇಗನೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೆ.ಬಿ.ಶಂಶುದ್ಧೀನ್ ಅವರು ಒತ್ತಾಯಿಸಿದರು. ಇದಕ್ಕೆ ಚೈತ್ರ, ಕುಮಾರ್, ಗಿರೀಶ್ ಹಾಗೂ ಇತರರು ಧ್ವನಿಗೂಡಿಸಿದರು. ಜೆಜೆಎಂ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಸಂತೋಷ್, ಚೆಸ್ಕಾಂ ನ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಆದಷ್ಟು ಬೇಗನೇ ಪೂರ್ಣಗೊಳಿಸಲಾಗುವುದು ಎಂದು ಉತ್ತರಿಸಿದರು.
ವಿಜಯನಗರದಲ್ಲಿ ಜೆಜೆಎಂ ನಿಂದಾಗಿ ನೀರು ಪೋಲಾಗುತ್ತಿದ್ದು, ಕೂಡಲೇ ಸರಿಪಡಿಸುವಂತೆ ಸದಸ್ಯ ಗಿರೀಶ್ ಪ್ರಸ್ತಾಪಿಸಿದರು. ಪ್ರತೀ ಸಭೆಯಲ್ಲಿ ಜೆಜೆಎಂ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಕಾಮಗಾರಿ ಪೂರ್ಣಗೊಳ್ಳುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರ ಗಮನಕ್ಕೆ ತಂದು, ಬೇಗನೇ ಕಾಮಗಾರಿ ಪೂರ್ಣಗೊಳಿಸುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದು ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು.
ಕೂಡುಮಂಗಳೂರು ಗ್ರಾ.ಪಂ ನ ಸಂತೆ ಸುಂಕ ಎತ್ತುವಳಿ ಹಕ್ಕಿಗಾಗಿ ಟೆಂಡರ್ ಕರೆಯಲು ದಿನಾಂಕ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ವಿಧಾನಸಭಾ ಚುನಾವಣಾ ಹಿನ್ನಲೆ ನೀತಿಸಂಹಿತೆ ಜಾರಿಯಾಗುವ ಕಾರಣದಿಂದ ಇದೇ ತಿಂಗಳು ೧೬ ರ ಗುರುವಾರದಂದು ಟೆಂಡರ್ ಕರೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆ ಕೋಳಿ, ಆಡು, ಮೀನು ಮಾಂಸದ ಮಳಿಗೆಗೆ ನೇರವಾಗಿ ಪರವಾನಗಿ ನೀಡಲಾಗುವುದು. ಪರವಾನಗಿ ಪಡೆಯಲು ಮಿತಿಯಿರುವುದಿಲ್ಲ ಎಂದು ಪಿಡಿಓ ಸಂತೋಷ್ ಸಭೆಗೆ ಮಾಹಿತಿ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸ್ವಚ್ಚತೆ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನು ಹಲವು ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಸಬೂಬು ಹೇಳದೇ ಕೂಡಲೇ ಕ್ರಮ ಕೈಗೊಂಡು, ಊರಿನ ಸ್ವಚ್ಚತೆಗೆ ಕೈಜೋಡಿಸುವಂತೆ ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ಪೌರಕಾರ್ಮಿಕರ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಮೂವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಅವಕಾಶವಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಪಂಚಾಯಿತಿ ಸಿಬ್ಬಂದಿಗಳಾದ ರಂಗರವರಿಗೆ ೧ ಲಕ್ಷ ಹಾಗೂ ಶಂಕರರವರಿಗೆ ೧.೨ ಲಕ್ಷ ಗೌರವ ಉಪದನ ನೀಡಲು ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ಶೇ೨೫ ರ ಅನುದಾನದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಗುವುದು. ಹಾಗೆಯೇ ಶೇ೨೫% ರ ಅನುದಾನದಲ್ಲಿ ಸೋಲಾರ್ ವಿದ್ಯುತ್ ದೀಪವನ್ನು ಅಳವಡಿಸಲಾಗುವುದು. ಫಲಾನುಭವಿಗಳ ಮಾಹಿತಿ ನೀಡುವಂತೆ ಪಿಡಿಓ ತಿಳಿಸಿದರು.
ಬೀದಿನಾಯಿಗಳು ಮಗುವನ್ನು ಕಚ್ಚಿ ಪ್ರಾಣ ತೆಗೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು. ಆದ್ದರಿಂದ ಮಕ್ಕಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಾಯಿಗಳನ್ನು ಮನೆಗಳಲ್ಲಿ ಕಟ್ಟಿ ಹಾಕುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು. ನಂತರ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಮಾಡಲಾಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕುಶಾಲನಗರ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಪಂಚಾಯಿತಿ ಸದಸ್ಯರಿಗೆ ” ಆರೋಗ್ಯದ ಸಾರ್ವಜನಿಕರಿಗೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ”ವನ್ನು ನಡೆಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರು, ಬಿಲ್ ಕಲೆಕ್ಟರ್ ಅವಿನಾಶ್, ಸಿಬ್ಬಂದಿಗಳಾದ ಪವಿತ್ರ ಇದ್ದರು.