ಪ್ರೀತಿ ಪ್ರೇಮವೆಲ್ಲಾ ಪುಸ್ತಕದ ಬದನೆಕಾಯಿ ಎಂದು ನಿರ್ಧರಿಸಿ, ಅಂದ-ಚಂದ, ಐಶ್ವರ್ಯ, ಘನತೆಗೆ ಒತ್ತು ನೀಡಿ ಮದುವೆಗೆ ಕೊರಳೊಡ್ಡಿ ತಾಳಿ ಕಟ್ಟಿಸಿಕೊಂಡ ಅನಘ್ಯ೯ ಮಾನಸಿಕ ರೋಗಿಯೂ ಆಗಿದ್ದಳು. ಅವಳ ಆ ಮಾನಸಿಕ ವ್ಯಾಧಿ ತೀರಾ ಚಂಚಲತೆಗೆ ಕಾರಣವಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿ ಬಿಡುತ್ತಿತ್ತು.ಚಂಚಲತೆ ಪ್ರತಿ‌ನಿರ್ಧಾರಗಳಲ್ಲೂ ಅಸ್ಥಿರತೆ ಉಂಟು ಮಾಡುತ್ತಿತ್ತು. ಅಂತದ್ದೊಂದು ಮಾನಸಿಕ ಕಾಯಿಲೆ ಬರಲು ಅವಳ ತಂದೆ ತಾಯಿಯ ಪ್ರೀತಿಯಿಲ್ಲದೆ ಬೆಳೆದ ಬಾಲ್ಯ, ಯಾರ ಗಮನವನ್ನೂ ಸೆಳೆಯದೆ ತೀರಾ ನಿರ್ಲಕ್ಷಿತಳಾಗಿ ಮೂಲೆಗುಂಪಾಗಿದ್ದು, ಅಮ್ಮ ಬೇರೊಬ್ಬನನ್ನು ಮದುವೆ ಆಗಿದ್ದೆಲ್ಲವೂ ಕಾರಣಗಳಾದವು. ಕೊನೆಗೆ ಅದು ಅವಳ ವೈಯಕ್ತಿಕ ಜೀವನವನ್ನೇ ದುರ್ಬರತೆಯ ಕಡೆಗೆ ಕರೆದುಕೊಂಡು ಹೋಯಿತು.

ಕೇವಲ ಎಂಟು ನಿಮಿಷಗಳ ಓದು…ತಪ್ಪದೇ ಓದಿ!
ಪ್ರತಿ ಶನಿವಾರ ಹಾಗು ರವಿವಾರ

ಅನಘ್ಯ೯ ಸಮಾಜದ ಎದುರು ಅವಳಿಗಿಂತ ಬಹಳ ಚೆಂದವಿದ್ದ ಸ್ಫುರದ್ರೂಪಿ ಆಗರ್ಭ ಶ್ರೀಮಂತ ಅನುಚೇತ್ ಮದುವೆ ಆದಾಗ ಸಮಾಜವೇ ದಿಗ್ಭ್ರಮೆಗೊಂಡಿತ್ತು. ‘ಏನು ಇವಳ ಮೂತಿಗೆ ಅದ್ಹೇಗೆ ಇವನು ಬಿದ್ದ’ ಎಂದು ಒಳಗೊಳಗೇ ಮೂದಲಿಸಿತ್ತು ಜನತೆ.

‘ಅವನಿಗೆ ನಿಜಕ್ಕೂ ಕಣ್ಣು ದೃಷ್ಟಿ ಸರಿ ಇದೆಯಾ ಇಲ್ಲವೋ… ಹೋಗಿ ಹೋಗಿ ಇಂತಹ ಲಕ್ಷಣವಿರದ ಕಪ್ಪು ಬಣ್ಣದ ಕುಳ್ಳ ಹುಡುಗಿಯನ್ನು ಮದುವೆ ಆಗಿದ್ದಾನಲ್ಲ!’ ಎಂದು ಅವನ ಕಡೆಯ ಸಂಬಂಧಿಕರು, ಬಂಧುಗಳು ಒಳಗೊಳಗೇ ಮೆಲು ಧ್ವನಿಯಲ್ಲಿ ಉಸಿರಿಸಿದ್ದರು.‌‌

ಆಮೇಲೆ ಅವರೆಲ್ಲರೂ, ‘ನಮಗ್ಯಾಪ್ಪಾ ಬೇಕು ಅವರ ವಿಷ್ಯ. ಅವರ ಜೀವನ. ಜೀವನ ಪೂರ್ತಿ ಬದುಕಬೇಕಿರೋದು ಅವರೇ. ನಮಗೇನು ಅಲ್ವಾ’ ಎಂದು ಮಾತಾಡೋದನ್ನೆಲ್ಲಾ ಮಾತಾಡಿ ಸುಮ್ಮನಾಗಿತ್ತು.

ಅಸಲಿಗೆ ಅನುಚೇತ್ ಅವಳನ್ನು ಯಾಕಿಷ್ಟು ಇಷ್ಟ ಪಟ್ಟ…ಪ್ರೀತಿಸಿದ ಅನ್ನೋದು ಖುದ್ದು ಅವನಿಗೆ ಗೊತ್ತಿರಲಿಲ್ಲ‌. ಆದರೆ ಅವನಲ್ಲೊಂದು ಪೂವಾಗ್ರಹದ ಅಭಿಪ್ರಾಯವಿತ್ತು..‌.ಅದೇನೆಂದರೆ ನೋಡಲು ರೂಪವತಿಯೂ ಸೌಂದರ್ಯವತಿಯೂ ಆಗಿರದ ಹುಡುಗೀರು ಅತ್ಯಂತ ಸನ್ನಡತೆಯ ಮುಗ್ಧ ಹುಡುಗಿಯರಾಗಿರುತ್ತಾರೆ ಎಂಬುದು.

ಈ ಪೂರ್ವಾಗ್ರಹದ ಅಭಿಪ್ರಾಯ ಮೂಡಲು ಕಾರಣ ಅವನ ಹಳೆಯ ಭಗ್ನ ಪ್ರೇಮ. ಅತ್ಯಂತ ಸುರ ಸುಂದರಿ ಹುಡುಗಿಯನ್ನೇ ಪ್ರೀತಿಸಿದ್ದ ಅನುಚೇತ್ ಅವಳೆಂದರೆ ಸಾಯಲೂ ಕೂಡ ಹೇಸುತ್ತಿರಲಿಲ್ಲ. ಹಾಗೆ ಪ್ರೀತಿಸಿದ ಹುಡುಗಿಯ ಹೆಸರು ಸೆನೊರಿಟಾ. ಅವಳಿಗೆ ಮಾಡೆಲ್ ಆಗಲು ಪ್ರೋತ್ಸಾಹಿಸಿ, ಅವಳ ಪ್ರತಿ ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತ ಅನುಚೇತ್ ದುಡ್ಡನ್ನು ನೀರಿನಂತೆ ಖರ್ಚು ಮಾಡಿದ್ದ, ಆದರೆ ಅವಳು ಕೊನೆಗೆ ಖ್ಯಾತ ಫ್ಯಾಷನ್ ಪೊಟೋಗ್ರಾಫರ್ ಒಬ್ಬರನ್ನು ಮದುವೆ ಆಗಿ ರಾತ್ರೋ ರಾತ್ರಿ ಸದ್ದೇ ಮಾಡದೆ ವಿದೇಶಕ್ಕೆ ಹೋಗಿ ಬಿಟ್ಟಳು. ಆಗ ತಾನೇ ಕಾನೂನು ಪದವಿಯ ಕೊನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅನುಚೇತ್ ತಂದೆಯ ಅಕಾಲಿಕ ಮರಣದ ಬಳಿಕ ಬ್ಯುಸಿನೆಸ್ ಕೂಡ ನೋಡಿಕೊಳ್ಳುತ್ತಿದ್ದರಿಂದ ಅವಳಿಗಾಗಿ ನೀರಿನಂತೆ ಖರ್ಚು ಮಾಡಿದ್ದ ಹಣವೆಲ್ಲದರ ಋಣದ ಭಾರವನ್ನೂ ಕೂಡ ಕೊಂಚವೂ ಯೋಚಿಸದೆ ವಂಚಿಸಿ ಸೆನೊರಿಟಾ ವಿದೇಶದಲ್ಲಿ ಐಶಾರಾಮಿಯಾಗಿ ಬದುಕಲು ಹೋಗಿ ಬಿಟ್ಟಿದ್ದಳು‌. ಈ ಆಘಾತ ಅವನಲ್ಲಿ ಸುಂದರವಿರುವವರೆಲ್ಲ ಸಜ್ಜನರಲ್ಲ…ಕುರೂಪವಿರುವವರು ಎಲ್ಲರೂ ಸಜ್ಜನರು ಎಂಬ ಪೂರ್ವಾಗ್ರಹದ ಅಭಿಪ್ರಾಯವನ್ನು ಬಲವಾಗಿ ಮೂಡಿಸಿತ್ತು. ಅಲ್ಲಿಂದಾಚೆಗೆ ಅವನು ಯಾರೇ ಸುಂದರವಾಗಿರುವವರು ಕಂಡರೂ, ಅಂತರ ಕಾಯ್ದುಕೊಂಡು ಜಾಗರೂಕನಾಗಿರಲು ಆರಂಭಿಸಿದ್ದ. ನೋಡಲು ಏನೂ ಅಂದವಾಗಿಲ್ಲದವರಿಗೆ ಎಲ್ಲರಿಗೂ ಆತ್ಮೀಯವಾಗ ತೊಡಗಿದ್ದ. ಅವನ ಈ ನಡವಳಿಕೆ ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಹಾಗೆ ಹೊಸಬರ ಸ್ನೇಹ ಮಾಡಿಕೊಂಡಾಗ, ಅನಘ್ಯ೯ ಕೂಡ ಪರಿಚಯವಾಗುತ್ತಾಳೆ.

ಅನಘ್ಯ೯ಗೆ ನೆಟ್ಟನೆ ನಿಲುವು, ಸ್ಫುರದ್ರೂಪ, ಕಟ್ಟುಮಸ್ತಾದ ತಾಕತ್ತಿನ ಮೈಕಟ್ಟಿನ, ಖಡಕ್ ಮಾತಿನ, ಶ್ರೀಮಂತ ಮನೆತನದ ಮನುಷ್ಯ ಅನುಚೇತ್ ಎಂದೂ ಸೂಪರ್ ಸಿನಿಯರ್ ಎಂಬಂತೆ ನಡೆದುಕೊಳ್ಳಲಿಲ್ಲ.  ಕೆಲವೇ ದಿನಗಳಲ್ಲಿ ಇವನೇ ನನ್ನವನು ಎಂದು ಅವಳು ನಿರ್ಧರಿಸಿ ಬಿಡುವಷ್ಟು ಆಪ್ತನಾದ.

ಇಬ್ಬರೂ ಕಾಲೇಜಿಗೆ ಬಂಕ್ ಮಾಡಿ ಅವನ ಕಾರಿನಲ್ಲಿ ಊರಿನ ಸುತ್ತ-ಮುತ್ತ‌, ಸಂಧಿ-ಗೊಂದಿಗಳನ್ನೆಲ್ಲಾ ಸುತ್ತಿದರು. ಹಾಗೇ ವಿವಾಹ ಪೂರ್ವ ದೈಹಿಕ ಸಂಪರ್ಕವನ್ನೂ ಇಟ್ಟುಕೊಂಡರು. ಈ ವಿಚಾರದಲ್ಲಿ ಸ್ವಲ್ಪ ಅನಘ್ಯ೯ಳ ತಕರಾರುಗಳು ಕಿಂಚಿತ್ತೂ ಇರಲಿಲ್ಲ. ಮತ್ತು ಅವಳೇ ಅವನಿಗಿಂತ ಅದಕ್ಕಾಗಿ ಪ್ರತಿ ಬಾರಿ ಹವಣಿಸುತ್ತಿದ್ದಳು. ಇವನು ತಾರಕ್ಕಕ್ಕೇರಿ, ತೊಯ್ದು ತೊಪ್ಪೆಯಾಗಿ ಕ್ಷೀಣವಾದ ಮೇಲೂ ಅವಳು ಬೆಂಬಿದ್ದು ಅವನನ್ನು ಪೀಡಿಸುತ್ತಿದ್ದಳು. ನಂತರ ಸ್ವಲ್ಪವೇ ಹೊತ್ತಿಗೆ ಅವನಿನ್ನೇನು ಕೆರಳಿದ ಎನ್ನುವ ಹೊತ್ತಿಗೆ ಅಪರೀಚಿತನಂತ ಅವನನ್ನು ದೂರಕ್ಕೆ ತಳ್ಳಿ ಸಂಬಂಧವೇ ಇರದಂತೆ ಮಂಚದ ಅಂಚು  ಸೇರುತ್ತಿದ್ದಳು‌. ಹೀಗೆ ವಿವಾಹ ಪೂರ್ವದಲ್ಲೇ ಈ ರೀತಿ ಇದ್ದ ಅವರ ಸಂಬಂಧ ಕೊನೆಗೆ ಮದುವೆ ಹಂತವನ್ನು ದಾಟಿ ಕಾಲೇಜು ಜೀವನವೂ ಮುಗಿದು ಸಂಸಾರಕ್ಕೆ ಬಂದು ತಲುಪಿತು. ಅಲ್ಲಿಂದ ಶುರು ಆಯ್ತು ಸಮಸ್ಯೆಗಳ ಮಹಾಪೂರ. ಅನುಚೇತ್  ಅಮ್ಮನಿಗೆ ಸೊಸೆಯೊಂದಿಗೆ ಬಿಲ್ ಕುಲ್ ಹೊಂದಾಣಿಕೆ ಆಗುತ್ತಿರಲಿಲ್ಲ. ಎಲ್ಲಾ ಕೆಲಸವನ್ನು ಸೊಸೆಗೇ ಮಾಡುವಂತೆ ತಾಕೀತು ಮಾಡುತ್ತಿದ್ದರು. ಎಲ್ಲಾ ನಿರ್ಧಾರಗಳನ್ನು ಮಗನಿಗೆ ಅಮ್ಮನೇ ಹೇಳುತ್ತಿದ್ದರು. ಯಾವ ವಿಚಾರದಲ್ಲೂ ಅನಘ್ಯ೯ಗೆ ಮಾನ್ಯತೆಯೇ ಇರಲಿಲ್ಲ. ಆಗೆಲ್ಲಾ ಕೇವಲ ದಿಲ್ ದಾರ್ ಆಗಿ ಹಣ ಖರ್ಚು ಮಾಡುತ್ತಿದ್ದ ಅನುಚೇತ್ ಅತಿಯಾದ ಆಸೆಬುರುಕತನವಿದ್ದ ಕೊಳ್ಳುಬಾಕ ಮನಸ್ಥಿತಿಯ ಅನಘ್ರ್ಯಗೆ ಏನು ಬೇಕೋ ಅದನ್ನೆಲ್ಲಾ ಅಡ್ಡ ಮಾತಾಡದೆ ಕೊಡಿಸಿ ಬಿಡುತ್ತಿದ್ದ. ಅಗೆಲ್ಲಾ
“ತಾನು ಬಾಲ್ಯದಿಂದ ಕಷ್ಟದಲ್ಲಿ ಬೆಳೆದಿದ್ದರಿಂದ ಪ್ರೀತಿಗಿಂತ ಮುಖ್ಯ ಹಣ. ಹಾಗಾಗಿ ನಾನು ಚಿಂತಾದ್ರಿಯನ್ನು ವಿವಾಹವಾಗುವ ಬದಲು ಅನುಚೇತ್ ನನ್ನು ಮದುವೆ ಆದರೆ ಚೆನ್ನಾಗಿರುತ್ತೇನೆ. ಹಣವೊಂದಿದ್ದರೆ, ಬೇರೆಲ್ಲವೂ ತಾನಾಗೆ ಇರುತ್ತೆ” ಎಂದು ನಿಧಾನವಾಗಿ ನಿರ್ಧರಿಸಿಯೇ ಬಿಟ್ಟಂತೆ ಇತ್ತು.

ಅನಘ್ಯ೯ ಬಾಲ್ಯದಿಂದಲೇ ಒಬ್ಬಂಟಿಯಾಗಿ ಬೆಳೆದಿದ್ದ ಹುಡುಗಿ. ಅದೂ ಕೂಡ ಅಪ್ಪ ಅಮ್ಮ ಇಬ್ಬರೂ ಜೀವಂತ ಇದ್ದಾಗಲೇ ಅನಾಥಾಶ್ರಮದಲ್ಲಿ ಇದ್ದುಕೊಂಡು ತನ್ನ ಶಾಲಾ ಶಿಕ್ಷಣದ ತನಕ ವಿದ್ಯಾಭ್ಯಾಸ ಪಡೆದವಳು. ಅದಕ್ಕೆ ಕಾರಣ ಅವಳು ಏಳನೇ ತರಗತಿಲಿ ಓದುತ್ತಿರುವಾಗಲೇ ಅಪ್ಪ ಅಮ್ಮನಿಗೆ ವಿಚ್ಛೇದನವಾಗಿತ್ತು. ಕೋರ್ಟು ಇದ್ದ ಒಬ್ಬಳೇ ಮಗಳು ತಾಯಿಗೆ ಸೇರಬೇಕು ಎಂಬ ತೀರ್ಪು ನೀಡಿತ್ತು. ಆದರೆ ತಾಯಿ ವಿಚ್ಛೇದನದ ಒಂದು ವರ್ಷದ ಬಳಿಕ ಒಬ್ಬ ಶ್ರೀಮಂತನನ್ನು ಮದುವೆ ಆದರು. ಆ ವ್ಯಕ್ತಿ ಹೆಸರು ರಂಗರಾಜ್ ಎಂದಾಗಿತ್ತು. ಕಟ್ಟಿಕೊಂಡ ವಿಚ್ಛೇದಿತ ಹೆಣ್ಣು ಹೇಗಿರುತ್ತಾಳೋ ಎಂಬ ಭಯ ರಂಗರಾಜ್ ಅವರಿಗೆ ಅಷ್ಟಾಗಿರಲಿಲ್ಲ. ಏಕೆಂದರೆ ಅವಳು ಎರಡನೇ ಹೆಂಡತಿ ಆಗಿದ್ದಳು‌. ಅಲ್ಲಿಂದಾಗೆ ಸಾಕು ಅಪ್ಪ ರಂಗರಾಜ್ ಅನಘ್ಯ೯ಳನ್ನು ಸ್ವಂತ ಮಗಳಿನಂತೆ ಓದಿಸಿದನಾದರೂ ಅಂತಹ ನೈಜ ಪ್ರೀತಿ ಏನೂ ಇರಲಿಲ್ಲ.

ಶಾಲಾ ಶಿಕ್ಷಣದ ನಂತರ ಸರಕಾರದ ಉಚಿತ ಹಾಸ್ಟೆಲ್ ಅಲ್ಲಿ ಇದ್ದುಕೊಂಡು ತಾಯಿ ಕಳಿಸಿಕೊಡುತ್ತಿದ್ದ ಹಣದಲ್ಲಿ ಖರ್ಚು ವೆಚ್ಚ ನೋಡಿಕೊಂಡು ಪದವಿ ಪೂರ್ವ ಶಿಕ್ಷಣದ ಸಮಯದಲ್ಲೇ ಪರಿಚಯವಾದವನು ಚಿಂತಾದ್ರಿ. ಜಗತ್ತಿನಲ್ಲಿ ಅವಳನ್ನು ಯಾರೂ ಪ್ರೀತಿಸದಷ್ಟು ಇಷ್ಟ ಪಡುತ್ತಿದ್ದ. ಪ್ರೀತಿ ಎಂದರೇನು ಎಂಬುದು ಅರ್ಥವಾಗಿದ್ದೇ ಅವಳಿಗೆ ಅವನಿಂದ‌. ಅವಳ ಪೂರ್ತಿ ಜೀವನದಲ್ಲಿ ಐದು ವರ್ಷದ ಕಾಲ ಅವರುಗಳು ಜೊತೆಗಿದ್ದ ಮಧುರ ಕ್ಷಣಗಳು ಎಂದೂ ಮರೆಯುವಂತವು ಆಗಿರಲಿಲ್ಲ. ಅಪ್ಪಿ ತಪ್ಪಿ ಅವಳೊಂದಿಗೆ ಅಸಭ್ಯವಾಗಿ ಒಮ್ಮೆಯೂ ನಡೆದುಕೊಂಡಿರಲಿಲ್ಲ.

ಹೀಗಿದ್ದಾಗ ಕೆಲವೊಮ್ಮೆ ಅನಘ್ಯ೯ ವಿಚಿತ್ರ ನಡವಳಿಕೆಗಳು ತೀರಾ ಭಯಾನಕವಾಗಿರುತ್ತಿದ್ದರಿಂದ ಅವಳ ಶಿಕ್ಷಕ ವೃಂದದವರು ಅವಳ ತಾಯಿಗೆ ವಿಚಾರ ತಿಳಿಸಿದ್ದರು. ಕೆಲವೊಮ್ಮೆ ನಡುಗುತ್ತಾ ಭಯದಲ್ಲಿ ಕ್ಲಾಸಿನ ಮೂಲೆಯಲ್ಲಿ ಪರಿವೇ ಇಲ್ಲದಂತೆ ಕಳಿತು ಬಿಡುತ್ತಿದ್ದಳು…ಗಾಜಿನ ಬಳೆಯೊಂದನ್ನು ಚೂರು‌ ಮಾಡಿ ಕೈತುಂಬಾ ಗಾಯ ಮಾಡಿಕೊಂಡು ಬಿಡುತ್ತಿದ್ದಳು ಒಮ್ಮೆಯಂತೂ   ಕಾಲೇಜಿನ ಎದುರಿಗಿದ್ದ ರೋಡಿನಲ್ಲಿ ಬರುತ್ತಿದ್ದ ಲಾರಿಗೆ ಬೇಕಂತಲೇ ಸಮೀಪಿಸುತ್ತಿದಂತೆ ಅಡ್ಡ ಬಂದು ಬಿಟ್ಟಿದ್ದಳು. ಆಗಲಂತೂ ಚಿಂತಾದ್ರಿ ಅವಳನ್ನು ತನ್ನ ಸಮಯಪ್ರಜ್ಞಾ ಮನಸ್ಥಿತಿಯಿಂದ ಅವನ ಪ್ರಾಣವನ್ನೂ ಒತ್ತೆ ಇಟ್ಟು ಅವಳನ್ನು ಈಚೆಗೆಳೆದು ಅವಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದ. ಕೇಳಿದ್ದಳು…”ಯಾಕೆ ಕಾಪಾಡಿದೆ? ನಾನ್ ಸತ್ತೋಗಿದ್ರೆ ಏನ್ ಮಾಡ್ತಿದ್ದೆ” ಮುಗುಳ್ನಗುತ್ತಾ ಅವನನ್ನು. ಅವನಂತೂ ಪತರ್ ಗುಟ್ಟಿ ಹೋಗಿದ್ದ. ಈ ಎಲ್ಲ ಕಾರಣದಿಂದ ಅವಳ ತಾಯಿ ಅವಳನ್ನು ಮನಶಾಸ್ತ್ರಜ್ಞರೊಬ್ಬರ ಬಳಿ ಕರೆದುಕೊಂಡು ಹೋದರು. ಅಲ್ಲಿ ತಿಳಿಯಿತು ಅವಳಿಗೆ border line personality disorder ಸಮಸ್ಯೆ ಇದೆ ಎಂಬುದು.

ಅದಕ್ಕೆ ಕಾರಣ ಪ್ರಮುಖವಾಗಿ ಅವಳ ಒಂಡಿತನ ಬಾಲ್ಯ, ಪ್ರೀತಿ ಮಮತೆ ಇಲ್ಲದೆ ಬೆಳೆದ ರೀತಿಯೇ ಆಗಿತ್ತು. ಯಾರದೇ ಕಾಳಜಿ, ಪ್ರೋತ್ಸಾಹ ಇಲ್ಲದೆ ಬೇನಾಮಿ ಆಗಿ ದಿನ ಕಳೆದಿದ್ದು, ಎಲ್ಲವೂ ಅವಳ ಈ ಸ್ಥಿತಿಗೆ ಕಾರಣವಾಗಿತ್ತು. ಅವಳ ತಾಯಿಗೆ ಹಾಗಂತ ಅವಳಿಗೆ ಚಿಕಿತ್ಸೆ ಕೊಡಿಸುವ ಸಮಯವಾಗಲಿ ತಾಳ್ಮೆಯಾಗಲಿ ಇರಲಿಲ್ಲ.” ನೋಡು ನಾನು ನಿಂಗೆ ಪ್ರತಿ ತಿಂಗಳು treatmentಗೆ ಬೇಕಾದ ಹಣ ಕಳಿಸ್ತೀನಿ ನೀನೆ ಅದನ್ನ ಬಂದು ತಗೋಬೇಕು. ನನಗೆ ಟೈಂ ಸಿಗಲ್ಲ ಮಗಳೇ” ಎಂದು ತಾಯಿ ತಲೆ ಸವರುವಾಗ ಕಣ್ಣೀರು ಬಂತಾದರು ಮುಖ ತೀರಾ ನಿರ್ಭಾವುಕವಾಗಿತ್ತು. ಅವಳು ಒಪ್ಪಿಕೊಂಡಳಾದರೂ, ತಾಯಿ ಅವಳ ಚಿಕಿತ್ಸೆಗೆ ಕಳಿಸಿದ್ದ ಹಣವನ್ನೂ ಕೂಡ ಬೇಕಾ ಬಿಟ್ಟಿ ವೆಚ್ಚ ಮಾಡಿ, ಆರೋಗ್ಯವನ್ನು ನಿರ್ಲಕ್ಷಿಸಿದ್ದಳು.

ಪದವಿ ನಂತರ ಕಾನೂನು ಪದವಿ ಪಡೆವಾಗ ಸಿಕ್ಕ ಅನುಚೇತ್ ಅವನ ಹಳೆ ಲವ್ ಅಫೇರ್ ಸೆನೋರಿಟಾ ಬಗ್ಗೆಯೂ ತಿಳಿಸಿದ್ದ. ಅದಕ್ಕೆ ಅಭ್ಯಂತರವೆತ್ತದೆ ಅವನನ್ನು ಅನಘ್ಯ ೯ ಮದುವೆಯಾಗಲು ಸಮ್ಮತಿಸಿದ್ದಳು. ಅಪ್ಪಿತಪ್ಪಿಯೂ ಅವಳು ಚಿಂತಾದ್ರಿಯ ವಿಷಯ ಎತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಅವಳು ನಿದ್ರಿಸಿದ್ದಾಗ, ಅವಳ ಮೊಬೈಲಿಗೆ ಕರೆ ಒಂದು ಬರುತ್ತಿತ್ತು. ಸೈಲೆಂಟ್ ಇದ್ದಿದ್ದರಿಂದ ಅದು ಸದ್ದು ಮಾಡದೆ ಬೆಳಕನ್ನು ಮಿಣುಕಿಸುತ್ತಿತ್ತು. ಕರೆ ತೆಗೆದ ಅನುಚೇತ್ ಮಾತನಾಡದೆ, ಕಿವಿಗಿಟ್ಟಿಕೊಂಡ ಮೊಬೈಲ್ ಅತ್ತಲಿನಿಂದ, ‘ಫೇಸ್ ಬುಕ್ ಅಲ್ಲಿ ಮ್ಯಾರೀಡ್ ಅಂತ ಹಾಕೊಂಡ್ಯಲ್ಲಾ…ಮದುವೆ ನಿಜವಾಗ್ಲೂ ಮಾಡ್ಕೊಂಡ್ಯಾ ಅನರ್ಘ್ಯ. ನನಗೇಕೆ ಮತ್ತೆ ಪ್ರೀತಿಸಿ ಮೋಸ ಮಾಡಿದೆ? ಎಲ್ಲ ಮರೆತೋಯ್ತಾ ನಿಂಗೆ…’ ಎಂದ ಚಿಂತಾದ್ರಿ ಪ್ರತಿಕ್ರಿಯೆ ಬರದಿದ್ದನ್ನು ಕರೆ ಕಟ್ ಮಾಡಿದ.

ವಾಟ್ಸಪ್ ಅಲ್ಲಿ ಚಾಟ್ ಮಾಡಲು ಮುಂದಾದ ಅನುಚೇತ್ ಅನಘ್ಯ೯ಳಂತೆಯೇ ಸಂದೇಶ ಕಳಿಸಲು ಶುರುವಿಟ್ಟ…

‘ಗಂಡ ಮಲಗಿದ್ದಾರೆ. ಕರೆ ಮಾಡಿದರೆ ಮಾತಾಡೋಕೆ ಆಗಲ್ಲ ಅದಿಕ್ಕೆ ವಾಟ್ಸ್ ಅಪ್ ಮಾಡು’ ಎಂದು ಕಳಿಸಿದ.

ಅದಕ್ಕೆ ಆಚೆಯಿಂದ…
‘ಅವನು ಮಲಗಿದ್ರೆ ಏನು ಸತ್ರೆ ಏನು…? ನನಗ್ಯಾಕೆ ಹೀಗೆ ವಂಚಿಸಿದೆ? ಅದನ್ನ ಮೊದಲು ಹೇಳು. ನನ್ನ ನಿನ್ನ ನಡುವೆ ಐದು ವರ್ಷದ ಪ್ರೀತಿಲಿ ಅದೆಷ್ಟು ಸಾವಿರ ನೆನಪುಗಳಿವೆ ಯಾವುದೂ ನೆನಪಿಲ್ವಾ?’  ಎಂದು ಇತ್ತು ಅತ್ತಲಿನಿಂದ ಪ್ರತಿಕ್ರಿಯೆ.

ಇದು ಮರುದಿನದಿಂದ ಮನೆಯಲ್ಲಿ ದೊಡ್ಡ ಕಲಹವನ್ನೇ ಉಂಟು ಮಾಡಿತು‌. ಮಾತಿಗೆ ಮಾತು ಬೆಳೆಯಿತು. ‘ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ’ ಅನ್ನೋ ಗಾದೆಯನ್ನೇ ಸುಳ್ಳು ಮಾಡೋ ಅಷ್ಟು ದೊಡ್ಡದಾಯಿತು. ದಿನೇ ದಿನೇ ಕೋಪ ತಾಪ, ಮುನಿಸು-ಕ್ರೋಧ ಹೆಚ್ಚುತ್ತಲೇ ಅಶಾಂತಿ ಮನಗಳಲ್ಲಿ ಮನೆ ಮಾಡಿತು. ವಿಚ್ಛೇದನದ ಹಂತ ತಲುಪಿತು. ಗಂಡ ಅನುಚೇತ್ ಹೆಂಡತಿಗೆ ಆ ಹುಡುಗನೊಂದಿಗೂ ದೈಹಿಕ ಸಂಪರ್ಕ ಇದ್ದಿರಬಹುದು ಎಂದು ಸಂದೇಹಿಸಿದ ಮತ್ತು ಆ ಕುರಿತು ನಿಂದಿಸಿದ. ಈ ರೀತಿಯ ಸಂದೇಹ ಗಂಡನಿಗೆ ಬರಲು ಮುಖ್ಯ ಕಾರಣವೆಂದರೆ ಅವನಿಗೂ ಹೆಂಡತಿಗೂ ಇದ್ದ ವಿವಾಹ ಪೂರ್ವ ಲೈಂಗಿಕ ಸಂಪರ್ಕವೇ ಆಗಿತ್ತು.  ಅಲ್ಲಿ ತನಕ ಚಿಂತಾದ್ರಿ ಅವಳ ಸಂಪರ್ಕ ಮಾಡಲು ಪ್ರಯತ್ನಿಸುತ್ತಲೇ ಇದ್ದನಾದರೂ, ಅದಕ್ಕೆ ಅನಘ್ಯ೯ ಪ್ರತಿಕ್ರಿಯಿಸಿರಲಿಲ್ಲ…ಅನರ್ಘ್ಯ ಹಾಗು ಚಿಂತಾದ್ರಿ ಅವರುಗಳು ಪರಿಶುದ್ಧವಾಗಿ ಪ್ರೀತಿಸುತ್ತಿದ್ದರು. ಆ ರೀತಿಯ ಯಾವುದೇ ಕೆಟ್ಟ ಯೋಚನೆಗಳು ಸುಳಿದೂ ಕೂಡ ಇರಲಿಲ್ಲ.

ಕಾಲ ಕಳೆದಂತೆ ವಿಚ್ಛೇದನವೂ ಆಯಿತು. ನಂತರ ಯಾವುದೋ ಪಿಜಿಲಿ ಇದ್ದುಕೊಂಡು ದಿಕ್ಕಿಲ್ಲದವಳಂತೆ ಅನರ್ಥದ ಜೀವನ ನಡೆಸುತ್ತಿದ್ದಳು. ಹೀಗೆ ಅದೊಂದು ದಿನ ಬಿಡದೇ ಒಂಟಿತನ ಕಾಡಿ, ಜಗತ್ತು ತನ್ನ ಪಾಲಿಗೆ ಖಾಲಿ ಅನ್ನಿಸುವಾಗ ಚಿಂತಾದ್ರಿ ನೆನಪಾದ. ಫೇಸ್  ಬುಕ್ ತೆಗೆದು ಅವನ ಪ್ರೊಫೈಲ್ ಚೆಕ್ ಮಾಡಿದಳು. ಎಲ್ಲರೂ ಅದರಲ್ಲಿ RIP, ಓಂ ಶಾಂತಿ ಎಂದು ಅವನ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಂತಾಪ ಸೂಚಿಸಿದ್ದರು ಅವನ ವಾಲ್ ಅಲ್ಲಿ. ಅದೆಲ್ಲದರ ಮೇಲೆ ಇದ್ದ  ವೆಬ್ ಸೈಟ್ ಒಂದರ ಸುದ್ದಿಯಲ್ಲಿ “NH66ನಲ್ಲಿ ಕೊಡಗು ಮೂಲದ ಬೈಕ್ ಸವಾರ ಅಪಘಾತದಲ್ಲಿ ಮೃತ” ಎಂಬ ತಲೆ ಬರಹದ ಅಡಿ ಲಿಂಕ್ ಸಮೇತ ಇತ್ತು. ಅದರ ದಿನಾಂಕವೂ ಇತ್ತು.

ಅನಘ್ಯ೯ಳಿಗೆ ಚಿಂತಾದ್ರಿಯನ್ನು ಪ್ರೀತಿಸುತ್ತಿದ್ದಾಗಿನ ಆ ದಿನ ಚಿಂತಾದ್ರಿ ಹೇಳಿದ ಮಾತು ಮನದಲ್ಲಿ ಸುಸ್ಪಷ್ಟವಾಗಿ ಜ್ಞಾಪಕಕ್ಕೆ ಬಂತು.

ನಾನು ನಿನಗೆ ಕೈ ಕೊಟ್ಟು ಮೋಸ ಮಾಡಿದ್ರೆ ಏನ್ ಮಾಡ್ತೀಯೋ?!

‘ಏನ್ ಮಾಡೋದು…ನಿನ್ ಇಲ್ಲದ ಜೀವನದ ಕಲ್ಪನೆ ಕೂಡ ಮಾಡಿಲ್ಲ‌. ಹಾಗಂತ ಆತ್ಮಹತ್ಯೆ ಮಾಡಿಕೊಳ್ಳೋದು ಹೇಡಿತನ ಹೇಗೂ ನಾನೊಬ್ಬ ಸ್ಟಂಟ್ ಮಾಡುವ ಬೈಕ್ ರೈಡರ್. ನೀನ್ ಇಲ್ಲದ ಜೀವನ ಬೇಕಾಗಿಲ್ಲ ಅಂತ ಯಾವುದಾದ್ರು ಟ್ರಕ್ ಅಡಿ ಬೈಕ್ ನುಗ್ಗಿಸ್ತೀನಿ ಅಷ್ಟೇ… ಜನಕ್ಕೆ ಅದು ಅಪಘಾತ. ನನಗೆ ಮಾತ್ರ ಗೊತ್ತಿರುತ್ತೆ ಅದು ಆತ್ಮಹತ್ಯೆ. ನಿನಗೂ ಗೊತ್ತಾದ್ರೆ ವಿಷಯ ಅರ್ಥಮಾಡ್ಕೋ.’ ಎಂದಿದ್ದ.

Messenger ಅಲ್ಲಿ ಒಂದು unread message ಇತ್ತು. ಅದು ಅನಾಮಧೇಯ ಎಂಬ ಹೆಸರಿನ ಫೇಕ್ ಅಕೌಂಟ್ ಆಗಿತ್ತು. ಅದನ್ನು ಓದಲು ಮುಂದಾದಾಗ ಹೀಗಿತ್ತು.
“ಇನ್ನು ನನ್ನ ನಿನ್ನ ಭೇಟಿ ಸ್ವರ್ಗದಲ್ಲೇ. Because marriages are made in heaven ಇಂತಿ ನಿನ್ನೊಲುಮೆಯ- ಚಿಂತಾದ್ರಿ”.

ಅನಘ್ಯ೯ ಮ್ಲಾನಳಾಗಿ ಕುಸಿದು ಕುಳಿತು ಏದುಸಿರಾದಳು. ಬದುಕಿನ ಅನಿಶ್ಚಿತತೆಯ ಕರಾಳತೆ ಇನ್ನಿಲ್ಲದಂತೆ ಕಾಡಿತು. ಐದು ದಿನದಿಂದ ನಿದ್ರೆ ಇಲ್ಲವಾದ್ದರಿಂದ ನಿದ್ರೆ ಮಾತ್ರೆ ನುಂಗಿ ಕೃತಕವಾಗಿ ಮರಣಿಸಿದಳು…

ನಂತರದ ದಿನಗಳಲ್ಲಿ
ಚಿಂತಾದ್ರಿ ಸತ್ತಿದ್ದರೂ ಅವಳ ಅಂತರಾಳದಲ್ಲಿ ಬದುಕೇ ಇದ್ದ. ಆದರೆ ಅವಳು ಬದುಕಿದ್ದು ಸತ್ತಿದ್ದಳು…!