“ಮೊಬೈಲ್ ಬಂದ ನಂತರ ಈ ಹಾಳಾದ ಓದುಗರೆಲ್ಲರೂ ಮೊಬೈಲಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಹಾಗಾಗಿ ನಾನು ಕಥೆ ಬರೆಯೋದನ್ನೇ ನಿಲ್ಲಿಸಿ ಬಿಟ್ಟಿದ್ದೇನೆ” ಎಂದು ಅವರು ಗಂಭೀರವಾಗಿ ಅಂದರಾದರೂ ಅವರು ಹೇಳಿದ್ದನ್ನು ನಾನು ನಂಬಿರಬಹುದಾ? ಅನ್ನುವ ಸಣ್ಣ ಡೌಟಿನಿಂದಲೇ ನನ್ನೆಡೆಗೆ ತುದಿಗಣ್ಣಲ್ಲಿ ನೋಡಿದರು. ಅವರಿಗೆ ನೋವಾಗಬಾರದು ಅನ್ನುವಂತೆ ನಾನು ಅವರು ಹೇಳುವುದೆಲ್ಲವೂ ಸತ್ಯ ಅನ್ನುವಂತೆ ಮುಗ್ಧವಾಗಿ ಕುಳಿತು ಅವರನ್ನೇ ನೋಡುತ್ತಿದ್ದೆ. ನಾನು ಹಾಗೆ ಕುಳಿತಿರುವುದನ್ನು ನೋಡಿದ ಅವರು ಮರುಕ್ಷಣವೇ ಪಶ್ಚಾತ್ತಾಪದ ಪಾತಾಳಕ್ಕೆ ಇಳಿದು, ಅವರ ಆರು ಅಡಿ ಎತ್ತರ ದೈತ್ಯ ದೇಹವನ್ನು ಹಿಡಿಯಷ್ಟು ಸಣ್ಣದು ಮಾಡಿಕೊಂಡು, ನಂತರ ಅವರ ಪಶ್ಚಾತ್ತಾಪವನ್ನು ಕಡಿಮೆ ಮಾಡಿಕೊಳ್ಳುವಂತೆ ಸತ್ಯವನ್ನು ಹೇಳುತ್ತಾ ಹೋಗುತ್ತಾರೆ. ಇದನ್ನು ಅವರು ಆಗಾಗ್ಗೆ ಮಾಡುತ್ತಿರುತ್ತಾರೆ. ಇವರು ಈಗ ಓದುಗರೆಲ್ಲರೂ ಮೊಬೈಲ್ ಗೆ ಅಂಟಿಕೊಂಡಿರುವುದೇ ಇವರ ಕಥೆಗಳ ಅಧಃಪತನಕ್ಕೆ ಕಾರಣ ಎಂದು ನನ್ನ ಬಳಿ ಹೇಳಿರುವುದು ಅವರ ಅಸಮಾಧಾನವಾದರೂ ಅದು ಅಷ್ಟೇನೂ ಸತ್ಯವಲ್ಲ. ತೀವ್ರ ನಿಷ್ಠುರವಾದಿಯೂ, ಈ ಹಿಂದೆ ಕ್ರಾಂತಿಕಾರಿಯಾಗಿಯೂ ಪ್ರಬಲ ಕಥೆಗಳನ್ನು ಬರೆಯುತ್ತಿದ್ದ ಇವರನ್ನು ಹಲವು ವಿಮರ್ಶಕರು ಹೆದರಿಕೊಂಡು ಸರಿಯಾಗಿ ವಿಮರ್ಶೆ ಮಾಡದೇ ಹಾಗೇ ಬಿಟ್ಟಿದ್ದರು. ಕೆಲವರಂತೂ ಇವರ ಕಥೆಗಳಲ್ಲಿ ನ್ಯೂನ್ಯತೆ ಕಂಡುಬಂದರೂ “ಉಘೇ ಉಘೇ ಬಹುಪರಾಗ್” ಎಂದು ಹೊಗಳಿ ಇವರ ಕೈಯಿಂದ ತಪ್ಪಿಸಿಕೊಂಡಿದ್ದರು. ಅಸಲಿಗೆ ಇವರಿಗೆ ಅಂದಿನ ವಿಮರ್ಶಕರ ಪುಕ್ಕಲು ತನವೇ ಈಗ ದೊಡ್ಡ ಸಮಸ್ಯೆ ಆಗಿ ಹೋಗಿದೆ ಎಂದು ನನ್ನ ಬಳಿ ಆಗಾಗ್ಗೆ ನೊಂದುಕೊಳ್ಳುತ್ತಿದ್ದರು.
ಇವರ ಕಥೆಗಳ ಅಭಿಮಾನಿಯಾಗಿದ್ದ ನಾನು ಶ್ರೀಯುತರ ಕಥಾ ನೈಪುಣ್ಯಕ್ಕೆ ತೀವ್ರವಾಗಿ ಮನಸೋತಿದ್ದೆ. ಅವರ ಶೈಲಿ, ಅದೊಂದು ಅದ್ಭುತ. ಅವರ ಹಾಗೆ ನಾನೂ ಬರೆಯಬೇಕು ಎಂದು ತೀವ್ರವಾಗಿ ಅಂದುಕೊಂಡಿದ್ದೆ. ಕನ್ನಡದ ಪ್ರಸಿದ್ಧ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಇವರ ಹೆಸರಿನಲ್ಲಿ ಕಥೆ ಪ್ರಕಟವಾಗಿದೆ ಎಂದು ತಿಳಿದಾಗ ನಾನು ಗಡಿಬಿಡಿಯಲ್ಲಿ ಪತ್ರಿಕೆ ತಂದು ಇವರ ಕಥೆಯನ್ನೇ ಮೊದಲು ಓದಿದ್ದೆ. ಸುಮಾರು ಎರಡು ವರ್ಷಗಳ ಕಾಲ ನಾಪತ್ತೆ ಆಗಿದ್ದ ಇವರು, ಮತ್ತೆ ಕಥೆ ಬರೆದಿದ್ದರು. ಇವರ ಹಳೆಯ ಶೈಲಿಗೆ ಎರಡು ವರ್ಷಗಳ ಹಿಂದೆ ಮಾರು ಹೋಗಿದ್ದ ನನಗೆ ಇವರ ಈ ಕಥೆಯಲ್ಲಿ ಅಷ್ಟು ತೀವ್ರತರವಾದ ಸಂವೇದನೆ ಧಕ್ಕದೇ ಹೋಗಿ, ಬಹಳಾ ನಿರಾಸೆಯಾಗಿತ್ತು. ಶ್ರೀಯುತರ ಮೊಬೈಲ್ ನಂಬರ್ ಅವರ ಕಥೆಯೊಂದಿಗೆ ಅಲ್ಲೇ ಇದ್ದ ಕಾರಣ, ನಾನು ಮೊಬೈಲ್ ಕೈಗೆತ್ತಿಕೊಂಡು ಆ ನಂಬರ್ ವಾಟ್ಸ್ ಆ್ಯಪಿನಲ್ಲಿ ಇದೆಯೇ ಎಂದು ಪರಿಶೀಲಿಸಿ, ಹೂವಿಗೆ ದುಂಬಿಯೊಂದು ಮುತ್ತು ಕೊಡುವ ಫ್ರೊಫೈಲ್ ಇರುವ ಅವರ ವಾಟ್ಸ್ ಆ್ಯಪಿಗೆ ನಾನೊಂದು ಕಟುವಾದ ಅಭಿಪ್ರಾಯ ಬರೆದಿದ್ದೆ. “ಶ್ರೀಯುತರೇ…” ಎಂದು ಶುರು ಮಾಡಿ, “ನಿಮ್ಮ ಅಭಿಮಾನಿಯಾದ ನನಗೆ ನಿಮ್ಮ ಈ ಕಥೆ ತೀವ್ರ ನೋವನ್ನು ಉಂಟುಮಾಡಿದೆ. ನೀವು ನಿಮ್ಮ ಎಂದಿನ ಶೈಲಿಯಲ್ಲಿ ಬರೆದಿದ್ದೀರಿ ಆದರೆ ನಿಮ್ಮ ಈ ಕಥೆಯೂ ನಿಮ್ಮ ಆ ಕಥೆ ಮತ್ತು ಇನ್ನಿತರ ಕಥೆಗಳಿಂದ ಅಷ್ಟಿಷ್ಟು ಎತ್ತಿ, ಅಲ್ಲಿ ಇಲ್ಲಿ ಸಿಕ್ಕಿಸಿ, ಕಷ್ಟದಲ್ಲಿ ಬರೆದಂತೆ ಅನ್ನಿಸಿತು. ನೀವು ಹೀಗೆ ಬರೆದು ನಿಮ್ಮ ವರ್ಚಸ್ಸು ಹಾಳು ಮಾಡಿಕೊಳ್ಳದೇ ಬರೆಯದೇ ಇರುವುದು ಒಳಿತು” ಎಂದು ಹುಚ್ಚುಚ್ಚಾಗಿ ಬರೆದು ಏಕ್ ಧಮ್ ಕಳುಹಿಸಿ ಬಿಟ್ಟಿದ್ದೆ.
ಅವರು ಅದನ್ನು ಓದಿ ಅದರಿಂದ ಆಗಬಹುದಾದ ಅನಾಹುತವನ್ನು ನೆನೆದು, ಕಳುಹಿಸಿದ ಮರು ಕ್ಷಣವೇ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಬಿಟ್ಟಿದ್ದೆ. ಎರಡುಗಂಟೆ ಕಳೆದು ಬಹಳಾ ಭಯದಿಂದಲೇ ಮೊಬೈಲ್ ಕೈಗೆತ್ತಿಕೊಂಡು ಸ್ವಿಚ್ ಆನ್ ಮಾಡಿ ನೋಡಿದರೆ, ಅವರು ಆಚೆಯಿಂದ ಇಂಗ್ಲೀಷಿನಲ್ಲಿ ಕನ್ನಡವನ್ನು ನಾಲ್ಕು ಸಾಲು ಟೈಪಿಸಿ ಹೀಗೆ ಹಾಕಿದ್ದರು. ‘Preethiya Odhuga. nimage tumba Dhanyavadhagalu. neevu sariyagiye nanna katheyannu judge madidhira. nanage nimmannu nodabeku. Dayavittu call madi’ ನಾನು ಅವರ ಈ ಮೆಸೇಜ್ ನೋಡಿ ಹೆದರಿಕೊಂಡೆ ಕಾಲ್ ಮಾಡಿದ್ದೆ. ಅವರು ಉಪಾಯವಾಗಿ ಕರೆದು ಕಪಾಲಕ್ಕೆ ಹೊಡೆಯುವ ಪ್ಲಾನ್ ಏನಾದರೂ ಇದಾಗಿರಬಹುದಾ? ಅನ್ನುವ ದುಗುಡ ನನ್ನನ್ನು ಇನ್ನಷ್ಟು ಭಯಭೀತನನ್ನಾಗಿಸಿತ್ತು. ಆದರೆ ಅವರ ಧ್ವನಿಯನ್ನು ಫೋನಿನಲ್ಲಿ ಕೇಳಿ ನನಗೆ ಕೊಂಚ ನೆಮ್ಮದಿಯಾಗಿತ್ತು. ಹೀಗೆ ಮನೆಗೆ ಕರೆಯಿಸಿಕೊಂಡ ನನ್ನ ಅವರ ಗೆಳೆತನ ಹಲವರ ಹೊಟ್ಟೆ ಹುರಿಯುವಷ್ಟು ಹೆಚ್ಚಾಗಿತ್ತು.
ಶ್ರೀಯುತರು ಎಪ್ಪತ್ತು ವರ್ಷದ ವೃದ್ಧನಂತೆ ಕಂಡರೂ ಅವರು ತಮ್ಮ ವಯಸ್ಸನ್ನು ಯಾರಬಳಿಯೂ ಸರಿಯಾಗಿ ಹೇಳುವುದಿಲ್ಲ. ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪಡೆದ ‘ಹದಿಹರೆಯದ ಕನವರಿಕೆ’ ಕಥಾ ಸಂಕಲನ ಹೊರಗೆ ಬಂದಾಗ ಅವರಿಗೆ 55ವರ್ಷ ಆಗಿತ್ತಂತೆ. “ನನ್ನ ಸ್ಕೂಲಿನ ಸರ್ಟಿಫಿಕೇಟ್ ಸರಿಯಿಲ್ಲ ರಂಜಿತ್ ಆಗ ನನಗೆ ಅಷ್ಟೇನೂ ವಯಸ್ಸಾಗಿರಲಿಲ್ಲ” ಎಂದು ಅವರು ಸಾಹಿತ್ಯ ಅಕಾಡೆಮಿ ಬಂದ ಖುಷಿಗಿಂತಲೂ ಈ ನೋವು ದೊಡ್ಡದು ಅನ್ನುವಂತೆ ನನ್ನ ಬಳಿ ಹೇಳಿಕೊಂಡಿದ್ದರು.
“ನಿಮಗೆ ಇಷ್ಟು ವಯಸ್ಸಾದರೂ ನಿಮ್ಮ ಹಲ್ಲುಗಳು ಇಷ್ಟು ಗಟ್ಟಿ ಉಂಟಲ್ಲಾ ಹಿರಿಯರೇ ಅದು ಹೇಗೆ?” ಎಂದು ಕೇಳಿದರೇ “ನಾನು ನನ್ನ ಅಜ್ಜನಂತೆ, ಅವರ ಹಲ್ಲು ಮಾತ್ರ ಅಲ್ಲ ಮಾರಯ್ಯ, ತರಡು ಬೀಜವೂ ಗಟ್ಟಿ ಇತ್ತು. ಅವರಿಗೆ ಹತ್ತು ಮಕ್ಕಳಿದ್ದರು” ಎಂದು, “ಬಾಕಿ ಲೆಕ್ಕದಲ್ಲಿಲ್ಲಾ” ಎಂದು ಪುಸಕ್ಕನೆ ನಕ್ಕಿದ್ದರು. ಅವರು ಹಾಗೆ ನಗುವಾಗ ಅವರ ಹಲ್ಲಿನ ಸೆಟ್ ಅಲ್ಲಾಡಿದ್ದು ನನಗೆ ಕಾಣಿಸಿತ್ತು. “ಆದರೇ ನಿಮಗೆ ಮಕ್ಕಳೇ ಇಲ್ಲವಲ್ಲಾ” ಎಂದು ನಾನು ಕೇಳಿದ್ದಕ್ಕೆ, ನನ್ನನ್ನು ಕಿವಿಯ ಬಳಿ ಕರೆದು “ನನಗೆ ನಿನ್ನ ಅಪ್ಪನ ವಯಸ್ಸಿನ ಮಕ್ಕಳಿದ್ದಾರೆ. ಆದರೇ ಅವರು ಯಾರೂ ದಾಖಲೆಯಲ್ಲಿಲ್ಲ. ನಾನು ಯಾರನ್ನೂ ಕಟ್ಟಿಕೊಂಡಿಲ್ಲ” ಎಂದು ನನ್ನನ್ನು ಕಿಚಾಯಿಸಿ ಬೆನ್ನಿಗೆ ಗುದ್ದಿ ನಕ್ಕಿದ್ದರು.
“ಅಲ್ಲಾ ಹಿರಿಯರೇ ನಿಮ್ಮ ಕಥೆ ನೆಟ್ಟಗಿಲ್ಲ ಎಂದು ನಾನು ಬರೆದಾಗ ನಿಮಗೆ ಸಿಟ್ಟು ಬರಲಿಲ್ಲವೇ” ಎಂದು ಕೇಳಿದ್ದಕ್ಕೆ., “ನಿನ್ನ ವಿಮರ್ಶೆ ನೋಡಿ ನಿನ್ನದೂ ನನ್ನ ಹಾಗೆ ಗಟ್ಟಿ ಬೀಜ ಎಂದು ಖುಷಿ ಆಯ್ತು” ಎಂದು, ಅವರು ನನ್ನ ವಯಸ್ಸಿನಲ್ಲಿ ಇದ್ದಾಗಲೇ ಹೆಸರಾಂತ ಲೇಖಕರೊಬ್ಬರ ಕಾದಂಬರಿಯನ್ನು ಬಹಿರಂಗವಾಗಿ ಬದನೆಕಾಯಿಗೆ ಹೋಲಿಸಿ, ಅವರ ಅಭಿಮಾನಿಗಳ ಕೈಯಿಂದ ಕತ್ತಲೇಟೂ ತಿಂದ ಪ್ರಸಂಗವೊಂದನ್ನು ಹೇಳಿದ್ದರು. ಆದರೇ ಅವರು ಹಾಗೆ ಟೀಕಿಸಿದ ಕೃತಿ ಚೆನ್ನಾಗಿಯೇ ಇತ್ತಂತೆ. ಆ ದೊಡ್ಡ ಲೇಖಕನ ಕೊನೆಯ ಪ್ರೇಯಸಿಯನ್ನು ಇವರು ಲೈನ್ ಹೊಡೆಯುತ್ತಿದ್ದರಂತೆ. “ಅವಳನ್ನು ಇಂಪ್ರೆಸ್ ಮಾಡಲು ಹೋಗಿ, ಕತ್ತಲೆಯಲ್ಲಿ ಹೊಡೆತತಿಂದೆ ಮಾರಯ್ಯ” ಎಂದು ನನ್ನ ಹೊಟ್ಟೆಗೆ ತಿವಿದು ನಕ್ಕಿದ್ದರು. “ನಿಮಗೆ ಈಗಲೂ ಪ್ರೇಯಸಿಯರು ಇದ್ದಾರಾ?” ಎಂದೂ ನಾನು ಸಂಶಯದಲ್ಲಿ ಕೇಳಿದ್ದೆ. “ನೀನು ಸದರಕೊಟ್ಟರೆ ನನ್ನ ಅಷ್ಟೂ ಪ್ರೇಯಸಿಯರನ್ನೂ ಹಾರಿಸಿಕೊಂಡು ಹೋಗುವವನು ತೊಲಗು ಆಚೆ” ಎಂದು ಸಡನ್ ಆಗೇ ಸಿಟ್ಟುಮಾಡಿಕೊಂಡು ಅವರ ಬಂಗಲೇಯಂತಹಾ ಮನೆಯಿಂದ ಓಡಿಸಿಬಿಟ್ಟಿದ್ದರು. ಎರಡು ದಿನ ಕಳೆದು “ನಾನೇನೊ ಸಿಟ್ಟಲ್ಲಿ ಹೇಳಿದರೆ ನೀನು ಹೋದವನು, ಬರಲಿಕ್ಕೆ ರೋಗವಾ? ಬಾ ಗಡವಾ” ಎಂದು ಗದರಿ ಪುನಃ ಕರೆಯಿಸಿಕೊಂಡಿದ್ದರು.
ನಾನೂ ನಾಚಿಕೆ ಇಲ್ಲದವನಂತೆ ಹೋಗಿ ಅವರ ಮುಂದೆ ನಿಂತಿದ್ದೆ.
ಅವರು ಏನೂ ಆಗಿಲ್ಲ ಅನ್ನುವಂತೆ “ಇತ್ತೀಚೆಗೆ ನನ್ನ ಕಥೆ ಓದುವವರೇ ಇಲ್ಲ ಮಾರಯ್ಯ. ಒಂದು ಮಾಡೋಣ. ನೀನೊಂದು ಕಥೆ ಬರೀ, ನಾನೊಂದು ಕಥೆ ಬರೆಯುತ್ತೇನೆ. ನಾವಿಬ್ಬರೂ ಅದನ್ನು ಹೆಸರು ಬದಲಿಸಿಕೊಂಡು ‘ಈವಾಣಿ’ ಪತ್ರಿಕೆಗೆ ಕಳಿಸೋಣ. ಅದರ ಸಂಪಾದಕ ನನ್ನ ಫ್ರೆಂಡು. ಆ ಬಡ್ಡಿ ಮಗನಿಗೆ ಎರಡು ವರ್ಷ ಸಂಪಾದಕೀಯ ಬರೆದುಕೊಟ್ಟಿದ್ದೇ ನಾನು. ಅವನು ಹಾಕುತ್ತಾನೆ” ಎಂದು ಕಣ್ಣು ಹೊಡೆದಿದ್ದರು. ಅವರ ಮಾತಿನಂತೆ ನಾನು ಒಂದು ಕಥೆ ಬರೆದೆ. ಕಥೆಯ ಹೆಸರು ಏನು ಕೊಡುವುದು ಎಂದು ಕನ್ಫ್ಯೂಸ್ ಆಗಿ ಶ್ರೀಯುತರ ಬಳಿಗೇ ಹೋಗಿದ್ದೆ. ಅವರು ಪ್ರತಿಯನ್ನು ಕೈಗೆತ್ತಿಕೊಂಡು “ಇದನ್ನು ನಾನು ಮತ್ತೆ ಓದಿ, ಇದಕ್ಕೆ ಹೆಸರು ನಾನೇ ಕೊಡುತ್ತೇನೆ. ನನ್ನ ಕಥೆ ನೀನು ಓದಿ ಅದಕ್ಕೆ ಹೆಸರು ನೀನು ಕೊಡು” ಎಂದಿದ್ದರು.
ಅವರ ಕಥೆಯ ಪ್ರತಿಯನ್ನೂ ಒಳಗಿನಿಂದ ತಂದು ಕೊಟ್ಟಿದ್ದರು.
ಮನೆಗೆ ಬಂದು ಕಥೆ ಓದಲು ಕುಳಿತ ನನಗೆ ಅವರು ನಾನು ಬರೆದ ಹಾಗೇ ಬರೆದು ಬಿಟ್ಟಿದ್ದರು ಎಂದು ಅನ್ನಿಸಿ, ಇದು ಹೇಗೆ ಸಾಧ್ಯ ಎಂದು ನನಗೆ ಅನುಮಾನ ಬಂದು, ಅವರ ಬಳಿ ಹೋಗಿ ನೋಡಿದರೇ ಅವರು ಚಿಂತೆಯಲ್ಲಿ ಕುಳಿತಿದ್ದರು. “ಏನಾಯ್ತು ಹಿರಿಯರೇ” ಎಂದು ಕೇಳಿದ್ದಕ್ಕೆ, ಬಿಕ್ಕಿ ಬಿಕ್ಕಿ ಸುಮ್ಮನೆ ಅತ್ತಿದ್ದರು.
“ಅಲ್ಲ ಹಿರಿಯರೇ ನೀವು ಯಾಕೆ ಹೀಗೆ ಅಳುವುದು. ಈಗ ಅಂತದೇನು ಆಯಿತು” ಎಂದು ಕೇಳಿದ್ದಕ್ಕೆ, “ತೊಲಗು ಇಲ್ಲಿಂದ. ಇನ್ನೀಚೆ ಬರಬೇಡ ಮೂದೇವಿ” ಎಂದು ನಾನು ಅವರ ಹೆಸರಲ್ಲಿ ಬರೆದ ಕಥೆಯನ್ನು ನನ್ನ ಮುಖಕ್ಕೇ ರಪ್ಪನೆ ಎಸೆದು ಬಿಟ್ಟಿದ್ದರು.