ಚನ್ನಪಟ್ಟಣ ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿಯಿಂದ ನಲುಗಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಉಪಟಳ ನೀಡುತ್ತಿದ್ದ ಎರಡು ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದ್ದು, ಇದರ ಬೆನ್ನಲ್ಲೇ ಕೊಡಗಿನ ಕ್ಯಾಪ್ಟನ್ ಮಹೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಒಂದು ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಿರಂತರವಾಗಿ ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ತೆಂಗಿನಕಲ್ಲು, ಅಚ್ಚಲು, ಕಬ್ಬಾಳು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.
ಪ್ರತಿದಿನವೂ ರೈತರ ರಾಗಿ, ಬಾಳೆ, ಭತ್ತ, ಹಲಸು ಸೇರಿ ಹಲವು ಬೆಳೆಗಳು ನಾಶವಾಗುತ್ತಿದೆ. ಕಳೆದ ಕೆಲದಿನಗಳ ಹಿಂದೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಸಹ ಅರಣ್ಯಾಧಿಕಾರಿಗಳ ಸಭೆ ನಡೆಸಿದ್ದರು. ಇದರ ಜೊತೆಗೆ ರೈತರೂ ಸಹ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಎರಡು ಕಾಡಾನೆ ಸೆರೆಗೆ ಕೊಡಗಿನಿಂದ 6 ಸಾಕಾನೆಗಳು
ಕೆಂಗಲ್ ಹನುಮಂತಯ್ಯ ದೇವಸ್ಥಾನದಲ್ಲಿ ಮಹೇಂದ್ರ ಆನೆ ತಂಡದ ನಾಯಕನಾಗಿದ್ದು,ಯಾವುದೇ ಅಪಾಯ ಆಗದೇ ಕಾರ್ಯಾಚರಣೆ ಯಶಸ್ವಿಯಾಗಿದೆ ಮಹೇಂದ್ರ, ಭೀಮ, ಪ್ರಶಾಂತ, ಸುಗ್ರೀವ, ಧನಂಜಯ, ಹರ್ಷ ಆನೆಗಳು ಆಗಮಿಸಿದ್ದು ಕೆಲವೇ ಗಂಟೆಗಳಲ್ಲಿ ಸಲಗವೊಂದನ್ನು ಸೆರೆ ಹಿಡಿಯಲಾಗಿದೆ. ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದು ಬಳಿಕ ಲಾರಿಯಲ್ಲಿ ರವಾನೆ ಮಾಡಲಾಯಿತು.
ಪುಂಡಾನೆಯನ್ನು ಭೀಮ, ಧನಂಜಯ, ಮಹೇಂದ್ರ, ಹರ್ಷ, ಸುಗ್ರೀವ, ಪ್ರಶಾಂತ ಸಾಕಾನೆಗಳ ಸಹಾಯದಿಂದ ಚನ್ನಪಟ್ಟಣದ ತಿಮ್ಮಯ್ಯನ ದೊಡ್ಡಿ ಗ್ರಾಮದ ಬಳಿಯ ಚಿಕ್ಕಮಣ್ಣುಗುಡ್ಡೆ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಯಿತು. ಹೆಗ್ಗನೂರುದೊಡ್ಡಿಯಲ್ಲಿ ಓರ್ವ ರೈತ ಸಾವನ್ನಪ್ಪುತ್ತಿದ್ದಂತೆ ಎಚ್ಚೆತ್ತಿರುವ ಅರಣ್ಯ ಇಲಾಖೆ ಈಗ ಕಾಡಾನೆಗಳ ಸೆರೆಗೆ ಅನುಮತಿ ನೀಡಿದೆ. ಆದರೆ ಮತ್ತೆ ಕಾಡಿನಿಂದ ಆನೆಗಳು ಬರಲಿವೆ.
ಹಾಗಾಗಿ ಶಾಶ್ವತ ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕಿದೆ. ಅಂತೂ ಕಾರ್ಯಾಚರಣೆ ಮೊದಲ ದಿನವೇ ಒಂದು ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಡಾನೆ ಸೆರೆ ಸದ್ಯದ ಮಟ್ಟಿಗೆ ರೈತರಿಗೆ ತುಸು ನೆಮ್ಮದಿ ತರಿಸಿದೆ.”ಜಿಲ್ಲೆಯಲ್ಲಿ ಈಗ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಸದ್ಯಕ್ಕೆ ಎರಡು ಕಾಡಾನೆ ಹಿಡಿಯಲು ಅನುಮತಿ ಸಿಕ್ಕಿದೆ” ಎಂದು DFO ತಿಳಿಸಿದರು.ಸೆರೆಯಾದ ಆನೆ ಮತ್ತಿಗೋಡು ಕ್ಯಾಂಪ್ ಗೆ ಶಿಫ್ಟ್ ಆಗಲಿದೆ.