ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ಆಟಗಾರ, ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಮದ ನಿವೃತ್ತಿ ಘೋಷಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾರತದ ಫೈನಲ್ ಹಾದಿಯನ್ನು ನಿರ್ಧರಿಸಲಿರುವ ಮಹತ್ವದ ಸರಣಿಯ ನಡುವೆಯೇ ಸ್ಟಾರ್ ಆಲ್‌ರೌಂಡರ್ ಆರ್ ಅಶ್ವಿನ್ ಅವರ ನಿರ್ಧಾರ ಅಚ್ಚರಿ ಮೂಡಿಸಿದೆ.

ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಮಳೆಯ ಕಾರಣ ಡ್ರಾದಲ್ಲಿ ಅಂತ್ಯಗೊಂಡಾಗ, ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಸುದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದರು. ಕೊನೆಯಲ್ಲಿ ಅಶ್ವಿನ್ ಅವರನ್ನು ಕೊಹ್ಲಿ ಆಲಂಗಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಶ್ವಿನ್ ನಿವೃತ್ತಿ ಕುರಿತು ವದಂತಿ ಹರಡಿತ್ತು. ಪಂದ್ಯ ಅಧಿಕೃತವಾಗಿ ಮುಗಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅಶ್ವಿನ್ ತಮ್ಮ ನಿರ್ಧಾರ ಪ್ರಕಟಿಸಿದರು. ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಂದ ನಿವೃತ್ತರಾಗಿದ್ದರೂ, ದೇಶಿ ಕ್ರಿಕೆಟ್‌ನಲ್ಲಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಟ ಮುಂದುವರಿಸಲಿದ್ದಾರೆ.