ಯಾರೇ ಆಗಲಿ ಅಹಂಕಾರವನ್ನು ದೂರವಿಡಬೇಕು. ಇಲ್ಲದಿದ್ದರೆ ಹಳ್ಳಕ್ಕೆ ಬೀಳ್ಳೋದು ಖಚಿತ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಎಚ್ಚರಿಕೆಯ ಕಿವಿಮಾತನ್ನು ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ನಡೆದ ಭಾರತ ವಿಕಾಸ ಪರಿಷತ್‌ನ ವಿಕಲಾಂಗ ಕೇಂದ್ರದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂತೋಷ ಮತ್ತು ಆತ್ಮತೃಪ್ತಿಯ ನಿರಂತರ ಗುರುತಿಸುವಿಕೆ ನಡೆದಾಗ ನಿಸ್ವಾರ್ಥ ಸೇವೆ ಸಾಧ್ಯ.

ಇದರಿಂದಾಗಿ ಇತರರಿಗೆ ಸಹಾಯ ಮಾಡುವ ಪ್ರವೃತ್ತಿಯೂ ಹೆಚ್ಚುತ್ತದೆ ಎಂದು ಹೇಳಿದರು.

“ಪಕ್ವತೆಯ ನಾನು’ ಮತ್ತು “ಅಪಕ್ವತೆಯ ನಾನು’ ಎಂಬುದಾಗಿ ಅಹಂಕಾರದ ಬಗ್ಗೆ ರಾಮಕೃಷ್ಣ ಪರಮಹಂಸರ ಮಾತನ್ನು ಉಲ್ಲೇಖಿಸಿದ ಭಾಗವತ್‌, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಬ್ಬ “ಸರ್ವಶಕ್ತ’ ಇದ್ದಾನೆ. ಇದು ಸಮಾಜಕ್ಕೆ ಸೇವೆ ಸಲ್ಲಿಸಲು ಸ್ಫೂರ್ತಿ ನೀಡುತ್ತದೆ. ಆದರೆ, ಅಹಂಕಾರವೂ ಇರುತ್ತದೆ. ಆದರೆ, “ಪಕ್ವತೆಯ ನಾನು’ ಎಂಬುದನ್ನು ಹಿಡಿದಿಟ್ಟುಕೊಂಡು, “ಅಪಕ್ವತೆಯ ನಾನು’ ಎಂಬುದನ್ನು ದೂರವಿಡಬೇಕು. ಯಾರು ಈ “ಅಪಕತೆÌಯ ನಾನು’ ಎಂಬುದರ ಜೊತೆಗೆ ಜೀವನ ಮಾಡುತ್ತಾರೋ ಅವರು ಹಳ್ಳಕ್ಕೆ ಬೀಳುತ್ತಾರೆ ಎಂದು ಹೇಳಿದರು.

ಇನ್ನೊಂದು ಪ್ರಮುಖ ಅಂಶವಾದರೆ ಸಮಾಜದಲ್ಲಿ ಎಲ್ಲವೂ ತಪ್ಪಾಗುತ್ತಿದೆ ಎಂಬ ಗ್ರಹಿಕೆಯ ಪ್ರವೃತ್ತಿ ಬೆಳೆಯುತ್ತಿದೆ. ಹೀಗಿದ್ದರೂ ಪ್ರತಿ ನಕಾರಾತ್ಮಕ ಅಂಶಕ್ಕೆ ಸಮುದಾಯದಲ್ಲಿ 40 ಪಟ್ಟು ಹೆಚ್ಚು ಉತ್ತಮ ಮತ್ತು ಉದಾತ್ತ ಸೇವಾ ಚಟುವಟಿಕೆ ನಡೆಯುತ್ತಿವೆ. ಇಂಥ ಸಕಾರಾತ್ಮಕ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಏಕೆಂದರೆ ಸಮಾಜದಲ್ಲಿ “ಸೇವೆ” ನಿರಂತರ ನಂಬಿಕೆಯನ್ನು ಬೆಳೆಸುತ್ತದೆ ಎಂದು ಹೇಳಿದರು.