ಭಾರತದ ಅಗ್ರ ರೇಸ್‌ ಚಾಲಕ ಗೌರವ್‌ ಗಿಲ್‌ ಮತ್ತು ಸಹ ಚಾಲಕ ಅನಿರುದ್ಧ ರಂಗನೇಕರ್ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ಎಫ್‌ಎಂಎಸ್‌ಸಿಐ ಇಂಡಿಯನ್‌ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನ ಕೆ1000 ರ‍್ಯಾಲಿಯ ಕೊನೆಯ ಮತ್ತು ಆರನೇ ಸುತ್ತಿನ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಅರ್ಜುನ ಪ್ರಶಸ್ತಿ ಪುರಸ್ಕೃತ ಗಿಲ್ ಮತ್ತು ರಂಗನೇಕರ್ ಜೋಡಿಗೆ ಇದು ಈ ಬಾರಿ ಹ್ಯಾಟ್ರಿಕ್‌ ಪ್ರಶಸ್ತಿಯಾಗಿದೆ. ಹೈದರಾಬಾದ್ ಮತ್ತು ಕೊಡಗಿನಲ್ಲಿ ಚಾಂಪಿಯನ್‌ ಆಗಿರುವ ‌ಈ ಜೋಡಿ ಇಲ್ಲೂ (1 ಗಂಟೆ 25 ನಿಮಿಷ 34.4ಸೆಕೆಂಡ್‌) ಪಾರಮ್ಯ ಮೆರೆಯಿತು.

ಹಾಸನ ಅರ್ಕಾ ಮೋಟಾರ್ ಸ್ಪೋರ್ಟ್ಸ್‌ನ ಜೇಸನ್ ಸಲ್ಡಾನ್ಹಾ ಮತ್ತು ಸಹ ಚಾಲಕ ಕೊಡಗಿನ ತಿಮ್ಮು ಉದ್ದಪಂಡ (1 ಗಂಟೆ 26 ನಿ.26.8ಸೆ) ಎರಡನೇ ಸ್ಥಾನ ಪಡೆದರು. ಮಂಗಳೂರು ಮಾಂಡೋವಿ ರೇಸ್‌ನ ಆರೂರ್ ಅರ್ಜುನ್ ರಾವ್ ಮತ್ತು ಬೆಂಗಳೂರು ಸತೀಶ್ ರಾಜಗೋಪಾಲ್ (1 ಗಂಟೆ 27 ನಿ.05.5ಸೆ) ಮೂರನೇ ಸ್ಥಾನ ಗಳಿಸಿದರು.

ಕರ್ಣ ಕಡೂರುಗೆ ಸಮಗ್ರ ಪ್ರಶಸ್ತಿ: ಅರ್ಕಾ ಮೋಟಾರ್‌ ಸ್ಪೋರ್ಟ್ಸ್‌ನ ಕರ್ಣ ಕಡೂರು ಮತ್ತು ಅನುಭವಿ ಚಾಲಕ ಮೂಸಾ ಷರೀಫ್ ಅವರು 2024ರ ಇಂಡಿಯನ್‌ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕರ್ಣ ಅವರಿಗೆ ಇದು ಮೂರನೇ ಐಎನ್‌ಆರ್‌ಸಿ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಅವರು 2016 ಮತ್ತು 2022ರಲ್ಲೂ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು. ಕಾಸರಗೋಡಿನ ಷರೀಫ್ ಅವರಿಗೆ ಇದು ದಾಖಲೆಯ ಎಂಟನೇ ರಾಷ್ಟ್ರೀಯ ಸಹ ಚಾಲಕ ಪ್ರಶಸ್ತಿಯಾಗಿದೆ.