ಹೆಣ್ಣು ಕೊಟ್ಟ ಅತ್ತೆ ಕಣ್ಣು ಕೊಟ್ಟ ದೇವರು ಇಬ್ಬರು ಒಂದೇ ಎಂಬ ಮಾತಿದೆ. ಆದ್ರೆ, ಇಲ್ಲೊಬ್ಬ ಖತರ್ನಾಕ್ ಅಳಿಯ ಮಹಾಶಯ ತನ್ನ ಅತ್ತೆಯ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ಸ್ವಂತ ಅಳಿಯನೇ ತನ್ನ ಅತ್ತೆ ಹಾಗೂ ಸಂಬಂಧಿ ಮಹಿಳೆಯೊಬ್ಬರ ಮೇಲೆ ಮಚ್ಚು ಬೀಸಿದ ಘಟನೆ ನಾಪೋಕ್ಲು ಸಮೀಪದ ಅಯ್ಯಂಗೆರಿ ಗ್ರಾಮದಲ್ಲಿ ನಡೆದಿದೆ.ಹಲ್ಲೆ ನಡೆಸಿದ ಆರೋಪಿಯನ್ನು ಮಡಿಕೇರಿ ನಿವಾಸಿ ಹ್ಯಾರಿಸ್ ಎಂದು ಗುರುತಿಸಲಾಗಿದೆ.
ಆರೋಪಿ ಅಯ್ಯಂಗೇರಿ ಗ್ರಾಮದಲ್ಲಿದ್ದ ಅತ್ತೆ ಮನೆಗೆ ತೆರಳಿ, ಮನೆಯ ಮುಂಭಾಗದ ಬಾಗಿಲಿನ ಚಿಲಕ ಹಾಕಿ, ಹಿಂಬದಿ ಬಾಗಿಲನ್ನು ಒಡೆದು ಒಳ ನುಗ್ಗಿದ್ದಾನೆ. ಬಳಿಕ ಇಬ್ಬರು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ಆರೋಪಿಯ ಅತ್ತೆ ಐಸಮ್ಮ ಮತ್ತು ಸಂಬಂಧಿ ಕದೀಜ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕೃತ್ಯ ಎಸಗಿ ಆರೋಪಿ ಆಟೋದಲ್ಲಿ ಪರಾರಿಯಾಗಲು ಯತ್ನಿಸಿದ್ದು, ಮಾಹಿತಿ ತಿಳಿದ ನಾಪೋಕ್ಲು ಪೊಲೀಸರು ಬೆನ್ನಟ್ಟಿ ಹುದ್ದೂರು ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.