ಕುಶಾಲನಗರ: ತಾಲ್ಲೂಕಿನ ಏಳನೇ ಹೊಸಕೋಟೆ ಸಮೀಪದ ತೊಂಡೂರು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಆಹಾರ ಅರಸಿ ಕಾಡಿನಿಂದ ಬರುವ ಜಿಂಕೆಗಳಿಗೆ ಮತ್ತು ಸ್ಥಳೀಯರಿಗೆ ಕಂಟಕಪ್ರಾಯವಾಗಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತೊಂಡೂರು ಗ್ರಾಮದಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಗ್ರಾಮಸ್ಥರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಸಣ್ಣ ಮಕ್ಕಳು ಮನೆಯಿಂದ ಹೊರಗೆ ಬರಲು ಮತ್ತು ಆಟವಾಡಲು ತುಂಬಾ ಕಷ್ಟಪಡುವಂತಾಗಿದೆ. ಗ್ರಾಮದ ಹೊರಗಿನವರು ಹಲವು ನಾಯಿಗಳನ್ನು ತೊಂಡೂರು ಗ್ರಾಮದ ಸುತ್ತಮುತ್ತಲಿನಲ್ಲಿ ತಂದು ಬಿಡುತ್ತಿರುವುದರಿಂದ ಪ್ರತಿದಿನ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆಯಲ್ಲಿ ಕಾಡಿನಿಂದ ಆಹಾರಕ್ಕಾಗಿ ಗ್ರಾಮಕ್ಕೆ ಬರುತ್ತಿರುವ ಜಿಂಕೆಗಳನ್ನು ಕೊಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಈಗಾಗಲೇ ಕೆಲ ಜಿಂಕೆಗಳು ನಾಯಿಗಳ ಆಹಾರವಾಗಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಸಂತೋಷ್ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸೌಮ್ಯ ಅವರ ಮನೆ ಪಕ್ಕದಲ್ಲಿ ಜಿಂಕೆಯನ್ನು ಬೇಟೆಯಾಡಿರುವ ಬೀದಿನಾಯಿಗಳು, ಅರ್ಧ ಜೀವ ಮಾಡಿವೆ. ಅರಣ್ಯ ಇಲಾಖೆಯವರು ಜಿಂಕೆಯ ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿಗೆ ಮಕ್ಕಳು ಹಾಗೂ ಇನ್ನಿತರರು ಮತ್ತು ಪ್ರಾಣಿಗಳು ಬಲಿಯಾಗದಂತೆ ಶೀಘ್ರವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
